ದೈಹಿಕ ಕಾಯಿಲೆಗೆ ಬಳಸುವ ಹಲವು ಔಷಧಗಳು ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಸ್ಟೆರಾಯ್ಡ್‌ಗಳೂ ಕಣ್ಣಿನ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತವೆ. ಮಲೇರಿಯಾ ಮತ್ತು ಸಂಧಿವಾತಗಳಿಗೆ ಬಳಸುವ 'ಕ್ಲೋರೋಕ್ವಿನ್' ಮತ್ತು ಕ್ಷಯ ರೋಗದ ಔಷಧ 'ಇಂಥಾಂಬುಟಾಲ್'ಗಳೂ ಕಣ್ಣಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಸಾಧ್ಯತೆಗಳಿವೆ.
ಕಣ್ಣಿಗೆ ಬಿಡುವ ಸ್ಟೆರಾಯ್ಡ್ ಹನಿ ಔಷಧಿಗಳನ್ನು ಸತತ ಬಳಸಿದಾಗ ಬಹಳ ಬೇಗ ಪೊರೆ ಕಾಣಿಸಿಕೊಳ್ಳಬಹುದು. ಆದರೆ ಮಾತ್ರೆ ಅಥವಾ ಇಂಜೆಕ್ಷನ್ ರೂಪದಲ್ಲಿ ನೀಡುವ ಔಷಧಗಳು ಸ್ವಲ್ಪ ದೀರ್ಘ ಕಾಲದ ಸೇವನೆಯ ನಂತರ ಇದೇ ರೀತಿ ಅಡ್ಡ ಪರಿಣಾಮ ಬೀರಬಲ್ಲವು. ಎಷ್ಟು ಸಮಯದವರೆಗೆ ಯಾವ ಪ್ರಮಾಣದಲ್ಲಿ ಕೊಟ್ಟಾಗ ಈ ಅಡ್ಡ ಪರಿಣಾಮ ಬರುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ನಿತ್ಯ ಕೊಡುವ ಸ್ಟೆರಾಯ್ಡ್‌ಗಳಿಗಿಂತ ದಿನ ಬಿಟ್ಟು ದಿನ ಕೊಡುವ ಸ್ಟೆರಾಯ್ಡ್ ಔಷಧಿಗಳು ಅಡ್ಡಪರಿಣಾಮ ಉಂಟುಮಾಡುವುದು ಕಡಿಮೆ.
ಪೊರೆಯಲ್ಲದೇ ಗ್ಲಾಕೋಮಾದಂಥ ಸಮಸ್ಯೆಗಳೂ ಸ್ಟೆರಾಯ್ಡ್‌ಗಳಿಂದ ಉಂಟಾಗಬಲ್ಲವು. ಡೆಕ್ಸಾಮಿಥಾಸೋನ್ ಬೀಟಾ ಮಿಢಾಸೋನ್‌ಗಳನ್ನೊಳಗೊಂಡ ಕಣ್ಣಿನ ಹನಿ ಔಷಧಗಳನ್ನು ದೀರ್ಘಕಾಲ ಬಳಸಿದಾಗ ಈ ತೊಂದರೆ ಬರುತ್ತದೆ. ಸೂಕ್ತ ಸಮಯದಲ್ಲಿ ಸಮಸ್ಯೆ ಗೊತ್ತಾದಾಗ, ಆಗಾಗ ಕಣ್ಣಿನ ಒತ್ತಡ ತೆಗೆದು ಈ ತೊಂದರೆ ನಿವಾರಿಸಬೇಕು.
ಕ್ಲೋರೋಕ್ವಿನ್ ತೊಂದರೆ ಏನು?
ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿ ಕ್ಲೋರೋಕ್ವಿನ್ ಔಷಧಿಗಳನ್ನು ಮಲೇರಿಯಾಕ್ಕೆ ಬಳಸಲಾಗುತ್ತದೆ. ಕೆಲವೊಮ್ಮೆ ಇವುಗಳನ್ನು ಸಂಧಿವಾತಕ್ಕೆ ರಮಟೈಡ್ ಆರ್ಥರೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥಿಮಟೋಸಿಸ್ ಹಾಗೂ ಸಾರ್ಕಾಂಬಿಡೋಸಿಸ್‌ಗಳಲ್ಲೂ ಬಳಸಲಾಗುತ್ತದೆ. ಈ ಔಷಧದ ದೀರ್ಘಕಾಲದ ಬಳಕೆಯಿಂದ ತೊಂದರೆ ನಿಶ್ಚಿತ.
ಮ್ಯಾಕ್ಯುಲಕ್ಕೂ ತೊಂದರೆ
ಕಣ್ಣಿನ ಒಳಭಾಗದ ಆಕ್ಷಿಪಟಲದಲ್ಲಿ ಮ್ಯಾಕ್ಯುಲ ಎಂಬ ದೃಷ್ಟಿಯ ಮಧ್ಯಭಾಗ ಇದೆ. ಇಲ್ಲಿಯೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದು ಹೆಚ್ಚು. ದೃಷ್ಟಿಯ ಮಧ್ಯಭಾಗ ಮ್ಯಾಕ್ಯುಲವನ್ನೇ ಇದು ಗುರಿಯಾಗಿಸುವುದರಿಂದ ನಿಧಾನವಾಗಿ ದೃಷ್ಟಿ ಮಂಜಾಗುತ್ತಾ, ಅಡ್ಡ ಪರಿಣಾಮ ತೀವ್ರವಾದಾಗ ಕಣ್ಣು ಸಂಪೂರ್ಣ ಅಂಧತ್ವ ಹೊಂದುತ್ತದೆ. ಆರಂಭದಲ್ಲೇ ಔಷಧಿ ನಿಲ್ಲಿಸುವುದರಿಂದ ದೃಷ್ಟಿಪತನವನ್ನು ನಿಲ್ಲಿಸಬಹುದು.
