'ಚಳಿಜ್ವರ ಬಿಟ್ಟಾವು, ಒಳಜ್ವರ ಬಿಡಲಿಲ್ಲ' ಎಂಬ ಆಡುಭಾಷೆಯ ಪಡೆನುಡಿ ಇದ್ದರೆ, 'ಕಿಲುಬಿನಾ ಬಟ್ಟಲೊಳು ಹುಳಿ ಕಲಿಸಿ ಉಣಬಹುದೆ ಚಳಿಜ್ವರಕ್ಕೆ ಚಂದನದ ಲೇಪ ಹಿತವೆ?' ಕನಕದಾಸರ ಕೀರ್ತನೆಯಲ್ಲಿ ಕಾಣಿಸಿ ಕೊಳ್ಳಬೇಕಾದರೆ ಮಲೇರಿಯಾ ಒಡನಾಟ ಎಷ್ಟಿರಬಹುದೆಂಬುದು ಯಾರಿಗಾದರೂ ಸ್ಪಷ್ಟವಾಗುತ್ತದೆ.
ಜಗತ್ತಿನ ಹಲವು ದೇಶಗಳಲ್ಲಿ ಮಲೇರಿಯಾ ನಡೆಸಿರುವ ದಾಂಧಲೆಗಳು ಯಾವುದೇ ಮಹಾಯುದ್ಧಗಳಿಗೂ ಕಮ್ಮಿ ಏನಿಲ್ಲ. ಪ್ರತಿವರ್ಷ ಪ್ರಪಂಚದಲ್ಲಿ 30 ಕೋಟಿ ಜನರು ಮಲೇರಿಯಾಕ್ಕೆ ತುತ್ತಾದರೆ, 30 ಲಕ್ಷ ಜನರು ಅಸುನೀಗುತ್ತಾರೆ.
ಮಲೇರಿಯಾ ರೋಗಾಣು ಮನುಷ್ಯನ ರಕ್ತದಲ್ಲಿ ಜೀವವಿಷವನ್ನು ಬಿಡುಗಡೆ ಮಾಡುತ್ತದೆ. ಇದು ಜ್ವರಕಾರಕವು, ಕೆಂಪು ರಕ್ತಕಣ ಲಯಕಾರಿಯೂ, ವಾಹಕ ಪ್ರಚೋದಕವೂ ಆಗಿರುತ್ತದೆ.
ಎಚ್‌ಬಿ ಕೊರತೆ
ಮಲೇರಿಯಾ ಪೀಡಿತ ರೋಗಿಯಲ್ಲಿ ಕೆಂಪುರಕ್ತಕಣಗಳು ನಾಶವಾಗುವುದರಿಂದ, ಅವುಗಳಲ್ಲಿ ಹಿಮೋಗ್ಲೋಬಿನ್ ವಿಭಜನೆ ಹೊಂದಿ ಕಬ್ಬಿಣಾಂಶದ ಹೀಮ್ ಮತ್ತು ಪ್ರೊಟೀನ್ ಅಂಶಗಳನ್ನೊಳಗೊಂಡ ಗ್ಲೊಬ್ಯಲಿನ್ ಪ್ರತ್ಯೇಕವಾಗುವುದರಿಂದ ದೇಹದಿಂದ ವಿಸರ್ಜನೆಗೊಳ್ಳುತ್ತವೆ. ಹೀಗಾಗಿ ಮಲೇರಿಯಾಕ್ಕೆ ತುತ್ತಾದ ವ್ಯಕ್ತಿ ರಕ್ತಹೀನತೆ ಮತ್ತು ಪ್ರೊಟೀನ್‌ಗಳ ಕೊರತೆಯಿಂದ ಸೊರಗುವನು. ರೋಗ ಪ್ರತಿರೋಧಕ ಶಕ್ತಿ ಕುಗ್ಗುವುದು. ಇದು ಸಾಮಾನ್ಯವಾಗಿ ಮಲೇರಿಯಾ ಪೀಡಿತರಲ್ಲಿ ನಡೆಯುವ ಪ್ರಕ್ರಿಯೆ.
ಪುರುಷತ್ವಕ್ಕೆ ಧಕ್ಕೆಯಿಲ್ಲ!
