ಕುಡಿತ ಕಡಿಮೆಮಾಡಲು 8 ದಾರಿಗಳು
ಪ್ರತಿ ಪೆಗ್ನ ನಡುವೆ ಒಂದು ಗ್ಲಾಸು ಸೀಮೆಎಣ್ಣೆ ಕುಡಿಯಿರಿ!
ಪ್ರತಿ ಪೆಗ್ನ ನಡುವೆ ಒಂದು ಗ್ಲಾಸು ಸೀಮೆಎಣ್ಣೆ ಕುಡಿಯಿರಿ!
ಇದು ಖಂಡಿತ ಕೆಲಸ ಮಾಡುತ್ತದೆ. ಏಕೆಂದರೆ ಮೊದಲ ಬಾರಿ ಸೀಮೆಎಣ್ಣೆ ಕುಡಿದ ನಂತರ ನಿಮ್ಮನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯೊಳಗೆ ಮದ್ಯಪಾನ ನಿಷಿದ್ಧ. ಸ್ನೇಹಿತನ ಬಳಿ ಎಳನೀರಿನೊಳಗೆ ಎಣ್ಣೆ ಮಿಕ್ಸ್ ಮಾಡಿ ತರಿಸಿಕೊಂಡರೆ ಅಥವಾ ಗ್ಲೂಕೋಸ್ ಬಾಟಲಿಯೊಳಗೇ ವಿಸ್ಕಿ ಮಿಕ್ಸ್ ಮಾಡಿಸಿಕೊಂಡು ಮೈಗೆ ಡ್ರಿಪ್ ಹಾಕಿಸಿಕೊಂಡರೆ ಮಾತ್ರ ಈ ಉಪಾಯ ಯಶಸ್ವಿಯಾಗುವುದಿಲ್ಲ. ಅದಕ್ಕೆ ನಾವು ಹೊಣೆಯಲ್ಲ.
ಗ್ಲಾಸು ಬಿಟ್ಟು ಚಮಚದಲ್ಲಿ ಕುಡಿಯಿರಿ!
ಮನೆಯಲ್ಲೇ ಕುಡಿಯುವವರಾಗಿದ್ದರೆ ಗ್ಲಾಸುಗಳನ್ನೆಲ್ಲ ಒಡೆದುಹಾಕಿ ಅರ್ಜೆಂಟಿಗೆ ಚಮಚ ಮಾತ್ರ ಕೈಗೆ ಸಿಗುವಂತೆ ಮಾಡಿಕೊಳ್ಳಿ. ಕಾಯಮ್ಮಾಗಿ ಹೋಗುವ ಬಾರಿನವರಿಗೂ ನಿಮಗೆ ಗ್ಲಾಸಿನ ಬದಲು ಸ್ಪೂನ್ ನೀಡುವಂತೆ ಮೊದಲೇ ಹೇಳಿಡಿ. ಸ್ವಲ್ಪ ಹೊತ್ತು ಕಳೆದ ಮೇಲೆ ಚಮಚಕ್ಕೆ ಬೀಳುವುದಕ್ಕಿಂತ ನೆಲದ ಮೇಲೆ ಬೀಳುವ ಎಣ್ಣೆ ಪ್ರಮಾಣವೇ ಹೆಚ್ಚಾಗುವುದರಿಂದ ನಿಮ್ಮ ಹೊಟ್ಟೆಗಿಳಿಯುವ ಎಣ್ಣೆಯ ಪ್ರಮಾಣ ಕಡಿಮೆಯಾಗುತ್ತದೆ.
ತುಟಿಗೆ ಪಿನ್ ಮಾಡಿ ನೋಡಬಹುದು!
