ಮೈಗ್ರೇನ್ ಈಗ ಮಕ್ಕಳನ್ನೂ ಹಿಂಡಿಹಾಕುತ್ತಿದೆ. ಈ ನೋವೆಂಬ ಹಿಂಸೆ ಧಾರಾವಾಹಿಯ ರೀತಿಯಲ್ಲಿ ಎಪಿಸೋಡ್‌ಗಳಂತೆ, ಒಂದೇ ದಿನದಲ್ಲಿ ಕೆಲವೊಮ್ಮೆ ಬಿಟ್ಟು ಬಿಟ್ಟು, ಮತ್ತೆ ಕೆಲವೊಮ್ಮೆ 3 ಗಂಟೆಗೂ ಹೆಚ್ಚು ತಲೆಯೇರಿ ಕಿರಿಕಿರಿ ಸೃಷ್ಟಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಶೇ.10 ವಯಸ್ಕರು ಈ ಮೈಗ್ರೇನ್‌ನಿಂದ ಬಳಲುತ್ತಿದ್ದಾರೆ. ಅಮೆರಿಕವೊಂದರಲ್ಲೇ 40 ದಶಲಕ್ಷ ಜನರು ಈ ಮೈಗ್ರೇನ್‌ನ ಸುಳಿಯಲ್ಲಿ ಬಿದ್ದಿದ್ದಾರೆ. ಅದರಲ್ಲಿ 3 ಲಕ್ಷ ಜನರು ದೀರ್ಘಕಾಲದ ಮೈಗ್ರೇನ್‌ಗೆ ತುತ್ತಾಗಿದ್ದಾರೆ. ಈ ತಲೆನೋವು ಪೀಡಿತ ಶೇ.80ಕ್ಕೂ ಹೆಚ್ಚಿನವರಿಗೆ ಕಚೇರಿಯಿರಲಿ, ಕೌಟುಂಬಿಕ ಕಾರ್ಯಕ್ರಮಗಳಿಗೆ ಹಾಜರಾಗಲೂ ಸಾಧ್ಯವಾಗುತ್ತಿಲ್ಲ.
ಇದರ ಪ್ರಮಾಣ ಭಾರತದಲ್ಲೂ ಕಮ್ಮಿಯಿಲ್ಲ. ಆದರೆ, ಮೈಗ್ರೇನ್ ಇಷ್ಟು ದಿನ ಕೇವಲ ದೊಡ್ಡವರಲ್ಲಿ ಸಾಮಾನ್ಯವಾಗಿತ್ತು. ಈಗದು ಮಕ್ಕಳ ತಲೆಯನ್ನೂ ಮುಕ್ಕುತ್ತಿದೆ. ಅವ್ಯವಸ್ಥಿತ ಜೀವನ ಶೈಲಿ, ಹೊಸ ಗ್ಯಾಜೆಟ್ಸ್‌ಗಳ ಚಟ ಮತ್ತು ಬೊಜ್ಜುಗಳಿಂದಾಗಿ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗುವಿಗೆ ಈ ತಲೆನೋವು ನಿಶ್ಚಿತ.
ವಿಡಿಯೋ ಗೇಮ್‌ನಲ್ಲಿ ಮುಳುಗಿದ ಮಗುವಿಗೆ ಇದು ಇನ್ನೂ ಹೆಚ್ಚು. ಅಲ್ಲಿರುವ ಚಿತ್ರರೂಪದ ಪಾತ್ರಧಾರಿ ತಾನೇ ಎಂದು, ತಾನು ಆಟವನ್ನು ಗೆಲ್ಲಲೇಬೇಕೆಂದು ಮಗು ಹಠ ಹಿಡಿದು ತಲ್ಲೀನವಾಗುತ್ತದೆ. ಇದರ ಪರಿಣಾಮವೇ ಮೈಗ್ರೇನ್. ಮಗು ಸುಮ್ಮನೆ ಕಣ್ಮುಚ್ಚಿ ಮಲಗಿದರೂ ಕನಸಿನಲ್ಲಿ ಈ ನೋವಿನ ಪ್ರಭಾವ ತಪ್ಪಿದ್ದಲ್ಲ.
