ಮದುವೆ ಮಧುರ ಅನುಬಂಧ. ಸಾಮಾಜಿಕ ಒಪ್ಪಂದವೇ ಆದರೂ ಭಾವನಾತ್ಮಕವಾಗಿ ಎರಡು ಮನಸುಗಳು ಮತ್ತು ದೇಹಗಳು ಒಗ್ಗೂಡುವ ಪ್ರಕ್ರಿಯೆ. ಸಂತಾನೋತ್ಪತ್ತಿಗೆ ರಹದಾರಿ. ಹಾಗೆ ನೋಡಿದರೆ, ಮದುವೆಯಾಗುವುದು ಕೂಡಾ ತುಂಬಾ ಸರಳ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಭಾರಿ ಕಷ್ಟ!
ದಾಂಪತ್ಯದಲ್ಲಿ ಸರಸ ಕಡಿಮೆಯಾಗಿ ವಿರಸ ಹೆಚ್ಚಾದರೆ, ಎಲ್ಲ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಡುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ಗಂಡ ಹೆಂಡತಿಯರಿಬ್ಬರದೂ ಕರ್ತವ್ಯ. ಹಾಗಾದರೆ, ಮದುವೆ ಮುರಿದು ಬೀಳದಂತೆ ಏನು ಮಾಡಬೇಕು? ಇದಕ್ಕೆ ಇಂಥದ್ದೇ ಪರಿಹಾರ ಅಂತೇನೂ ಇಲ್ಲ. ಹೀಗಿದ್ದಾಗ್ಯೂ ನಾವು ಕೆಲವೊಂದು ಗುಣಗಳನ್ನು ಮೈಗೂಡಿಸಿಕೊಂಡರೆ ಸುಖಿ ದಾಂಪತ್ಯವನ್ನು ಕೊನೆಯವರೆಗೂ ಸರಿದೂಗಿಸಿಕೊಂಡು ಹೋಗಬಹುದು.
ಏನು ಮಾಡಬೇಕು?
- ಸಾಮಾನ್ಯವಾಗಿ ಹೆಂಡತಿಯರು, ಗಂಡಂದಿರ ತಪ್ಪನ್ನು ಎತ್ತಿ ತೋರಿಸಿ, ಅದನ್ನು ದಿನಗಟ್ಟಲೆ ಎಳೆದಾಡುತ್ತಾರೆ. ಹಾಗೆ ಮಾಡಬಾರದು. ಗಂಡನನ್ನು ಪ್ರೋತ್ಸಾಹಿಸಿ, ಒಳ್ಳೆಯ ಕೆಲಸಕ್ಕೆ ಉತ್ತೇಜಿಸಿವುದು ಹೆಂಡತಿಯ ಕರ್ತವ್ಯ. ಸತತವಾಗಿ ತಪ್ಪುಗಳನ್ನು ಎತ್ತಿ ತೋರಿಸುವುದರಿಂದ ನಿಮ್ಮಿಬ್ಬರ ಮಧ್ಯೆ ಬಿರುಕು ಮೂಡಲು ಕಾರಣವಾಗುತ್ತದೆ ಎಂಬುದನ್ನು ನೆನಪಿಡಿ. ಗೊತ್ತಾಗಿರುವ ತಪ್ಪನ್ನು ಸರಿಪಡಿಸಲೆತ್ನಿಸಿ.
- ಮದುವೆಯಾದ ಬಳಿಕ ಬಹುತೇಕ ಹೆಂಗಸರು ಮಕ್ಕಳು, ಅದು ಇದು ಅಂತ ಬ್ಯುಸಿಯಾಗುತ್ತಾರೆ. ಗಂಡನ ಕಡೆಗೆ ಗಮನ ಕೊಡುವುದನ್ನು ಕಡಿಮೆ ಮಾಡುತ್ತಾರೆ. ಹಾಗೆ ಮಾಡಬೇಡಿ. ಮದುವೆ ಮುಂಚೆ ನೀವು ಹೇಗೆ ಇರುತ್ತಿದ್ದೀರಿ, ಅದೇ ರೀತಿ ಈಗಲೂ ಇರಲು ಪ್ರಯತ್ನಿಸಿ. ನಿಮ್ಮ ಪತಿಗೆ ಇಷ್ಟವಾಗುವ ಉಡುಪು ಧರಿಸಿ. ಅವರನ್ನು ಉತ್ತೇಜಿಸುತ್ತೀರಿ. ಹೀಗೆ ಮಾಡುವುದರಿಂದ ನೀವು ಬದಲಾಗಿ ಎಂಬುದನ್ನು ತೋರಿಸಿ. ಇದರರ್ಥ ಮದೆಯಾದ ಮೇಲೂ ಗರ್ಲ್‌ಫ್ರೆಂಡ್ ಥರನೇ ಇರಿ!
