'ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ' ಎಂಬ ಮನಸ್ಥಿತಿಯ ಮಹಾನುಭಾವರು ಸದಾ ನಮ್ಮೊಡನೆ ಇದ್ದೇ ಇರುತ್ತಾರೆ. ಇಂಥವರಿಗೆ ಸ್ವಹಿತಾಸಕ್ತಿಯೊಂದೇ ಮುಖ್ಯ. ಅವರು ಕಾರ್ಯಸಾಧನೆಗಾಗಿ ಏನು ಮಾಡಲೂ ಮುಂದಡಿ ಇಡುವುದಿಲ್ಲ. ಮುಂದಡಿ ಇಡುವವರನ್ನೂ ಬೆಂಬಲಿಸುವುದಿಲ್ಲ.
ತಮ್ಮೊಂದಿಗೆ ಇರುವವರು ಮಾಡಿದ ಕೆಲಸ ಯಶಸ್ವಿಯಾಗುವ ಲಕ್ಷಣ ಕಂಡುಬಂದಾಗ ತಾವೂ ಕೈ ಮಿಲಾಯಿಸಿ ಜೈ ಅಂದು ಬಿಡುತ್ತಾರೆ. ಆದರೆ, ಅದೇ ಕೆಲಸ ಎಡವಟ್ಟಾದರೆ ಮಾತ್ರ 'ನಂಗೆ ಗೊತ್ತಿತ್ತು. ಹೀಗಾಗುತ್ತೆ ಅಂತ' ಎಂದು ಜಾರಿಕೊಳ್ಳುತ್ತಾರೆ.
ಗೆಳೆಯರ ಗುಂಪಿನಲ್ಲಿ, ಕಚೇರಿ, ಸಂಘ-ಸಂಸ್ಥೆಗಳಲ್ಲಿ ಇಂಥವರು ಢಾಳಾಗಿ ಕಾಣಿಸುತ್ತಾರೆ. ಎಲ್ಲರೊಂದಿಗೂ ಒಳ್ಳೆಯವರೆನಿಸಿಕೊಳ್ಳುವ ಇವರ ಯೋಚನೆ 'ಬೀಜ ಬಿತ್ತದೆ ಕಳೆ ತೆಗೆಯದೆ ಬೆಳೆ ತೆಗೆಯುವುದು'. ಜತೆಗೆ ಸದಾ ಅತೃಪ್ತ ಭಾವ ಅವರನ್ನು ಕಾಡುತ್ತದೆ. ಇಂಥ ಮನಸ್ಥಿತಿಯವರು ಯಾವ ಗಟ್ಟಿ ನಿರ್ಧಾರಕ್ಕೂ ಬದ್ಧರಾಗಿರುವುದಿಲ್ಲ. ತಮ್ಮ ಕಾರ್ಯ ಸಿದ್ಧಿಸಿಕೊಳ್ಳುವ ಏಕೈಕ ಉದ್ದೇಶದಿಂದ ಯಾರನ್ನೂ ಬೆಂಬಲಿಸದೆ, ಹೀಗಳೆಯದೆ ಮಧ್ಯದಲ್ಲಿ ಇದ್ದುಬಿಡುತ್ತಾರೆ. ಇಂಥ ಚಾಲಾಕಿತನ ಎಂದಿಗೂ ಒಳ್ಳೆಯದಲ್ಲ. ಅವರು ಯಾರಿಗೂ ಆಪ್ತರಾಗುವುದಿಲ್ಲ, ನಂಬಿಕೆಗೂ ಆರ್ಹರಾಗುವುದಿಲ್ಲ.
ಹಲೋ... ಹೀಗ್ ಮಾಡಿ...
4 ಕಚೇರಿ, ಸಂಸ್ಥೆಗಳಲ್ಲಿ ಯಾವುದೇ ವಿಚಾರಕ್ಕೆ ಒಮ್ಮತ ನಿರ್ಧಾರವಿದ್ದಾಗ ನೀವೂ ಸಹಮತ ನೀಡಿ. ಸಾಧ್ಯವಾದರೆ ಬೆಂಬಲಿಸಿ. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇಬ್ಬಗೆ ನೀತಿ ಅನುಸರಿಸಿ ಏನನ್ನೂ ತಿಳಿಸದೆ ಸುಮ್ಮನಿರಬೇಡಿ.
4 ಎಲ್ಲರಿಗೂ ಒಳ್ಳೆಯವರಾಗಲು ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಅಂಥ ಹಪಾಹಪಿತನ ಬಿಡಿ.
