ಕೊಡುಗೆಗಳಿಗೆ ಮಾರು ಹೋಗದವರು ಯಾರು? ಮನೆಗೆ ಬಂದ ಅತಿಥಿಗಳು ತಮಗೆ ಚಾಕೊಲೇಟ್ ಕೊಡುತ್ತಾರೇನೋ ಎಂದು ಮಕ್ಕಳು ಆಸೆಗಣ್ಣಿನಿಂದ ಕಾಯುತ್ತಾರೆ. ತವರು ಮನೆಗೆ ಬಂದ ಮಗಳ ಉಡಿ ತುಂಬಿ ಕಳುಹಿಸುತ್ತಾರೆ. ಮಾರುಕಟ್ಟೆಗೆ ಹೋಗಿ ಏನಾದರೂ ವಸ್ತು ಖರೀದಿಸಿದರೂ ಜತೆಗೇನು ಗಿಫ್ಟ್ ಇದೆ ಎಂದು ನೋಡುವವರು, ಕೇಳುವವರೇ ಹೆಚ್ಚು! ಹೀಗಾಗಿ, ಬೈ ವನ್, ಗೆಟ್ ವನ್ ಕಾನ್ಸೆಪ್ಟ್ ಅಷ್ಟು ಜನಪ್ರಿಯವಾಗಿದ್ದು.
ಮನೆಗೆ ಬಂದ ಹೆಣ್ಣುಮಕ್ಕಳು ಹೊರಟು ನಿಂತಾಗ ಅವರ ಹಣೆಗೆ ಅರಿಶಿಣ-ಕುಂಕುಮ ಹಚ್ಚಿ, ಕೈಯಲ್ಲಿ ಎಲೆ-ಅಡಕೆ, ಖಣದ ಜೊತೆ ತೆಂಗಿನಕಾಯಿ ನೀಡುವ ಸಂಪ್ರದಾಯವಿತ್ತು. ಮುಂದೆ ಯಾವತ್ತೋ ಅದೇ ಅಥವಾ ಅಂಥದೇ ಉಡುಗೊರೆಗಳು ತಮಗೆ, ಅಥವಾ ಆಪ್ತರಿಗೇ ವಾಪಸ್ ಬರುತ್ತಿದ್ದವು. ಇವು ಕೊಟ್ಟಷ್ಟು ಮರಳಿ ಬರುವ ಉಡುಗೊರೆಗಳು!
ಕ್ರಮೇಣ ಬದಲಾವಣೆ
ಇನ್ನು ಮದುವೆ- ಮುಂಜಿಯಲ್ಲಿ ನೀಡುವ ಉಡುಗೊರೆಗಳೆಂದರೆ ಮತ್ತದೇ ರವಿಕೆ ಖಣ, ಊಟದ ತಾಟು, ಕವರ್‌ನಲ್ಲಿ ಹತ್ತಿಪ್ಪತ್ತರ ನೋಟು ಬಿಟ್ಟರೆ ಲೋಟಗಳು. ತೀರಾ ಆತ್ಮೀಯರ ಕಾರ್ಯಕ್ರಮಗಳೆಂದರೆ ನೀರಿನ ಹಂಡೆಗಳೋ, ವಾಚ್‌ಗಳು, ಚಿನ್ನದ ಸರ, ಉಂಗುರುಗಳೋ ಆಗಿರುತ್ತಿದ್ದವು.
ಆದರೆ, ಇಂದು ಕಾಲ ತೀರಾ ಬದಲಾಗಿಲ್ಲವಾದರೂ ಸಮಾರಂಭಗಳಲ್ಲಿ ನೀಡುತ್ತಿದ್ದ ಅಂದಿನ ಉಡುಗೊರೆಗಳಲ್ಲಿ ಕ್ರಮೇಣ ಬದಲಾವಣೆಯಾಗಿದೆ. ಈಗ ಕೃಷ್ಣ ರುಕ್ಮಿಣಿ, ವಿಘ್ನ ನಿವಾರಕ ಗಣೇಶರ ಆಕರ್ಷಕ ಭಂಗಿಗಳ ಪೋಟೋಗಳು, ಶೋಕೇಸ್ ಫೀಸ್‌ಗಳು, ಬೆಡ್‌ಲ್ಯಾಂಪ್‌ಗಳು ಉಡುಗೊರೆ ಸಾಧನಗಳಾದವು. ತೀರಾ ಇತ್ತೀಚೆಗಂತೂ ಬಗೆಬಗೆಯ ಹೂಗಳಿಂದ ಸಿಂಗರಿಸಿದ ಸುಂದರ ಬೊಕ್ಕೆಗಳು ಎಲ್ಲ ಸಮಾರಂಭಗಳಲ್ಲಿ ಮಾಮೂಲಿ ಉಡುಗೊರೆಗಳಾಗಿವೆ.
