ಉಪ್ಪುತಕ್ಕಡಿ: ಉಪ್ಪು ತಿಂದ ಮೇಲೆ ನೀರ ಕುಡಿಯಲೇಬೇಕು!
ಅತಿಯಾಗಿ ಉಪ್ಪು ಸೇವಿಸುವುದರಿಂದ ಬೀಪಿ ಒಂದೇ ಹೆಚ್ಚಾಗುವುದಿಲ್ಲ, ಉಪ್ಪಿನ ಸೇವನೆಗೂ ಪಾರ್ಶ್ವವಾಯುವಿಗೂ (ಸ್ಟ್ರೋಕ್) ಅತಿ ಹತ್ತಿರದ ಸಂಬಂಧವಿದೆ. ಅಲ್ಲದೆ, ಕಿಡ್ನಿಗೆ ಹಾನಿಯಾಗುವುದು, ಹೃದಯದ ಎಡ ಕವಾಟ ದೊಡ್ಡದಾಗುವುದು ಕಂಡು ಬರುತ್ತದೆ.
ಇಲ್ಲಿ ಓದುಗರ ಎರಡು ಪ್ರಶ್ನೆಗಳನ್ನು ಚರ್ಚಿಸುವೆ.
ನನಗೆ ಬೀಪಿ ಇದೆ. ನಾನು ಯಾವ ಬಗೆಯಲ್ಲಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ?
-ಕೆ.ಪಿ. ರಾವ್, ಮುಂಬಯಿ
ಉತ್ತರ: ಮುಖ್ಯವಾಗಿ ನಾಲ್ಕು ಹೆಜ್ಜೆಗಳಿವೆ.
1. ತೂಕ ಹೆಚ್ಚಿದ್ದಲ್ಲಿ ಕಡಿಮೆ ಮಾಡಿ.
2. ಉಪ್ಪು ಕಡಿಮೆ ಸೇವಿಸಿ
3. ವ್ಯಾಯಾಮ ಮಾಡಿ
4. ಮದ್ಯ ಸೇವಿಸುತ್ತಿದ್ದಲ್ಲಿ ಕಡಿಮೆ ಮಾಡಿ
ಒಂದು ಕೇಜಿ ತೂಕ ಕಡಿಮೆ ಆದಲ್ಲಿ ನಿಮ್ಮ ಬೀಪಿ ಒಂದು ಮಿ.ಮೀ.ನಷ್ಟು ಕಡಿಮೆ ಆಯಿತು ಎಂದರ್ಥ. ಒಂದು ವೇಳೆ 10 ಕೇಜಿ ಕಳೆದುಕೊಂಡಲ್ಲಿ 10 ಮಿಮೀ ಕಡಿಮೆ ಆಗಿದೆ ಎನ್ನಬಹುದು. ಇದೆಲ್ಲವೂ ಸಂಶೋಧನೆಗಳಿಂದ ತಿಳಿದು ಬಂದಿರುವಂಥವು. ಬೀಪಿ ಕಂಟ್ರೋಲ್ ಅಲ್ಲದೆ ತೂಕ ನಿಯಂತ್ರಣದಿಂದ ಹಲವಾರು ಪ್ರಯೋಜನಗಳಿವೆ. ಉತ್ತಮ ಬೀಪಿ ನಿಯಂತ್ರಣ, ಕೊಲೆಸ್ಟರಾಲ್ ಮಟ್ಟದ ನಿಯಂತ್ರಣ, ಮೆಟ್ಟಿಲೇರುವಾಗ ಉಬ್ಬಸ ಇರದು, ಮಂಡಿಯೂ ಶಕ್ತಿಯುತವಾಗಿರುವುದು.
