ಸ್ಮೈಲ್ ಇನ್ SMALL
'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಕವಿವಾಣಿಯಂತೆ ಇಂದಿನ ವೇಗದ ಜಮಾನದಲ್ಲಿ ಎಲ್ಲವೂ ನಮ್ಮೊಳಗೇ ಇದ್ದು ಅದನ್ನು ಬಳಸಿಕೊಳ್ಳದೆ ಒತ್ತಡ, ಬೇಸರ ಕಳೆಯಲು ಮತ್ತಾವುದೋ ದಾರಿ ಹುಡುಕಿಕೊಂಡು ಸಾಗುವುದನ್ನೇ ಜೀವನ ಎಂದುಕೊಂಡಿದ್ದೇವೆ.
ಒತ್ತಡ ಮುಕ್ತರಾಗಿ ಖುಷಿ ಪಡಲು ನಮ್ಮೊಳಗೆ ನೂರಾರು ದಾರಿಗಳಿವೆ. ಆದರೂ ದೂರದಲ್ಲೆಲ್ಲೋ ಇರುವ ಫೇಸ್ಬುಕ್ ಗೆಳೆಯ, ಜೀವವಿಲ್ಲದ ಮೊಬೈಲ್, ಇಂಟರ್ನೆಟ್, ಕುಡಿತ, ಸಿಗರೇಟು ಮತ್ತಿತರ ಕ್ಷಣಿಕ ಸುಖಗಳ ಬೆನ್ನತ್ತಿ ಗುರಿಯಿಲ್ಲದ ದಾರಿಯಲ್ಲಿ ನಡೆಯುತ್ತಿದ್ದೇವೆ.
ಆದರೆ, ನಮ್ಮ ನಿತ್ಯ ಜೀವನದ ಜಂಜಾಟದ ನಡುವೆಯೂ ಜೀವನ ಶೈಲಿಯಲ್ಲಿ ಕೆಲವೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ಸಣ್ಣ ಸಣ್ಣ ಸಂಗತಿಗಳೇ ನಮ್ಮನ್ನು ಪ್ರತಿ ದಿನ, ಪ್ರತಿ ಕ್ಷಣವೂ ಆಹ್ಲಾದಕರವಾಗಿ ಇರಿಸುತ್ತವೆ.
ಸುಮ್ಮನೆ ಟ್ರೈ ಮಾಡಿ...
- ಪ್ರತಿ ದಿನ ಸಿಗುವ ಯಾರೊಂದಿಗಾದರೂ ಮನಸು ಬಿಚ್ಚಿ ನಗಲು ಅಥವಾ ಅವರು ಮಾಡಿದ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಲು ನಮ್ಮದೇನೂ ಗಂಟು ಖರ್ಚಾಗುವುದಿಲ್ಲ, ನಾವೇನೂ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಧಾರಳವಾಗಿ ನಕ್ಕು ನಗಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ.
- ಕೆಲಸದ ಒತ್ತಡದ ಮಧ್ಯೆಯೂ ಆಗಾಗ ಬಾಲ್ಯ ಅಥವಾ ಹಳೇ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಸುತ್ತಾಡಿ. ಸಾಧ್ಯವಾದರೆ ಹಳೆಯ ಸಂಗತಿಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಇದರಿಂದ ಮನಸ್ಸು ಮತ್ತೆ ಗತಕಾಲದತ್ತ ಹೊರಳಿ ಪ್ರಫುಲ್ಲವಾಗುತ್ತದೆ. ಮನೆಯವರೊಂದಿಗೆ ಸಣ್ಣ ಪ್ರವಾಸ ಹೋಗಿ ಬನ್ನಿ.
- ಕೆಲಸದ ಮಧ್ಯೆ ಸಂದರ್ಭಕ್ಕೆ ತಕ್ಕಂತೆ ಜೋಕು ಹೇಳುವ ಕೌಶಲ್ಯ ರೂಡಿಸಿಕೊಳ್ಳಿ. ಇದರಿಂದ ಎಂಥ ಜಟಿಲ ವಾತಾವರಣವೂ ತಿಳಿಯಾಗುತ್ತದೆ.
