ಮಗುವಿಗೆ ತಾಯಿಯ ಎದೆಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ. ಮಗು ಜನಿಸಿದ ಮೊದಲನೇ ದಿನದಿಂದಲೇ ತಾಯಿ ಹಾಗೂ ಮಗುವಿನ ನಡುವೆ ಬಿಡಿಸಲಾರದ ಬಾಂಧವ್ಯ ಸೃಷ್ಟಿಯಾಗುತ್ತದೆ. ತಾಯಿ ಹಾಲು ಉಣಿಸುವ ಮೂಲಕ ಈ ಬಾಂಧವ್ಯ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ.
'ನವಜಾತ ಶಿಶುಗಳಿಗೆ ತಾಯಿಯ ಮಡಿಲು, ಮೊಲೆ ಹಾಲು ಹಾಗೂ ತಾಯಿ ಪಕ್ಕದಲ್ಲಿಯೇ ಇದ್ದಾಳೆ ಎಂಬ ಭದ್ರತಾ ಭಾವನೆ ಇದ್ದರೇನೇ ಸ್ವರ್ಗ ಸುಖ' ಎನ್ನುತ್ತಾರೆ ಪ್ರಖ್ಯಾತ ಬ್ರಿಟಿಷ್ ಪ್ರಸವ ತಜ್ಞ ಗ್ರಾಂಟ್ಲೀ ಡಿಕ್ರೀಡ್.
ಆದರೆ, ಆರು ತಿಂಗಳ ನಂತರ ಬೇರೆ ಆಹಾರ ಕೊಡುವುದು ಅನಿವಾರ್ಯ. ಹಾಗೆ ಕೊಡುವ ಆಹಾರ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಹೊಂದಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತಿರಬೇಕು.
ಉತ್ತಮ ಆರೋಗ್ಯ ಬೆಳವಣಿಗೆ ಮತ್ತು ವಿಕಸನಕ್ಕೆ ಇತರೆ ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ. ಮೊಲೆ ಹಾಲಿನೊಂದಿಗೆ ಅರೆ-ಘನ ಮತ್ತು ಘನ ಆಹಾರಗಳೊಂದಿಗೆ ಬೇರೆ ಆಹಾರಗಳನ್ನು ನೀಡುವುದನ್ನು 'ಪೂರಕ ಉಣಿಸುವಿಕೆ' ಎನ್ನುತ್ತಾರೆ. ಹಾಗಂತ ತುಂಬಾ ಬೇಗವಾಗಲಿ ಅಥವಾ ತಡವಾಗಿ ಪೂರಕ ಆಹಾರಗಳನ್ನು ನೀಡಿದರೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಬಹುದು.
ಆರು ತಿಂಗಳ ನಂತರವೂ ಕೇವಲ ಮೊಲೆಹಾಲನ್ನೇ ಉಣಿಸಿದರೆ ಮಗುವನ್ನು ಅಪೌಷ್ಟಿಕತೆ ಕಾಡುವ ಸಾಧ್ಯತೆಗಳಿರುತ್ತವೆ. ರೋಗ ನಿರೋಧಕ ಸಾಮರ್ಥ್ಯಗಳು ಕಡಿಮೆಯಾಗಿ ಅತಿಸಾರ ಮತ್ತು ನ್ಯೂಮೋನಿಯಾ (ರಕ್ತ ಹೀನತೆ) ಮೊದಲಾದ ಕಾಯಿಲೆಗಳು ಬರಬಹುದು.
ಅರೆ ಘನ ಆಹಾರ ನೀಡಿ
ಆರು ತಿಂಗಳ ಪ್ರಾಯದಲ್ಲಿ ಮಗು ಅರೆ ಘನ ಆಹಾರಗಳನ್ನು ಜೀರ್ಣಿಸಿಕೊಳ್ಳುವಷ್ಟು ಬೆಳೆದಿರುತ್ತದೆ. ನಾಲ್ಕರಿಂದ ಆರು ತಿಂಗಳ ಅವಧಿಯಲ್ಲಿ ಮಗುವಿನ ಜೀರ್ಣ ವ್ಯವಸ್ಥೆ ಮತ್ತು ಮೂತ್ರಪಿಂಡಗಳು ಇವುಗಳನ್ನು ಸುರಕ್ಷಿತವಾಗಿ ನಿರ್ವಹಿಸುವಷ್ಟು ಕೌಶಲ್ಯತೆ ಪಡೆದಿರುತ್ತವೆ.