ಉಪ್ಪಿನ ಸೇವನೆಯ ಬಗ್ಗೆ ಹೇಗೆ ನಿಗಾ ವಹಿಸುವುದು ಎಂದು ವಿವರಿಸುವುದು ಸ್ವಲ್ಪ ಕ್ಲಿಷ್ಟಕರ. ಹೈ ಬೀಪಿ ಇರುವವರಲ್ಲಿ ಮೂರಕ್ಕೆ ಒಂದರಷ್ಟು ಮಂದಿ 'ಸಾಲ್ಟ್ ಸೆನ್ಸಿಟಿವ್' ಇರುತ್ತಾರೆ. ಹೀಗೆಂದರೆ ಉಪ್ಪು ಕಡಿಮೆ ಸೇವಿಸಿದಾಗ ಅವರಲ್ಲಿ ಬೀಪಿ ಕಡಿಮೆ ಆಗಿದೆ ಎಂಬ ಅನುಭವ ಉಂಟಾಗುವುದು. ಇದರರ್ಥ ಇನ್ನುಳಿದ ಮೂರನೇ ಎರಡರಷ್ಟು ಮಂದಿ 'ಸಾಲ್ಟ್ ಸೆನ್ಸಿಟಿವ್ ಅಲ್ಲ' ಎಂದು. ಇದು ದುರದೃಷ್ಟದ ಸಂಗತಿ. ಅಂದರೆ ಉಪ್ಪು ಕಡಿಮೆ ಸೇವಿಸಿದರೂ ಅವರಲ್ಲಿ ಬೀಪಿಯಲ್ಲಿ ಏನೂ ಬದಲಾವಣೆ ಆಗುವುದಿಲ್ಲ! 60 ವರ್ಷ ದಾಟಿದವರು, ಬೊಜ್ಜಿರುವವರು, ಡಯಾಬಿಟಿಸ್ ಮತ್ತು ಕಿಡ್ನಿ ಫೇಲ್ಯೂರ್ ಇರುವವರು 'ಸಾಲ್ಟ್ ಸೆನ್ಸಿಟಿವ್' ಆಗಿರುತ್ತಾರೆ- ಅಂದರೆ ಉಪ್ಪಿನ ನಿಯಂತ್ರಣ ಮಾಡಿದಲ್ಲಿ ಇವರ ಬೀಪಿ ಖಂಡಿತ ಕಡಿಮೆಯಾಗುತ್ತದೆ!
ನನ್ನ ಸ್ನೇಹಿತರೊಬ್ಬರು ವ್ಯಾಯಾಮದ ಕುರಿತು ತಮಾಷೆ ಮಾಡುತ್ತಿರುತ್ತಾರೆ, 'ಯಾರೂ ಅಟ್ಟಿಸಿಕೊಂಡು ಬರದಿದ್ದಾಗಲೂ ಓಡುತ್ತಿರುವುದು ಮತ್ತು ಇನ್ನೊಂದು ಕಡೆ ಸಾಗಿಸಬೇಕಾದ ಅವಶ್ಯಕತೆ ಇರದಿದ್ದರೂ ವಸ್ತುವನ್ನು ಎತ್ತುವುದು' ಎಂದು. ವ್ಯಾಯಾಮದ ಬಗ್ಗೆ ನಮ್ಮಲ್ಲನ್ನೇಕರಿಗೆ ಈ ಬಗೆಯ ಅಸಡ್ಡೆ ಇದೆ. ಆದರೆ ವ್ಯಾಯಾಮದಿಂದ ಸಿಕ್ಕಾಪಟ್ಟೆ ಅನುಕೂಲ ಇದೆ. ನೀವು ಒಂದು ಗಂಟೆಯಷ್ಟು ತೀವ್ರವಾದ ವ್ಯಾಯಾಮವೇನೂ ಮಾಡಬೇಕಿಲ್ಲ. ದಿನಕ್ಕೆ 20 ರಿಂದ 30 ನಿಮಿಷದ ಬ್ರಿಸ್ಕ್ ವಾಕ್ (ವೇಗದ ನಡಿಗೆ) ಮಾಡಿದರೂ ಸಾಕು. ಈ ಬಗೆಯ ಸಾಧಾರಣ ವ್ಯಾಯಾಮ ಬೀಪಿಯನ್ನು ತಕ್ಕಮಟ್ಟಿಗೆ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟರಾಲ್ (ಟ್ರೈಗ್ಲಿಸರೈಡ್) ನಿಯಂತ್ರಿಸುತ್ತ, ಒಳ್ಳೆಯ ಕೊಲೆಸ್ಟರಾಲ್ (ಎಚ್‌ಡಿಎಲ್) ಹೆಚ್ಚು ಮಾಡುತ್ತದೆ. ಅದಲ್ಲದೆ ನಿಯಮಿತ ವ್ಯಾಯಾಮವು ತೂಕವನ್ನು ಕಡಿಮೆ ಮಾಡುವುದರಿಂದ ಡಯಾಬಿಟಿಸ್ ಬರುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ತೂಕ ಹೆಚ್ಚಾದಲ್ಲಿ ಡಯಾಬಿಟಿಸ್ ಸಾಧ್ಯತೆ ಹೆಚ್ಚು. ಡಯಾಬಿಟಿಸ್ ಮತ್ತು ಬೀಪಿ ಇವೆರಡೂ 'ಬಿಲ್ಲಾ ರಂಗ' ಇದ್ದಂತೆ. ಈ ಗ್ಯಾಂಗ್‌ಸ್ಟರ್‌ಗಳು ಒಬ್ಬರೇ ಇದ್ದರೂ ಅಪಾಯ, ಇಬ್ಬರಿದ್ದರಂತೂ ಕೇಳಲೇಬೇಡಿ. ಡಯಾಬಿಟಿಸ್ ಇದ್ದಾಗ ಅಧಿಕ ರಕ್ತದೊತ್ತಡದ ಸಾಧ್ಯತೆ ಡಬ್ಬಲ್ ಆಗುತ್ತದೆ.
