ಔಟಿಂಗ್, ಈಟಿಂಗ್ ಇಂದು ವಾರಾಂತ್ಯಗಳಲ್ಲಿ ಇದ್ದಿದ್ದೇ. ಪಿಜ್ಜಾ, ಬರ್ಗರ್... ಇತ್ಯಾದಿ ಜಂಕ್ ಫುಡ್‌ಗಳನ್ನು ಹಣ್ಣು, ತರಕಾರಿಗಳಿಗಿಂತಲೂ ಹೆಚ್ಚು ಸೇವಿಸುತ್ತಿದ್ದೇವೆ. ಹೋಗಲಿ, ಅದಕ್ಕೆ ತಕ್ಕನಾಗಿ ಯೋಗ, ವ್ಯಾಯಾಮ ಎಂದು ಏನಾದರೂ ಮಾಡುತ್ತಿದ್ದೇವಾ? ಅದಕ್ಕೆಲ್ಲಿಯ ಪುರುಸೊತ್ತು!?
ಅಡುಗೆ ಮಾಡಲು, ಮಾಡಿದ್ದನ್ನು ತಿನ್ನಲು, ತಿಂದಿದ್ದನ್ನು ಜೀರ್ಣಿಸಿಕೊಳ್ಳಲೂ ಇಂದು ವ್ಯವಧಾನವಿಲ್ಲದ ಕಾಲ. ತಾಜಾ ನಿದ್ರೆ ನಾಪತ್ತೆ. ಒತ್ತಡದ ಕೆಲಸ. ಕುಟುಂಬದವರೊಂದಿಗೆ ನೆಮ್ಮದಿಯ ಕ್ಷಣಗಳನ್ನು ಕಳೆಯೋದು ಮಾರು ದೂರ. ಕೈ ತುಂಬಾ ದುಡಿಮೆ ಇದ್ದರೂ, ಮನಸ್ಸು ಹಾಗೂ ದೈಹಿಕ ಆರೋಗ್ಯಕ್ಕೆ ಏನು ಬೇಕೋ ಅದು ಸಿಗುತ್ತಿಲ್ಲ. ಇದರಿಂದಾಗಿ ಹೃದಯದ ವಯಸ್ಸು, ಭೌತಿಕ ವಯಸ್ಸಿಗಿಂತಲೂ ಹೆಚ್ಚು ಮುದಿಯಾಗುತ್ತಿದೆ ಎಂಬುದು ನಿಮಗೆ ಗೊತ್ತಾ?
ಜಂಕ್‌ಫುಡ್ ಪ್ರಿಯ ಮಕ್ಕಳಿಗೆ ಇನ್ನೊಂದು ಇಷ್ಟದ ವಿಚಾರವೆಂದರೆ ಟಿವಿ. ಆಟ ಆಡುವವರಲ್ಲ ಅವರು. ಅದಕ್ಕಾಗಿಯೇ ಅವರಿಗೆ 18 ವರ್ಷಗಳಾಗುತ್ತಿದ್ದಂತೆ ಅವರ ಹೃದಯದ ವಯಸ್ಸು 28 ಆಗಿರುತ್ತದೆ. ಮದುವೆ, ಮಕ್ಕಳು ಎಂದು ಸಂಸಾರದಲ್ಲಿ ಖುಷಿ ಪಡುವ ವಯಸ್ಸಿನಲ್ಲಿಯೇ ಸುಸ್ತು, ಅನಾರೋಗ್ಯ ಕಾಡುವುದರಿಂದ ಬದುಕೇ ನೀರಸವಾಗುತ್ತಿದೆ.
ಯುವ ಪಡೆಗೆ ಸಿವಿಡಿ ಅಪಾಯ
ಸ್ಥೂಲಕಾಯ, ಚಿಕ್ಕ ವಯಸ್ಸಿನಲ್ಲೇ ಮದ್ಯಪಾನ, ಧೂಮಪಾನದಂಥ ದುಶ್ಚಟಗಳಿಗೆ ಬಲಿಯಾಗುವುದು, ಸದಾ ಕುಳಿತುಕೊಂಡೇ ಕೆಲಸ ಮಾಡುವುದು... ಇಂಥ ಸಂಗತಿಗಳು ಸಕ್ಕರೆ ಕಾಯಿಲೆ, ರಕ್ತದೊತ್ತಡಗಳಂಥ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ಮನುಷ್ಯನ ಹೃದಯವನ್ನು ವೀಕ್ ಮಾಡುತ್ತಿವೆ.
