ಸಾಕು ಮಾಡಿ ಸೋಂಕು
ಮಳೆ ಆರಂಭವಾಗುತ್ತಿದ್ದಂತೆ ಕಣ್ಣಿನ ಆರ್ದ್ರ ಚರ್ಮದಲ್ಲಿ ಕಂಡುಬರುವ ಉರಿಯಿಂದಾಗಿ ಕಣ್ಣು ನಸುಗೆಂಪು ಬಣ್ಣಕ್ಕೆ ತಿರುಗುತ್ತದೆ. ಗಾಳಿಯಲ್ಲಿನ ತೇವಾಂಶ ವೈರಲ್ ಕಂಜಕ್ಟಿವಿಸ್ ಹರಡಲು ಕಾರವಾಗುತ್ತದೆ. ಒಂದು ವಾರದವರೆಗೂ ಬಾಧಿಸುವ ಈ ಸಮಸ್ಯೆ ಎರಡು ವಾರಗಳವರೆಗೂ ಮುಂದುವರೆಯಬಹುದು. ಸೋಂಕು ಸಂಕೀರ್ಣ ಹಂತಕ್ಕೆ ಹೋಗುವುದಕ್ಕೂ ಮುನ್ನ ನೇತ್ರ ತಜ್ಞರನ್ನು ಸಂಪರ್ಕಿಸುವುದೊಳಿತು.
ನಮ್ಮಿಷ್ಟದಂತೆ ಕಣ್ಣಿನ ಡ್ರಾಪ್ಸ್ ಬಳಸಿದರೆ ಮತ್ತಷ್ಟು ಅಪಾಯ ಕಟ್ಟಿಟ್ಟ ಬುತ್ತಿ. ಒಣಗಿದ ಕಣ್ಣುಗಳ ತೊಂದರೆಯಿರುವ ಜನರು ಯಾವಾಗಲೂ ಹೆಚ್ಚಿನ ಕಿರಿಕಿರಿ, ತುರಿಕೆ ಹಾಗೂ ಮಳೆಗಾಲದಲ್ಲಿ ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು ಮುಂತಾದ ತೊಂದರೆ ಅನುಭವಿಸುತ್ತಾರೆ.
ದೀರ್ಘ ಸಮಯದ ಓದು, ಕಂಪ್ಯೂಟರ್ ಬಳಕೆ ಅಥವಾ ಟಿವಿ ವೀಕ್ಷಿಸುವಾಗ ಈ ತೊಂದರೆ ಮತ್ತಷ್ಟು ಹೆಚ್ಚಾಗುತ್ತದೆ. ಕಣ್ಣುಗಳಲ್ಲಿ ತೇವವನ್ನು ಹೆಚ್ಚಿಸುವ ಚಿಕಿತ್ಸೆಯನ್ನು ಯಾವುದೇ ಉತ್ತಮ ನೇತ್ರ ಚಿಕಿತ್ಸಾಲಯದಲ್ಲಿ ಪಡೆದು ಈ ತೊಂದರೆಯಿಂದ ಮುಕ್ತರಾಗಬಹುದು.
ಸೋಂಕು ಸೋಂಕದಿರಲಿ
ಸ್ಪೈ ಐ ಅಥವಾ ಹೊರ್ಡಿಲಮ್ ಎನ್ನುವ ಕಣ್ಣಿನ ಸೋಂಕು ಮಳೆಗಾಲದಲ್ಲಿ ಕಾಮನ್. ಕಣ್ಣು ರೆಪ್ಪೆಯ ಮೇಲಿರುವ ಕೆಲವು ಗ್ರಂಥಿಗಳಲ್ಲಿ ಕಾಣಿಸುವ ಸೋಂಕಿನಿಂದ ಇದು ಕಾಣಿಸಿಕೊಳ್ಳುತ್ತದೆ. ಉತ್ತಮ ಗುಣಮಟ್ಟದ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಬೆಚ್ಚಗಿನ ಬಟ್ಟೆ ಅಥವಾ ಶಾಖಚೀಲಗಳಿಂದ ಆಗಾಗ ಕಣ್ಣಿಗೆ ಶಾಖ ಕೊಟ್ಟುಕೊಳ್ಳುವುದರಿಂದ ಈ ಸೋಂಕಿಗೆ ತುಸು ಮಟ್ಟಿಗಿನ ಉಪಶಮನ ಸಿಗುತ್ತದೆ. ಆದರೂ ಕಮ್ಮಿ ಆಗದೇ ಹೋದಲ್ಲಿ ನೇತ್ರ ತಜ್ಞರನ್ನು ಭೇಟಿಯಾಗಲೇಬೇಕು.