ಉಪ್ಪು ಹೆಚ್ಚು ಸೇವಿಸಿದಾಗ ಬೀಪಿ ಹೆಚ್ಚಾಗುತ್ತದೆಯೆ ಸರ್?
- ಶುಭದಾ, ಹುಬ್ಬಳ್ಳಿ
ಉತ್ತರ: ಬೀಪಿ ಇರುವವರು ಹೆಚ್ಚು ಉಪ್ಪು ಸೇವಿಸಿದಲ್ಲಿ ಅದು ಬೆಂಕಿಯ ಮೇಲೆ ಪೆಟ್ರೋಲ್ ಸುರಿದಂತೆ. ಆದರೆ ಎಷ್ಟು ಉಪ್ಪು ಸೇವಿಸಿದಲ್ಲಿ ಸುರಕ್ಷಿತ? ದಿನಕ್ಕೆ 2400 ಮಿ ಗ್ರಾಂ ಎನ್ನುತ್ತದೆ ವೈದ್ಯಕೀಯ ಶಾಸ್ತ್ರ. ಉಪ್ಪಿನಲ್ಲಿರುವುದು ಸೋಡಿಯಂ ಕ್ಲೋರೈಡ್ ಎಂಬ ಲವಣಾಂಶ. ಸೋಡಿಯಂ ಎನ್ನುವುದು ತಂಡದ ಅರ್ಧ ಭಾಗವಾದಲ್ಲಿ, ಕ್ಲೋರೈಡ್ ಇನ್ನೊಂದರ್ಧ.
ಉಪ್ಪಿನ ನಿಯಂತ್ರಣಕ್ಕೆ ಕೆಲವು ಸೂತ್ರಗಳನ್ನು ಇಲ್ಲಿ ಹೇಳುವೆ.
1. ಅತಿ ಪರಿಣಾಮಕಾರಿಯಾದ ಸೂತ್ರ ಎಂದರೆ- ಮನೆಯಲ್ಲಿಯೇ ಊಟ ಮಾಡುವುದು ಅಥವಾ ನಿಮ್ಮ ಮನೆಯಲ್ಲಿಯೇ ಅಡಿಗೆ ಸಿದ್ಧ ಮಾಡುವುದು. ಅಂದರೆ, ಫಾಸ್ಟ್‌ಫುಡ್‌ಗಳನ್ನು ತಿರಸ್ಕರಿಸುವುದು!
2. ನಿಮ್ಮ ಮನೆಯಲ್ಲಿರುವ ಉಪ್ಪಿನ ಪುಟ್ಟ ಜಾಡಿಯನ್ನು ನಿಮ್ಮ ಊರಿನ ಕೆರೆಯಲ್ಲಿ ಬಿಸುಡಿದರೂ ಪರವಾಗಿಲ್ಲ!
3. ಹೈಪರ್‌ಟೆನ್ಷನ್ ಇರುವ ಎಲ್ಲರೂ ಜೀವನಶೈಲಿಯಲ್ಲಿ ಸರಳ ಬದಲಾವಣೆ ಮಾಡಿಕೊಳ್ಳುವುದು ಅತಿಮುಖ್ಯ.
ಅಂಗಾಂಶಗಳು ಸರಿಯಾಗಿ ಕೆಲಸ ಮಾಡಲಿಕ್ಕೆ ದಿನಕ್ಕೆ 1.25 ಗ್ರಾಂ ಮಾತ್ರ ಉಪ್ಪು ಅವಶ್ಯ. ಆದರೆ ಉಪ್ಪಿನಕಾಯಿಯಂಥಹ ಆಹಾರದಿಂದ ನಿಮಗೆ ಹೈ ಸಾಲ್ಟ್ ಸಿಕ್ಕಿ ಅಪಾಯವಾಗುತ್ತದೆ.