ಇನ್ನು ಮನೆಗಳಲ್ಲಿ ಮೊದಲಾದರೆ ಮನೆಗೆ ಬಂದ ನೆಂಟರ ಮಕ್ಕಳ ಕೈಗೆ ಐವತ್ತೊ, ನೂರರ ನೋಟಿತ್ತು ಮುತ್ತಿಕ್ಕಿದರೆ ಸಾಕಿತ್ತು. ಆದರೆ, ಈಗ ಅವರಿಗೆ ಫ್ರಾಕೋ, ಆಟಿಕೆಯೋ, ಅಂಗಿಯೋ ಕೊಡಿಸಲೇಬೇಕು! ಇದು ಹತ್ತಿರ ಸಂಬಂಧಿ ಹೊರತುಪಡಿಸಿ, ದೂರದ ಸಂಬಂಧಿಗಳಲ್ಲೂ ಉಡುಗೊರೆಯಲ್ಲಿ ಸಮಾನತೆ ಕಾಯ್ದುಕೊಳ್ಳಬೇಕಿದೆ.
ಎಲ್ಲ ಹೊಸತು
ಉಡುಗೊರೆಯಲ್ಲೂ ಹೊಸತನ ಕಾಲಿಟ್ಟಿದೆ. ಮಳಿಗೆಗಳು, ಮಾಲ್‌ಗಳು ಗಿಫ್ಟ್ ಕೂಪನ್‌ಗಳನ್ನು ನೀಡುವ ಮೂಲಕ ಖರೀದಿದಾರರನ್ನು ಆಕರ್ಷಿಸುತ್ತಿವೆ. ಟ್ರಾವೆಲ್ ಏಜೆನ್ಸಿಯವರೂ ಡಿಸ್ಕೌಂಟ್ ದರದಲ್ಲಿ ಪ್ರವಾಸಿ ಕೂಪನ್‌ಗಳನ್ನು ನೀಡುತ್ತಿದ್ದಾರೆ.
ಈಗ ಮಕ್ಕಳೂ ಪ್ರಬುದ್ಧರು. ಚಿಕ್ಕಪುಟ್ಟ ಆಟಿಕೆಗಳ ಗೋಜಿಗೆ ಹೋಗುವುದಿಲ್ಲ. ಲ್ಯಾಪ್‌ಟಾಪ್‌ನಂಥ ವಸ್ತುಗಳನ್ನು ಉಡುಗೊರೆಯಾಗಿ ಕೇಳುವುದೇ ಜಾಸ್ತಿ. ಉಡುಗೊರೆ ನೀಡುವವರು ದುಡ್ಡಿನ ಮುಖ ನೋಡದೆ ಮಕ್ಕಳ ಬೇಡಿಕೆಯನ್ನು ಈಡೇರಿಸಲೇಬೇಕು. ಹಾಗಾಗಿ ತಿಂಗಳ ಬಜೆಟ್‌ನಲ್ಲಿ ಅರ್ಧದಷ್ಟು ಹಣ ಉಡುಗೊರೆಗಳಿಗೆ ವೆಚ್ಚವಾಗುತ್ತಿರುವುದು ವಾಸ್ತವದ ಸಂಗತಿ.
ಕೊನೆಯದಾಗಿ...
ನಾವು ಎಷ್ಟು ಪ್ರೀತಿಯಿಂದ, ವಿಶ್ವಾಸದಿಂದ, ಸಂತೋಷದಿಂದ ಉಡುಗೊರೆ ನೀಡುತ್ತೇವೋ, ಅಷ್ಟೇ ವಿಶ್ವಾಸದಿಂದ, ಪ್ರೀತಿಯಿಂದ ಮರಳಿ ಪಡೆಯುವುದಂತೂ ಸತ್ಯ. ಹಣ ಪೋಲು ಎಂದುಕೊಂಡರೆ ಗಿಫ್ಟ್ ನೀಡಿದ ಸಂತೋಷ ಕಳೆದು ಹೋಗುತ್ತದೆ. <
ಏನೇನು ಉಡುಗೊರೆ ಕೊಡ್ಬಹುದು?
