ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಗಡ್ಡ ಬಿಟ್ಟವನಿಗೆ ಮಿಠಾಯಿ!

Mainashree
Updated On : 10 Jan 2014, 3:45 am

ಪುರುಷರು ಸ್ಟೈಲಿಸ್ ಆಗಿ ಕಾಣಲು ವಿಭಿನ್ನವಾದ ಕೇಶವಿನ್ಯಾಸದ ಜೊತೆಗೆ ಆಕರ್ಷಕವಾಗಿ ಗಡ್ಡ ಬಿಡುವುದು ಈಗಿನ ಫ್ಯಾಷನ್. ದಿನಾಲೂ ಗಡ್ಡ, ಮೀಸೆ ತೆಗೆದು ಸ್ಮಾರ್ಟ್ ಆಗಿ ಕಾಣಿಸಿಬಿಟ್ಟರೆ ಅದರಲ್ಲೇನು ವಿಶೇಷ ಹೇಳಿ? ನೋಡುಗರಿಗೂ ಅದು ಬೋರ್ ತರಿಸಿಬಿಡುತ್ತದೆ ಅಲ್ಲವೇ. ಹಾಗಾಗಿ ಪುರುಷರು ಆಕರ್ಷಕವಾಗಿ ಕಾಣಲು ಕ್ಲೀನ್‌ಶೇವ್ ಮಾಡಬೇಕೆಂದಿಲ್ಲ!
ಗಡ್ಡ ಬಿಡುವುದೆಂದರೆ ಕೇವಲ ಕೂದಲು ಬೆಳೆಸುವುದಲ್ಲ. ಗಡ್ಡ ಬಿಡುವುದರಲ್ಲಿಯೂ ಅನೇಕ ಬಗೆಗಳಿದ್ದು, ಅವುಗಳಲ್ಲಿ ಫ್ರೆಂಚ್ ಸ್ಟೈಲ್, ಚಿನ್‌ಸ್ಟ್ರಿಪ್, ಗೌಟಿ, ಫುಲ್ ಬಿಯರ್ಡ್, ಸೊಲ್‌ಪ್ಯಾಚ್, ಬಲ್ಬೂ ಹೀಗೆ ನಾನಾ ವಿದಧ ಮಾದರಿಗಳು ಪ್ರಚಲಿತದಲ್ಲಿವೆ.
ಹೆಚ್ಚಿನವರು ತುಟಿಯ ಕೆಳಗೆ ಗೋಡಂಬಿ ಗಾತ್ರದ ತ್ರಿಕೋನಾಕೃತಿಯ ಗಡ್ಡ ಬೆಳೆಸಿದರೆ, ಇನ್ನು ಕೆಲವರು ಗಲ್ಲದ ಮೇಲೆ ವಿಶಿಷ್ಟ ವಿನ್ಯಾಸದ ಗಡ್ಡ ಬಿಡುತ್ತಾರೆ. ಮತ್ತೆ ಕೆಲವರು ಮುಖದ ಪರಧಿಗೆ ಗೆರೆ ಎಳೆದಂತಿರುವ ಗಡ್ಡ ಬೆಳೆಸಿದರೆ, ಮತ್ತಷ್ಟು ಮಂದಿ ಹುಲ್ಲುಗಾವಲಿನಂತೆ ಇರುವ ಗಡ್ಡ ಬೆಳೆಸುತ್ತಾರೆ.
ಬಹು ಹಿಂದೆ ಬುದ್ದಿಜೀವಿಗಳು, ವಿಜ್ಞಾನಿಗಳೆನಿಸಿಕೊಂಡವರು ಬಿಡುತ್ತಿದ್ದ ಫ್ರೆಂಚ್ ಶೈಲಿಯ ಗಡ್ಡವನ್ನು ಈಗೀಗ ಸಾಮಾನ್ಯರಲ್ಲಿ ಸಾಮಾನ್ಯರು ಬೆಳೆಸುತ್ತಿದ್ದಾರೆ. ಇನ್ನು ಸಂಪೂರ್ಣ ಗಡ್ಡ ಬೆಳೆಸುವ ಕ್ರಮ ಮಾತ್ರ ಸನ್ಯಾಸಿಗಳಿಗೆ, ಹಿರಿಯ ನಾಗರಿಕರಿಗೆ, ಆಚಾರ್ಯರಿಗೆ ಮೀಸಲಾದರೆ, ಸಿಖ್ಖರು ಮಾತ್ರ ಗಡ್ಡ ಮೀಸೆ ತೆಗೆಯುವಂತಿಲ್ಲ ಹಾಗೂ ಕೆಲವು ಸಮುದಾಯಗಳಲ್ಲಿ ಗಡ್ಡ ಅವರ ಧಾರ್ಮಿಕ ಸಂಕೇತವಾಗಿದೆ.
