ಇಂದು ಕೊಬ್ಬನ್ನು ಕರಗಿಸಲು ಬಾಡಿ ಸ್ಕಲ್ಪಿಂಗ್‌ನ ಹೊಸ ಹೊಸ ಚಿಕಿತ್ಸಾ ವಿಧಾನಗಳು ವೈದ್ಯಕೀಯ ಜಗತ್ತಿನಲ್ಲಿ ಪ್ರಚಲಿತಗೊಳ್ಳುತ್ತಿವೆ. ಭಾರತದಲ್ಲಿ ಕಳೆದ ವರ್ಷ 9 ಲಕ್ಷ ಮಂದಿ ಸೌಂದರ್ಯವರ್ಧನೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಂಥ ಕೆಲವು ವಿಧಾನಗಳ ಇಣುಕುನೋಟ ಇಲ್ಲಿದೆ...
ಆಧುನಿಕ ಜೀವನಶೈಲಿಯ ಕೊಡುಗೆಯಂತೆ ಹೇಳದೇ ಕೇಳದೇ ಹೇರಿಕೊಂಡು ಬಿಡುವ ಕೊಬ್ಬನ್ನು ಕರಗಿಸಲು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲು ಸಮಯ, ವ್ಯವಧಾನ ಎರಡೂ ಇಲ್ಲದವರಿಗೆ ಎಂದೇ ಇಂದು ಬಾಡಿ ಸ್ಕಲ್ಪಿಂಗ್‌ನ ಹೊಸ ಹೊಸ ಚಿಕಿತ್ಸಾ ವಿಧಾನಗಳು ವೈದ್ಯಕೀಯ ಜಗತ್ತಿನಲ್ಲಿ ಪ್ರಚಲಿತಗೊಳ್ಳುತ್ತಿವೆ. ಭಾರತದಲ್ಲಿ ಕಳೆದ ವರ್ಷ 9 ಲಕ್ಷ ಮಂದಿ ಸೌಂದರ್ಯವರ್ಧನೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಂಥ ಕೆಲವು ವಿಧಾನಗಳ ಇಣುಕುನೋಟ ಇಲ್ಲಿದೆ...
ಏನಿದು ಬಾಡಿ ಸ್ಕಲ್ಪಿಂಗ್?
ದೇಹವನ್ನು ಸುಂದರ ಆಕಾರಕ್ಕೆ ರೂಪಿಸಲು ಅನುಸರಿಸುವ ಎಲ್ಲ ಪ್ರಯತ್ನಗಳೂ ಬಾಡಿ ಸ್ಕಲ್ಪಿಂಗ್‌ಗಳೇ. ಬೊಜ್ಜು ಎಂದು ಕರೆವ ಮೈಯ್ಯಲ್ಲಿನ ಕೊಬ್ಬು ಕರಗಿಸಲು ವ್ಯಾಯಾಮ, ಡಯಟ್ ಅಂತೆಲ್ಲ ಎಷ್ಟೊಂದು ಕಸರತ್ತು ನಡೆಸುತ್ತೇವೆ. ಆದರೆ, ದೇಹದ ಕೆಲವೊಂದು ಭಾಗಗಳಲ್ಲಿ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಕೊಬ್ಬು ಹೇರಿಕೊಂಡು ಕುಳಿತುಬಿಡುತ್ತದೆ. ಸಾಮಾನ್ಯವಾಗಿ ಕತ್ತು, ಭುಜ, ಬೆನ್ನು ಸೊಂಟ, ತೊಡೆ ಭಾಗಗಳಲ್ಲಿ ಹೆಚ್ಚಾಗಿ ಕೊಬ್ಬು ಶೇಖರವಾಗುತ್ತದೆ. ಬಾಡಿ ಸ್ಕಲ್ಪಿಂಗ್ ಇಂಥ ಅನವಶ್ಯಕ ಕೊಬ್ಬನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತೆಗೆಯುವ ಚಿಕಿತ್ಸಾ ವಿಧಾನ.
ಹೇಗೆ ಮಾಡುತ್ತಾರೆ?
ಇದು ತುಂಬಾ ಗಂಭೀರ ಚಿಕಿತ್ಸೆಯೇನಲ್ಲ. ಸಾಮಾನ್ಯ ಅರವಳಿಕೆ ನೀಡಿ ಅಥವಾ ಕೆಲವೊಮ್ಮೆ ಅದರ ಅವಶ್ಯಕತೆಯೂ ಇಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆದವರು ಅಂದೇ ಮನೆಗೆ ಹೋಗಬಹುದು. ಈ ಚಿಕಿತ್ಸೆಯಿಂದ ದೇಹದ ವಿವಿಧ ಭಾಗಗಳಲ್ಲಿ ಶೇಖರವಾದ ಅನಗತ್ಯ ಕೊಬ್ಬನ್ನು ತೆಗೆಯುವುದಷ್ಟೇ ಅಲ್ಲ, ಅಗತ್ಯವಿದ್ದಲ್ಲಿ ತೆಗೆದ ಕೊಬ್ಬನ್ನು ಮುಖ, ಎದೆ, ತೋಳು, ಮೀನಖಂಡ, ಪೃಷ್ಠ ಹೀಗೆ ವಿವಿಧ ಭಾಗಗಳಿಗೆ ಮರುಸೇರಿಸಿ ಅವುಗಳ ಆಕಾರವನ್ನು ಹಿಗ್ಗಿಸಬಹುದು ಕೂಡಾ.
ಏನು ಉಪಯೋಗ?
-ಕೊಬ್ಬನ್ನು ಕರಗಿಸುವ ಸಾಂಪ್ರದಾಯಿಕ ವಿಧಾನಗಳಾದ ಡಯಟ್, ವಿಪರೀತ ವ್ಯಾಯಾಮಗಳಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಆಧುನಿಕ ಬಾಡಿ ಸ್ಕಲ್ಪಿಂಗ್ ಚಿಕಿತ್ಸೆಯಲ್ಲಿ ಈ ಅಪಾಯಗಳಿಲ್ಲ.