ಮಾನವನ ದೇಹದ ಅಂಗಗಳಲ್ಲಿ ಹಲ್ಲುಗಳಿಗೆ ಪ್ರಮುಖ ಸ್ಥಾನ. ಈ ಹಲ್ಲುಗಳು ಮಾನವನ ಜೀವಿತಾವಧಿಯಲ್ಲಿ ಎರಡು ಬಾರಿ ಮೂಡುತ್ತವೆ. ಒಂದು ಹಾಲು ಹಲ್ಲು, ಇನ್ನೊಂದು ಪ್ರೌಢ ಹಲ್ಲು. 6ನೇ ತಿಂಗಳಿನಿಂದ ಎರಡೂವರೆ ವರ್ಷದವರೆಗೆ ಹುಟ್ಟುವ ಹಾಲು ಹಲ್ಲುಗಳು 11-12 ವಯಸ್ಸಿನೊಳಗೆ ಉದುರಿ ಬಿಳುತ್ತವೆ. ಇನ್ನು ಕಾಯಂ ಹಲ್ಲುಗಳು 6ನೇ ವಯಸ್ಸಿನಿಂದ ಪ್ರಾರಂಭವಾಗಿ 14ನೇ ವಯಸ್ಸಿನೊಳಗೆ ಮೂಡುತ್ತವೆ.
ಇಂಥ ಹಲ್ಲುಗಳ ಆರೋಗ್ಯ-ಆರೈಕೆ ಪ್ರತಿದಿನವೂ ಮಾಡಲೇಬೇಕು. ನಿರ್ವಹಣೆಗಾಗಿ ಉತ್ತಮ ಆಹಾರವೂ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ಎಲ್ಲ ಪೌಷ್ಟಿಕಾಂಶ, ಅನ್ನಾಂಗ, ಜೀವಸತ್ವ ಸೇರಿರಬೇಕು. ಯಾವ ರೀತಿಯ ಆಹಾರದಿಂದ ಉತ್ತಮ ಹಲ್ಲುಗಳ ಆರೋಗ್ಯ ಕಾಪಾಡಬಹುದು ಎಂಬುದನ್ನು ತಿಳಿದಿರಬೇಕು. ಯಾವ ಆಹಾರದಿಂದ ದಂತಾರೋಗ್ಯಕೆಡುತ್ತದೆ ಎಂಬುದು ಗೊತ್ತಿರಬೇಕು.
ಸಾಮಾನ್ಯವಾಗಿ ಮಕ್ಕಳ ಆಹಾರ ಆಹಾರದ ಕ್ರಮ ತಿಳಿದಿದ್ದರೆ ಒಳಿತು. ಏಕೆಂದರೆ ಬೆಳವಣಿಗೆಯಾಗುವ ಕಾಯಂ ಹಲ್ಲುಗಳು ಉತ್ತಮ ಆಹಾರದಿಂದ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಹಾಲು ಹಲ್ಲುಗಳು ಮೂಡುವ ಸಮಯದಲ್ಲೂ ಮಗುವಿಗೆ ಗರ್ಭಾವಸ್ಥೆಯ ತಾಯಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕಾಗುತ್ತದೆ.
ಮಗುವು 6 ತಿಂಗಳಿನ ಭ್ರೂಣವಿರುವಾಗಲೇ ಅದರ ಹಾಲು ಹಲ್ಲು ಮೂಡುವಿಕೆ ಪ್ರಾರಂಭವಾಗುತ್ತದೆ. ಮಗುವಿನ ಜನನದ ಸಮಯದಲ್ಲಿ ಶೇ.83 ಹಲ್ಲಿನ ಮೇಲ್ಭಾಗದ ಎನಾಮೆಲ್ ಮೂಡಿರುತ್ತದೆ. ಆದ್ದರಿಂದ ಗರ್ಭಿಣಿಯರು ಕಡ್ಡಾಯವಾಗಿ ಸಂತುಲಿತ ಆಹಾರ ಸೇವಿಸಬೇಕು. ಇದರಿಂದ ತಾಯಿ -ಮಗು ಇಬ್ಬರ ದಂತಾರೋಗ್ಯವು ಕಾಪಾಡಬಹುದಾಗಿದೆ. ಬಾಯಿಯ ಜನ್ಮಜಾಢ್ಯ (ಜನನದಿಂದ ಬಂದ) ದೋಷಗಳಾದ ಸೀಳು-ತುಟಿ, ಸೀಳು ಅಂಗುಳೆ, ಹಲ್ಲು ಮೂಡದಿರುವುದು. ಮುಂತಾದ ಬಹಳಷ್ಟು ಪೌಷ್ಟಿಕಾಂಶದಿಂದಾಗುವ (ಕೊರತೆ) ದೋಷ-ಸಮಸ್ಯೆಗಳನ್ನು ತಡೆಗಟ್ಟಬಹುದು.