ತುಂಬಾ ಆರಂಭದಲ್ಲಿ ಘನ ಆಹಾರಗಳನ್ನು ಮಗುವಿಗೆ ಉಣಿಸಿದರೆ ಬಾಲ್ಯಾವಸ್ಥೆಯಲ್ಲಿಯೇ ಬೊಜ್ಜುತನ, ಡಯಾಬಿಟಿಸ್, ಸೆಲಿಯಾಕ್ ಡಿಸೀಸಸ್, ಅಲರ್ಜಿ ಮತ್ತು ಎಜೆಮಾ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಮಗುವಿಗೆ ನಿತ್ಯವೂ ಕ್ಯಾಲೊರಿಗಳು, ಪ್ರೊಟೀನ್, ವಿಟಮಿನ್ ಮತ್ತು ಖನಿಜಾಂಶಗಳು ಬೇಕಾಗುತ್ತವೆ. ಗಟ್ಟಿ ಅಥವಾ ಘನ ಆಹಾರಗಳನ್ನು ನೀಡುವುದಕ್ಕೂ ಮುಂಚೆ ಮೃದುವಾದ ಮತ್ತು ಮಣ್ಣಿಯಂಥ ಆಹಾರಗಳನ್ನು ಪರಿಚಯಿಸುವುದು ಒಳಿತು. ವಾರದಿಂದ ವಾರಕ್ಕೆ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು.
ಕಬ್ಬಿಣಾಂಶ ಕೊಡಿ
ಪೂರಕ ಆಹಾರಗಳನ್ನು ನೀಡುವಾಗ ಕಬ್ಬಿಣಾಂಶದ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಕಾಡುತ್ತದೆ. ತಾಯಿಯ ಎದೆಹಾಲಿನೊಂದಿಗೆ ಅಗತ್ಯ ಫ್ಯಾಟಿ ಆ್ಯಸಿಡ್‌ಗಳು ಸಮೃದ್ಧವಾಗಿರುವ ಪೂರಕ ಆಹಾರಗಳನ್ನು ಉಣಿಸುವುದೊಳಿತು. ಸೂರ್ಯನ ಬೆಳಕನ್ನು ಎದುರಿಸುತ್ತಿಲ್ಲದ ಮಗುವಿಗೆ ವಿಟಮಿನ್ 'ಡಿ' ಹಾಗೂ ವಿಟಮಿನ್ 'ಎ'ಗಳನ್ನು ಒದಗಿಸುವುದೂ ಅಗತ್ಯ.
ಪೂರಕ ಆಹಾರ
ಜನನದಿಂದ ಎರಡು ವರ್ಷಗಳ ಪ್ರಾಯದವರೆಗೆ ಮಗುವಿನ ಸಾಕಷ್ಟು ಬೆಳವಣಿಗೆ, ಆರೋಗ್ಯ ಮತ್ತು ವಿಕಸನದ ಅವಧಿಯಾಗುತ್ತದೆ ಎಂಬುದನ್ನು ಗುರುತಿಸಲಾಗಿದೆ. ಆದ್ದರಿಂದ ಮಗುವಿನ ಆರು ತಿಂಗಳ ಬಳಿಕ ಸರಿಯಾದ ಪ್ರಾಯದಲ್ಲಿ ಸೂಕ್ತ, ಸುರಕ್ಷಿತವಾದ ಮತ್ತು ಸಾಕಷ್ಟು ಪೂರಕ ಆಹಾರಗಳನ್ನು ನೀಡುವುದು ಅತ್ಯಂತ ಅಗತ್ಯ.
- ಡಾ.ವಿ.ವಿ. ವರದರಾಜನ್,
ಸೂರ್ಯ ಹಾಸ್ಪಿಟಲ್ಸ್ ಚೆನ್ನೈ
ಪೌಷ್ಟಿಕ ಪ್ರಮಾಣ
ಮಗು ಹುಟ್ಟಿದ 6 ತಿಂಗಳ ಬಳಿಕ 18-24 ತಿಂಗಳುಗಳು ಅತ್ಯಂತ ಮುಖ್ಯವಾಗಿರುತ್ತದೆ. ಹಸುಗೂಸಿದ್ದಾಗ ಶಾರೀರಿಕ ತೂಕದ ಪ್ರತಿ ಯುನಿಟ್‌ನಂತೆ ಪೌಷ್ಟಿಕಾಂಶಗಳ ಅಗತ್ಯವಿದೆ. ಇಲ್ಲದಿದ್ದಲ್ಲಿ ಮಗು ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇರುತ್ತದೆ.
- ಡಾ. ರಾಹುಲ್ ನಗ್ಪಾಲ್, ಫೋರ್ಟೀಸ್ ಆಸ್ಪತ್ರೆ ನಿರ್ದೇಶಕ