ಲಾಲಾರಸ ಗ್ರಂಥಿಗೆ ಆಪರೇಶನ್
ಸಲೈವರಿ ಗ್ರಂಥಿಯಲ್ಲಿ ಲಾಲಾರಸ ಉತ್ಪತ್ತಿಯಾಗೋದು ಕಡಿಮೆಯಾದಾಗ ರುಚಿ ಗೊತ್ತಾಗೋಲ್ಲ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ...
ತಿಂದದ್ದು ಕರಗಲು ಲಾಲಾರಸ ಅಗತ್ಯ. ಆಹಾರ ಅಗಿಯಲು, ಅಗಿದಿದ್ದು ಮುದ್ದೆಯನ್ನಾಗಿಸಿ ಜಠರಕ್ಕೆ ಸೇರಿಸಲು ಈ ರಸ ಬೇಕು. ಮಾತನಾಡೋಕೂ ಇದು ಬೇಕೇ ಬೇಕು.
ಈ ಅತ್ಯುಪಯುಕ್ತ ಜೊಲ್ಲು ರಸ (ಸಲೈವಾ) ಕೆಲವೊಮ್ಮೆ ನಿಗದಿತ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಇಂಥ ಸ್ಥಿತಿಯನ್ನು 'ಕ್ಸೆರೋಸ್ಟೋಮಿಯಾ' ಅಂತಾರೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುವುದಲ್ಲದೇ, ಆಹಾರ ಸೇವಿಸಲು, ಮಾತನಾಡಲೂ ಕಷ್ಟವಾಗುವಂತೆ ಮಾಡುತ್ತದೆ. ಅಲ್ಲದೆ, ಹಲ್ಲುಗಳಲ್ಲಿ ಕುಳಿಗಳು ಹಾಗೂ ಬಾಯಿ ಸೋಂಕನ್ನೂ ಉಂಟುಮಾಡಬಲ್ಲದು.
ನಮ್ಮ ಬಾಯಲ್ಲಿ 3 ಜೋಡಿ ಲಾಲಾರಸ ಗ್ರಂಥಿಗಳಿವೆ. ಕುತ್ತಿಗೆಯ ಮೇಲ್ಭಾಗದಲ್ಲಿ, ಎರಡೂ ಕಿವಿಗಳ ಕೆಳಭಾಗದಲ್ಲಿ ಇರುವ ಪ್ಯಾರೋಟಿಡ್ ಗ್ರಂಥಿ ಅತಿ ದೊಡ್ಡದು. ಇನ್ನೆರಡು ಜೋಡಿ ಕ್ರಮವಾಗಿ, ನಾಲಗೆಯ ಕೆಳಭಾಗದಲ್ಲಿ (ಸಬ್‌ಲಿಂಗ್ಯುವಲ್ ಗ್ರಂಥಿ), ಗಲ್ಲ ಹಾಗೂ ಕುತ್ತಿಗೆಯ ನಡುವೆ (ಸಬ್‌ಮ್ಯಾಂಡಿಬುಲರ್ ಗ್ರಂಥಿ) ಇರುತ್ತವೆ. ಎಲ್ಲವನ್ನೂ ಒಟ್ಟಾರೆಯಾಗಿ ಸಲೈವರಿ ಗ್ರಂಥಿ ಎನ್ನುತ್ತಾರೆ. ಈ ಗ್ರಂಥಿಯಲ್ಲಿ ಲಾಲಾರಸ ಉತ್ಪತ್ತಿಯಾಗೋದು ಕಡಿಮೆಯಾದಾಗ ರುಚಿ ಗೊತ್ತಾಗೋಲ್ಲ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಗಂಟಿಗೆ ಆಪರೇಷನ್
