ಆರೋಗ್ಯ-ಜೀವನಶೈಲಿ

ಮೈಗ್ರೇನ್ ಆಗಮನ

ಮಂದ ಬೆಳಕಿನಲ್ಲೂ ಕಣ್ಣು ಬಿಡಲು ಆಗದಂಥ ನೋವು. ಸಣ್ಣಪುಟ್ಟ ಶಬ್ದಗಳೂ ಕರ್ಕಶವಾಗಿ ಕಿರಿಕಿರಿ ಅನುಭವ. ತಡೆಯಲಾಗದ ವಾಕರಿಕೆ. ಒಮ್ಮೊಮ್ಮೆ ವಾಂತಿಯ ಹಂತವನ್ನೂ ಮುಟ್ಟುತ್ತದೆ. ಸತ್ತೇ ಹೋದೆ ಎನ್ನುವ ಭಾವನೆ ಮೂಡಿಸುವ ತಲೆನೋವು. ಎಂಥವರನ್ನೂ ನಡುಗಿಸಿ ಬಿಡುತ್ತದೆ. ಅದೇ ಮೈಗ್ರೇನ್ ಅಂದರೆ ಅರ್ಧ ತಲೆನೋವು.
ಮೈಗ್ರೇನ್ ಬರುವುದನ್ನು ಮುಂಚಿತವಾಗಿಯೇ ನೀವು ಕಂಡುಕೊಳ್ಳಬಹುದು. ಚಂಚಲ ಮನಸ್ಥಿತಿ, ಕಿರಿಕಿರಿ ಉಂಟಾಗುವಿಕೆ, ಖಿನ್ನತೆ ಅಥವಾ ಸುಖ ಭ್ರಮಾಧೀನತೆ, ಆಯಾಸ, ಆಕಳಿಕೆ, ಮಿತಿಮೀರಿದ ತೂಕಡಿಕೆ, ನಿರ್ದಿಷ್ಟ ಆಹಾರಕ್ಕಾಗಿ ಹಪಹಪಿಸುವುದು (ಉದಾ: ಚಾಕೋಲೇಟ್), ಸ್ನಾಯು ಬಿಗಿತ(ವಿಶೇಷವಾಗಿ ಕತ್ತಿನಲ್ಲಿ), ಮಲಬದ್ಧತೆ ಅಥವಾ ಭೇದಿ, ಅಧಿಕ ಮೂತ್ರ ವಿಸರ್ಜನೆ ಮೊದಲಾದ ಲಕ್ಷಣಗಳು ಕಂಡ ಕೆಲವು ಗಂಟೆಗಳ ಒಳಗಾಗಿ ಅಥವಾ ಒಂದು ದಿನದ ಒಳಗೆ ಸಾಮಾನ್ಯವಾಗಿ ಮೈಗ್ರೇನ್ ದಾಳಿ ಮಾಡುತ್ತದೆ.
ಮೈಗ್ರೇನ್ ಒಂದು ನರವೈಜ್ಞಾನಿಕ ರೋಗಲಕ್ಷಣ. ದೈಹಿಕ ಗ್ರಹಿಕೆಯನ್ನು ವ್ಯತ್ಯಸ್ತಗೊಳಿಸುವ ಇದು ವಿಪರೀತ ತಲೆನೋವು ಮತ್ತು ವಾಕರಿಕೆಗಳನ್ನು ಉಂಟು ಮಾಡುತ್ತದೆ. ಎಲ್ಲ ತಲೆನೋವುಗಳೂ ಮೈಗ್ರೇನ್ ಅಲ್ಲ ಎಂಬುದು ಅವಶ್ಯ ಗಮನಿಸಬೇಕಾದ ಅಂಶ. ಏಕೆಂದರೆ ತಲೆನೋವು, ತಲೆ ಸಿಡಿತಗಳು ಎಲ್ಲರನ್ನೂ ಒಂದಿಲ್ಲೊಂದು ಸಮಯದಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳು. ಚಿಂತೆ, ಒತ್ತಡ, ಮಿತಿಮೀರಿದ ಕೆಲಸ, ಶಬ್ದಮಾಲಿನ್ಯಗಳಿಂದಾಗಿ ತಲೆನೋವು ಉಂಟಾದರೂ ಆ ಕಾರಣಗಳು ಮತ್ತು ಸನ್ನಿವೇಶಗಳು ದೂರವಾದೊಡನೆ ತಲೆನೋವು ಹೊರಟು ಹೋಗುತ್ತದೆ. ಆದರೆ ಮೈಗ್ರೇನ್ ಮಾತ್ರ ಇದ್ದು ಹೋಗುವ ಅತಿಥಿ ಅಲ್ಲ, ಬೇಡವೆಂದರೂ ಉಳಿದು ಕಾಟ ಕೊಡುವ ನೆಂಟರಂತೆ ಕಾಡುತ್ತದೆ. ಏಕಾಗ್ರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.ಙ ಮೈಗ್ರೇನ್ ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ. ಆದರೆ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪವೇ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಮೈಗ್ರೇನ್‌ನಿಂದ ಬಚಾವಾಗಬಹುದು.
ಮಹಿಳೆಯರಲ್ಲೇ ಹೆಚ್ಚು
ಮೈಗ್ರೇನ್ ಪುರುಷರಿಗಿಂತ ಮಹಿಳೆಯರಲ್ಲಿ ಮೂರುಪಟ್ಟು ಹೆಚ್ಚಾಗಿಯೇ ಕಂಡುಬರುತ್ತದೆ. ಹರೆಯಕ್ಕೆ ಮೊದಲು ಹುಡುಗರಲ್ಲಿ ಹುಡುಗಿಯರಿಗಿಂತ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಮೈಗ್ರೇನ್ ಕಂಡುಬರುತ್ತದೆ. ಹರೆಯಕ್ಕೆ ಬಂದ ನಂತರ ಹೆಣ್ಣುಮಕ್ಕಳಲ್ಲಿ ಮೈಗ್ರೇನ್ ಹೆಚ್ಚಾಗುವುದರಿಂದ ಸ್ತ್ರೀ ಹಾರ್ಮೋನಿಗೂ ಮೈಗ್ರೇನಿಗೂ ಸಂಬಂಧವಿರುವುದು ದೃಢಪಟ್ಟಿದೆ. ಮಹಿಳೆಯರಿಗೆ ಮೈಗ್ರೇನ್ ಬರುವ ಸಾಧ್ಯತೆಗಳೆಂದರೆ ಮೈನೆರೆಯುವ ಸಮಯ, ಪ್ರತಿ ತಿಂಗಳು ಋತುಚಕ್ರದ ಆರಂಭದಲ್ಲಿ, ಗರ್ಭನಿರೋಧಕ ಗುಳಿಗೆ, ಗರ್ಭಾವಸ್ಥೆಯ ಆರಂಭದ ಹಂತ, ಹೆರಿಗೆಯ ನಂತರ, ಮೆನೋಪಾಸ್‌ನ ಆಸುಪಾಸು, ಹಾರ್ಮೋನಿನ ಚಿಕಿತ್ಸೆಯ ಅವಧಿ. ಸಾಧಾರಣ ಮೈಗ್ರೇನ್‌ಗೂ ಮುಟ್ಟಿನ ಮೈಗ್ರೇನ್‌ಗೂ ಇರುವ ವ್ಯತ್ಯಾಸವೆಂದರೆ ಮುಟ್ಟಿನ ಮೈಗ್ರೇನ್ ಮುಟ್ಟಿನ ಸಮಯದಲ್ಲಿ ಬರುತ್ತದೆ. ಕುಸಿಯುತ್ತಿರುವ ಈಸ್ಟ್ರೋಜಿನ್ ಮಟ್ಟ ಇದನ್ನು ಪ್ರಚೋದಿಸುತ್ತದೆ. ಈ ತರಹದ ತಲೆನೋವಿನಿಂದ ಬಳಲುವವರು ಋತುಚಕ್ರಕ್ಕೆ 5 ದಿನ ಮುಂಚಿನಿಂದ ನೋವು ನಿವಾರಕ ಮಾತ್ರೆಗಳನ್ನು ಆರಂಭಿಸಿ ಋತುಸ್ರಾವ ನಿಲ್ಲುವವರೆಗೂ ತೆಗೆದುಕೊಳ್ಳುವುದು ಒಳ್ಳೆಯದು ಎನ್ನುವುದು ವೈದ್ಯರ ಅಭಿಪ್ರಾಯ.