ಯಾರಿಗೆ ಯಾವ ತೆರನಾದ ಗಡ್ಡ?
ಕೋಲು ಮುಖದವರಿಗೆ ಸಾಮಾನ್ಯವಾಗಿ ಫ್ರೆಂಚ್ ಗಡ್ಡ ಹೊಂದುತ್ತದೆ. ನಟ ಅಮಿತಾಭ್ ಬಚ್ಚನ್ ಕೂಡಾ ಹೆಚ್ಚಾಗಿ ಫ್ರೆಂಚ್ ಗಡ್ಡವನ್ನೆ ಬಿಡುತ್ತಾರೆ. ಇನ್ನು ದುಂಡು ಮುಖದವರಿಗೆ ನಟ ಗೋಲ್ಡನ್‌ಸ್ಟಾರ್ ಗಣೇಶ್, ದಿಗಂತ್‌ರಂತೆ ಕುರುಚಲು ಗಡ್ಡವೇ ಸರಿ. ಎಲ್ಲರಿಗೂ ಒಪ್ಪುವಂತೆ ನಟ ಸುದೀಪ್‌ರಂತೆ ಸದಾ ಲೈಟಾಗಿರುವ ಗಡ್ಡ ಬಿಟ್ಟರೂ ಸರಿ.
ಆರೈಕೆ ತುಸು ಕಷ್ಟ
ಗಡ್ಡ ಬೆಳೆಸುವುದು ತೀರಾ ಸುಲಭ. ಗಡ್ಡಕ್ಕೆಂದು ಹಣ ಖರ್ಚು ಮಾಡಬೇಕಿಲ್ಲ. ಗಡ್ಡ ತಂತಾನೇ ಸೊಂಪಾಗಿ ಬೆಳೆಯುತ್ತದೆ. ಆದರೆ ಅದರ ನಿರ್ವಹಣೆ ಮಾತ್ರ ಕಷ್ಟಕಷ್ಟ. ಗಡ್ಡವನ್ನು ವ್ಯವಸ್ಥಿತವಾಗಿ ನೋಡಿಕೊಳ್ಳದಿದ್ದರೆ ತೊಂದರೆಗಳು ಗಡದ್ದಾಗಿ ಆವರಿಸಿಕೊಳ್ಳುತ್ತವೆ.
ಹಾಗಾಗಿ, ಗಡ್ಡವನ್ನು ಬೆಳೆಸಬೇಕೆನ್ನುವವರು ಪ್ರತಿದಿನ ಚೆನ್ನಾಗಿ ಸೋಪು, ಶಾಂಪೂವಿನಿಂದ ತೊಳೆದುಕೊಳ್ಳಬೇಕು. ನಂತರ ಒಣಗಿಸಿ ಒಪ್ಪವಾಗಿ ಬಾಚಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ತುರಿಕೆ, ಆಲರ್ಜಿ ಮತ್ತು ಗಡ್ಡ ಗಂಟುಗಂಟಾಗುತ್ತದೆ. ಇದಿಷ್ಟೆ ಅಲ್ಲದೆ, ಹೆಚ್ಚಾಗಿ ಗಡ್ಡ ಬಿಟ್ಟಿದ್ದಾರೆಂದರೆ, ಒಂದೊ ಮನೆಯಲ್ಲೇನೋ ಸಮಸ್ಯೆ ಇರ್ಬೇಕು, ಸಾಲ ಜಾಸ್ತಿಯಾಗಿರ್ಬೇಕು ಅಥವಾ ಹುಡುಗಿ ಕೈಕೊಟ್ಟಿರಬೇಕು ಎಂದುಕೊಳ್ಳುವ ಜನರ ತೀಕ್ಷ್ಣದೃಷ್ಟಿಯನ್ನು ಸಹಿಸಿಕೊಳ್ಳಬೇಕು.
ಆದ್ರೂ, ಸೊಂಪಾಗಿ ಬೆಳೆದ ಗಡ್ಡದ ಮೇಲೆ ಕೈಯಾಡಿಸುವಾಗ ಆಗುವ ಹಿತಾನುಭವ ಬಲ್ಲವನೇ ಬಲ್ಲ.

