ಇದು 'ಮಂಡಿ' ಬಿಸಿಯಾದ ಮಹಿಳೆಯರಿಗೆ ತಣ್ಣಗಾಗಿಸುವ ಸುದ್ದಿ!
ಹೌದು. ಇಂದು ಆರೋಗ್ಯದಲ್ಲಿ ಏರುಪೇರು ಸಾಮಾನ್ಯ. ದಿನಕ್ಕೊಂದು ಹೊಸ ರೋಗಗಳು ಜನ್ಮತಳೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಇದು ತುಸು ಹೆಚ್ಚೇ ಎನ್ನುವಷ್ಟು ಕಾಡುತ್ತಿದೆ. 45ರ ಆಸುಪಾಸಿನ ಮಹಿಳೆಯರಲ್ಲಿ ಮಂಡಿ ನೋವು ಎಡೆಬಿಡದೆ ಕಾಣಿಸಿಕೊಳ್ಳುತ್ತಿರುವುದರಿಂದ ಬದುಕು ದುಸ್ತರ ಎನ್ನುವಂತಾಗಿದೆ.
ಎಷ್ಟೇ ಔಷಧ ತೆಗೆದುಕೊಂಡು ಮಸಾಜ್ ಮಾಡಿಕೊಂಡರೂ, ಹಿತ್ತಲ ಮನೆಯ ಮದ್ದು ಹಚ್ಚಿ ತಿದ್ದಿ ತೀಡಿದರೂ ಕಡಿಮೆಯಾಗದ ಮಂಡಿ ನೋವಿಗೆ ಈಗ ಬದಲಾವಣೆ ಕಾಲ. ಸವೆದು ಹೋದ ಮೂಳೆಯನ್ನು ಸಣ್ಣ ಶಸ್ತ್ರಚಿಕಿತ್ಸೆ ಮೂಲಕ ಬದಲಾವಣೆ ಮಾಡಲಾಗುತ್ತದೆ. ಇದರಿಂದ ತಕ್ಷಣದ ಹಾಗೂ ಶಾಶ್ವತ ಪರಿಹಾರವೂ ಲಭ್ಯ.
ಕಾರಣ ಏನು?
ಮಂಡಿ ನೋವು ಕಾಣಿಸಿಕೊಳ್ಳಲು ಪ್ರಮುಖ ಕಾರಣ ಬದಲಾದ ಜೀವನ ಶೈಲಿ! ಮೈ ಕಟ್ಟು ಸರಿಯಾಗಿಟ್ಟುಕೊಳ್ಳಲು 'ಉಪವಾಸ' ಮಾಡುವುದು, ಏನೇನೋ ತಿಂದು ಬೊಜ್ಜು ಹೆಚ್ಚಿಸಿಕೊಳ್ಳುವುದು, ಅತಿಯಾದ ದೇಹ ಭಾರ, ವ್ಯಾಯಾಮ ಮಾಡದಿರುವುದು... ಇಂಥವರಿಗೆ ಈ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಜತೆಗೆ ಅಪಘಾತದ ವೇಳೆ ಏಟು ಬಿದ್ದರೆ, ದೇಹದಲ್ಲಿ ಶಕ್ತಿ ಇದ್ದಾಗ ಬಿದ್ದ ಏಟನ್ನು ನಿರ್ಲಕ್ಷಿಸಿದರೆ ಅದು ವಯಸ್ಸಾಗುತ್ತಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ.
'ಮಂಡಿ' ಬದಲಾವಣೆ!
ಅಂದಾಜಿನ ಪ್ರಕಾರ, ಭಾರತದ ಶೇ.50ರಷ್ಟು ಮಹಿಳೆಯರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಸೂಕ್ತ ಮುಂಜಾಗ್ರತೆ ವಹಿಸದಿರುವುದೇ ಇದಕ್ಕೆ ಕಾರಣ. ಹೀಗಾಗಿ ಇದಕ್ಕೆ ಪರಿಹಾರವೆಂಬಂತೆ ಮಂಡಿ ಬದಲಾವಣೆ ಕಾಲವೂ ಬಂದಿದೆ. ಗಾಯಗೊಂಡ ಅಥವಾ ಮೂಳೆ ಸವೆದ ಮಂಡಿಯನ್ನು ಸಣ್ಣ ಶಸ್ತ್ರಚಿಕಿತ್ಸೆ ಮೂಲಕ ಬದಲಾವಣೆ ಮಾಡಲಾಗುತ್ತದೆ. ಇದರಿಂದ ನೋವಿನಿಂದ ಮುಕ್ತಿ ಪಡೆಯಬಹುದಲ್ಲದೇ ಶಾಶ್ವತ ಪರಿಹಾರವೂ ಸಿಗುತ್ತದೆ.