ಆಧುನಿಕತೆಯ ಕೊಡುಗೆ
ಆಧುನಿಕ ಬದುಕಿನ ರೀತಿ-ನೀತಿ, ನೋವು-ನಲಿವುಗಳೇ ಹಾಗೆ. ಎತ್ತ ನೋಡಿದರೂ ಜೀವನಶೈಲಿಯ ಅವಿಭಾಜ್ಯ ಅಂಗವೇ ಆಗಿಹೋಗಿರುವ ವೇಗ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗಿಂತ ಮುಂದಿರಲು ವಿಶ್ರಾಂತಿಯನ್ನು ಕಡೆಗಣಿಸಿ ನಿರಂತರ ದುಡಿಮೆ, ಅದರಿಂದ ಅಂಟಿಕೊಳ್ಳುವ ಒತ್ತಡ, ಅನಿಯಮಿತ ಆಹಾರ ಸೇವನೆ ಹಾಗೂ ಅನಾರೋಗ್ಯಕರ ಜಂಕ್‌ಫುಡ್ ಸೇವನೆ, ಖಾಸಗಿ ಬದುಕಿನ ಹೊಂದಾಣಿಕೆ ಕೊರತೆ ಇವುಗಳು ನೀಡುವ ಉಡುಗೊರೆಯೇ ಅನೇಕ ಮನೋದೈಹಿಕ ಸಮಸ್ಯೆಗಳು. ಅದರಲ್ಲಿ ಮೈಗ್ರೇನ್‌ಗೆ ಅತ್ಯುನ್ನತ ಸ್ಥಾನ. ಇತ್ತೀಚಿನ ದಿನಗಳಲ್ಲಿ ಮೈಗ್ರೇನ್‌ನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸಾಫ್ಟ್‌ವೇರ್ ಮತ್ತು ಕಾರ್ಪೊರೇಟ್ ವಲಯದ ಉದ್ದಿಮೆಗಳಲ್ಲಿನ ತೀವ್ರ ಸ್ಪರ್ಧೆಯ ಒತ್ತಡದ ಬದುಕಿನಿಂದ ಮೈಗ್ರೇನ್ ಉದ್ಯೋಗಿಗಳನ್ನು ಪ್ರಮುಖವಾಗಿ ಕಾಡುತ್ತಿದೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ತಿಳಿದು ಬಂದಿದೆ.
ಮೈಗ್ರೇನ್ ತಡೆಯುವ ಮಾರ್ಗಗಳು
    ಮೈಗ್ರೇನ್ ಉಂಟು ಮಾಡುವ ಕಾರಣ ಮತ್ತು ಪ್ರಚೋದಕಗಳನ್ನು ಮೊದಲು ಗುರುತಿಸಿ. ಒಬ್ಬೊಬ್ಬರಿಗೆ ಒಂದೊಂದು ರೀತಿಯಿಂದ ಮೈಗ್ರೇನ್ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿಮಗೆ ಯಾವುದು ಮೂಲ ಕಾರಣ ಎಂಬುದನ್ನು ಮೊದಲು ತಿಳಿದುಕೊಳ್ಳಿ.
    ಮೈಗ್ರೇನ್ ಪ್ರಚೋದಿಸುವ ಅಂಶಗಳಿಂದ ನಿಮ್ಮನ್ನು ದೂರವಿರಿಸಿಕೊಳ್ಳಲು ಪ್ರಯತ್ನಿಸಿ. ಕೆಲವು ಆಹಾರ, ಶಬ್ದ, ಸುಗಂಧಗಳೂ ಕೂಡ ಮೈಗ್ರೇನ್‌ಗೆ ಕಾರಣವಾಗಬಹುದು. ಇವುಗಳಿಂದ ತಪ್ಪಿಸಿಕೊಂಡರೆ ಮೈಗ್ರೇನ್ ತಲೆ ಹತ್ತುವುದನ್ನು ತಡೆಯಬಹುದು.