ತಾಯಂದಿರಿಗೆ ಸಲಹೆ
ಯಾವುದೇ ಕಾರಣಕ್ಕೂ ನೀವು ಬಳಸುವ ಬ್ರಷ್, ಎಂಜಲು ಮಾಡಿದ ಲೋಟ, ತಟ್ಟೆ, ನೀರು ಮಕ್ಕಳೊಂದಿಗೆ ಹಂಚಿಕೊಳ್ಳದಿರಿ (ತಾಯಿಯ ಹುಳುಕು ಹಲ್ಲು, ವಸಡು ರೋಗವಿದ್ದರೆ ಜೊಲ್ಲಿನ ಮೂಲಕ ಸೋಂಕು ಹರಡುವ ಸಾಧ್ಯತೆ ಇರುತ್ತದೆ).
ಎಂಜಲು ಮಾಡಿ ತಿನ್ನಿಸುವ ಹಣ್ಣು, ಆಹಾರ, ಜ್ಯೂಸ್, ಬೇಡ.
ಸ್ವಯಂ ಜಾಗ್ರತೆ ವಹಿಸುವುದು. ಪ್ರತಿ ದಿನ ತಪ್ಪದೇ ಹಲ್ಲಿನ ಸ್ವಚ್ಛತೆ ಮಾಡಬೇಕು.
ಹುಳುಕು ಹಲ್ಲುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕು.
ಮಕ್ಕಳ ದಂತಾರೋಗ್ಯ ಕಾಪಾಡುವ ಆಹಾರ
ಸ್ವಚ್ಛ ನೀರು ಪ್ರತಿ ದಿನದ ಅಗತ್ಯ. ಫ್ಲೋರೈಡ್ ಅಂಶದ ನೀರು (1 ಪಿಪಿಎಂಗಿಂತ) ಜಾಸ್ತಿ ಬೇಡ.
ಹಲ್ಲಿಗೆ ದೀರ್ಘಕಾಲ ಉಳಿಯ ಅಂಟಿಕೊಳ್ಳುವ ಆಹಾರಗಳ ಸೇವನೆ ಬೇಡ. ಸೇವಿಸಿದರೂ ತಕ್ಷಣವೇ ಬಾಯಿ ನೀರಿನಿಂದ ತೊಳೆಯಬೇಕು. ಉದಾ: ಬೇಕರಿ ತಿನಿಸು, ಮೈದಾ ಪದಾರ್ಥ, ಚಾಕಲೇಟ್, ಸಂಸ್ಕರಿತ ಆಹಾರ, ಚಿಪ್ಸ್, ಲೇಸ್, ಕುರ್ಕುರೆ... ಬೇಡ. ಸಕ್ಕರೆ ಅಂಶದ ಜ್ಯೂಸ್, ಕೋಲಾ ಸೇವನೆ ಮಿತಿಯಿರಲಿ. ಸಾಧ್ಯವಾದರೆ ಬೇಡ. ಆಮ್ಲೀಯ ಜ್ಯೂಸ್, ಸೋಡಾ ಬೇಡ.
ಪ್ರತಿ ದಿನ ಆಹಾರದ ಜೊತೆ ಕ್ಯಾರೆಟ್, ಮೂಲಂಗಿ, ಸೌತೆಕಾಯಿ ಸೇವಿಸಿ.
ಬ್ರೆಡ್, ಕೇಕ್, ಜಾಮ್, ತಿಂದರೂ ತಕ್ಷಣ ಬಾಯಿ ಮುಕ್ಕಳಿಸಿ.
ರಾತ್ರಿ ಮಲಗುವ ಮುನ್ನ ಬಾಯಿ ಸ್ವಚ್ಛ ಮಾಡಿಸಿರಿ.
ಬಾಟಲ್ ಚೀಪಿಕೊಂಡು ಎಂದಿಗೂ ಮಲಗಿಸದಿರಿ.
ವಯಸ್ಕರ ದಂತಾರೋಗ್ಯ
ನಿಮ್ಮ ಊಟ- ಆಹಾರದಲ್ಲಿ ಬೇಳೆ, ಕಾಳು, ಹಾಲು, ಮೊಸರು, ಹಸಿರು ಕಾಯಿ, ಪಲ್ಲೆ ಬಳಸದಿರಿ.
ಆಯಾ ಕಾಲದಲ್ಲಿ ದೊರಕುವ ಹಣ್ಣುಗಳ ಬಳಕೆ ಮಾಡಿರಿ.
ಚಾಕೋಲೆಟ್, ಫೆಟಿಸ್, ಪೇಸ್ಟ್ರಿ, ಐಸ್ಕ್ರೀಂ, ಸಿಹಿ ತಿನಿಸುಗಳ ಬಳಕೆ ಆದಷ್ಟು ಕಡಿಮೆಗೊಳಿಸಿ.
