ವೈದ್ಯಕೀಯ ಚಿಕಿತ್ಸೆಯಲ್ಲಿ ಬಯಾಪ್ಸಿಯೂ ಪ್ರಮುಖವಾದದ್ದು. ವಿಶೇಷವಾಗಿ ಕ್ಯಾನ್ಸರ್ ರೋಗ ಪತ್ತೆ ಹಚ್ಚಲು ಈ ಪರೀಕ್ಷೆ ನೆರವಾಗುತ್ತದೆ. ಗಡ್ಡೆ ಅಥವಾ ಹುಣ್ಣಿನ ಒಂದು ಭಾಗವನ್ನು ಸೂಕ್ಷ್ಮ ದರ್ಶಕದಿಂದ ಪರೀಕ್ಷಿಸಿ ರೋಗವನ್ನು ಪತ್ತೆ ಹಚ್ಚಬಹುದು. ಕೆಲವು ಬಾರಿ ನೇರವಾಗಿ ತುಣುಕು ಪರೀಕ್ಷೆ ಮಾಡಿದರೆ ಇನ್ನು ಕೆಲವು ಬಾರಿ ದಪ್ಪ ಸೂಜಿಯಿಂದ ಗಡ್ಡೆಯ ಜೀವಕೋಶಗಳನ್ನು ತೆಗೆದು ಪರೀಕ್ಷಿಸುತ್ತಾರೆ. ಶಸ್ತ್ರಚಿಕಿತ್ಸೆ ಮಾಡುವಾಗಲೇ ಬಯಾಪ್ಸಿ ವರದಿ ಆಧಾರದ ಮೇಲೆ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸಿ, ಮುಂದುವರಿಯಬೇಕಾಗುತ್ತದೆ. ಹಾಗಾಗಿ, ಚಿಕಿತ್ಸೆಯ ವಿಷಯದಲ್ಲಿ ಬಯಾಪ್ಸಿ ಪ್ರಮುಖ ಸ್ಥಾನ ಪಡೆದಿದೆ.