ಮಳೆಗಾಲದಲ್ಲಿ ವಾಹನ ಚಲಿಸುವಾಗ ಗ್ರಹಣಶಕ್ತಿ ಕಡಿಮೆಯಿರುತ್ತದೆ. ಅದರಲ್ಲಿಯೂ ರಾತ್ರಿ ವಾಹನ ಚಲಾಯಿಸುವುದು ಗ್ರಹಣಶಕ್ತಿಯನ್ನು ಇನ್ನೂ ದುರ್ಬಲಗೊಳಿಸುತ್ತದೆ. ಮಳೆಯಿಂದ ಕಾರಿನೊಳಗಿನಿಂದ ರಸ್ತೆಯನ್ನು ಗ್ರಹಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದರಿಂದ ಹೆಡ್‌ಲೈಟುಗಳಾಗಲಿ ಅಥವಾ ಇತರೆ ಯಾವ ಬೆಳಕಿನ ಮೂಲಗಳೇ ಆಗಲಿ ರಸ್ತೆಯ ಮೇಲೆ ವಸ್ತುಗಳನ್ನು ಸ್ಪಷ್ಟವಾಗಿ ಕಾಣಿಸುವಲ್ಲಿ ಪರಿಣಾಮಕಾರಿಯಾಗದೆ ಪ್ರತಿಫಲನ ಸಾಮರ್ಥ್ಯವನ್ನು ಮಸಕಾಗಿಸುತ್ತವೆ.
ಇದರಿಂದ ರಸ್ತೆ ಫಲಗಳು, ರಸ್ತೆ ದಾಟುವವರು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಕ್ಯಾಟರ್ಯಾಕ್ಟ್ ಮತ್ತು ಕಾಲಕಾಲಕ್ಕೆ ಚಿಕಿತ್ಸೆಗೊಳಪಡದೆ ಕನ್ನಡಕವನ್ನು ಉಪಯೋಗಿಸುವವರಲ್ಲಿ ಇದು ಇನ್ನೂ ಹೆಚ್ಚಿನ ತೊಂದರೆಗೆ ಕಾರಣವಾಗುತ್ತದೆ. ಕಣ್ಣಿನ ತೊಂದರೆಗಳನ್ನು ನಿವಾರಿಸಿಕೊಳ್ಳಲು, ನಿಮ್ಮ ಕನ್ನಡಕದ ಗ್ಲಾಸಿನ ನಂಬರ್ ಹೆಚ್ಚು ಅಥವಾ ಕಡಿಮೆ ಆಗಿದೆ ಎಂಬುದನ್ನು ಕಂಡುಕೊಳ್ಳಲು ಅಥವಾ ಕ್ಯಾಟರ್ಯಾಕ್ಟ್ ತೊಂದರೆಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮಳೆಯಲ್ಲಿ ಜೊತೆಯಲ್ಲಿ
ಮಳೆಗಾಲದಲ್ಲಿ, ಧೂಳು ಹೆಚ್ಚಿರುವುದರಿಂದ ತಂಪು ಕನ್ನಡಕಗಳನ್ನು ಬಳಸಿ.
ವೈಯಕ್ತಿಕ ತ್ವಚೆಯೆಡೆಗೆ ಹೆಚ್ಚು ಗಮನ ಹರಿಸಿ.
ಕಣ್ಣನ್ನು ಪದೆ ಪದೇ ಸ್ಪರ್ಶಿಸಿಕೊಳ್ಳಬೇಡಿ.
ಕೈಗಳ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ.
ಸೋಂಕು ಹರಡುವ ಕಾರಣ ಟವೆಲ್ ಅಥವಾ ಬೆಡ್ ಶೀಟ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.
-ಡಾ.ಕೌಶಿಕ್ ಮುರಳಿ, ಶಂಕರ ಕಣ್ಣಿನ ಆಸ್ಪತ್ರೆ