ಹಲ್ಲು ಹುಳುಕಾಗಿ ಕೀಳಲಾಗಿದೆ ಅಥವಾ ಬಿದ್ದು ಮುರಿದಿದೆ. ಹಾಗೇ ಬಿಟ್ಟರೆ ನೋಡೋಕ್ ಏನ್ ಚೆಂದ? ಸರಿಯಾಗಿ ತಿನ್ನಕ್ಕಾಗಲ್ಲ, ಸ್ಪಷ್ಟವಾಗಿ ಮಾತಾಡಕ್ಕಾಗಲ್ಲ. ಒಟ್ಟಿನಲ್ಲಿ 'ಬಾಯಿಬಿಟ್ರೆ ಬಣ್ಣಗೇಡು' ಎಂಬಂಥ ಸ್ಥಿತಿ.
ಕೃತಕ ದಂತಗಳನ್ನು ಕೂರಿಸೋದು ಇಲ್ಲಿಯ ತನಕ ಇದ್ದ ಆಯ್ಕೆ. ಅಂದ್ರೆ ಖಾಲಿ ಇರುವ ಜಾಗದಲ್ಲಿ ತೆಗೆದು ಹಾಕಿ ಮಾಡಲಾಗುವ ಹಲ್ಲುಗಳು, ಫಿಕ್ಸ್ ಆದ ಬ್ರಿಡ್ಜ್‌ಗಳು ಅಥವಾ ಇತ್ತೀಚೆಗೆ ತುಂಬಾ ಜನಪ್ರಿಯವಾಗಿರುವ ಇಂಪ್ಲಾಂಟ್‌ಗಳು.
ಆದರೆ, ಕೃತಕ ಹಲ್ಲುಗಳು ಎಷ್ಟೇ ಚೆನ್ನಾಗಿ ಕಂಡರೂ ಕೃತಕವೇ. ಅದನ್ನು ಸರಿಯಾಗಿ ಕೂರಿಸಬೇಕಾದರೆ ಬೇರೆ ಹಲ್ಲನ್ನು ಕರಾರುವಾಕ್ಕಾಗಿ ಸಣ್ಣ ಮಾಡಬೇಕು. ಹಾಕಿದ ನಂತರವೂ ಬಾಯಿಗೆ ಹೊಂದಿಕೊಳ್ಳಲು ಟೈಂ ಬೇಕು. ಇನ್ನು ಇಂಪ್ಲಾಂಟ್‌ಗಳಲ್ಲಿ ಮೂಳೆಯೊಳಗೆ ಚಿಕ್ಕ ರಂಧ್ರಮಾಡಿ ಮೊಳೆಯಂಥ ವಸ್ತುವನ್ನಿಟ್ಟು, ಅದರ ಮೇಲೆ ಕೃತಕ ಹಲ್ಲು ಕೂರಿಸಬೇಕು. ಕೂರಿಸಿದ ನಂತರ ವ್ಯಕ್ತಿಯಿಂದ ವ್ಯಕ್ತಿಗೆ ಹೊಂದಾಣಿಕೆಯ ಸಮಸ್ಯೆ ಇದ್ದೇ ಇರುತ್ತದೆ. ಇದಲ್ಲದೆ ಸತತವಾಗಿ ತಿನ್ನುವಾಗ ಹಾಗೂ ಮಾತನಾಡುವಾಗ ದವಡೆಯ ಚಲನೆಯಿಂದ ಘರ್ಷಣೆಯುಂಟಾಗಿ ಹಲ್ಲಿನ ಸುತ್ತಲಿನ ಮೂಳೆಯ ಸವೆತವಾಗುವ ಸಾಧ್ಯತೆಯೂ ಇದೆ.
ಹಲ್ಯಾಕೆ ಬೆಳೆಯಲ್ಲ?