ಗಡ್ಡದಿಂದಲೂ ಉಂಟು ಲಾಭ!
    ಗಡ್ಡ ಬೆಳೆಸುವುದರಿಂದ ಮುಖದಲ್ಲಿನ ಮೊಡವೆ, ಕಲೆಗಳನ್ನು ಮರೆಮಾಚಬಹುದು.
    ಚಳಿಗಾಲದಲ್ಲಿ ಮುಖದ ಚರ್ಮ ಬಿರುಕು ಬಿಡುವುದು ತಡೆಯಬಹುದು.
    ಗಡ್ಡದ ಶೈಲಿಯಿಂದಆತನ ವ್ಯಕ್ತಿತ್ವ ಗುರುತಿಸಬಹುದಂತೆ!
    ಕೆಲವರಿಗೆ ಗಡ್ಡ ಸೌಂದರ್ಯ ಹೆಚ್ಚಿಸುತ್ತದೆ.
    ಪದೇಪದೆ ಶೇವ್ ಮಾಡುವುದರಿಂದ ಮೊಡವೆಗಳು ಏಳುವ ಸಾಧ್ಯತೆ ಇರುತ್ತದೆ. ಗಡ್ಡ ಬಿಡುವುದರಿಂದ ಅದನ್ನು ತಪ್ಪಿಸಿಕೊಳ್ಳಬಹುದು.

ಹುಡುಗಿಯರಿಗೂ ಇಷ್ಟ!
ಯುವತಿಯರಿಗೆ ಚಿತ್ರವಿಚಿತ್ರ ಶೈಲಿಯ ಗಡ್ಡ ಬಿಡುವವರೇ ಇಷ್ಟ!
ಫಿಲಿಪ್ಸ್ ಇಂಡಿಯಾ ಸಂಸ್ಥೆಯು ಹನ್ಸ್ ಸಮೀಕ್ಷಾ ಸಂಸ್ಥೆಯೊಂದಿಗೆ ಸೇರಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದ ಸಂಗತಿ ಇದು. 15ರಿಂದ 25ರ ವಯೋವಾನದ 600 ತರುಣಿಯರನ್ನು ಸಂದರ್ಶಿಸಲಾಗಿತ್ತು. ಅವರಲ್ಲಿ ಶೇ. 54ರಷ್ಟು ಮಹಿಳೆಯರು ಚಿತ್ರವಿಚಿತ್ರ ಮೀಸೆ, ಕುರುಚಲು ಗಡ್ಡ ಬಿಡುವ ಪುರುಷರೇ ಇಷ್ಟವಾಗಿದ್ದಾಗಿ ಹೇಳಿಕೊಂಡಿದ್ದಾರೆ.

 ಗಣೇಶ್ ಕಮ್ಲಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement