ಹಾ ಚಳಿ!
ಬೀಸುವ ತಂಪನೆ ಗಾಳಿಗೆ ಮೈಯೊಡ್ಡಿ ತನು ಮನವನು ಚಳಿಯ ಸ್ಪರ್ಶದ ಸುಖವ ಸವಿಯಲು ಎಲ್ಲರಿಗೂ ಬಯಕೆ. ಆದರೆ, ಚರ್ಮದ ಮೇಲೆ ಚಳಿಯಿಂದಾಗುವ ಒರಟುತನಕ್ಕೆ ಹೆದರಿ ಚಳಿಯ ಆಹ್ಲಾದತೆಯನ್ನು ಅನುಭವಿಸುವ ಆಸೆ ಹೇಳ ಹೆಸರಿಲ್ಲದೆ ಮುದುಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಲೋಷನ್ ಮೃದುತ್ವ ಕಾಪಾಡುತ್ತವೆ ಎಂದು ಜಾಹೀರಾತುಗಳು ವಾದಿಸಿದರೂ ಅದು ಆ ಘಳಿಗೆಗೆ ಮಾತ್ರ ಎನ್ನುವುದು ನಿಜವಾದ ಸತ್ಯ ಮತ್ತು ವೆಚ್ಚದಾಯಕವೂ ಕೂಡ.
ಶುಷ್ಕತೆಗೆ ಹೆಚ್ಚು ಮೃತಕೋಶ
ಚಳಿಯಿಂದ ತ್ವಚೆಯಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ನಿರಂತರ ಬದಲಾವಣೆ ನಡೆಯುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಕಾರ್ನೋಸೈಟ್ಸ್ ಎಂದು ಕರೆಸಿಕೊಳ್ಳುವ ಜೀವಕೋಶಗಳು ಸಾಯುತ್ತವೆ ಮತ್ತು ಉದುರುತ್ತವೆ. ಕೆಲವೊಮ್ಮೆ ಉದುರದೇ ಜಮೆಯಾದ ಸತ್ತ ಜೀವಕೋಶಗಳಿಂದ ತ್ವಚೆ ದಪ್ಪ ಮತ್ತು ಕಾಂತಿಹೀನವಾಗುತ್ತದೆ. ಇಂಥ ಸಂದರ್ಭದಲ್ಲಿ ನಾವು ಹಚ್ಚುವ ಕ್ರೀಮ್ ಮತ್ತು ಲೋಷನ್ಗಳು ಚರ್ಮದ ಒಳಭಾಗಕ್ಕೆ ಇಳಿಯುವುದೇ ಇಲ್ಲ.
ತ್ವಚೆಯ ತೇವಾಂಶ
ಸೂಕ್ತ ಆಹಾರ ಪದ್ಧತಿಯಿಂದ ಚಳಿಗಾಲದಲ್ಲಿ ತ್ವಚೆಯ ತೇವಾಂಶವನ್ನು ಕಾಯ್ದುಕೊಳ್ಳಬಹುದು. ಚಳಿಗಾಲದಲ್ಲಿ ನೀರಡಿಕೆಯಾಗದ ಕಾರಣ ನಾವು ನೀರನ್ನು ಕುಡಿಯುವ ಗೋಜಿಗೇ ಹೋಗುವುದಿಲ್ಲ. ಸೌಂದರ್ಯದ ಬಗ್ಗೆ ಗಮನವಿರಿಸಿಕೊಂಡು ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸಿದರೆ ತ್ವಚೆಯಲ್ಲಿ ಮೃದುತ್ವವನ್ನು ಕಾಯ್ದುಕೊಳ್ಳಬಹುದು. ಇದರ ಜೊತೆಗೆ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ದೈಹಿಕ ಕ್ರಿಯೆಗೆ ಅಗತ್ಯವಾದಷ್ಟು ನೀರು ಲಭ್ಯವಾಗುತ್ತದೆ. ತ್ವಚೆಯ ಜೀವಕೋಶಗಳಲ್ಲಿರುವ ಲಿಪಿಡ್ನ ಸಮತೋಲನ ಕಾಯ್ದುಕೊಳ್ಳಲು ನೆನೆಸಿದ ಬಾದಾಮಿ, ಹಾಲು, ತಾಜಾ ಪನ್ನೀರ್, ತುಪ್ಪವನ್ನು ಆಹಾರದ ಭಾಗವಾಗಿಸಿಕೊಳ್ಳಬೇಕು. ಚಳಿಗಾಲದಲ್ಲಿ ವಿಟಮಿನ್ 'ಸಿ' ನೈಸರ್ಗಿಕ ಮೂಲವಾದ ನೆಲ್ಲಿಕಾಯಿ ಮತ್ತು ಕಿತ್ತಳೆಹಣ್ಣುಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಿಕೊಳ್ಳಿ. ಚಳಿಯ ನೆಪವೊಡ್ಡಿ ಕುಡಿಯುವ ಟಾಕ್ಸಿಕ್ ಪದಾರ್ಥಗಳಾದ ಕಾಫಿ, ಟೀ ಕಡಿಮೆಗೊಳಿಸಿ.