ಇಷ್ಟೆಲ್ಲಾ ತಾಪತ್ರಯಗಳನ್ನು ಯೋಚಿಸಿದರೆ ಏಕೆ ಹಲ್ಲನ್ನು ಬೆಳೆಸಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಮೂಡೋದು ಸಹಜ. ಈಗ ಅದೂ ಸಾಧ್ಯವಾಗಿದೆ. ಲಂಡನ್‌ನ ಕಿಂಗ್ಸ್ ಕಾಲೇಜಿನ ಡೆಂಟಲ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಗಳು ಹೊಸ ಹಲ್ಲನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗಂತ ಈ ಕೆಲಸವೇನೂ ಸುಲಭದ್ದಲ್ಲ. ಮೊದಲು ಮಾನವ ವಸಡಿನ ಜೀವಕೋಶ (ಎಪಿಥೀಲಿಯಲ್ ಸೆಲ್)ವನ್ನು ಬೇರ್ಪಡಿಸಿ ಅದನ್ನು ಪ್ರಯೋಗಾಲಯದಲ್ಲಿ ಬೆಳಸಲಾಯಿತು. ನಂತರ ಇಲಿಯ ಭ್ರೂಣದಲ್ಲಿರುವ ಹಲ್ಲಿನ ಆಕರ ಜೀವಕೋಶ (ಮೀಸೆಮ್ ಕೈಮಲ್ ಸೆಲ್)ಗಳೊಂದಿಗೆ ಇದನ್ನು ಸೇರಿಸಲಾಯಿತು. ಹೀಗೆ ಒಟ್ಟುಗೂಡಿಸಿದ ಜೀವಕೋಶಗಳನ್ನು ಇಲಿಯ ಮೂತ್ರಪಿಂಡಗಳಲ್ಲಿ ಮರುಜೋಡಣೆ ಮಾಡಿದರು. ಅಲ್ಲಿ ಮಾನವ- ಇಲಿ ಹೈಬ್ರಿಡ್ ಹಲ್ಲು ಹುಟ್ಟಿತ್ತು. ಈ ಹೊಸ ಹಲ್ಲಿನಲ್ಲಿ ಮುಖ್ಯ ಪದರುಗಳಾದ ಎನಾಮೆಲ್, ಡೆಂಟೀನ್ ಜತೆ ಬೇರೂ ಕೂಡಾ ಬೆಳೆದಿತ್ತು. ವಿಜ್ಞಾನಿಗಳ ಪ್ರಕಾರ ದಂತ ವೈದ್ಯಕೀಯದಲ್ಲಿ ಇದೊಂದು ಪ್ರಮುಖ ಹೆಜ್ಜೆ.
ಹಲ್ಲೂ ಬೆಳೆಯುತ್ತೆ...
ಈ ಸಂಶೋಧನೆಯ ಮುಖ್ಯಸ್ಥ ಪ್ರೊಫೆಸರ್ ಪಾಲ್ ಶಾಫ್ 'ಮಾನವ ವಸಡಿನ ಜೀವಕೋಶಗಳಿಗೆ ಸರಿಯಾದ ಪ್ರಚೋದನೆ ಸಿಕ್ಕಲ್ಲಿ ಹಲ್ಲಾಗಿ ಬೆಳೆಯುವ ಗುಣವಿದೆ. ವಸಡಿನ ಜೀವಕೋಶಗಳನ್ನು ಸುಲಭವಾಗಿ ಬೇರ್ಪಡಿಸಬಹುದಾದ್ದರಿಂದ ನೈಜ ಹಲ್ಲನ್ನು ಬೆಳೆಯುವ ನಮ್ಮ ಕನಸು ನನಸಾಗಿ ಜನರಿಗೆ ಲಭ್ಯವಾಗುವ ದಿನಗಳು ಹತ್ತಿರದಲ್ಲಿವೆ' ಎನ್ನುತ್ತಾರೆ.
ಹೌದು. ಇದಕ್ಕೆ ಇಲಿಗಳ ಭ್ರೂಣದ ಆಕರ ಕೋಶಗಳೇಕೆ ಎಂದು ಪ್ರಶ್ನಿಸಿದರೆ ಮಾನವ ಭ್ರೂಣದ ಆಕರ ಕೋಶಗಳಿಂದಲೂ ಹೊಸ ಹಲ್ಲು ಸೃಷ್ಟಿಸಲು ಸಾಧ್ಯ. ಆದರೆ ಅದು ಕಾನೂನಿನ ವಿರುದ್ಧ ಮಾತ್ರವಲ್ಲ ನೈತಿಕ ದೃಷ್ಟಿಯಿಂದಲೂ ಸರಿಯಲ್ಲ. ಹಾಗಾಗಿಯೇ ಹಲ್ಲನ್ನು ಹುಟ್ಟಿಸಿದ್ದು ದೊಡ್ಡ ಸಾಧನೆಯಾದರೂ ದೊಡ್ಡ ಪ್ರಮಾಣದಲ್ಲಿ ಹಲ್ಲು ಬೆಳಸಲು ಬೇಕಾಗುವ ಆಕರ ಜೀವಕೋಶಗಳನ್ನು ಹುಡುಕುವುದು ಮುಂದಿರುವ ಸವಾಲು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಏನೇ ಆಗಲಿ, ಹಲ್ಲು ಇರದಿದ್ದಾಗ ದಂತ ವೈದ್ಯರ ಬಳಿ ಹೋಗಿ ದವಡೆಯಲ್ಲಿ 'ಹಲ್ಲಿನ ಬೀಜ ಬಿತ್ತನೆ' ಮಾಡಿಸಿಕೊಂಡು ಕೆಲವು ದಿನಗಳಲ್ಲೇ ಬೇರು ಸಹಿತ ಹಲ್ಲು ಹುಟ್ಟಿಸುವ ದಿನಗಳು ದೂರವಿಲ್ಲ.
- ಡಾ. ಕೆ.ಎಸ್. ಚೈತ್ರಾ