ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಂತರವೂ ತೀವ್ರ ಬೆನ್ನುನೋವು ಕಾಡುತ್ತದೆ. ದಿನ ವಾಕಿಂಗ್, ವ್ಯಾಯಾಮ ಏನು ಮಾಡಿದರೂ ಕೆಲವೊಮ್ಮೆ ಈ ನೋವನ್ನು ಕಟ್ಟಿಹಾಕಲಾಗದು. ಹೀಗಾದಾಗ 5 ನಿಮಿಷ ನಿರಂತರ ನಡೆಯುವುದೂ ಕಷ್ಟವಾಗುತ್ತದೆ.
ಹೀಗಾದಾಗ ನರಶಸ್ತ್ರಚಿಕಿತ್ಸಾ ತಜ್ಞರನ್ನು ಕಾಣುವುದೊಳಿತು. 'ಸ್ಪೈನಲ್ ಕೆನಲ್ ಸ್ಟೆನೋಸಿಸ್' ಎಂಬ ಸ್ಥಿತಿಯಿಂದಾಗಿ ಚಿಕಿತ್ಸೆ ತೆಗೆದುಕೊಂಡ ವ್ಯಕ್ತಿಯ ಲುಂಬಾರ್ ಸ್ಪೈನಲ್ ನರಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಎಂಆರ್‌ಐ ಸ್ಕ್ಯಾನಿಂಗ್‌ನಿಂದ ಪತ್ತೆಹಚ್ಚಬಹುದು. ಪಾರಂಪರಿಕ ಔಷಧಿಗಳು ಹಾಗೂ ಫಿಸಿಯೋಥೆರಪಿ ಚಿಕಿತ್ಸೆಗಳೂ ಈ ವೇಳೆ ಪರಿಣಾಮಕಾರಿಯಾಗುವುದಿಲ್ಲ. ಈ ಹಂತದಲ್ಲಿ ವೈದ್ಯರು ಸೂಚಿಸುವುದು ಶಸ್ತ್ರಚಿಕಿತ್ಸೆಯನ್ನು. 'ಒಂದೊಮ್ಮೆ ಶಸ್ತ್ರಚಿಕಿತ್ಸೆ ತಡವಾದರೆ, ಬೆನ್ನುಮೂಳೆ ಹೆಚ್ಚು ಕೃಶವಾಗಿ ಕ್ರಮೇಣ ಚಲನವಲನವೇ ಕಷ್ಟವಾಗುತ್ತದೆ' ಎನ್ನುತ್ತಾರೆ ಬೆಂಗಳೂರಿನ ಬನ್ನೇರುಘಟ್ಟ ಫೋರ್ಟೀಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ತಜ್ಞ ಡಾ. ಎಸ್. ಸತೀಶ್.
ಬೆನ್ನಿನಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಳ್ಳುವ ಮೂಲಕ ಆರಂಭವಾದದ್ದು ಕ್ರಮೇಣ ತೀವ್ರವಾಗುತ್ತದೆ. ಇಳಿವಯಸ್ಸಿನಲ್ಲಿ ಇದು ಕಾಡಿದರೂ, ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ಕೊಡಬಹುದು.
ಅಂಜಿಕೆ ಏಕೆ?
ಬೆನ್ನುಮೂಳೆಯ ನೋವು ಗುಣಪಡಿಸುವಂಥದ್ದಲ್ಲ. ಆದ್ದರಿಂದ ವಯಸ್ಸಾದವರಲ್ಲಿ ಶಸ್ತ್ರಚಿಕಿತ್ಸೆಯು ಹೆಚ್ಚಿನ ರಿಸ್ಕನ್ನು ಒಳಗೊಂಡಿರಬಹುದು ಎಂಬ ತಪ್ಪು ಕಲ್ಪನೆ ಬಹುತೇಕರಲ್ಲಿದೆ. ಕುಟುಂಬದ ಸದಸ್ಯರು ಹಾಗೂ ಹತ್ತಿರದ ಸ್ನೇಹಿತರು ತೋರುವ ಅಧೈರ್ಯದ ಮಾತುಗಳಿಂದಾಗಿ ಹಲವರು ಈ ಚಿಕಿತ್ಸೆಗೆ ಹೆದರುತ್ತಾರೆ. ಇಂಥ ಅಂಜಿಕೆ ಸರಿಯಲ್ಲ.
- ಡಾ. ಎಸ್. ಸತೀಶ್, ಫೋರ್ಟೀಸ್ ಆಸ್ಪತ್ರೆ