ಕ್ಲೋರೋಕ್ವಿನ್ ಔಷಧ ಕಾರ್ನಿಯಾದ ಮೇಲೆ ಪಸರಿಸಿ ಕೊಳ್ಳುವುದರಿಂದ ಕೆರಟೋಪತಿ ಎಂಬ ಲಕ್ಷಣ ಉಂಟಾಗುತ್ತದೆ. ಕಾರ್ನಿಯಾದ ಹೊರ ಪದರದ ಮೇಲೆ ಕಂದು ಬಣ್ಣದ ಅಥವಾ ಬಂಗಾರ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಚಿತ್ತಾರ ಅಥವಾ ಕಲಾಕೃತಿಯನ್ನು ಮೂಡಿಸಿದ ಹಾಗೆ ಕಾಣಿಸುತ್ತದೆ. ದೃಷ್ಟಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವುದಾದರೂ ಗಮನಾರ್ಹವಾಗಿ ಕುಂಠಿತಗೊಳ್ಳುವುದಿಲ್ಲ. ಈ ರೀತಿಯ ಲಕ್ಷಣ ಕಾಣಿಸಿಕೊಂಡ ಕೂಡಲೇ ಔಷಧ ಸೇವನೆ ನಿಲ್ಲಿಸಿದರೆ ಕಣ್ಣು ಮೊದಲಿನಂತಾಗುತ್ತದೆ.
ಕ್ಷಯ ಔಷಧದಿಂದಲೂ ಕುತ್ತು
ಕ್ಷಯ ರೋಗಕ್ಕೆ ನೀಡುವ ಐಸೋನಿಯಸಿಡ್ ಮತ್ತು ರೈಫಾಂಪಿಸಿನ್ ಔಷಧಗಳ ಜೊತೆ ಇಥಾಂಬುಟಾಲ್ ಔಷಧವನ್ನು ಬಳಸಲಾಗುತ್ತದೆ. ಇದು ಕೆಲವು ರೋಗಿಗಳಲ್ಲಿ ಕಣ್ಣಿನ ಆಪ್ಟಿಕ್ ನರವನ್ನು ನ್ಯೂರೋಪತಿ ತೊಂದರೆಗೆ ಒಳಗಾಗಿಸುತ್ತದೆ. ಇಂಥ ರೋಗಿಗಳು ಕೆಂಪು-ಹಸಿರು ಬಣ್ಣಗಳನ್ನು ನಿಖರವಾಗಿ ಗುರುತಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆಪ್ಟಿಕ್ ನರದ ಸುತ್ತಲೂ ಒಂದು ರೀತಿಯ ದ್ರವ ಶೇಖರಗೊಂಡು ಅದು ಬಿಗಿದಂತಾಗುತ್ತದೆ. ಕೆಲವೊಮ್ಮೆ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಜೊತೆಗೆ ದೃಷ್ಟಿಯ ಕ್ಷೇತ್ರದ ವಿಸ್ತಾರದಲ್ಲಿ ತೊಂದರೆ ಕಾಣಿಸಿಕೊಂಡು ನೇರವಾಗಿ ನಾವು ದಿಟ್ಟಿಸುವಾಗ ಕಣ್ಣಿನ ಹೊರಭಾಗದಲ್ಲಿ ಕಾಣಿಸಬೇಕಾದ ವಸ್ತುಗಳು ಕಾಣಿಸುವುದೇ ಇಲ್ಲ.
ಈ ಔಷಧವನ್ನು ದೀರ್ಘಕಾಲ ನೀಡುವಾಗ ಔಷಧ ಕೊಡುವ ಮೊದಲು ಕಣ್ಣನ್ನು ಪರೀಕ್ಷಿಸಬೇಕು. ನಂತರ ಪ್ರತಿ 4 ವಾರದವರೆಗೆ ಸ್ಕ್ಯಾನಿಂಗ್ ಮಾಡಿಸುತ್ತಿರಬೇಕು. ಅಡ್ಡ ಪರಿಣಾಮದ ಆರಂಭದ ಲಕ್ಷಣಗಳು ಗೊತ್ತಾದ ಕೂಡಲೇ ಔಷಧಿ ನಿಲ್ಲಿಸಿದರೆ, ಎಲ್ಲ ಲಕ್ಷಣಗಳೂ ಅದೃಶ್ಯವಾಗುತ್ತವೆ.
ಸ್ಕೀಜೋಫ್ರೀನಿಯಾದಲ್ಲಿ ಉಪಯೋಗಿಸುವ ಕ್ಲೋರ್ ಪ್ರೋಮಜೀನ್, ಸ್ತನದ ಕ್ಯಾನ್ಸರ್‌ಗೆ ಬಳಸುವ ಟಾಮೋಕ್ಸಿಫಿನ್ ಔಷಧಿಗಳೂ ಕಣ್ಣಿನ ಮೇಲೆ ಅಡ್ಡಪರಿಣಾಮ ಬೀರುತ್ತದೆ.
- ಡಾ. ಎಚ್.ಎಸ್. ಮೋಹನ್