ಗರ್ಭಾವಸ್ಥೆಯಲ್ಲಿ ಹಲ್ಲಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಜೊಲ್ಲು ಹೆಚ್ಚು ಬರುವಂತೆ ಪ್ರೇರೇಪಿಸುವ ಆಹಾರಗಳಾದ ಕಿತ್ತಳೆ, ಲಿಂಬೆ, ಮೂಂಸಬಿ, ಹುಣಸೆ ರಸ ಊಟದ ಜೊತೆ ಸೇವಿಸದಿರಿ (ಊಟದ ನಂತರವಾದರೂ ಸರಿ).
ತಣ್ಣನೆಯ ಆಹಾರ ಬಳಕೆ ಕಡಿಮೆ ಮಾಡಿ. ಫ್ರಿಡ್ಜ್ ನೀರು ಬಳಕೆ ಕಡಿಮೆಗೊಳಿಸಿ. ಫ್ರಿಡ್ಜ್ನಲ್ಲಿನ ಆಹಾರ ಪದೇ ಪದೇ ಬಿಸಿ ಮಾಡಿ ಬಳಸಿದರೆ ಹಲ್ಲುಗಳು ತಮ್ಮ ಸಾಂದ್ರತೆ ಕಳೆದುಕೊಳ್ಳುತ್ತವೆ.
ಹಲ್ಲು ಸಾಂದ್ರತೆ ಕರಗಿಸುವ ಅತಿ ಆಮ್ಲ ಗುಣವಿರುವ ಆಹಾರ ಬಳಕೆ ಬೇಡ.
ಸಾಮಾನ್ಯ ಸಲಹೆಗಳು
ಮಕ್ಕಳಲ್ಲಿ ಕಾಡುವ ಚಟಗಳಾದ ಬೆರಳು ಚೀಪುವುದು, ಉಗುರು ಕಡಿಯುವುದು, ಬಾಯಿಂದ ಉಸಿರಾಟ, ನಾಲಿಗೆಯಿಂದ ಸದಾ ಹಲ್ಲನ್ನು ತಳ್ಳು... ದುರಾಭ್ಯಾಸ ಗಮನಿಸಿ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಿರಿ.
ವಕ್ರದಂತ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.
ಯಾವುದೇ ದಂತ ಸಮಸ್ಯೆಯನ್ನು ದೀರ್ಘಕಾಲೀನವಾಗದಂತೆ ಜಾಗ್ರತ ವಹಿಸಿ.
ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ದಂತ ವೈದ್ಯರಿಂದ ದಂತ ಪರೀಕ್ಷಣೆ ಮಾಡಿಸಿರಿ.
4 ತಿಂಗಳವರೆಗೆ ತಾಯಿ ಹಾಲು ಸಾಕು
ನಾಲ್ಕು ತಿಂಗಳಿನಿಂದ ಆರು ತಿಂಗಳುಗಳವರೆಗೆ ವಿವಿಧ ರೀತಿಯ ಮೃದು ಆಹಾರ, ಗಂಜಿ, ರಾಗಿ, ಮಾಲ್ಟ್... ಸಕ್ಕರೆ- ಉಪ್ಪು ಹೆಚ್ಚು ಸೇವಿಸದಿರಿ.
ಆರು ತಿಂಗಳ ನಂತರ ಜಗಿಯುವ ಆಹಾರ ಕೊಡಲು ಪ್ರಾರಂಭಿಸಿ. ಉದಾ: ಹಣ್ಣು ಚೂರು.
ಒಣ ದ್ರಾಕ್ಷಿ, ಬಿಕ್ಕೆ, ಪಾಪ್ಕಾರ್ನ್, ಹುರಿದ ಕಡಲೆ ಎರಡೂವರೆ ವರ್ಷದ ನಂತರ ಕೊಡಬೇಕು.
6-12 ತಿಂಗಳ ನಡುವೆ ಬಾಟಲಿ ಹಾಲು ಬಿಡಿಸಲು ಸೂಕ್ತ ಸಮಯ.
ಸಮತೋಲನ ಆಹಾರ ನಿಮ್ಮ ಮಗುವಿನ ಹಲ್ಲಿನ ಬೆಳವಣಿಗೆಗೆ ಸಹಕಾರಿ.
ಪ್ರತಿದಿನ ತಪ್ಪದೇ ಉಪಹಾರ ಕೊಡಬೇಕು.
ಸಕ್ಕರೆ ಅಂಶದ ಆಹಾರ ಐಸ್ಕ್ರೀಮ್, ಕೇಕ್ ಊಟದ ನಡುವೆ ಬೇಡ. ಬದಲಿಗೆ ಊಟದ ನಂತರ ತಿನ್ನಿಸಿ. ನಂತರ ಬಾಯಿ ತೊಳೆಸಿರಿ.
-ಡಾ.ಕೆ.ವಿ. ಸಂತೋಷ ಹೊಳಲ್ಕೆರೆ