ಚೊಚ್ಚಲ ಹೆರಿಗೆಗೆ ತಯಾರಿ ನಡೆಸುತ್ತಿರುವ ಮಹಿಳೆಯರಲ್ಲಿ ಭಯ ಮತ್ತು ಆತಂಕ ಮನೆ ಮಾಡಿರುತ್ತದೆ. ಹೆರಿಗೆ ನೋವು ಯಾವಾಗ ಕಾಣಿಸಿಕೊಳ್ಳುತ್ತದೆಯೋ? ನನಗೆ ಆ ನೋವನ್ನು ಭರಿಸಲು ಸಾಧ್ಯವಿದೆಯೋ, ಇಲ್ಲವೋ? ಎಂದು ಗರ್ಭ ಧರಿಸಿದ ದಿನದಿಂದ ಯೋಚಿಸಿ ಯೋಚಿಸಿ ಕೊನೆಗೆ ಹೆರಿಗೆಯ ಭಯಂಕರ ನೋವಿನಿಂದ ಪಾರಾಗಲು ಸಿಸೇರಿಯನ್ ಮೊರೆಹೋಗುತ್ತಾರೆ. ಆದರೆ, ಈಗ ಈ ಎಲ್ಲಾ ಮಾನಸಿಕ, ದೈಹಿಕ ತೊಂದರೆ ಮತ್ತು ನೋವಿನಿಂದ ಪಾರಾಗಲು ತಜ್ಞರು ಎಪಿಡ್ಯುರಲ್ ಅನಸ್ತೇಶಿಯಾ ಕಂಡುಹಿಡಿದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹೆರಿಗೆ ನೋವಿನಿಂದ ಮುಕ್ತಿ ಪಡೆಯಲು ಪ್ರಯೋಗಿಸುವ ಔಷಧಿಗಳು ಮೆದುಳಿನಲ್ಲಿ ಪ್ರಭಾವ ಬೀರಿ ನೋವಿನ ಅನುಭವವಾಗದಂತೆ ಮಾಡುತ್ತವೆ ಅಥವಾ ಬೆನ್ನುಹುರಿಯ ಮೂಲಕ ಮೆದುಳಿಗೆ ಹೆರಿಗೆ ಸಂದೇಶವನ್ನು(್ಝಟಠ್ಡಟಡಜ) ತಡೆಯುತ್ತವೆ. ಇದರ ಪರಿಣಾಮವಾಗಿ ಹೆರಿಗೆಯ ಸಮಯದಲ್ಲಿ ನೋವಿನ ಅನುಭವವಾಗುವುದಿಲ್ಲ. ಈ ಎರಡೂ ವಿಧಾನಗಳಲ್ಲಿ ತಾಯಿ ಮತ್ತು ಮಗು ಇಬ್ಬರೂ ಪೂರ್ಣ ಸುರಕ್ಷಿತವಾಗಿರುತ್ತಾರೆ.
ಏನಿದು ಎಪಿಡ್ಯುರಲ್ ಅನಸ್ತೇಶಿಯಾ?
ಸೊಂಟದ ಕೆಳಭಾಗದಲ್ಲಿನ ತೆಳ್ಳನೆ ಪ್ಲಾಸ್ಟಿಕ್ ನಾಳದ(ಎಪಿಡ್ಯುರಲ್ ಕ್ಯಾಥೆಟರ್) ಮೂಲಕ ಔಷಧಿಯನ್ನು ಎಪಿಡ್ಯುರಲ್ ಜಾಗಕ್ಕೆ ತಲುಪಿಸಲಾಗುತ್ತದೆ. ಇದಾದ ನಂತರ ಇನ್ಫ್ಯೂಶನ್ ಪಂಪ್ ಮೂಲಕ ನೋವು ಕಡಿಮೆ ಮಾಡುವ ಔಷಧಿಯನ್ನು ನಿರ್ಧಾರಿತ ಪ್ರಮಾಣದಲ್ಲಿ ನಿರಂತರವಾಗಿ ಮಗು ಹೊರಬರುವ ತನಕ ನೀಡಲಾಗುತ್ತದೆ. ಇದರಿಂದ ನೋವಿನ ಸಂವೇದನೆಯು ಇಲ್ಲವಾಗಿ ಮೋಟರ್ಫೈಬರ್ಸ್(ಮಾಂಸಖಂಡ)ಗಳ ಚಲಿಸುವ ಸಾಮರ್ಥ್ಯ ಹಾಗೇ ಇರುತ್ತದೆ. ಆದ್ದರಿಂದ ತಾಯಿ ಪೂರ್ಣ ರೀತಿಯಲ್ಲಿ ಒತ್ತಡ ಹಾಕಿ ಸಾಮಾನ್ಯ ಹೆರಿಗೆಗೆ ತನ್ನ ಸಹಕಾರ ನೀಡಬಹುದು.
