ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
ನಮ್ಮೆಲ್ಲರಲ್ಲೂ ಒಂದಲ್ಲ ಒಂದು ಕೊರತೆ ಇರುತ್ತದೆ. ಅದು ದೈಹಿಕವಾಗಿಯಾದರೂ ಸರಿ, ಸಾಮಾಜಿಕ ಸ್ಕಿಲ್ಗಳಾದರೂ ಸರಿ, ನಾವು ಬಯಸಿದಂತೆಯೇ ನಮ್ಮದೆಲ್ಲವೂ ಇರುವುದಿಲ್ಲ. ಹಾಗೆಂದು ಅದೇ ನಮ್ಮಲ್ಲಿ ಕೀಳರಿಮೆ ಹುಟ್ಟಿಸಿ ಬೇರೆ ಅವಕಾಶಗಳಿಂದ ವಂಚಿಸುವಂತಾಗಬಾರದು.
- ಮೊದಲು ನಿಮ್ಮಲ್ಲಿರುವ ಪ್ರತಿಭೆ ಮತ್ತು ಒಳ್ಳೆಯ ಅಂಶಗಳನ್ನು ಗುರುತಿಸಿಕೊಳ್ಳಿ. ಎಷ್ಟೇ ಕೀಳರಿಮೆ ಕಾಡಿದಾಗಲೂ ಇವುಗಳನ್ನು ನೆನೆದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಈ ಬಗ್ಗೆ ಒಂದು ಲಿಸ್ಟ್ ತಯಾರಿಸಿ. ಕೀಳರಿಮೆ ಕಾಡಿದಾಗೆಲ್ಲ ಲಿಸ್ಟ್ ಮೇಲೆ ಕಣ್ಣಾಡಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ತಕ್ಷಣಕ್ಕೆ ಹೆಚ್ಚಿಸುತ್ತದೆ.
- ಹಿಂದೆ ನಿಮ್ಮನ್ನು ಯಾರಾದರೂ ಒಂದಲ್ಲ ಒಂದು ವಿಷಯಕ್ಕೆ ಹೊಗಳಿರುತ್ತಾರೆ. ನಿಮ್ಮ ನಗು ಚೆನ್ನಾಗಿದೆ ಎಂದೋ, ದನಿ ಚೆನ್ನಾಗಿದೆ, ಮಾತನಾಡುವ ಶೈಲಿ, ಇನ್ನೊಬ್ಬರೊಂದಿಗೆ ಬೆರೆಯುವ ಶೈಲಿ ಚೆನ್ನಾಗಿದೆ ಅಂತಲೋ ಅಂದಿರುತ್ತಾರೆ. ಅದನ್ನು ಆಗಾಗ ನೆನೆಸಿಕೊಳ್ಳಿ.
- ಬಾಹ್ಯ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಬೇಡ. ಅದು ನಿಮ್ಮ ಕೈಲಿಲ್ಲ. ಆದರೆ, ಆಂತರಿಕ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಮಾತ್ರ ನಿಮ್ಮದೇ ಕೈಲಿದೆ.
- ಹೊಸ ಕಲಿಕೆಗೆ ಸಾಧ್ಯವಾದಷ್ಟು ತೆರೆದುಕೊಳ್ಳಿ. ಹೊರಗೆ ಓಡಾಡಿ. ಹೊಸ ಹೊಸ ಮಾಹಿತಿ ತಿಳಿದುಕೊಳ್ಳಿ. ಜ್ಞಾನ ಯಾವತ್ತೂ ನಮ್ಮ ಅತ್ಯಂತ ದೊಡ್ಡ ಸ್ವತ್ತು. ಹಾಗೂ ಅದು ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
- ನಿಮ್ಮ ವೀಕ್ನೆಸ್ಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬರ ಕೆಟ್ಟ ತೀರ್ಪುಗಳಿಗೆ ಕಿವುಡಾಗಿರಲು ಕಲಿಯಿರಿ.
- ಒಂದಂತೂ ನೆನಪಿಡಿ. ಪ್ರತಿಯೊಬ್ಬರೂ ಆತ್ಮವಿಶ್ವಾಸದ ಕೊರತೆಯಿಂದ ಬಳಲಿರುತ್ತಾರೆ. ಆದರೆ, ಕೆಲವರು ಅದನ್ನು ಮುಚ್ಚಿಡುವುದರಲ್ಲಿ ಹೆಚ್ಚು ಜಾಣರಾಗಿರುತ್ತಾರಷ್ಟೇ.
- ಗೀತಾ ಕೆ.ರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.