ತ್ವಚೆಯನ್ನು ತುಚ್ಛವಾಗಿ ಕಾಣುವಂತೆ ಮಾಡುವ ಸೊರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೊಂದು ಸಂತಸದ ಸುದ್ದಿ ಇದೆ. ಈ ರೋಗದಿಂದ ಬಳಲುತ್ತಿರುವವರ ಚರ್ಮಕ್ಕೆ ಚೈತನ್ಯ ನೀಡುವ ಹೊಸ ಔಷಧವೊಂದು ಸಂಜೀವಿನಿಯಂತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರೋಗಿಗಳಲ್ಲಿ ಆಶಾಭಾವ ಮೂಡಿಸಿದೆ. ಒಂದು ಹಂತಕ್ಕೆ ತಲುಪಿದ ಕೂಡಲೇ ರೋಗಿಯ ಜೀವಕ್ಕೂ ಸಂಚಕಾರ ಒಡ್ಡುವ ಈ ರೋಗದ ತಡೆಗೆ ಇದುವರೆಗೂ ಯಾವುದೇ ಸೂಕ್ತ ಔಷಧ ಇರಲಿಲ್ಲ. ಜೈವಿಕ ತಂತ್ರಜ್ಞಾನದಿಂದ ತಯಾರಿಸಿದ ಔಷಧವಾದ 'ಎಟರ್ನಾಸೆಪ್ಟ್' ಎನ್ನುವ ಚುಚ್ಚುಮದ್ದು ಈಗ ರೋಗಿಗಳಲ್ಲಿ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡುತ್ತಿದೆ. ಇದು ಬಹುಸಂಖ್ಯಾ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಂಥ ಶಕ್ತಿ ಇರುವ ಚುಚ್ಚುಮದ್ದು. ಇದರಿಂದ ವೈದ್ಯಕೀಯ ಕ್ಷೇತ್ರವೇ ಅಚ್ಚರಿ ಪಡುವಂತಾಗಿದ್ದು, ಶೇ.80ರಷ್ಟು ರೋಗವನ್ನು ಗುಣ ಪಡಿಸಬಲ್ಲದಾಗಿದೆ.
ಆದರೆ, ದುಬಾರಿಯಾದ ಈ ಒಂದು ಚುಚ್ಚುಮದ್ದಿನ ಬೆಲೆ ರು. 8000. ಇದನ್ನು ತಿಂಗಳಿಗೆ ಮೂರರಂತೆ 6 ತಿಂಗಳು ಸತತವಾಗಿ ತೆಗೆದುಕೊಳ್ಳಬೇಕು. ಆಗ ರೋಗ ನಿಯಂತ್ರಣಕ್ಕೆ ಬರುತ್ತದೆ.
ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
ರಾಜ್ಯದಲ್ಲಿ ಶೇ.2ರಷ್ಟು ಜನರು ಈ ಚರ್ಮರೋಗದಿಂದ ನರಳುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಕೊರತೆ ಮತ್ತು ಒತ್ತಡದ ಜೀವನ ಶೈಲಿಯಿಂದ ಬರುವ ಈ ಕಾಯಿಲೆಗೆ ಸಿಲುಕುವವರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಆದರೆ, ಸೂಕ್ತ ಚಿಕಿತ್ಸೆ ಪಡೆಯುವವರ ಸಂಖ್ಯೆ ಮಾತ್ರ ಕಡಿಮೆ. ಈ ತನಕ ನೀಡಲಾಗುತ್ತಿದ್ದ ಔಷಧಿಗಳು ಚರ್ಮದ ತುರಿಕೆ ಹಾಗೂ ಚರ್ಮ ಪುಡಿಯಾಗಿ ಉದುರುವುದನ್ನು ಮಾತ್ರ ತಡೆಯುತ್ತಿದ್ದವು. ಆದರೆ, ಈ ಹೊಸ ಔಷಧ ನಿರೀಕ್ಷೆಗೂ ಮೀರಿ ರೋಗವನ್ನು ಗುಣಪಡಿಸುತ್ತಿದೆ. ದುಬಾರಿಯಾದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಾಗದ ಕಾರಣ ಬಡವರಿಗೆ ನಿಲುಕದಂತಾಗಿದೆ.
ಏನಿದು ಸೊರಿಯಾಸಿಸ್?
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಬರುವ ಚರ್ಮ ರೋಗವೇ ಸೊರಿಯಾಸಿಸ್. ದೀರ್ಘ ಕಾಲ ಕಾಡುವ ಈ ರೋಗ ನಾಲ್ಕು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಾಗುವುದು, ಚರ್ಮ ಒಡೆದಂತಾಗುವುದು, ಚರ್ಮ ಪದರ ಬಿಡುವುದು, ಉದುರುವುದು, ಕಿವಿ ಮತ್ತು ಸಂದುಗಳಲ್ಲಿ ಚರ್ಮ ಪುಡಿಯಾಗಿ ಬೀಳುವುದು ರೋಗದ ಸಾಮಾನ್ಯ ಲಕ್ಷಣ. ಚಳಿಗಾಲ ಮತ್ತು ಮಾನಸಿಕ ಒತ್ತಡ ಹೆಚ್ಚಾದಾಗ ಈ ರೋಗ ತೀವ್ರವಾಗುತ್ತದೆ. ಕೆಲವೊಮ್ಮೆ ಕೀಲುಗಳು ಮತ್ತು ಸಂದುಗಳಲ್ಲಿ ತೀವ್ರವಾಗಿ ಆರ್ಥೈಟೀಸ್ ರೀತಿಯೂ ತೊಂದರೆ ನೀಡಬಹುದು. ಅಲಕ್ಷಿಸಿದರೆ ಸಾವನ್ನೂ ತರಬಲ್ಲದು.
ಎಟರ್ನಾಸೆಪ್ಟ್ ಸೂಕ್ತ
ಸೊರಿಯಾಸಿಸ್ ರೋಗಿಗಳಿಗೆ ಎಟರ್ನಾಸೆಪ್ಟ್ ಪರಿಣಾಮಕಾರಿಯಾಗಿದ್ದು, ಇತ್ತೀಚೆಗೆ ಕೆಲವು ಇಎಸ್‌ಐ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲಾಗುತ್ತಿದೆ. ಆದರೆ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗುವಂತೆ ಮಾಡಬೇಕು. ಇದು ದುಬಾರಿಯಾಗಿರುವುದರಿಂದ ಇದರ ಹಣವನ್ನು ಯಶಸ್ವಿನಿ ಯೋಜನೆಯಡಿ ಭರಿಸಿಕೊಂಡು ಬಡವರೂ ಈ ಔಷಧ ಖರೀದಿಸಲು ಅವಕಾಶ ಕಲ್ಪಿಸಬೇಕು.
- ಡಾ.ನಟರಾಜ್,
ವಿಕ್ಟೋರಿಯಾ ಆಸ್ಪತ್ರೆ ಚರ್ಮ ರೋಗಗಳ ವಿಭಾಗದ ಮುಖ್ಯಸ್ಥರು
- ಶಿವಕುಮಾರ್ ಬೆಳ್ಳೆತಟ್ಟೆ