ಮದುವೆ ಮತ್ತಿತರ ಸಮಾರಂಭಗಳಲ್ಲಿ ಅನಗತ್ಯ ಬೊಕ್ಕೆ ಮತ್ತಿತರ ಹಾಳಾಗುವ ವಸ್ತುಗಳನ್ನು ಕೊಡುವ ಬದಲು ಬಹುದಿನಗಳ ವರೆಗೆ ನೆನಪಿನಲ್ಲುಳಿಯುವಂಥ ಉಡುಗೊರೆಗಳನ್ನೇ ನೀಡಿ.
ಸಾಧ್ಯವಾದಷ್ಟು ಗೃಹೋಪಯೋಗಿ, ಜೀವನಕ್ಕೆ ಅನುಕೂಲವಾಗುವ ಸಂದೇಶಗಳಿರುವ ಉಡುಗೊರೆ ಇರಲಿ.
ಶೋಕೆಸ್‌ನಲ್ಲಿಡುವ ಗಿಫ್ಟ್ ಬದಲು ಉತ್ತಮ ಪುಸ್ತಕ ನೀಡಿದರೆ ಇನ್ನೂ ಒಳ್ಳೆಯದು.
ಪ್ರೇಮಿಗಳಾದರೆ ಸ್ವಹಸ್ತಾಕ್ಷರದ ಗ್ರೀಟಿಂಗ್ಸ್ ನೀಡಿ ಖುಷಿ ಪಡಿಸಬಹುದು.
ಗಿಫ್ಟ್ ನೀಡುವುದೇ ಆತ್ಮೀಯರಿಗಾಗಿ. ಅವರಿಗೆ ಖುಷಿಯಾಗುವಂಥ ವಸ್ತುವನ್ನೇ ನೀಡಿದರೆ ನಮ್ಮಗಳ ಸ್ನೇಹ, ನೆನಪು ಸದಾಕಾಲ ಉಳಿಯುತ್ತವೆ.
ಏನೇನು ಉಡುಗೊರೆ ಕೊಡ್ಬಹುದು?
ಮದುವೆ ಮತ್ತಿತರ ಸಮಾರಂಭಗಳಲ್ಲಿ ಅನಗತ್ಯ ಬೊಕ್ಕೆ ಮತ್ತಿತರ ಹಾಳಾಗುವ ವಸ್ತುಗಳನ್ನು ಕೊಡುವ ಬದಲು ಬಹುದಿನಗಳ ವರೆಗೆ ನೆನಪಿನಲ್ಲುಳಿಯುವಂಥ ಉಡುಗೊರೆಗಳನ್ನೇ ನೀಡಿ.
ಸಾಧ್ಯವಾದಷ್ಟು ಗೃಹೋಪಯೋಗಿ, ಜೀವನಕ್ಕೆ ಅನುಕೂಲವಾಗುವ ಸಂದೇಶಗಳಿರುವ ಉಡುಗೊರೆ ಇರಲಿ.
ಶೋಕೆಸ್‌ನಲ್ಲಿಡುವ ಗಿಫ್ಟ್ ಬದಲು ಉತ್ತಮ ಪುಸ್ತಕ ನೀಡಿದರೆ ಇನ್ನೂ ಒಳ್ಳೆಯದು.
ಪ್ರೇಮಿಗಳಾದರೆ ಸ್ವಹಸ್ತಾಕ್ಷರದ ಗ್ರೀಟಿಂಗ್ಸ್ ನೀಡಿ ಖುಷಿ ಪಡಿಸಬಹುದು.
ಗಿಫ್ಟ್ ನೀಡುವುದೇ ಆತ್ಮೀಯರಿಗಾಗಿ. ಅವರಿಗೆ ಖುಷಿಯಾಗುವಂಥ ವಸ್ತುವನ್ನೇ ನೀಡಿದರೆ ನಮ್ಮಗಳ ಸ್ನೇಹ, ನೆನಪು ಸದಾಕಾಲ ಉಳಿಯುತ್ತವೆ.
- ಸಚಿನ್ ಬಿ. ನಾಯ್ಕ