ಉಪ್ಪಿನ ಬದಲು ಇವನ್ನು ಬಳಸಿ
ಟೊಮ್ಯಾಟೊ ಜೊತೆ: ಬೆಳ್ಳುಳ್ಳಿ, ಈರುಳ್ಳಿ, ಕೊತ್ತಂಬರಿ, ತುಳಸಿ
ಕ್ಯಾರೆಟ್ ಜೊತೆ: ಕೊತ್ತಂಬರಿ, ಕಾಳು ಮೆಣಸು, ಈರುಳ್ಳಿ, ಟೊಮ್ಯಾಟೊ, ಮೆಣಸಿನ ಪುಡಿ
ಬೀನ್ಸ್ ಜೊತೆ: ಜಾಯ್‌ಕಾಯಿ, ದೊಡ್ಡಪತ್ರೆ, ಈರುಳ್ಳಿ, ಲಿಂಬೆ
ಆಲೂಗಡ್ಡೆ ಜೊತೆ: ಕೊತ್ತಂಬರಿ, ಈರುಳ್ಳಿ
ಮೀನಿನ ಜೊತೆ: ಲಿಂಬೆ, ಬೆಳ್ಳುಳ್ಳಿ, ತುಳಸಿ
ಮಾಂಸದ ಜೊತೆ: ದೊಡ್ಡಪತ್ರೆ, ಪುದಿನ, ಈರುಳ್ಳಿ, ಸಾಸಿವೆ, ಕೊತ್ತಂಬರಿ
ಹಂದಿಮಾಂಸದ ಜೊತೆ: ಕೊತ್ತಂಬರಿ, ದೊಡ್ಡಪತ್ರೆ, ಆಜ್‌ಮೋಲಾ ಎಲೆ, ಕರಿಬೇವಿನ ಎಲೆ
ಬೀಪಿ ಇರದಿದ್ದರೂ, ಇದ್ದರೂ ಉಪ್ಪನ್ನು ಮಿತವಾಗಿ ಸೇವಿಸಿದಷ್ಟು ಒಳ್ಳೆಯದು. ಇದಕ್ಕಾಗಿ ನಮ್ಮ ಆಹಾರದ ಆಯ್ಕೆಯೂ ಸರಿಯಾಗೇ ಇರಬೇಕು. ಇದಕ್ಕಾಗಿ ಇಲ್ಲಿ ಯಾವ ಆಹಾರ ಸೇವಿಸಬಹುದು, ಸೇವಿಸಬಾರದು ಎಂಬ ಪಟ್ಟಿ ಕೊಟ್ಟಿದ್ದೇವೆ.
ಇದನ್ನು ತಪ್ಪಿಸಿ (ಲೋ ಸಾಲ್ಟ್ ಡಯಟ್- ಕಡಿಮೆ ಉಪ್ಪಿನ ಸೇವನೆಗಾಗಿ)
1. ಟೇಬಲ್ ಸಾಲ್ಟ್
2. ಮಾಂಸ
ಕರಿದಿರುವ, ಉಪ್ಪು ಬೆರೆಸಿದ ಮಾಂಸ
ಹ್ಯಾಮ್ ಸಾಸೇಜ್‌ಗಳು
ಲುಂಚಿಆನ್ ಮೀಟ್(ಸ್ಲೈಸ್‌ನ ರೂಪದಲ್ಲಿರುವ ಮಾಂಸ)
3. ಮೀನು
ಉಪ್ಪು ಬೆರೆಸಿದ/ ಹಾಳಾಗದಂತೆ ರಕ್ಷಿಸಲ್ಪಟ್ಟ ಆಹಾರ
ಭೂತಾಯಿ (ಬೈಗೆ)
4. ಸ್ನ್ಯಾಕ್‌ಗಳು (ಕುರುಕಲು)
ಪೊಟ್ಯಾಟೊ ಚಿಪ್ಸ್
ಹುರಿದ ಶೇಂಗಾ (ಸಾಲ್ಟೆಡ್ ಪೀನಟ್ಸ್)
ಬಾದಾಮಿ
ಗೋಡಂಬಿ
ಉಪ್ಪು ಬೆರೆಸಿದ ಪಾಪ್‌ಕಾರ್ನ್
ಹುರಿದ ನಮ್‌ಕೀನ್ (ಸಮೋಸಾ,ಕಚೋರಿ)
5. ಡೈರಿ ಆಹಾರ
ಎಲ್ಲ ಬಗೆಯ ಚೀಸ್
ಹಸಿ ಹಾಲು
ಐಸ್‌ಕ್ರೀಮ್
ಉಪ್ಪು ಸೇರಿಸಿದ ಲಸ್ಸಿ
6. ತರಕಾರಿ