ಎಚ್‌ಐವಿ, ಏಡ್ಸ್ ರೋಗಿಗಳು ಮಲೇರಿಯಾಕ್ಕೆ ತುತ್ತಾದಾಗ, ಅವರಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ. ಅವರು ಮೊದಲೇ ಅಶಕ್ತರಾಗಿರುತ್ತಾರೆ. ರೋಗ ನಿರೋಧಕ ಶಕ್ತಿಯೂ ಕುಗ್ಗಿರುತ್ತದೆ. ಹಸಿವು ಆಗೋಲ್ಲ. ಉಂಡರೂ ಅರಗಿಸಿಕೊಳ್ಳೋದು ಕಷ್ಟ. ಹೀಗಾಗಿ ನೂನ್ಯಪೋಷಣೆಗೆ ಅವರು ತುತ್ತಾಗುವುದು ಸಹಜ. ಅವರ ದೇಹದಲ್ಲಿ ಸ್ರವಿಸುವ ಲೈಂಗಿಕ ಹಾರ್ಮೋನ್‌ಗಳು ಮಾತ್ರ ಯಥಾಸ್ಥಿತಿಯಲ್ಲಿರುತ್ತವೆ. ಅವರ ಪುರುಷತ್ವಕ್ಕೆ ಎಳ್ಳಷ್ಟೂ ಧಕ್ಕೆಯಾಗದು.
ಈ ಸೋಂಕಿತ ವ್ಯಕ್ತಿಗಳು ಮಲೇರಿಯಾಕ್ಕೆ ತುತ್ತಾದಲ್ಲಿ ಅವರ ದೇಹದ ಉಷ್ಣಾಂಶ ಕುಗ್ಗುವುದು. ಬಿಸಿಯ ಹಂತದಲ್ಲಿ ಹೆಚ್ಚುವುದು. ಉಣ್ಣಾಂಶದ ಈ ಏರುಪೇರಿನಿಂದ ಜೀವಕೋಶಗಳಲ್ಲಿನ ಎಚ್‌ಐವಿ ವೈರಸ್‌ಗಳು ಮುಂಬರುವ ವಿಪತ್ತನ್ನು ಎದುರಿಸುವ ಸಲುವಾಗಿ ಸಂಖ್ಯಾಭಿವೃದ್ಧಿ ಮಾಡಿಕೊಳ್ಳುತ್ತವೆ. ರಕ್ತದಲ್ಲಿ ಅವುಗಳ ಪ್ರಮಾಣ ಗಮನಾರ್ಹವಾಗಿ ಏರುವುದು. ರಕ್ತದಲ್ಲಿ 'ವೈರಲ್ ಲೋಡ್' ಹೆಚ್ಚುವುದು. ಇದರಿಂದ ದೇಹದಲ್ಲಿ ವಸರುವ ಎಲ್ಲ ಸ್ರವಿಕೆಗಳಲ್ಲಿ ವೈರಸ್‌ಗಳ ಸಂಖ್ಯೆ ಧಾರಾಳವಾಗಿ ಹೆಚ್ಚಾಗುವುದು. ರಕ್ತಹೀನತೆ, ಅಶಕ್ತಿ ಅಪ್ಪಿಕೊಂಡು ಹಿಂಡಿ ಹಿಪ್ಪೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ವಿಪರೀತ ಕುಗ್ಗುತ್ತದೆ.
ಎಚ್‌ಐವಿ ಸೋಂಕಿತ ವ್ಯಕ್ತಿಗಳು ಮಲೇರಿಯಾಕ್ಕೆ ತುತ್ತಾದಾಗ ಲೈಂಗಿಕ ಕ್ರಿಯೆಯಲ್ಲಿ ನಿರತರಾದರೆ ಅವರು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಬಲ್ಲರಾಗಿರುತ್ತಾರೆ.
ಮಲೇರಿಯಾ ತಡೆ ಹೇಗೆ?
- ಮಲೇರಿಯಾವನ್ನು ಗುಣಪಡಿಸಿ, ಸೊಳ್ಳೆಗಳು ರೋಗವಾಹಕಗಳಾಗದಂತೆ ತಡೆಯುವುದು ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆದರೆ ರೋಗಕ್ಕೆ ಕಡಿವಾಣ ಹಾಕಬಹುದು.
- ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೂಕ್ತ ಶಕ್ತಿಶಾಲಿ ಕ್ರಿಮಿನಾಶಕಗಳನ್ನು ಸಕಾಲಕ್ಕೆ ಸಿಂಪಡಿಸಿ.
- ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಮಾಡಿ. ಸೊಳ್ಳೆಗಳ ವಂಶಾಭಿವೃದ್ಧಿಗೆ ಅವಕಾಶ ಕೊಡಬೇಡಿ.
- ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ. ಸೊಳ್ಳೆಗಳು ಮನೆಯೊಳಗೆ ನುಗ್ಗುವುದನ್ನು ತಡೆಯಲು ಕಿಟಕಿಗಳಿಗೆ ಜಾಲಿಗಳನ್ನು ಹಾಕಿಸಿ.
- ಸೊಳ್ಳೆಗಳನ್ನು ಓಡಿಸಲು ಘಾಟು ಪದಾರ್ಥಗಳನ್ನು- ಓಡೋಮಸ್, ಟಾರ್ಟೈಸ್ ಬಳಸಿ.
- ಡಾ. ಕರವೀರಪ್ರಭು ಕ್ಯಾಲಕೊಂಡ