ಪಪ್ಪಾಯಿ ಹಣ್ಣಿನ ಫೇಸ್ಪ್ಯಾಕ್ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಸಾಬೂನಿನ ಬದಲು ಕಡಲೆ ಹಿಟ್ಟು ಬಳಸಿದರೆ ದೇಹದಲ್ಲಿನ ನೀರಿನ ಪ್ರಮಾಣಕ್ಕೆ ಹಾನಿಯಾಗದು. ಚಳಿಯ ಪ್ರಭಾವದಿಂದ ಒಣಗಿದ ತುಟಿಗಳಿಗೆ ಲಿಪ್ ಬಾಮ್ ಬಳಸುವ ಮೊದಲು ನೈಸರ್ಗಿಕವಾದ ಹಾಲಿನ ಕೆನೆ ಮತ್ತು ತುಪ್ಪದಿಂದ ಮಸಾಜ್ ಮಾಡಿದರೆ ಮೃದು ಅದರುಗಳು ನಿಮ್ಮದಾಗುತ್ತವೆ. ಸ್ನಾನಕ್ಕೆ ಮುನ್ನ ಬಾದಾಮಿ ಅಥವಾ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ನಿಮ್ಮ ತ್ವಚೆಗೆ ಸೂಕ್ತ ಪೋಷಣೆ ದೊರೆಯುತ್ತದೆ. ಚಳಿ ಎಂದು ಸ್ನಾನಕ್ಕೆ ಬಿಸಿ ನೀರನ್ನು ಬಳಸುವ ಬದಲು ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿ. ಹೆಚ್ಚು ಬಿಸಿ ಇರುವ ನೀರು ನಿಮ್ಮ ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತದೆ. ನೇರ ಬಿಸಿಲು ದೇಹಕ್ಕೆ ಸೋಕದಂತೆ ಎಚ್ಚರವಹಿಸಿ ಮತ್ತು ಸನ್ಸ್ಕ್ರೀನ್ ಕ್ರಿಮ್ ಬಳಸಿ. ಚಳಿಯ ಪ್ರಭಾವದಿಂದ ಕೂದಲು ಉದುರುವಿಕೆಯೂ ಹೆಚ್ಚು ಅದಕ್ಕಾಗಿ ಬಿಸಿ ಮಾಡಿದ ಎಣ್ಣೆಯನ್ನು ಕೂದಲ ಬುಡಕ್ಕೆ ಹಚ್ಚಿ ಬಿಸಿನೀರಿನಲ್ಲಿ ನೆನೆಸಿದ ಟವಲ್ ಸುತ್ತಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಹೊಸ ಜೀವಂತಿಕೆ ಕಾಣಬಹುದು.
ಚಳಿಗಾಲಕ್ಕೆ ಬಣ್ಣದ ಉಡುಪು
ಬೇಸಿಗೆಯಲ್ಲಿ ತೆಳು ಬಣ್ಣದ ಬಟ್ಟೆ ಹಾಕಿಕೊಂಡರೆ ಚಳಿಗಾಲದಲ್ಲಿ ಕಡುವರ್ಣದ ಬಟ್ಟೆ ಸೂಕ್ತ. ಈ ಬಣ್ಣಗಳು ಸೂರ್ಯನ ಬಿಸಿಲನ್ನು ಬಹು ಬೇಗ ಹೀರಿಕೊಂಡು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತದೆ. ತೆಳು ವರ್ಣದ ಬಟ್ಟೆ ಧರಿಸಿದರೆ ಚಳಿಗಾಳಿಗೆ ನಿಮ್ಮ ಚರ್ಮ ಮೈ ಬಿರುಕು ಬಿಡುತ್ತದೆ. ಉಣ್ಣೆ ಬಟ್ಟೆಗಳನ್ನು ರಾತ್ರಿ ಹಾಕಿಕೊಂಡು ಮಲಗಬೇಡಿ. ಹತ್ತಿಯ ಬಟ್ಟೆಗಳನ್ನು ಧರಿಸಿ, ರಗ್ಗು ಹೊದೆಯುವುದಾದರೆ ಮೊದಲು ತೆಳುವಾದ ಕಾಟನ್ ಹೊದಿಕೆ ಹಾಕಿ ಹಾಕಿ ಅದರ ಮೇಲೆ ರಗ್ಗು ಮುಚ್ಚಿಕೊಳ್ಳಿ.
ಚಳಿಗೆ ಪರಿಹಾರ
ಚಹಾ, ಕಾಫಿ ಕಡಿಮೆ ಮಾಡಿ.
ತ್ವಚೆ ಮೃದುವಾಗಿರಲು ಅಧಿಕ ನೀರು ಕುಡಿಯಿರಿ.
ವಿಟಮಿನ್ ಸಿ ಇರುವ ಆಹಾರ ನಿಮ್ಮ ಡಯಟ್ನಲ್ಲಿರಲಿ.
ಗಾಢವರ್ಣದ ಬಟ್ಟೆ ಧರಿಸಿ.
ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ.
= ಜಮುನಾ ರಾಣಿ ಎಚ್.ಎಸ್.