ಆರೋಗ್ಯ-ಜೀವನಶೈಲಿ

ನೀರುವಹಣೆ

ನೀರು ನಿತ್ಯ ಬಳಕೆಗೆ ಅಗತ್ಯ. ನೀರು ಇರದಿದ್ದರೆ, ಮನೆಯಲ್ಲಿ ಮನದಲ್ಲಿ ಮೂರನೇ ಮಹಾಯುದ್ಧವೇ ನಡೆಯುವುದು...

ನೀರು ನಿತ್ಯ ಬಳಕೆಗೆ ಅಗತ್ಯ. ನೀರು ಇರದಿದ್ದರೆ, ಮನೆಯಲ್ಲಿ ಮನದಲ್ಲಿ ಮೂರನೇ ಮಹಾಯುದ್ಧವೇ ನಡೆಯುವುದು. ಯುದ್ಧವಾದರೂ ಪರವಾಗಿಲ್ಲ ಆದರೆ, ನೀರು ಬೇಕು. ನೀರನ್ನು ನಾವು ಈಗಿನಿಂದಲೇ ಮಿತವಾಗಿ ಜೊತೆಗೆ ಹಿತವಾಗಿ ಬಳಕೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಯುದ್ಧಕ್ಕೆ ಸಿದ್ಧವಾಗಲೇಬೇಕು.
ಅದಕ್ಕಾಗಿ ಈಗಿನಿಂದಲೇ ಮುಂದಾಲೋಚನೆ ಮಾಡಬೇಕಾದ ಅನಿವಾರ್ಯತೆ ಇದೆ. ನೀರನ್ನು ಉಳಿಸುವ ಮುನ್ನ ಯೋಗ್ಯ ಸಂಗ್ರಹಣೆಯೂ ಅಷ್ಟೇ ಮುಖ್ಯವಾಗಿರಬೇಕು. ಅದಕ್ಕೆ ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.
ಇದಕ್ಕಾಗಿ ನೆಲದಡಿಯ ತೊಟ್ಟಿ, ಮನೆಯ ಚಾವಣಿ ಮೇಲೆ ಸಿಂಟೆಕ್ಸ್ ಅನ್ನು ನಿರ್ಮಿಸಿಕೊಂಡಿರುವುದು ಅಥವಾ ಚಾವಣಿ ಮೇಲೆಯೇ ಸಿಮೆಂಟ್‌ನಿಂದ ತೊಟ್ಟಿ ಕಟ್ಟುವುದು ಸರ್ವೆಸಾಮಾನ್ಯ. ಇಂಥ ವ್ಯವಸ್ಥೆಯ ನಿರ್ವಹಣೆಯ ಸಂದರ್ಭದಲ್ಲಿ ಶುಚಿತ್ವಕ್ಕೆ ಗಮನ ಕೊಡಬೇಕು. ಯಾಕೆಂದರೆ, ಇದು ಕುಟುಂಬ ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಸಂಗ್ರಹಗೊಂಡ ನೀರಿನ ನಿರ್ವಹಣೆಗಾಗಿ ಕೆಲವು ಅಗತ್ಯ ಮಾಹಿತಿಗಳು ಇಲ್ಲಿವೆ...
ಬಿಳಿ ಬಣ್ಣ ಲೇಪಿಸಿ
ಸಂಪಿನ ಒಳಗೆ ಬಿಳಿ ಬಣ್ಣ ಹಚ್ಚಿದರೆ ನೀರಿನಲ್ಲಿರುವ ಸೂಕ್ಷ್ಮಾಣು ಅಥವಾ ಹುಳುಗಳನ್ನು ಗುರುತಿಸಲು ಸಹಾಯಕ. ಬಿಳಿ ಬಣ್ಣ ಬೆಳಕನ್ನು ಪ್ರತಿಫಲಿಸುವುದರಿಂದ ನೀರಲ್ಲಿರುವ ಕಲ್ಮಶಗಳನ್ನು ಪತ್ತೆಹಚ್ಚಲು ಸುಲಭವಾಗುವುದಲ್ಲದೇ ಸ್ವಚ್ಛತಾ ಕಾರ್ಯದ ಪ್ರಮಾಣ ತಿಳಿದುಕೊಳ್ಳಬಹುದು.
ರಾಸಾಯನಿಕ ವಸ್ತು ಬಳಸಬೇಡಿ
ಸಂಪಿನ ಶುಚಿ ಕಾಪಾಡಲು ಯಾವುದೇ ಸೋಪಿನ ಪುಡಿ, ಬ್ಲೀಚಿಂಗ್ ಪೌಡರ್, ಕಾಸ್ಟಿಕ್ ಸೋಡಾ ಇತ್ಯಾದಿಗಳ ಬಳಸುವುದು ಸೂಕ್ತವಲ್ಲ. ಇಂಥ ಪುಡಿಗಳನ್ನು ಬಳಸುವುದರಿಂದ ನೀರಲ್ಲಿ ವಾಸನೆ ಆವರಿಸುತ್ತದೆ. ನೀರಿನ ಶುಚಿತ್ವಕ್ಕೂ ಧಕ್ಕೆಯಾಗಬಹುದು.
ಸ್ವಚ್ಛಗೊಳಿಸಿದ ದಿನ ನೆನಪಿರಲಿ
ನೀರು ಬಂದ ದಿನವನ್ನು ದಾಖಲಿಸಿಕೊಂಡಿರಿ. ಇದರಿಂದ ತೊಟ್ಟಿ ಸಂಗ್ರಹಣೆಯಲ್ಲಿನ ನೀರು ಎಷ್ಟು ದಿನಗಳ ಕಾಲದ್ದು ಹಾಗೂ ಸ್ವಚ್ಛಗೊಳಿಸಿದ ದಿನಗಳ ಅಂತರ ತಿಳಿದುಕೊಳ್ಳಲು ನೆರವಾಗುವುದು.
ಗಾಳಿ, ಬೆಳಕಿನಿಂದ ಮರೆಮಾಚಿ
ಗಾಳಿ, ಬೆಳಕಿನ ಸ್ಪರ್ಶದಿಂದ ನೀರಿನ ಗುಣದಲ್ಲಿ ಬದಲಾವಣೆಯಾಗುವುದು. ಹಸಿರು ಪಾಚಿ, ಬಾಲಹುಳುಗಳ ಬೆಳವಣಿಗೆ ಸಾಧ್ಯತೆ ಹೆಚ್ಚು.
ಮುಚ್ಚಳಿಕೆ ಭದ್ರವಾಗಿರಲಿ
ನೀರು ಸಂಗ್ರಹವಾದ ಸಂಪು, ಸಿಂಟೆಕ್ಸ್‌ನ ಮುಚ್ಚಳಿಕೆಯನ್ನು ಭದ್ರವಾಗಿ ಹಾಕಿ. ಅವಶ್ಯ ಇದ್ದು, ತೆರೆದಾಗ ಬೇಗ ಮುಚ್ಚುವುದು ಸೂಕ್ತ. ಮುಚ್ಚಳಿಕೆಯಿಂದ ಗಾಳಿಯೊಂದಿಗೆ ಹೋಗುವ ಧೂಳು, ಕಸ, ಕಿಟಗಳನ್ನಲ್ಲದೇ, ಹೊರಗಿನಿಂದ ಒಳಹೋಗುವ ನೀರು ತಡೆಯುವುದು ಸುಲಭವಾಗುತ್ತದೆ.
ನೀರೊಳಗಿನ ಯಂತ್ರ ಸೂಕ್ತ
ಮೇಲಿನ ಸಿಂಟೆಕ್ಸ್‌ಗೆ ನೀರನ್ನು ಸಂಗ್ರಹಿಸಲು ನೀರೊಳಗೆ ಯಂತ್ರ ಇದ್ದರೆ ಸೂಕ್ತ. ಇದರಿಂದ ಸಂಪಿನ ಮುಚ್ಚಳಿಕೆಯನ್ನು ಆಗಾಗ ತೆಗೆಯುವುದು ತಪ್ಪುತ್ತದೆ.