ಇದರಿಂದಾಗಿ ಮಗುವಿನ ದೈಹಿಕ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಇತ್ತ ನಿದ್ರೆಯೂ ಸರಿಹೋಗದಿದ್ದರೆ ಊಟವನ್ನು ಅದು ಸರಿಯಾಗಿ ಮಾಡದು. ವಿಶ್ವದ 20 ದೇಶಗಳಲ್ಲಿ ಮೈಗ್ರೇನ್ ವಿಪರೀತವಿದೆ. ಆ ಇಪ್ಪತ್ತರಲ್ಲಿ ಭಾರತವೂ ಒಂದು.
ಆಟದ ಮೇಲೆ ಪರಿಣಾಮ
ಈ ರೋಗದಿಂದ ಮಕ್ಕಳಲ್ಲಿ ಸೈನಸ್ ಅಲ್ಲದೆ, ನೆಗಡಿಯೂ ಆವರಿಸಿಕೊಳ್ಳಬಹುದು. ಶಾಲೆಯಲ್ಲಿದ್ದಾಗ ಏಕಾಗ್ರತೆಯಿಂದ ಪಾಠ ಕೇಳುವುದಕ್ಕೂ ಕಷ್ಟವಾಗಬಹುದು. ಈ ನೋವು ತೀವ್ರವಾದಂತೆ ಮಗುವಿನ ತಲೆಯಲ್ಲಿ ಹಳೇ ವಿಚಾರಗಳೇ ಹೆಚ್ಚು ಹೆಚ್ಚು ಗಿರಕಿ ಹೊಡೆಯುತ್ತವೆ. ಆಟದಲ್ಲೂ ಆಸಕ್ತಿ ಬರುವುದಿಲ್ಲ. ವೈದ್ಯರ ಭೇಟಿಯೊಂದೇ ಇದಕ್ಕಿರುವ ದಾರಿ.
ಗ್ಯಾಜೆಟ್‌ಗಳೇ ನೇರ ಹೊಣೆ
'3ರಿಂದ 14 ವಯಸ್ಸಿನ ಮಕ್ಕಳಲ್ಲಿ ಈ ತಲೆನೋವು ಸಾಮಾನ್ಯ' ಎನ್ನುತ್ತಾರೆ ಆಂತರಿಕ ಔಷಧಿ ಸಲಹೆಗಾರ ಡಾ.ಅಮಿತ್ ಸರಪ್. ಇದಕ್ಕೆ ಅವರು ಹೊಣೆ ಮಾಡುವುದು ಗ್ಯಾಜೆಟ್‌ಗಳನ್ನು. ಟ್ಯಾಬ್‌ಗಳು, ಮೊಬೈಲ್‌ಗಳು, ಕಂಪ್ಯೂಟರ್‌ಗಳನ್ನು ಹತ್ತಿರದಿಂದ, ನಿರಂತರವಾಗಿ ವೀಕ್ಷಿಸುತ್ತಿದ್ದರೆ ಕಣ್ಣಿನ ಸಮಸ್ಯೆ ಉಂಟಾಗಿ ಕ್ರಮೇಣ ಮೈಗ್ರೇನ್‌ಗೆ ಪರಿವರ್ತನೆಯಾಗುತ್ತದೆ.
ಕಡಿಮೆ ನಿದ್ರೆಯೂ ಈ ರೋಗಕ್ಕೆ ಇನ್ನೊಂದು ಕಾರಣ. ಸ್ಪರ್ಧಾತ್ಮಕ ಭಾವ ಮಕ್ಕಳಿಂದ ದೂರವಾಗಿ, ಎಳೆ ಬದುಕು ಬರಡು ಬರಡು ಅಂತಲೂ ಅನ್ನಿಸುತ್ತದೆ.
ಮೈಗ್ರೇನ್ ಪ್ರಚೋದಕಗಳು
* ನಿದ್ರೆಯ ಕೊರತೆ. ಮಗುವು ಸರಾಸರಿ 6-7 ಗಂಟೆ ನಿದ್ರಿಸಲೇಬೇಕು.
* ಅತಿಯಾದ ಟಿವಿ ವೀಕ್ಷಣೆ.
* ವಿಡಿಯೋ ಗೇಮ್, ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದು.
* ತಂಪಾದ ಪಾನೀಯಗಳು ಮೈಗ್ರೇನ್ ಅನ್ನು ಪ್ರಚೋದಿಸುತ್ತವೆ.
* ಹಸಿವಿನಿಂದ ಅಥವಾ ಹಚ್ಚು ಪಥ್ಯದಲ್ಲಿರುವುದು ಕೂಡ ತಲೆನೋವಿಗೆ ಕಾರಣ.
- ಗುರುಮೂರ್ತಿ ಎಸ್.