ಎಲ್ಲಿ ಮತ್ತು ಹೇಗೆ?
ಬೆನ್ನು ಹುರಿ ಚಿಕ್ಕ ಚಿಕ್ಕ ಮೂಳೆಗಳಿಂದ ರಚಿತವಾದಂಥದ್ದು. ಇದರ ಮಧ್ಯದ ಭಾಗದಲ್ಲಿ ಅಂದರೆ ಸ್ಪೈನಲ್ ಕಾರ್ಡ್ನ ಎರಡು ಪದರ ಆಚೆ ಇರುವ ಎಪಿಡ್ಯುರಲ್ ಸ್ಪೇಷ್ನಲ್ಲಿ ಇಂಜೆಕ್ಷನ್ ಕೊಡಲಾಗುತ್ತದೆ. ಇದು ಸಾಮಾನ್ಯ ಇಂಜೆಕ್ಷನಿಂದಾಗುವಷ್ಟೇ ನೋವನ್ನುಂಟು ಮಾಡುತ್ತದೆ. ಈ ವಿಧಾನದಲ್ಲಿ ಸಹಜ ಹೆರಿಗೆ ಬಲು ಸುಲಭ ಮತ್ತು ಮಗುವಿಗೆ ಯಾವುದೇ ತೊಂದರೆಯಾಗದಂತೆ ಪ್ರತಿ 15 ನಿಮಿಷಕ್ಕೆ ರಕ್ತದೊತ್ತಡ ಮತ್ತು ನಾಡಿಯ ಮಾನಿಟರ್ ಮಾಡಲಾಗುತ್ತದೆ. ಮಗುವಿನ ಹೃದಯ ಬಡಿತವನ್ನೂ ಕಾರ್ಡಿಯೋಟೋಕೋಗ್ರಾಫ್ ಮೂಲಕ ಹೆರಿಗೆ ಮುಗಿಯುವವರೆಗೂ ನಿರ್ವಹಿಸಲಾಗುತ್ತದೆ. ಇದರ ಖರ್ಚು 4ರಿಂದ 6 ಸಾವಿರ ರು. ಮಾತ್ರ. ಹೆಚ್ಚು ರಕ್ತದೊತ್ತಡ ಇರುವ ಮಹಿಳೆಯರಿಗೆ ಈ ವಿಧಾನದಿಂದ ಹೆಚ್ಚು ಲಾಭವಾಗುತ್ತದೆ ಮತ್ತು ರಕ್ತದೊತ್ತಡದ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಅಷ್ಟೊಂದು ಗೊತ್ತಿಲ್ಲ!
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಬಗ್ಗೆ ಜಾಗೃತಿ ಇಲ್ಲ. ಆದ್ದರಿಂದ ಪೂರ್ಣ ಮಾಹಿತಿ ಜನರಲ್ಲಿ ಇಲ್ಲದಿರುವುದರಿಂದ ಜನಪ್ರಿಯತೆ ಪಡೆದುಕೊಂಡಿಲ್ಲ. ಜನರಲ್ಲಿ ಬಗೆಬಗೆಯ ಸಂಶಯಗಳಿರುವುದರಿಂದ (ಉದಾ: ನಾರ್ಮಲ್ ಹೆರಿಗೆ ಆಗುವುದು ಕಡಿಮೆ ಮತ್ತು ಆಪರೇಷನ್ ಮಾಡಲೇಬೇಕಾಗುತ್ತದೆ ಅಥವಾ ಹೆರಿಗೆಯ ನಂತರ ಸೊಂಟ ನೋವು, ಕಾಲುಗಳು ದುರ್ಬಲವಾಗುವುದು... ಹೀಗೆ ಏನಾದರೊಂದು ಆಗುತ್ತದೆ) ಆಯ್ಕೆಗೆ ಹಿಂದು ಮುಂದು ನೋಡುತ್ತಾರೆ. ಆದರೆ ವಾಸ್ತವವಾಗಿ ಹೀಗಾಗುವುದಿಲ್ಲ. ಬೇರೆ ಯಾವುದಾದರೂ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಗಬಹುದು ಅಷ್ಟೇ. ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಮಾಡಲಾಗುತ್ತದೆ. ಜನ ಇದರ ಬಗ್ಗೆ ತಿಳಿದುಕೊಂಡು ಲಾಭವನ್ನು ಪಡೆದುಕೊಂಡರೆ ತಾಯ್ತನದ ಅನುಭವ ಮತ್ತಷ್ಟು ಸುಂದರ.
- ಜಮುನಾ ರಾಣಿ .ಎಚ್.ಎಸ್.