    ಸೂರ್ಯನ ಬಿಸಿಲಿನಲ್ಲಿ ತಿರುಗಾಡುವುದರಿಂದ ಬೇಗನೆ ಮೈಗ್ರೇನ್ ದಾಳಿಗೆ ಒಳಗಾಗಬಹುದು. ಇದನ್ನು ಹೊರತುಪಡಿಸಿ, ವಾಯುಭಾರ ಒತ್ತಡ, ಅತಿಯಾದ ತಾಪಮಾನ ಮತ್ತು ಉಷ್ಣಾಂಶ ಮೈಗ್ರೇನ್‌ಗೆ ಕೆಲವು ಸಾಮಾನ್ಯ ಕಾರಣಗಳು. ಸೂರ್ಯನ ಬಿಸಿಲಿನಲ್ಲಿ ತಿರುಗಾಡದೆ ಇರುವುದು ಉತ್ತಮ. ಹೊರಗೆ ಹೋಗುವ ಅಗತ್ಯವಿದ್ದರೆ ಆಗ ಛತ್ರಿ ಬಳಸಿ ಅಥವಾ ತಲೆಯನ್ನು ಸುತ್ತುವರಿಯುವಂತೆ ಸ್ಕ್ರಾಪ್ ಹಾಕಿ.
=     ಕೆಲಸಕ್ಕೆ ಹೋಗುವವರು ವಾರದ ಇತರ ದಿನಗಳಲ್ಲಿ ಕಡಿಮೆ ನಿದ್ರೆ ಮಾಡಿ ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡುವುದರಿಂದ ನಿದ್ರೆಯ ಆವರ್ತನಕ್ಕೆ ತೊಂದರೆಯಾಗುತ್ತದೆ. ಇದರ ಪರಿಣಾಮ ಬೊಜ್ಜು, ಮೈಕೈ ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಸುಮಾರು 6- 9 ಗಂಟೆಗಳ ನಿಯಮಿತ ನಿದ್ರೆ ನಿಮ್ಮದಾಗಲಿ.

ಲೈಫ್‌ಸ್ಟೈಲ್ ಬದಲಿಸಿಕೊಳ್ಳಿ
= ದಿನವೂ ಒಂದೇ ಸಮಯಕ್ಕೆ ಮಲಗುವುದು, ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. 7-8 ಗಂಟೆಯ ನೆಮ್ಮದಿ ನಿದ್ದೆ ನಿಮ್ಮದಾಗಲಿ. ಸರಿಯಾದ ಸಮಯಕ್ಕೆ ಊಟ ಮತ್ತು ಬೆಳಗ್ಗಿನ ತಿಂಡಿಯನ್ನು ಮುಗಿಸಿಬಿಡಿ.
= ಇತ್ತೀಚಿನ ಅಧ್ಯಯನದ ಪ್ರಕಾರ ದಿನದಲ್ಲಿ ಎರಡು ಕಪ್ ಕಾಫಿ, ಟೀ ಸೇವನೆ ಅಭ್ಯಾಸವಾಗಿರುವವರು ಸೇವನೆಯ ಕೆಲವು ಗಂಟೆಗಳ ಬಳಿಕ ಮತ್ತು ಅದನ್ನು ಸೇವಿಸದೆ ಇದ್ದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಕಾಫೀ, ಟೀ ಸೇವನೆಯನ್ನು ಕಡಿಮೆ ಮಾಡಿ.
= ದೀರ್ಘ ಸಮಯದವರೆಗೆ ಜೋರಾದ ಸಂಗೀತ ಕೇಳುವುದು ಮೈಗ್ರೇನ್ ದಾಳಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಜೋರಾದ ಸದ್ದಿನಿಂದ ಉಂಟಾಗುವ ತಲೆನೋವು 72 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಮೈಗ್ರೇನ್ ತಡೆಯಲು ಸಂಗೀತ ಕೇಳುವಾಗ ಶಬ್ದ ಕಡಿಮೆಯಿರಲಿ.