- ಒತ್ತಡ, ತೊಂದರೆಗೆ ಸಿಗರೇಟು, ಮದ್ಯ ಸೇವನೆ ಇತ್ಯಾದಿಗಳು ಪರಿಹಾರವಲ್ಲ. ಅದೇ ಹಣವನ್ನು ಯಾರಿಗಾದರೂ ನಿರ್ಗತಿಕರಿಗೆ ದಾನ ಮಾಡಿ. ಹುಚ್ಚಾಟಗಳಿಗೆ ವ್ಯಯಿಸುವ ವೇಳೆಯನ್ನು ಯಾರಿಗಾದರೂ ಸಹಾಯ ಮಾಡಲು ವಿನಿಯೋಗಿಸಿ.
- ಯಾರಾದರೂ ತೀರಾ ಆಪ್ತರು ನಿಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡಾಗ ಗಮನವಿಟ್ಟು ಕೇಳಿಸಿಕೊಳ್ಳಿ. ಆದರೆ, ಸಮಸ್ಯೆಯನ್ನು ಹೇಳುತ್ತಿರುವಾಗಲೇ ಸಲಹೆ ನೀಡಬೇಡಿ. ಪೂರ್ಣವಾಗಿ ಕೇಳಿಸಿಕೊಂಡರೆ ನಿಮ್ಮ ಬಗ್ಗೆ ಅವರಲ್ಲಿ ಗೌರವ, ಆಪ್ತತೆ ಹೆಚ್ಚುತ್ತದೆ. ಅಂಥವರಿಗೆ ಬೇಕಿರುವುದು ಸಾಂತ್ವನವಲ್ಲ. ಸುಮ್ಮನೆ ಕೇಳುವ ಕಿವಿಗಳು ಮಾತ್ರ ಹಾಗಾಗಿ ಧಾರಾಳವಾಗಿ ಕಿವಿ ಕೊಟ್ಟುಬಿಡಿ.
- ಒಂಟಿ ಮನಸ್ಸು ಭೂತದ ಬಂಗಲೆಯಿದ್ದಂತೆ. ಸಾಧ್ಯವಾದಷ್ಟು ಒಂಟಿಯಾಗಿರುವುದನ್ನು ತಪ್ಪಿಸಿ ಇತರರೊಂದಿಗೆ ಬೆರೆಯುವ ಮನಸ್ಥಿತಿ ಬೆಳೆಸಿಕೊಳ್ಳಿ. ಇದರಿಂದ ಸಲ್ಲದ ವಿಚಾರಗಳು ಹತ್ತಿರ ಸುಳಿದು ಬೇಸರ ಉಂಟುಮಾಡುವುದಿಲ್ಲ.
- ಯಾವುದೇ ಸಂಗತಿ, ವಿಷಯ ಗೊತ್ತಿಲ್ಲವೆಂದರೆ ಹಾಗೆಂದು ನೇರವಾಗಿ ಒಪ್ಪಿಕೊಳ್ಳಿ. ಇದರಿಂದ ತಿಳಿದುಕೊಳ್ಳುವ ಅವಕಾಶ ದಕ್ಕುತ್ತದೆ.
- ಮನಸ್ಸಿಗೆ ನೋವಾಗುವ ಯಾವುದೇ ನೆನಪುಗಳಿದ್ದರೂ ಅವುಗಳಿಂದ ದೂರವಿರಲು ಸಂಗೀತ ಆಲಿಸುವುದು, ಪುಸ್ತಕ ಓದುವನ್ನು ರೂಢಿಸಿಕೊಳ್ಳಿ. ಸಾಧ್ಯವಾದರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ.
- ನೀವು ಬಂದರೆ ಎಲ್ಲರೂ ಖುಷಿ ಪಡುವಂತಿರಲಿ. ಯಾಕಾದ್ರು ಬರ್ತಾರೆ ಇವ್ರು ಎನ್ನಿಸಿಕೊಳ್ಳುವಂತಾಗಬೇಡಿ.
- ಬದುಕಿನಲ್ಲಿ ಆಗೊಮ್ಮೆ ಆಗೊಮ್ಮೆ ಸಂಕಷ್ಟಗಳು ಎದುರಾದರೆ ಹಿಂಜರಿದು, ಕೈಚೆಲ್ಲಿ ಕುಳಿತುಕೊಳ್ಳಬೇಡಿ. ಕಷ್ಟ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತಾ? ಹಾಗಾಗಿ, ಅವುಗಳನ್ನು ಎದುರಿಸಿ, ಗೆಲ್ಲಿ.
- ಗಣೇಶ್ ಕಮ್ಲಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.