ಸಫೋಲಾಲೈಫ್, ಭಾರತೀಯರ ಹೃದಯದ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ್ದು, ದೇಶದ ಎಲ್ಲ ಭಾಗದ, ವರ್ಗದ, ವಯಸ್ಸಿನ 1.86 ಲಕ್ಷ ನಗರವಾಸಿಗಳನ್ನು ಮಾತನಾಡಿಸಿದೆ. ಇದರಲ್ಲಿ ಶೇ.70ಕ್ಕೂ ಹೆಚ್ಚು ಜನರು ಹೃದಯ ನಾಳದ ಕಾಯಿಲೆ (ಸಿವಿಡಿ)ಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಮೂರು ವರ್ಷದ ಈ ಅಧ್ಯಯನದಲ್ಲಿ 19,987 ಮಂದಿ ಬೆಂಗಳೂರಿಗರೂ ಭಾಗವಹಿಸಿದ್ದಾರೆ. 'ವೆರಿ ಆ್ಯಕ್ಟಿವ್ ಸಿಟಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿಗರಲ್ಲೂ ಸಿವಿಡಿ ಅಪಾಯ ಗರಿಷ್ಠ ಮಟ್ಟದಲ್ಲಿದೆ.
ದಿನಕ್ಕೊಂದು ಸಿಗರೇಟು, ಒಂದು ಪೆಗ್ಗುಗಳು ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತಿವೆ. ಅಷ್ಟೇ ಅಲ್ಲ, ಸಿಗರೇಟ್ ಸೇದುವವರ ಮಧ್ಯ ಇದ್ದರೂ ಸಾಕು. ನಮ್ಮ ಹಾರ್ಟ್ ವೀಕ್ ಆಗಿಬಿಡಹುದು. ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂದರೆ, ಸೂಕ್ತ ಆಹಾರ ಸೇವನೆ ಹಾಗೂ ಅಗತ್ಯವಿರುವಷ್ಟು ವ್ಯಾಯಾಮ ಮಾಡುವುದು. ಇವು ಮಾತ್ರ ನಮ್ಮನ್ನು, ನಮ್ಮ ಹೃದಯವನ್ನು ಸಂರಕ್ಷಿಸುತ್ತವೆ.
ಹೃದಯದ ವಯಸ್ಸು ಕಂಡುಹಿಡಿಯೋದು ಹೇಗೆ?
ಹೃದಯದ ವಯಸ್ಸು ತಿಳಿದುಕೊಳ್ಳಲು ಬಯಸುವವರಿಗೆ ಸಫೋಲಾ ಲೈಫ್ ಕೆಲವು ಪ್ರಶ್ನೆಗಳನ್ನು ಕೇಳಿದೆ. http://www.saffolalife.com ರಲ್ಲಿ ಈ ಪ್ರಶ್ನೆಗಳು ಲಭ್ಯವಿದ್ದು, ತಮ್ಮ ತಮ್ಮ ಹೃದಯ ಎಷ್ಟು ಗಟ್ಟಿ ಎಂಬುದನ್ನು ಕಂಡು ಕೊಳ್ಳಬಹುದು.
* ನಿಮ್ಮ ಪೋಷಕರಲ್ಲಿ ಯಾರಿಗಾದರೂ ಹೃದ್ರೋಗವಿತ್ತಾ?
* ಧೂಮಪಾನ ಮಾಡುತ್ತೀರಾ? ಮಧುಮೇಹ ಇದೆಯಾ?
* ಬಾಡಿ ಮಾಸ್ ಇಂಡೆಕ್ಸ್ ಏನು? ಬಿಪಿ ಹೇಗಿದೆ? ಬಿಪಿ ಇದ್ದರೆ ಔಷಧಿ ಮೇಲೆ ಅವಲಂಬಿತರಾಗಿದ್ದೀರಾ?
* ಕೊಲೆಸ್ಟರಾಲ್ ಲೆವೆಲ್ ಎಷ್ಟಿದೆ?
* ಜಂಕ್ ಫುಡ್, ದವಸ ಧಾನ್ಯಗಳು ಹಾಗೂ ಹಸಿರು ತರಕಾರಿಗಳನ್ನು ವಾರದಲ್ಲಿ ಎಷ್ಟು ಬಾರಿ ಸೇವಿಸುತ್ತೀರಿ?
* ವಾರದಲ್ಲಿ ಎಷ್ಟು ವ್ಯಾಯಾಮ ಮಾಡುತ್ತೀರಿ?
* ವಾರದಲ್ಲಿ ಎಷ್ಟು ಬಾರಿ ಆಯಾಸವಾದ ಅನುಭವವಾಗುತ್ತದೆ?
ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿದ್ದು, ಇವುಗಳಿಗೆ ನೀವು ಉತ್ತರಿಸುವ ಆಧಾರದ ಮೇಲೆ ನಿಮ್ಮ ನಿಮ್ಮ ಗುಂಡಿಗೆ ಎಷ್ಟು ಗಟ್ಟಿ ಎಂಬುದನ್ನು ಕಂಡುಕೊಳ್ಳಬಹುದು. ಜತೆಗೆ ನಿಮ್ಮ ಹೃದಯ ಆರೋಗ್ಯಕ್ಕಾಗಿ ಅಗತ್ಯವಿರುವ ಪಥ್ಯವನ್ನು ಹೇಗೆ, ಏನು ಮಾಡಬೇಕೆಂಬ ಸಲಹೆಗಳೂ ನಿಮ್ಮ ಇ-ಮೇಲ್‌ಗೆ ಕಳುಹಿಸಲಾಗುತ್ತದೆ.
- ನಿರುಪಮಾ ಕೆ.ಎಸ್.