ಜೋಸ್‌ಗೆ ಸದಾ ಜನಜಂಗುಳಿ ಇರುವ ಅಮೆರಿಕದ ಕ್ಯಾಲಿಫೋರ್ನಿಯಾ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲಸ. ಭಾರವಾದ ವಸ್ತುಗಳನ್ನು ಎತ್ತುವ, ಫೋಕರ್ ಲಿಫ್ಟನ್ನು ಡ್ರೈವ್ ಮಾಡುವ ಏಕತಾನತೆಯಿಂದ ಕೂಡಿದ, ವಿಶ್ರಾಂತಿ ಇಲ್ಲದ ಕೆಲಸ ಆತನದ್ದಾಗಿತ್ತು. ಆಗಲೇ ಆತನಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು.
ಆ ದೇಶದ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೂ ಫಲಕಾರಿಯಾಗಲಿಲ್ಲ. ಎರಡು ವರ್ಷಗಳ ಕಾಲ ಆತ ಅನುಭವಿಸಿದ ವೇದನೆ ಅಷ್ಟಿಷ್ಟಲ್ಲ. ನೋವು ಕಡಿಮೆಯಾಗಲು ವೈದ್ಯರು ನೀಡಿದ ಪರಿಣಾಮಕಾರಿ ನೋವು ನಿವಾರಕಗಳಿಂದ ಸೈಡ್ ಎಫೆಕ್ಟ್‌ಗಳು ಹೆಚ್ಚಾಗಿ, ಜೋಸ್ ಸಂಪೂರ್ಣ ಹಾಸಿಗೆ ಹಿಡಿದ.
ಆಗ ಜೋಸ್ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯನ್ನು ಸಂಪರ್ಕಿಸಿ ತನ್ನ ಸಮಸ್ಯೆ ಹೇಳಿಕೊಂಡ. ಇಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಕಾರಣ ಆತ ಸಂಪೂರ್ಣ ಬೆನ್ನು ನೋವಿನಿಂದ ಮುಕ್ತನಾಗಿದ್ದಾನೆ. ಇದು ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಜನಪ್ರಿಯಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿ.
ಕೊಟ್ಟ ಚಿಕಿತ್ಸೆ ಏನು?
ಜೋಸ್‌ಗೆ ಬೆನ್ನು ಹುರಿಯಲ್ಲಿ ತೀವ್ರಸ್ವರೂಪದ ಸಮಸ್ಯೆಯಿರುವುದನ್ನು ನರಶಸ್ತ್ರ ಚಿಕಿತ್ಸಾ ತಜ್ಞ ಡಾ. ರಾಜ್‌ಕುಮಾರ್ ದೇಶಪಾಂಡೆ ಪತ್ತೆ ಮಾಡಿದರು. ಎಲ್ಲ ಪರೀಕ್ಷೆಗಳ ನಂತರ ಜೋಸ್‌ಗೆ ನಾಲ್ಕು ಹಂತಗಳ ಸಮಸ್ಯೆಗಳಿರುವುದು ಪತ್ತೆಯಾಗಿದ್ದು, ಹಂತಹಂತವಾದ ಚಿಕಿತ್ಸೆ ನೀಡಲಾಯಿತು.
ಕಡೆಯದಾಗಿ ಕನಿಷ್ಠ ಗಾಯದ ಲುಂಬಾರ್ ಫ್ಯೂಷನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅತ್ಯಂತ ಕನಿಷ್ಠ ಗಾಯದ ಈ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ ಅವನ ಬೆನ್ನಿನಲ್ಲಿ ಅತ್ಯಂತ ಚಿಕ್ಕದಾದ ರಂಧ್ರಗಳನ್ನು ಮಾಡಿ ಡಿಕಂಪ್ರೆಸ್ಡ್ ರಾಡುಗಳು ಹಾಗೂ ಹಾಗೂ ಸ್ಕ್ರೂಗಳನ್ನು ಸೇರಿಸಿ ಅಳವಡಿಸಲಾಯಿತು. ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಪೂರೈಸಲು ಡಾ. ರಾಜ್‌ಕುಮಾರ್ ವೈದ್ಯರ ತಂಡ ಸುಮಾರು ಐದೂವರೆ ಗಂಟೆ ತೆಗೆದುಕೊಂಡಿತ್ತು. ಚಿಕಿತ್ಸೆ ಯಶಸ್ವಿಯಾಗಿ ಜೋಸ್ ಈಗ ಮೊದಲಿನಂತೆಯೇ ಲವಲವಿಕೆಯಿಂದ ಓಡಾಡಿಕೊಂಡಿದ್ದಾನೆ.
ಮೂರೇ ದಿನದಲ್ಲಿ ನಡೆದಾಡಿದೆ...
ಶಸ್ತ್ರಚಿಕಿತ್ಸೆಯ ನಂತರ ಸೊಂಟಕ್ಕೆ ಸುತ್ತಿಕೊಳ್ಳಲು ನನಗೊಂದು ಬೆಲ್ಟ್ ನೀಡಿದ್ದರು. ನಾನು ಶಸ್ತ್ರಚಿಕಿತ್ಸೆಯಾದ ಕೇವಲ ಮೂರೇ ದಿನಗಳಲ್ಲಿ ನಡೆದಾಡಲು ಪ್ರಾರಂಭಿಸಿದ್ದೆ. ನನ್ನ ಬದುಕನ್ನೇ ಹಿಂಡಿ ಹಿಪ್ಪೆ ಮಾಡಿದ್ದ ನೋವು ಮಾಯವಾಗಿತ್ತು.
- ಜೋಸ್, ಬೆನ್ನು ನೋವಿಗೆ ಚಿಕಿತ್ಸೆ ಪಡೆದ ಅಮೆರಿಕ ರೋಗಿ
ನರಗಳು ಕುಗ್ಗಿದ್ದವು!
ಜೋಸ್‌ಗೆ ಬೆನ್ನು ಹುರಿಯು ಒಂದು ಕೋನದಲ್ಲಿ ಕೊಂಚ ಬಾಗಿ, ಸೆಟೆದು ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆನ್ನು ಹುರಿಯಲ್ಲಿ ನರಗಳು ಕುಗ್ಗಿಹೋಗಿದ್ದವು.
- ಡಾ. ರಾಜ್‌ಕುಮಾರ್ ದೇಶಪಾಂಡೆ, ನರಶಸ್ತ್ರಚಿಕಿತ್ಸಾ ತಜ್ಞ, ಫೋರ್ಟಿಸ್ ಆಸ್ಪತ್ರೆ