ಪ್ಯಾರೋಟಿಡ್ ಗ್ರಂಥಿಗಳಲ್ಲಿ ಉಂಟಾಗುವ ಹೆಚ್ಚುವರಿ ಜೀವಕೋಶಗಳ ಬೆಳವಣಿಗೆ ಅಪಾರ ಸಮಸ್ಯೆಯನ್ನು ತಂದೊಡ್ಡುತ್ತವೆ. ಇದು ಕ್ಯಾನ್ಸರ್ ಮಾದರಿಯದ್ದಲ್ಲದ ಗಂಟುಗಳನ್ನು ಸೃಷ್ಟಿಸುತ್ತವೆ. ಊದಿಕೊಳ್ಳುವ ಇದನ್ನು ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಬೇಕು. ಈ ಗಂಟುಗಳು ಕೆಲವೊಮ್ಮೆ ಚರ್ಮದ ಮೇಲ್ಮೈಗೆ ಕಾಣುತ್ತಿರುತ್ತವೆ. ಹಾಗೆ ಮೇಲ್ಭಾಗಕ್ಕೇ ಕಾಣುವ ಗಂಟುಗಳನ್ನು 'ಸೂಪರ್‌ಫಿಷಿಯಲ್ ಪ್ಯಾರೊಟೆಡೆಕ್ಟಮಿ' (ಎಸ್‌ಪಿ) ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬಹುದು. ಆದರೆ, ಪ್ರಕ್ರಿಯೆಯಲ್ಲಿ ಮುಖದ ನರಗಳನ್ನು ಬಗೆಮಾಡಿ, ಸಾಕಷ್ಟು ಎಚ್ಚರಿಕೆಯಿಂದ ಮಾಡಬೇಕು. ಸ್ವಲ್ಪ ವ್ಯತ್ಯಾಸವಾದರೂ ಇದು ಮುಖದ ಪಾರ್ಶ್ವವಾಯು ಹಾಗೂ ಫೇಸ್ ಸಿಂಡ್ರೋಮ್ ಎಂಬ ಸಮಸ್ಯೆಗೆ ನಾಂದಿ ಹಾಡುತ್ತದೆ.
ಹೊಸ ಟ್ರೀಟ್‌ಮೆಂಟ್
ಸಲೈವರಿ ಗ್ರಂಥಿ ಸಮಸ್ಯೆಗೆ ಪರಿಹಾರವಾಗಿ ಎಕ್ಸ್‌ಟ್ರಾ ಕ್ಯಾಪ್ಸುಲರ್ ಡಿಸೆಕ್ಷನ್ (ಇಸಿಡಿ) ಎಂಬ ಚಿಕಿತ್ಸೆ ಇದೆ. ಸ್ವಚ್ಛಗೊಂಡ ನೀಡಲ್‌ಗಳ ಸಹಾಯದಿಂದ ಶಸ್ತ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ. ಈ ಮಾದರಿಯ ಶಸ್ತ್ರಚಿಕಿತ್ಸೆಯಲ್ಲಿ ನೋವು ತೀರಾ ಕಡಿಮೆ. ಮುಖದ ಪಾರ್ಶ್ವವಾಯು, ಫೇಸ್ ಸಿಂಡ್ರೋಮ್‌ಗಳ ಭೀತಿಯೂ ಇರದು. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ಆದಷ್ಟೂ ಬೇಗ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬಹುದು.
ಇಸಿಡಿ ಶಸ್ತ್ರಚಿಕಿತ್ಸೆಯಿಂದ ಗ್ರಂಥಿಗೆ ಮರುಕಳಿಸುವ ಅಪಾಯದ ಪ್ರಮಾಣ ಶೇ. 2ರಷ್ಟು ಕಡಿಮೆ. ಅಲ್ಲದೇ, 'ಇಸಿಡಿ' ಶಸ್ತ್ರಚಿಕಿತ್ಸೆಯು 'ಫೇಸ್ ಸಿಂಡ್ರೋಮ್' ಮತ್ತು ಮುಖದ ಚರ್ಮದ ಮೇಲಾಗುವ ದುಷ್ಪರಿಣಾಮವನ್ನು ತಡೆಗಟ್ಟುತ್ತದೆ.
= ಡಾ. ಶ್ರೀಧರ್ , ಶಸ್ತ್ರಚಿಕಿತ್ಸಕ
6 ಮಾನವನ ದೇಹದಲ್ಲಿರುವ ಲಾಲಾರಸ ಗ್ರಂಥಿಗಳು
1.5 ಲೀ.
ಪ್ರತಿದಿನ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ಲಾಲಾರಸ
1950
ಮೊದಲ ಬಾರಿಗೆ ಇಸಿಡಿ ಶಸ್ತ್ರಚಿಕಿತ್ಸೆ ನಡೆದ ವರ್ಷ