ಯಕೃತ್ತಿನ ಸೋಂಕನ್ನು ಹೆಪಟೈಟಿಸ್ ಎನ್ನುತ್ತೇವೆ. ಇದರಲ್ಲಿ ಹಲವು ವಿಧಗಳಿದ್ದು, ಮುಖ್ಯವಾಗಿ ಹೆಪಟೈಟಿಸ್ 'ಎ', 'ಬಿ', 'ಸಿ' ಎಂದು ಗುರುತಿಸಬಹುದು. ಇವೆಲ್ಲಾ ಬೇರೆ ಬೇರೆ ರೀತಿಯ ವೈರಸ್‌ಗಳಿಂದ ಬರುವ ಸೋಂಕು ರೋಗಗಳು.
ಮಲಮಿಶ್ರಿತ ನೀರಿನಿಂದ...
ಮಲಮಿಶ್ರಿತ ನೀರಿನಿಂದ ಹೆಪಟೈಟಿಸ್ 'ಎ' ಬರುತ್ತದೆ. ಅಲ್ಲದೆ, ಕಲುಷಿತ ಆಹಾರ ಪದಾರ್ಥಗಳು ಮತ್ತು ಹಾಲಿನಿಂದಲೂ ಒಬ್ಬರಿಂದ ಮತ್ತೊಬ್ಬರಿಗೆ ಇದು ಹರಡಬಹುದು.
ಲಕ್ಷಣಗಳು ಏನ್ ಗೊತ್ತಾ?
ಜ್ವರ, ಹೊಟ್ಟೆನೋವು, ಆಹಾರ ಸೇರದಿರುವುದು, ವಾಂತಿ ಬಂದಂತಾಗುವುದು, ತೀವ್ರ ಸುಸ್ತು ಅಥವಾ ಬಳಲಿಕೆ, ದೇಹದ ಹಲವು ಭಾಗಗಳಲ್ಲಿ ಜಾಂಡಿಸ್‌ನ ಲಕ್ಷಣ, ಬಹಳಷ್ಟು ದಿನಗಳಿದ್ದರೆ ದೇಹದ ತೂಕ ಗಣನೀಯ ಕಡಿಮೆಯಾಗುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು
ಅಡುಗೆ ಮಾಡುವವರು ಆಹಾರ ಪದಾರ್ಥಗಳನ್ನು ಮುಟ್ಟುವ ಮೊದಲು ಮತ್ತು ನಂತರ ಶುದ್ಧವಾಗಿ ಕೈಗಳನ್ನು ತೊಳೆದುಕೊಳ್ಳಬೇಕು. ಆಹಾರ ಸೇವಿಸುವ ಮೊದಲು ಕೈಗಳು ಶುಚಿಯಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಮಲ, ಮೂತ್ರ ಮಾಡಿಸಿದ ನಂತರ ಹಾಗೂ ಪ್ರೌಢರು ಮಲ, ಮೂತ್ರ ವಿಸರ್ಜನೆಯ ನಂತರವೂ ಸೋಪಿನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ಚಿಕಿತ್ಸೆ ಏನಂತೆ?
ನಿರ್ದಿಷ್ಟ ಚಿಕಿತ್ಸೆಯಿಲ್ಲ. ಇದು ಉಳಿದ ಹೆಪಟೈಟಿಸ್‌ಗಳಿಗೆ ಹೋಲಿಸಿದರೆ ಭೀಕರ ಸೋಂಕೇನೂ ಅಲ್ಲ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ 4-6 ವಾರಗಳಲ್ಲಿ ತನ್ನಿಂದ ತಾನೇ ಗುಣವಾಗುತ್ತದೆ. ಜಿಡ್ಡಿನ ಪದಾರ್ಥಗಳು, ಖಾರ, ಕರಿದ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದಷ್ಟೇ.
ಯಕೃತ್ತಿನ ಸೋಂಕು
ಬಹಳ ತೀವ್ರವಾದ ಯಕೃತ್ತಿನ ಸೋಂಕು ಹೆಪಟೈಟಿಸ್ ಬಿ. ಕೆಲವೊಮ್ಮೆ ಈ ಸೋಂಕು ತುಂಬಾ ದಿನಗಳ ವರೆಗೆ ಮುಂದುವರಿದು ಯಕೃತ್ತಿನ ಸಿರ್ಹೋಸಿಸ್, ವೈಫಲ್ಯತೆಗೆ ತಿರುಗುವುದಲ್ಲದೇ, ಯಕೃತ್ತಿನ ಕ್ಯಾನ್ಸರ್ ಕೂಡ ಸಂಭವಿಸಬಹುದು. ಇದು ಸೋಂಕುಪೀಡಿತರ ರಕ್ತ ಮತ್ತು ದೇಹದ ದ್ರವಗಳಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಲೈಂಗಿಕವಾಗಿಯೂ ಹರಡಬಹುದು. ಇದು ಏಡ್ಸ್ ವೈರಸ್ ಅನ್ನು ಹೋಲುತ್ತದೆ. ರೋಗಿಗೆ ಕೊಡುವ ರಕ್ತದ ಮೂಲಕ ಹಾಗೂ ತಾಯಿಯಿಂದ ಮಗುವಿಗೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ.