- ನಿಮ್ಮಿಬ್ಬರ 'ಲೈಂಗಿಕ ಸಂಬಂಧ' ನಿಮ್ಮನ್ನು ಸುಖವಾಗಿ ಮತ್ತು ಮದುವೆಯ ಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಮದುವೆಯಾದ ಮೇಲೆ ಹೆಂಗಸರು ಲೈಂಗಿಕ ಜೀವನಕ್ಕೆ ಕೊನೆಯ ಸ್ಥಾನ ನೀಡುತ್ತಾರೆ. ಹೀಗೆ ಮಾಡುವುದರಿಂದ ಗಂಡಸು ತುಸು ಕಿರಿಕಿರಿ ಅನುಭವಿಸುತ್ತಾನೆ. ಆತ ತನ್ನ 'ಮಾರ್ಗ' ಬದಲಿಸಿದರೆ ಮದುವೆ ಮುರಿದು ಬೀಳೋದು ಗ್ಯಾರೆಂಟಿ. ಹಾಗಾಗಿ, ಲೈಂಗಿಕ ಜೀವನ ಬಗ್ಗೆ ಆಸಕ್ತಿ ಕಳೆದುಕೊಳ್ಳಬೇಡಿ.
- ಸಾಮಾನ್ಯವಾಗಿ ವೃತ್ತಿಯಲ್ಲಿರುವ ಮಹಿಳೆಯರು ಮದುವೆಯಾದ ಮೇಲೆ ಕೆಲಸಕ್ಕೆ ಗುಡ್‌ಬೈ ಹೇಳುತ್ತಾರೆ. ಆಗ ಸಹಜವಾಗಿಯೇ ಗಂಡನ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹೀಗೆ ಮಾಡುವುದರಿಂದಲೂ ಮದುವೆಯ ಬಂಧದ ಬಿರುಕಿಗೆ ಕಾರಣವಾಗುತ್ತದೆ. ಎಲ್ಲದಕ್ಕೂ ಗಂಡನನ್ನೇ ಆಶ್ರಯಿಸಬೇಕಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಿ. ಮದುವೆಯಾದ ಮೇಲೂ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮಗೂ ಮಾತ್ರವಲ್ಲದೆ, ನಿಮ್ಮ ಗಂಡನಿಗೂ ನೆರವಾಗುತ್ತದೆ.
- ಸಹಜವಾಗಿಯೇ ಮದುವೆಯಾದ ಮೇಲೆ ಗಂಡನಿಂದ ಹೆಂಡತಿ ಸಿಕ್ಕಾಪಟ್ಟೆ ನಿರೀಕ್ಷಿಸುತ್ತಾಳೆ. ಕೆಲವೊಂದು ಸಲ ವಾಸ್ತವತೆಯನ್ನು ಮೀರಿ ಆಕೆಯ ನಿರೀಕ್ಷೆ ಸಾಗುತ್ತದೆ. ಇದೇ ಕೊನೆಗೊಂದು ದಿನ ಮದುವೆ ಬಂಧಕ್ಕೆ ಮಗ್ಗಲು ಮುಳ್ಳಾದರೂ ಆಶ್ಚರ್ಯವಿಲ್ಲ. ನಿರೀಕ್ಷೆಗಳು ಇತಿ ಮಿತಿಯಲ್ಲೇ ಇರಲಿ. ನಿಮ್ಮ ಗಂಡನಿಗೂ ಅವನದ್ದೇ ಕಲ್ಪನೆಗಳು, ಸ್ವಾತಂತ್ರ್ಯ ಇದ್ದೇ ಇರುತ್ತದೆ. ಹಾಗಾಗಿ, ಅವನಿಗೆ ಸ್ಪೇಸ್ ಬಿಟ್ಟುಕೊಡಿ. ಇಲ್ಲದಿದ್ದರೆ ಸಂಸಾರದ ಬಂಡಿ ಮುಗುಚಿ ಬಿದ್ದೀತು.
- ಶೋಮ
mtippar@gmail.com