ಸ್ವಲ್ಪ ವ್ಯತ್ಯಾಸ
ಪುರುಷ ಹಾಗೂ ಮಹಿಳೆಯರಲ್ಲಿನ 'ಮಂಡಿ ಮಾದರಿ'ಯಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಮಂಡಿ ಕೊಂಚ ಕಿರಿದಾಗಿರುತ್ತದೆ. ಪುಷ್ಠಿ ಹಾಗೂ ತೊಡೆಯ ಜತೆಗೆ ಮಂಡಿ ಪರಿಚಲನೆಯಾಗುವುದರಿಂದ ಇಬ್ಬರಲ್ಲೂ ವ್ಯತ್ಯಾಸ ಗೋಚರಿಸುತ್ತದೆ. ಆದರೆ, ಮಂಡಿ ಬದಲಾವಣೆಯಲ್ಲಿ ಇದು ದುಷ್ಪರಿಣಾಮ ಬೀರುವುದಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಹೆಚ್ಚಿನ ಅನುಕೂಲವಾಗುವುದರಲ್ಲಿ ಅನುಮಾನವೇ ಇಲ್ಲ.
ಶಸ್ತ್ರಚಿಕಿತ್ಸೆ ಬಳಿಕ ಒಂದಷ್ಟು ದಿನ ವಿಶ್ರಾಂತಿ ಮುಖ್ಯ. ಬಳಿಕ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ಹಾಗಂತ ಅತಿ ಭಾರ ಎತ್ತುವುದು, ಬೊಜ್ಜು ಹೆಚ್ಚಿಸಿಕೊಂಡು ಓಡಾಡುವುದು, ಬೇಕಾಬಿಟ್ಟಿ ಉಪವಾಸ ತರವಲ್ಲ. ಇದು ಮತ್ತೊಂದು ರೀತಿಯ ರೋಗಕ್ಕೆ ಆಹ್ವಾನ ಮಾಡಿದರೂ ಆಶ್ಚರ್ಯವಿಲ್ಲ.
ತುಂಬಾ ದುಬಾರಿ ಏನಲ್ಲ
ಶಸ್ತ್ರಚಿಕಿತ್ಸೆಯಿಂದ ಮಂಡಿ ಬದಲಾವಣೆ ಮಾಡಲಾಗುತ್ತದೆ ಎಂದ ತಕ್ಷಣ ಹೆದರಿಕೊಳ್ಳಬೇಕಿಲ್ಲ. ಇದೇನೂ ಅಂಥ ದೊಡ್ಡ ಶಸ್ತ್ರಚಿಕಿತ್ಸೆಯೂ ಅಲ್ಲ. ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುವ ಒಂದು ಸಣ್ಣ ಶಸ್ತ್ರಚಿಕಿತ್ಸೆ. ಹಣಕಾಸಿನ ವಿಚಾರದಲ್ಲೂ ಹೆಚ್ಚಿನ ಭಾರವಾಗುವುದಿಲ್ಲ. ಕಡಿಮೆ ದರದಲ್ಲೇ ಮಂಡಿ ನೋವಿಗೆ ಮದ್ದು ಕಂಡುಕೊಳ್ಳಬಹುದು.
ಬದಲಾದ ಜೀವನ ಶೈಲಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಮಹಿಳೆಯರು. ಈಗ ಮಂಡಿ ನೋವೂ ಅವರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಅವರ ಕೆಟ್ಟ ದಿನಚರಿಯ ಫಲ ಎಂದರೂ ಪರವಾಗಿಲ್ಲ. ಶಸ್ತ್ರಚಿಕಿತ್ಸೆಯಿಂದ ಮಂಡಿ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ.
- ಡಾ.ಜಿ.ವಿ. ಶ್ರೀನಿವಾಸ್, ಮೂಳೆ ರೋಗ ತಜ್ಞ, ಫೋರ್ಟೀಸ್ ಬೆಂಗಳೂರು