ಲಕ್ಷಣಗಳು ಏನ್ ಗೊತ್ತಾ?
ಹಸಿವು ಕಡಿಮೆಯಾಗುವುದು, ವಾಂತಿಯ ಲಕ್ಷಣಗಳು, ವಾಂತಿ, ಮೈ ಕೈ ನೋವು, ಜ್ವರ, ತೀವ್ರ ಬಣ್ಣದ ಮೂತ್ರ, ಜಾಂಡಿಸ್‌ನ ಹಳದಿಯ ಲಕ್ಷಣ ಕಾಣಿಸಿಕೊಳ್ಳುವುದು, ಜೊತೆಯಲ್ಲಿ ದೇಹದ ಹಲವು ಭಾಗಗಳಲ್ಲಿ ತುರಿಕೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಕೆಲವು ವಾರಗಳಲ್ಲೇ ಸೋಂಕು ಕಡಿಮೆಯಾಗುತ್ತದೆ. ಅಪರೂಪದಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲದಿದ್ದರೂ ಲಸಿಕೆ ಅಥವಾ ಚುಚ್ಚುಮದ್ದು ತೆಗೆದುಕೊಂಡರೆ ಕಾಯಿಲೆ ಬರುವ ಸಾಧ್ಯತೆ ಶೇ.95ರಷ್ಟು ಕಡಿಮೆಯಾಗುತ್ತದೆ.
ವೈರಸ್ ಸೋಂಕು
ಸಾಂಕ್ರಮಿಕ ರೀತಿಯಲ್ಲಿ ಹರಡುವ ವೈರಸ್‌ನ ಸೋಂಕು ಹೆಪಟೈಟಿಸ್ 'ಸಿ'. ಉಳಿದ ಹೆಪಟೈಟಿಸ್‌ಗೆ ಹೋಲಿಸಿದರೆ ಇದರಲ್ಲಿ ಕಾಯಿಲೆಯ ಲಕ್ಷಣಗಳು ಕಡಿಮೆ. ವ್ಯಕ್ತಿಗೆ ಸೋಂಕು ತಗುಲಿ ಬಹಳಷ್ಟು ತಿಂಗಳ ನಂತರವೂ ಕಾಯಿಲೆಯ ಲಕ್ಷಣಗಳು ಹಲವೊಮ್ಮೆ ಕಾಣಿಸಿಕೊಳ್ಳುವುದೇ ಇಲ್ಲ. ಹೆಚ್ಚಾಗಿ ಇಂಜೆಕ್ಷನ್ ಮೂಲಕ ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುವುದರಿಂದ ಇದು ಬರುತ್ತದೆ. ರಕ್ತ ಕೊಡುವಾಗಲೂ ಬರಬಹುದು. ಪ್ರಪಂಚದಾದ್ಯಂತ 30 ಕೋಟಿ ಜನರಲ್ಲಿ ಈ ಹೆಪಟೈಟಿಸ್ 'ಸಿ' ಸೋಂಕಿದೆ ಎಂದು ಅಂದಾಜಿಸಲಾಗಿದೆ. ಈ ಸೋಂಕು ದೀರ್ಘಾವಧಿಯ ಸೋಂಕಾಗಿ ಪರಿವರ್ತನೆಯಾಗಿ ಯಕೃತ್ತಿನ ಸಿರ್ಹೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆಗಳು ಜಾಸ್ತಿ. ಈ ಸೋಂಕಿಗೆ ಪೆಜಿಲೇಟೆಡ್ ಇಂಟರ್ ಫೆರಾನ್‌ನಿಂದ ಈಗ ಚಿಕಿತ್ಸೆ ಲಭ್ಯ.
ಮೇಲಿನವುಗಳೇ ಅಲ್ಲದೆ, ಹೆಪಟೈಟಿಸ್ 'ಡಿ', 'ಇ' ಮತ್ತು 'ಎಫ್' ವೈರಸ್‌ಗಳನ್ನೂ ಗುರುತಿಸಲಾಗಿದೆ. ಆದರೆ ಅವುಗಳ ಸೋಂಕಿನ ಪ್ರಮಾಣ ಕಡಿಮೆ.
- ಡಾ. ಎಚ್.ಎಸ್. ಮೋಹನ್ ಸಾಗರ