ಹೀಗೆ ಮಾಡುವುದರಿಂದ ಆಲ್ಕೋಹಾಲನ್ನು ಗ್ಲಾಸು ಅಥವಾ ಬಾಟಲಿಯಲ್ಲಿ ಕುಡಿಯಲು ಸಾದ್ಯವಾಗುವುದಿಲ್ಲ ಜೊತೆಗೆ, ಆಹಾರ ಸೇವನೆಯೂ ಕಡಿಮೆಯಾಗುತ್ತದೆ. ಅದರಿಂದ ಬೊಜ್ಜು ಇಳಿಯುತ್ತದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಒತ್ತೊತ್ತಾಗಿ ಸ್ಟೇಪಲ್ ಮಾಡದಿದ್ದರೆ ಸ್ಟ್ರಾದಲ್ಲಿ ಎಣ್ಣೆ ಹೀರುವ ಅಡ್ಡದಾರಿ ನಿಮಗೆ ಹೊಳೆಯುತ್ತದೆ. ಅನುಭವಿಗಳಿಂದ ಪಿನ್ ಮಾಡಿಸಿಕೊಳ್ಳುವುದು ಸೂಕ್ತ.
ಆಂಧ್ರ ಅಥವಾ ಗುಜರಾತಿಗೆ ಶಿಫ್ಟ್ ಆಗುವುದು
ಮದ್ಯಪಾನ ನಿಷೇಧವಿರುವ ಆಂಧ್ರಪ್ರದೇಶ ಅಥವಾ ಗುಜರಾತ್ ರಾಜ್ಯಕ್ಕೆ ಸ್ಥಳಾಂತರಗೊಂಡರೆ ತನ್ನಿಂತಾನೇ ಕುಡಿತ ಕಡಿಮೆಯಾಗುತ್ತದೆ. ಒಂದೆರಡು ಬಾರಿ ಕದ್ದು ಕುಡಿದು ಸಿಕ್ಕಿಬಿದ್ದು ಒದೆಯನ್ನೇನಾದರೂ ತಿಂದರೆ ನೀವು ಮತ್ತೆ ಆ ಕೆಲಸ ಮಾಡಲು ಹೋಗುವುದಿಲ್ಲ. ಏನನ್ನಾದರೂ ಬಿಡಬೇಕು ಎಂದಾದರೆ ಅದನ್ನು ಅತಿಯಾಗಿ ಮಾಡಬೇಕು ಎಂಬ ಸಿದ್ಧಾಂತದವರು ನೀವಾಗಿದ್ದರೆ ಗೋವಾ ಅಥವಾ ಪಾಂಡಿಚೆರಿಗೆ ಶಿಫ್ಟ್ ಆಗಿ ನೋಡಬಹುದು. ಅಲ್ಲಿ ಕುಡಿಯುವುದನ್ನು ನೋಡಿ ರೇಜಿಗೆ ಹುಟ್ಟಿ ಅಥವಾ ನೀವೇ ಕುಡಿದು ಒಂದು ದಿನ 'ಖರ್ಚಾಗುವ' ಸಂಭವವಿದೆ. ಕುಡಿತದ ಬಗ್ಗೆ ವಾಕರಿಗೆ ಹುಟ್ಟಿ ಬಿಟ್ಟುಬಿಡುವ ಸಾಧ್ಯತೆಯೂ ಶೇ.1ರಷ್ಟು ಇದೆ.
ಸಿಗರೇಟು, ಗುಟ್ಕಾ ಇತ್ಯಾದಿ ಶುರುಮಾಡಿ!
ಚಟವಾನರಿಗೆ ಎಣ್ಣೆಯೇ ಆಗಬೇಕು ಎಂದೇನೂ ಇರುವುದಿಲ್ಲ. ಒಟ್ಟಾರೆ ಒಂದು ಅಮಲು ಪದಾರ್ಥ ಅವರ ದೇಹದೊಳಗೆ ಹರಿಯುತ್ತಿರಬೇಕು. ಹಾಗಾಗಿ ಕುಡಿತ ಕಡಿಮೆ ಮಾಡಬೇಕು ಎಂದಿರುವವರು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬಹುದು. ಸುಲಭಕ್ಕೆ ಕಾಣುವುದು ಎರಡು- ಸೇದುವ ಸಿಗರೇಟು ಮತ್ತು ತಿನ್ನುವ ತಂಬಾಕು. ಡ್ರಗ್ಸ್ ಇದೆಯಾದರೂ ಅದನ್ನು ತೆಗೆದುಕೊಂಡರೆ ಪೊಲೀಸರು ಎಳೆದುಕೊಂಡು ಹೋಗುವ ಕೆಟ್ಟ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ.