4 ಕೆಲ ಸಂದರ್ಭಗಳಲ್ಲಿ ಯಾವುದೇ ನಿರ್ಧಾರದಿಂದ ಕೆಲವರಿಗೆ ತೊಂದರೆ, ನೋವಾಗಬಹುದು. ಆಗ ನೀವು ಹಿಂಬದಿಯಿಂದ ಚಾಡಿಯ ಬೆಂಬಲ ನೀಡಿ ನಿರ್ಧಾರದ ವಿರುದ್ಧ ಎತ್ತಿ ಕಟ್ಟುವ ಕೆಟ್ಟ ಕೆಲಸ ಮಾಡಬೇಡಿ. ಇದರಿಂದ ವಿಶ್ವಾಸ ಮತ್ತಷ್ಟು ಹದಗೆಡುತ್ತದೆ.
4 ಇಂಥ ಮನಸ್ಥಿತಿಯಿಂದ ನೀವು ನಂಬಿಕೆಗೆ ಅರ್ಹರಲ್ಲದ ವ್ಯಕ್ತಿಯಾಗುತ್ತೀರಿ. ನಿಮ್ಮನ್ನು ಎಲ್ಲರೂ ಸಂದೇಹದಿಂದಲೇ ನೋಡುವಂತಾಗುತ್ತದೆ.
4 ಎರಡು ದೋಣಿಯ ಮೇಲಿನ ಪಯಣ ಎಂದಿಗೂ ಸುಖಕರವಲ್ಲ. ಅದರಲ್ಲಿ ಅಪಾಯವೇ ಹೆಚ್ಚು. ಆಯ್ಕೆ, ನಿರ್ಧಾರದಲ್ಲಿ ಎಡಬಿಡಂಗಿತನ ತೋರದೆ ಒಂದೆಡೆ ನಿಲ್ಲಿ. ಸರಿಯೋ ತಪ್ಪೋ, ಒಟ್ಟಾರೆ ಗಟ್ಟಿ ನಿಲುವು ಹೊಂದಿ.
4 ಗುಂಪು, ಸಂಸ್ಥೆ, ಕಚೇರಿ ಎಂದ ಮೇಲೆ ಅಲ್ಲಿ ಎಲ್ಲರಿಗೂ ಸಮಾನ ಅವಕಾಶ, ನಿಯಮ ಅನ್ವಯವಾಗುತ್ತದೆ. ಒಳಗೊಳಗೆ ವೈಯಕ್ತಿಕ ಹಿತಾಸಕ್ತಿಗೆ ಹಾತೊರೆಯಬೇಡಿ. ಏನೇ ನಿರ್ಧಾರ, ಪ್ರತಿಫಲ ಇದ್ದರೂ ಅದು ಎಲ್ಲರಿಗೂ ಅನ್ವಯವಾಗುವಂತಿರಲಿ.
4 ಯಾರೋ ಒಬ್ಬರಿಗೆ ಒಳ್ಳೆಯವರಾಗಲೂ ಅವರ ಮುಂದೆ ಇತರರನ್ನು ಹೀಗಳೆಯಬೇಡಿ. ಇದರಿಂದ ಕೇಳಿಸಿಕೊಂಡವರು ಕೂಡಾ ನಿಮ್ಮನ್ನು ನಂಬುವುದಿಲ್ಲ ಎಂಬುದು ಗೊತ್ತಿರಲಿ.
4 ನಿಮ್ಮ ಉತ್ತಮ ವ್ಯಕ್ತಿತ್ವ, ನಿಷ್ಠೆ, ಸಹಾಯ, ಶ್ರಮವಿಲ್ಲದೆ ಎಂದಿಗೂ ಇತರರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಅಂಥ ಬೂಟಾಟಿಕೆ ಬಿಡಿ. ಸ್ವಂತಿಕೆ ಇರಲಿ. ತನಗೆಲ್ಲ ಗೊತ್ತು ಎನ್ನುವ ಅಹಂಭಾವವೇ ನಿಮಗೆ ಗೊತ್ತಿಲ್ಲದಂತೆ ನಿಮ್ಮೊಂದಿಗಿನವರನ್ನು ದೂರ ಮಾಡಿಬಿಡುತ್ತೆ.
4 ಎಲ್ಲರೊಂದಿಗೆ ಇದ್ದಾಗ ತೀರಾ ಜಿಪುಣತನ, ಪ್ರತ್ಯೇಕತೆ ಪ್ರದರ್ಶನ ಬೇಡ. ಉದಾರಿಯಾಗಿ ಖರ್ಚು ಮಾಡದಿದ್ದರೂ ಮುಕ್ತ ಮನಸ್ಸಿನಿಂದ ಬೆರೆಯುತ್ತಾ ಕೊಟ್ಟು ತೆಗೆದುಕೊಳ್ಳುವ ಖುಷಿ ಅನುಭವಿಸಿ.
- ಗಣೇಶ್ ಕಮ್ಲಾಪುರ
ganeshkamlapur@gmail.com