ಟೊಮ್ಯಾಟೊ ರಸ (ಕ್ಯಾನ್‌ನಲ್ಲಿಟ್ಟದ್ದು)
ಬೀನ್ಸ್ (ಫ್ರೀಜ್ ಮಾಡಿದ್ದು)
ಬಟಾಣಿ (ಫ್ರೋಜನ್)
ಸೊಪ್ಪು (ಕ್ಯಾನ್‌ನಲ್ಲಿಟ್ಟದ್ದು)
ಕ್ಯಾರಟ್ (ಕ್ಯಾನ್ ಆಗಿದ್ದಲ್ಲಿ)
ಉಪ್ಪು ಅತಿಯಾದ ಸಲಾಡ್
7. ಇತರೆ
ಅಡಿಗೆ ಸೋಡಾ
ಅಡಿಗೆ ಪೌಡರ್
ಉಪ್ಪು ಬೆರೆಸಿದ ಚಪಾತಿ
ಉಪ್ಪು ನಿಯಂತ್ರಿಸಬೇಕಾದವರು ಇದನ್ನು ತಿನ್ನಬಹುದು
1. ಹಣ್ಣು
ಆ್ಯಪಲ್
ಬಾಳೆಹಣ್ಣು
ಕರ್ಜೂರ
ದ್ರಾಕ್ಷಿ
ಕಲ್ಲಂಗಡಿ
ಒಣದ್ರಾಕ್ಷಿ
2. ಹಣ್ಣಿನ ರಸ
ಸೇಬಿನ ರಸ
ದ್ರಾಕ್ಷಿ ರಸ
ಫ್ಲಮ್ ಹಣ್ಣಿನ ರಸ
ಕಿತ್ತಳೆ ರಸ
3. ತರಕಾರಿ
ದಂಟಿನ ಸೊಪ್ಪು
ಬಾರ್ಲಿ
ಕ್ಯಾರೆಟ್
ಕ್ಯಾಬೇಜ್
(ಬೇಯಿಸಿದ್ದು)
ಜೋಳ
ಸೌತೆಕಾಯಿ
ಹೂಕೋಸು
(ಬೇಯಿಸಿದ್ದು)
ಬೀನ್ಸ್ (ಬೇಯಿಸಿದ್ದು)
ಡೊಣ್ಣ ಮೆಣಸಿನ ಕಾಯಿ
ಮಷ್ರೂಮ್
ಈರುಳ್ಳಿ
ಬಟಾಣಿ (ಬೇಯಿಸಿದ್ದು)
ಆಲೂಗಡ್ಡೆ (ಬೇಯಿಸಿದ್ದು/ ಕುದಿಸಿದ್ದು)
ಸೊಪ್ಪು
ಟೊಮ್ಯಾಟೊ
ನವಿಲುಕೋಸು
ಉಪ್ಪು ಬೆರೆಸದ ಫ್ರೋಜನ್ (ಶೀತಲೀಕರಿಸಿದ ತರಕಾರಿ)
4. ಮಾಂಸ
ಚಿಕನ್
ಲಿವರ್
5. ತಾಜಾ ಮೀನು
6. ಸಿರಿಯಲ್‌ಗಳು
ಬ್ರೆಡ್ ಅಥವಾ ಚಪಾತಿ- ಉಪ್ಪಿರದೆ ಮಾಡಿದ್ದು
ಅಥವಾ ಸೋಡಿಯಂ ಇರದ ಅಡಿಗೆ ಸೋಡಾದಿಂದ ಮಾಡಿದ್ದು
7. ಡೈರಿ ಉತ್ಪನ್ನ
ಕೊಬ್ಬಿರದ ಹಾಲು
ಸ್ಕಿಮ್ ಮಿಲ್ಕ್
8. ಪಾನೀಯ
ಕಾಫಿ ಮತ್ತು ಟೀ
ನಿಂಬೆರಸ
9. ಮಸಾಲೆ
ಬೆಳ್ಳುಳ್ಳಿ
ಕಾಳು ಮೆಣಸು
ಉಪ್ಪಿರದ ಎಲ್ಲ ಮಸಾಲೆಗಳು
-ಡಾ. ಸಿ.ಎನ್. ಮಂಜುನಾಥ್
ನಿರ್ದೇಶಕರು , ಜಯದೇವ ಹೃದ್ರೋಗ ಸಂಸ್ಥೆ
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40519ಗೆ ಭೇಟಿನೀಡಿ.