= ಸಕ್ಕರೆ ಮತ್ತು ಪಾಸ್ತಾವನ್ನು ಅತಿಯಾಗಿ ಸೇವನೆ ದೇಹದಲ್ಲಿ ಹೆಚ್ಚುವರಿ ಇನ್ಸುಲಿನ್ ಉತ್ಪಾದನೆಗೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ತಲೆನೋವಿಗೆ ಕಾರಣವಾಗಬಹುದು. ಆದ್ದರಿಂದ ತಿನ್ನುವ ಆಹಾರದ ಮೇಲೆ ನಿಮ್ಮ ನಿಗಾ ಇರಲಿ.
= ಒತ್ತಡವೂ ಮೈಗ್ರೇನ್‌ಗೆ ಮುಖ್ಯ ಕಾರಣ. ಒತ್ತಡ ನಿವಾರಣೆಗೆ ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಆಹ್ಲಾದಕರವಾಗಿರಿಸುತ್ತದೆ.
= ದಿನವೂ ಒಂದಿಷ್ಟು ವ್ಯಾಯಾಮ ನಿಮ್ಮದಾಗಿರಲಿ. ನಡಿಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ಮುಂತಾದುವುಗಳು ನಿಮ್ಮ ಒತ್ತಡ ಕಡಿಮೆ ಮಾಡುವುದರೊಂದಿಗೆ ದೇಹವನ್ನೂ ಚೈತನ್ಯದಿಂದ ಇರಿಸುತ್ತವೆ.

ಒತ್ತಡ ಕಡಿಮೆ ಮಾಡಿಕೊಳ್ಳಿ
= ಮೈಗ್ರೇನ್ ಕಾಣಿಸಿಕೊಂಡರೆ ತಲೆಸುತ್ತು ಕಾಣಿಸಿಕೊಳ್ಳಬಹುದು. ಆದ್ದರಿಂದ ಆಗಾಗ ವೈದ್ಯರನ್ನು ಕಂಡು ಅವರ ಸಲಹೆಯನ್ನು ತಪ್ಪದೆ ಪಾಲಿಸಬೇಕು.
= ಒಮ್ಮೆ ಮೈಗ್ರೇನ್ ಅಂತ ಗೊತ್ತಾದರೆ ನಂತರ ವೈದ್ಯರು ಸೂಚಿಸಿದ ಔಷಧಿಗಳನ್ನು ತಪ್ಪದೆ ಸೇವಿಸಬೇಕು. ಮನೆ ಮದ್ದು ಮಾಡದಿರುವುದು ಒಳ್ಳೆಯದು.
= ಒತ್ತಡವನ್ನು ಆದಷ್ಟು ಕಮ್ಮಿ ಮಾಡಬೇಕು.
= ಯೋಗ, ಪ್ರಾಣಯಾಮ, ಮುಂಜಾನೆ ಎದ್ದು ನಡೆಯುವುದು ಮಾಡುತ್ತಿದ್ದರೆ ಆರೋಗ್ಯಕ್ಕೆ ಒಳ್ಳೆಯದು.
= ಅಧಿಕ ಸುವಾಸನೆ ಇರುವ ಸುಗಂಧದ್ರವ್ಯವನ್ನು ಬಳಸಬಾರದು.
= ನೋವು ನಿವಾರಕ ಮಾತ್ರೆಗಳನ್ನು ತುಂಬಾ ಕಾಲದವರೆಗೆ ಸೇವಿಸುವುದನ್ನು ನಿಲ್ಲಿಸಬೇಕು.
= 16 ವರ್ಷದೊಳಗಿನ ಮಕ್ಕಳು ಅಸ್ಪಿರಿನ್ ಮಾತ್ರೆ ತೆಗೆದುಕೊಳ್ಳಬಾರದು. ಮೈಗ್ರೇನ್ ಪ್ರಾರಂಭವಾದಾಗಲೇ ಚಿಕಿತ್ಸೆ ಪ್ರಾರಂಭಿಸಿದರೆ ಚಿಕಿತ್ಸೆ ಸುಲಭವಾಗುವುದು.

- ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್