ಕವಿ/ಸಾಹಿತಿ ಜೊತೆ ಬಾರಿಗೆ ಹೋಗುವುದು
ಇದು ಬೇರೆಲ್ಲಾ ಉಪಾಯಗಳಿಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ. ಹೇಗಾದರೂ ಮಾಡಿ ಒಬ್ಬ ಕವಿ ಅಥವಾ ಯಾವುದಾದರೂ ಪ್ರಕಾರದ ಸಾಹಿತಿಯ ಗೆಳೆತನ ಮಾಡಿಕೊಂಡು, ಕುಡಿಯಬೇಕು ಎನ್ನಿಸಿದಾಗಲೆಲ್ಲ ಅವರನ್ನು ಬಾರಿಗೆ ಕರೆದುಕೊಂಡು ಹೋಗುವುದನ್ನು ರೂಢಿ ಮಾಡಿಕೊಳ್ಳಿ. ಒಂದು ತಿಂಗಳೊಳಗೆ ಅವರ ಕೊರೆತಕ್ಕಿಂತ ಕುಡಿತ ಬಿಡುವುದೇ ಮೇಲು ಎಂಬ ನಿರ್ಧಾರಕ್ಕೆ ನಿಮಗೆ ಗೊತ್ತಿಲ್ಲದೇ ಬಂದಿರುತ್ತೀರಿ.
ಮದ್ಯಪಾನ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿ
ಇದು ಬಹಳ ಕಷ್ಟದ ಕೆಲಸ. ರಾಜಕೀಯದಲ್ಲೂ ಸ್ವಲ್ಪ ಕೈಯಾಡಿಸಿದ ಅನುಭವವಿದ್ದರೆ ಮಾತ್ರ ಸಾಧ್ಯ. ಯಾರದ್ದಾದರೂ ಇನ್ಫ್ಲ್ಯೂಯೆನ್ಸ್ ಮಾಡಿಸಿ ರಾಜ್ಯ ಸರ್ಕಾರದ ಮದ್ಯಪಾನ ನಿಯಂತ್ರಣ ಮಂಡಳಿಯ ಅಧ್ಯಕ್ಷನಾದರೆ, ಟೀವಿ ಚಾನೆಲ್ಗಳ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದು ಮರ್ಯಾದೆ ಕಳೆದುಕೊಳ್ಳುವ ಹೆದರಿಕೆಗಾದರೂ, ಕುಡಿತ ಬಿಡುತ್ತೀರಿ. ಪದೇ ಪದೇ ಮುಖ್ಯಮಂತ್ರಿ ಬದಲಾಗುವ ಅಥವಾ ಬಿದ್ದುಹೋಗುವ ಸರ್ಕಾರದಲ್ಲಿ ಈ ಮಂಡಳಿಯ ಅಧ್ಯಕ್ಷನಾದರೆ ಪ್ರಯೋಜನವಿಲ್ಲ. ಏಕೆಂದರೆ ನಿಮ್ಮ ಹುದ್ದೆಯೂ ಬಹಳ ಬೇಗ ಹೋಗಿರುತ್ತದೆ.
ಕಾಶಿಗೆ ಹೋಗಿ ಕುಡಿತ ಬಿಟ್ಟು ಬನ್ನಿ
ಕಾಶಿಗೆ ಹೋದವರು ತಮಗಿಷ್ಟವಾದ್ದನ್ನು ಬಿಟ್ಟು ಬಂದರೆ ಪುಣ್ಯ ಬರುತ್ತದಂತೆ. ಯಾಕೆ ಕುಡಿತವನ್ನೇ ಒಮ್ಮೆ ಬಿಟ್ಟು ನೋಡಬಾರದು? ಹೆಂಡತಿಯನ್ನು ಬಿಟ್ಟು ಬಂದರೆ ಮರಳಿ ಕಳಿಸಿದ ಉದಾಹರಣೆಗಳಿವೆ.
-ಕುಡಿಮಗನ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40063ಗೆ ಭೇಟಿನೀಡಿ.