ಗಂಡಸಿಗೆ 'ಮೀಸೆ' ಭೂಷಣ. ಮೀಸೆ ಹೊತ್ತ ಗಂಡಸಿಗೆ ಸಿಕ್ಕಾಪಟ್ಟೆ ಡಿಮ್ಯಾಂಡು. ಆದರೆ, ಈಗ ಕಾಲ ಬದಲಾಗಿದೆ. ಮೀಸೆ ಬೋಳಿಸೋದೆ ಫ್ಯಾಷನ್. ಆದರೂ ಕೆಲವರಿಗೆ ಅದರ ಮೇಲಿನ ಹುಚ್ಚು ಹೋಗಿರೋಲ್ಲ ಬಿಡಿ.
23 ವರ್ಷದ ರೋಹಿತ್‌ಗೆ ಅಪಘಾತವಾಗಿತ್ತು. ಆಗ ತುಟಿಗೆ ಬಲವಾಗಿ ಏಟು ಬಿದ್ದು, ಮೀಸೆ ಹತ್ತಿರ ದೊಡ್ಡ ಗಾಯವಾಗಿತ್ತು. ಗಾಯದ ಕಲೆ ಸದಾ ಅಪಘಾತವನ್ನು ನೆನಪಿಸುತ್ತಿತ್ತು. ಜತೆಗೆ ಮುಖದ ಅಂದವನ್ನೇ ಕೆಡಿಸಿತ್ತು.
ಏನಾದ್ರೂ ಪರಿಹಾರ ಸಿಗಬಹುದಾ ಎಂದು ಡಾ. ಬಾತ್ರ ಸೌಂದರ್ಯ ಕ್ಲಿನಿಕ್‌ಗೆ ಹೋದರು. ಎಲ್ಲಿ ಗಾಯದ ಕಲೆ ಉಳಿದಿತ್ತೋ, ಅಲ್ಲಿಯೇ ಮೀಸೆ ಕಸಿ ಮಾಡುವಲ್ಲಿ ಕ್ಲಿನಿಕ್ ಯಶಸ್ವಿಯಾಗಿದೆ.
ಕಸಿ ಶಸ್ತ್ರಚಿಕಿತ್ಸಕ ಡಾ. ರವಿ ಮನೋಹರ್, ಫಾಲಿಕ್ಯುಲರ್ ಟ್ರಾನ್ಸ್‌ಪ್ಲಾಂಟೇಷನ್ ಯೂನಿಟ್ ಎಂಬ ತಂತ್ರಜ್ಞಾನದಿಂದ ದಟ್ಟವಾಗಿ ಕೂದಲು ಬೆಳೆದಿರುವ ಪ್ರದೇಶದಿಂದ ಕೂದಲ ಕೋಶಗಳ ಸಣ್ಣ ಸಮೂಹವನ್ನು ತೆಗೆದರು. ಈ ಕೇಸ್‌ನಲ್ಲಿ ನೆತ್ತಿಯ ಹಿಂಭಾಗದಿಂದ ಕೂದಲನ್ನು ತ್ತು ಕಸಿ ಮಾಡಲಾಯಿತು. ಚಿಕಿತ್ಸೆ ವೇಳೆ ಸ್ಥಳೀಯ ಅರಿವಳಿಕೆ ನೀಡಲಾಗಿತ್ತು. ಕಸಿಯನ್ನು ಕಾಪಾಡಿಕೊಳ್ಳಲು ಕೆಲವು ಸೂಚನೆಗಳನ್ನು ನೀಡಲಾಗಿತ್ತು. ಶಸ್ತ್ರಚಿಕಿತ್ಸೆ ಆದ ಮೂರನೇ ತಿಂಗಳಲ್ಲಿ ರೋಹಿತ್‌ಗೆ ಅದರ ಫಲಿತಾಂಶ ಗೋಚರವಾಗತೊಡಗಿತು. ಕಸಿ ಮಾಡಿದ ಆರಂಭದಲ್ಲಿ ಮೀಸೆಯ ಸಹಜ ಬೆಳವಣಿಗೆ ಅಲ್ಲದೇ ಹೋದರೂ, ಆರು ತಿಂಗಳಿಂದ ವರ್ಷದೊಳಗೆ ಅದ್ಭುತ ಬದಲಾವಣೆಯಾಗಲಿದೆ ಎನ್ನುತ್ತಾರೆ ಡಾ. ಮನೋಹರ್.