ವಾಸನೆ ಪರೀಕ್ಷೆ

ನೀರಿನ ವಾಸನೆಯಿಂದ ಶುದ್ಧತೆ ಬಗ್ಗೆ ತಿಳಿದುಕೊಳ್ಳಬಹುದು. ನೀರಿನ ಸಾಗಾಣೆಯಲ್ಲಿ ಕೆಲವೊಂದು ರಾಸಾಯನಿಕಗಳನ್ನು ಬಳಸುವುದರಿಂದ ವಾಸನೆಯುಕ್ತವಾಗಿರುತ್ತದೆ. ಶುದ್ಧ ನೀರು ದುರ್ವಾಸನೆ ರಹಿತವಾಗಿದ್ದು, ಇದನ್ನು ಖಚಿತ ಪಡಿಸಿಕೊಂಡರೆ ಸಂಪು ಸ್ವಚ್ಛತೆಯ ಅವಧಿಯನ್ನು ಮುಂದೂಡಲು ಅವಕಾಶವುಂಟು.



ಬಣ್ಣ ಗುರುತಿಸಿ
ತೊಟ್ಟಿಗೆ ಬೀಳುವ ನೀರಿನ ಬಣ್ಣವನ್ನು ಗಮನಿಸಿ. ಮಳೆಗಾಲ, ಚರಂಡಿ ಸೋರಿಕೆಯಿಂದಾಗಿ ನೀರಲ್ಲಿ ಏನಾದರೂ ಸೇರಿದೆಯೇ ಎಂದು ತಿಳಿಯಲು ಅತೀ ಸುಲಭ. ಇದರಿಂದ ಸ್ವಚ್ಛ ಮಾಡಲು ಕೂಡ ಅನುಕೂಲ.


ಸೋರುವಿಕೆ ತಡೆಗಟ್ಟಿ
ಸಂಗ್ರಹಿಸಿದ ನೀರು ಎಲ್ಲಿಯೂ ಹಾಳಾಗದಂತೆ ನೋಡಿಕೊಳ್ಳಬೇಕು. ಸಂಪು ಗಟ್ಟಿಯಾಗಿದ್ದು, ಸೋರಿಕೆಯಾಗಬಾರದು. ಒಳಭಾಗದಲ್ಲಿ ಬಿರುಕಿನಿಂದ ನೀರು ಸೋರುತ್ತಿರುವುದನ್ನು ತಡೆಗಟ್ಟಿ.

-ಮಂಜುನಾಥ ಪ್ಯಾಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್