ಮನುಷ್ಯ ಜೀವಿಸಲು ರಕ್ತ ಎಷ್ಟು ಅವಶ್ಯ ಎಂಬುದು ಚರಿತ್ರಾಪೂರ್ವದಲ್ಲೇ ತಿಳಿದಿತ್ತು. ಇಂದು ಅದರ ರಚನೆ, ಪರಿಚಲನೆಗಳ ತಿಳಿವಳಿಕೆಯಷ್ಟೇ ಅಲ್ಲ, ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ರಕ್ತವನ್ನು ಪೂರೈಸುವ ಕಲೆಯೂ ಕರಗತವಾಗಿದೆ.
ರಕ್ತ ಪರಿಚಲನೆಯೆಂದರೆ ನಮ್ಮ ದೇಹದ ಜೀವನದಿ. ಧಮನಿ ಮತ್ತು ಲೋಮನಾಳಗಳು ದೇಹದಲ್ಲೆಲ್ಲ ಬಲೆಯಂತೆ ಹಬ್ಬಿಕೊಂಡಿವೆ. ಇವುಗಳಲ್ಲಿ ಹರಿಯುವ ರಕ್ತ ನಮ್ಮ ದೇಹದಲ್ಲಿರುವ ಅಸಂಖ್ಯ ಕೋಶಿಕೆಗಳಿಗೆ ಆಹಾರ, ಆಮ್ಲಜನಕ, ಹಾರ್ಮೊನುಗಳನ್ನು ಕೊಂಡೊಯ್ಯುತ್ತವೆ. ಬೇಡವಾದ ಕಲ್ಮಶಗಳನ್ನೂ ಇಂಗಾಲದ ಡೈ ಆಕ್ಸೈಡನ್ನೂ ಹೊರಹಾಕುತ್ತದೆ. ದೇಹದ ಉಷ್ಣತೆಯನ್ನು ಸ್ಥಿರವಾಗಿಡುತ್ತದೆ. ನೀರನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತದೆ. ಸೂಕ್ಷ್ಮ ಜೀವಿಗಳೊಡನೆ ಹೋರಾಡಿ ದೇಹವನ್ನು ರೋಗರುಜಿನಗಳಿಂದ ಕಾಪಾಡುತ್ತದೆ. ಒಬ್ಬ ಆರೋಗ್ಯವಂತ ವಯಸ್ಕನ ದೇಹದಲ್ಲಿ ನಾಲ್ಕೂವರೆ ಲೀ.ನಷ್ಟು ರಕ್ತ ಇರುತ್ತದೆ. ರಕ್ತದ ಒಂದು ಹನಿಯಲ್ಲಿ ಲಕ್ಷಗಟ್ಟಲೆ ಚಿಕ್ಕ ಕಣಗಳಿರುತ್ತವೆ. ಇವುಗಳಿಗೆ ರಕ್ತಕಣಗಳೆಂದು ಹೆಸರು. ಇವು ಪ್ಲಾಸ್ಮಾ ಎಂಬ ದ್ರವದಲ್ಲಿ ತೇಲುತ್ತಿರುತ್ತವೆ. ನಮ್ಮ ರಕ್ತದಲ್ಲಿ ಶೇ.45ರಷ್ಟು ಕಣಭಾಗವೂ ಶೇ.55ರಷ್ಟು ದ್ರವ ಭಾಗವೂ ಇದೆ. ಪ್ಲಾಸ್ಮಾದಲ್ಲಿ ಶೇ.93 ಭಾಗ ನೀರೇ ಅಗಿರುವುದರಿಂದ ಅದು ತೆಳುವಾಗಿದೆ. ಪ್ಲಾಸ್ಮಾದಲ್ಲಿ ಹಲವು ರಾಸಾಯನಿಕ ಪದಾರ್ಥಗಳಿರುತ್ತವೆ. ಸೋಡಿಯಂ, ಪೊಟಾಷಿಯಂ, ಸಕ್ಕರೆ, ಆಮ್ಲಗಳು ಇವೆಲ್ಲವುಗಳಲ್ಲಿ ಮುಖ್ಯವಾದ ಹಲವು ಲವಣಗಳು ಇರುವುದರಿಂದ ರಕ್ತಕ್ಕೆ ಉಪ್ಪಿನ ರುಚಿಯಿದೆ. ಅಲ್ಲದೆ ರಕ್ತದ ಒತ್ತಡವನ್ನು ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಬೇಕಾದ ಆಲ್ಬುಮಿನ್ ಮತ್ತು ದೇಹದಲ್ಲಿನ ರೋಗ ನಿರೋಧಕ ತಯಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ ಗ್ಲಾಬ್ಯುಲಿನ್ಗಳೆಂಬ ಪ್ರೊಟೀನು ಪದಾರ್ಥಗಳು ರಕ್ತದಲ್ಲಿವೆ.
- ಶಿವರಾಮ ಭಟ್ ಹತ್ತೊಕ್ಕಲ