ಪ್ರೊಸ್ಟೇಟ್ ಎನ್ನುವುದು ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ ಬಹಿಸ್ಸ್ರಾವಕ ಗ್ರಂಥಿ. ಒಂದು ವಾಲ್‌ನಟ್ ಗಾತ್ರದಲ್ಲಿರುವ ಈ ಗ್ರಂಥಿಯು ಮೂತ್ರ ಹಾಗೂ ವೀರ್ಯವನ್ನು ಹೊತ್ತು ಸಾಗುವ ಯುರೇತ್ರ ಎಂಬ ಸ್ಥಳದಲ್ಲಿರುತ್ತದೆ. ವೀರ್ಯವನ್ನು ಸುರಕ್ಷಿತವಾಗಿಡಲು ಒಂದು ಬಗೆಯ ದ್ರವವನ್ನು ಉತ್ಪತ್ತಿ ಮಾಡುವ ಪ್ರೊಸ್ಟೇಟ್, ಮೂತ್ರವನ್ನು ನಿಯಂತ್ರಣದಲ್ಲಿಡುವ ಕೆಲಸವನ್ನೂ ಮಾಡುತ್ತದೆ.
ಕಳವಳಕಾರಿ ಸಂಗತಿ ಏನು ಗೊತ್ತಾ? ಜಗತ್ತಿನಲ್ಲಿ ಪ್ರತಿವರ್ಷ ಕ್ಯಾನ್ಸರ್‌ನಿಂದ ಸಂಭವಿಸುವ 7.6 ದಶಲಕ್ಷ ಸಾವುಗಳಲ್ಲಿ ಆರನೇ ಒಂದರಷ್ಟು ಸಾವುಗಳು ಪ್ರೊಸ್ಟೇಟ್ ಕ್ಯಾನ್ಸರ್‌ನಿಂದ ಸಂಭವಿಸುತ್ತಿವೆ ಎನ್ನುವುದು. ಶ್ವಾಸಕೋಶ ಕ್ಯಾನ್ಸರ್ ಹೊರತುಪಡಿಸಿದರೆ ಅತಿ ಹೆಚ್ಚು ಪತ್ತೆಯಾಗುತ್ತಿರುವ ಮತ್ತೊಂದು ಕ್ಯಾನ್ಸರ್ ಎಂದರೆ ಅದು ಕೂಡ ಪ್ರೊಸ್ಟೇಟ್ ಕ್ಯಾನ್ಸರ್. ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ದಕ್ಷಿಣ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಭಾರತದಲ್ಲಿ 2011ರಲ್ಲಿ 65.48ರಷ್ಟು ಪ್ರೊಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇದು ಪ್ರತಿವರ್ಷ ಶೇ1ರ ದರದಲ್ಲಿ ಏರುತ್ತಿದೆ.
ಪ್ರೊಸ್ಟೇಟ್ ಕ್ಯಾನ್ಸರ್ ಬಹಳ ಮಂದಗತಿಯಲ್ಲಿ ಬೆಳೆಯುವ ಕ್ಯಾನ್ಸರ್. ಆರಂಭಿಕ ಹಂತದಲ್ಲಿ ಇದರ ಅಸ್ತಿತ್ವದ ಅರಿವೂ ನಮಗೆ ಆಗದು. ಇವುಗಳಿಗೆ ಅಲ್ಪ ಪ್ರಮಾಣದ ಚಿಕಿತ್ಸೆ ಅಥವಾ ಯಾವುದೇ ರೀತಿಯ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ವಯಸ್ಸು, ಅನುವಂಶೀಯ ಗುಣಗಳು, ಆಹಾರ ಪದ್ಧತಿ ಹಾಗೂ ಲೈಂಗಿಕ ಸೋಂಕು (ವಿಶೇಷವಾಗಿ ಪುರುಷರಲ್ಲಿ) ಈ ಎಲ್ಲದರಿಂದಲೂ ಪ್ರೊಸ್ಟೇಟ್ ಕ್ಯಾನ್ಸರ್ ಬರಬಹುದಾದ ಸಾಧ್ಯತೆ ಹೆಚ್ಚು. ಆದಾಗ್ಯೂ, ಭಾರತದಲ್ಲಿ ಈ ಕಾಯಿಲೆ ಕುರಿತ ಜಾಗೃತಿ ಬಹಳ ಕಡಿಮೆ. ಒಂದೊಮ್ಮೆ ಈ ಗಡ್ಡೆಯು ಪ್ರೊಸ್ಟೇಟ್ ಗ್ರಂಥಿಯಾಗಿ ಊದಲು ಆರಂಭಿಸಿದಲ್ಲಿ ತೀವ್ರಗತಿಯಲ್ಲಿ ಮೂತ್ರ ವಿಸರ್ಜನೆ (ಹೆಚ್ಚಾಗಿ ರಾತ್ರಿ ವೇಳೆಯಲ್ಲಿ) ಮಾಡಬೇಕೆನಿಸುತ್ತದೆ. ಮಂದಗತಿಯಲ್ಲಿ ಮೂತ್ರ ವಿಸರ್ಜನೆ ಅಥವಾ ಮೂತ್ರ ಸರಾಗವಾಗಿ ಆಗದಿರುವುದು, ಮೂತ್ರದಲ್ಲಿ ರಕ್ತ ಅಥವಾ ವೀರ್ಯದಲ್ಲಿ ರಕ್ತ ಕೂಡಾ ಪ್ರೊಸ್ಟೇಟ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಹೀಗಾಗಿ, ಇಂಥ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೆ ಚಿಕಿತ್ಸೆಗಳೆಂದರೆ ಶಸ್ತ್ರಚಿಕಿತ್ಸೆ (ಪ್ರೊಸ್ಟೇಟೆಟೆಕ್ಷಮಿ), ರೇಡಿಯೋಥೆರಪಿ, ಆಂಡ್ರೊಜೆನ್-ಡೆಪ್ರಿವಿಂಗ್ ಡ್ರಗ್ಸ್ ಒಳಗೊಂಡ ಹಾರ್ಮೋನ್ ಥೆರಪಿ. ಈ ಚಿಕಿತ್ಸೆಗಳು ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಅವಲಂಬಿತ. ಪ್ರೊಸ್ಟೇಟ್ ಕ್ಯಾನ್ಸರ್‌ಗೆ ತುತ್ತಾದವರು ಸೂಕ್ತ ಚಿಕಿತ್ಸೆ ಪಡೆದರೆ ಬದುಕಿ ಉಳಿಯುವ ಸಾಧ್ಯತೆ ಅಧಿಕ.