ಮಳೆಗಾಲ ನಮ್ಮೆಲ್ಲ ಭಾವನೆಗಳು ಉತ್ಕರ್ಷಗೊಳ್ಳುವ ಪರ್ವ ಕಾಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಮಳೆಗಾಲ ಹೆಚ್ಚೆಚ್ಚು ಆಪ್ಯಾಯಮಾನ. ರೈತರು ವರ್ಷದ ಕೂಳಿಗೆ ಕೊರತೆಯಿಲ್ಲ ಎನ್ನತ್ತಾ ಮುಂಜಾನೆಯೇ ಎದ್ದು ಹೊಲ- ಗದ್ದೆಗಳಿಗೆ ಹೋಗಿ ಕೆಲಸ ಆರಂಭಿಸಿದರೆ, ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ತೆರಳುವ ಉದ್ಯೋಗಿಗಳು, ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಳೆಗಾಲವನ್ನು ಆಸ್ವಾದಿಸುತ್ತಾರೆ. ಆದರೆ, ಮಳೆಗಾಲ ಪ್ರಾರಂಭವಾದ ಒಂದೆರೆಡು ದಿವಸಗಳಲ್ಲಿ ಮಳೆಯ ಪ್ರಭಾವದ ಅರಿವಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಹಾಸಿಗೆ ಹಿಡಿಯುವವರು ಹಲವರು. ಇಂಥ ವೇಳೆ ಒಂದಷ್ಟು ಮುಂಜಾಗ್ರತಾ ಕ್ರಮಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ.
ಆಹಾರ ಇತಿಮಿತಿ
ಮಳೆಗಾಲದಲ್ಲಿ ಬೇಗ ಜೀರ್ಣವಾಗುವಂಥ ಆಹಾರಗಳಿಗೆ ನಿಮ್ಮ ಆದ್ಯತೆ ಇರಲಿ. ಅತಿ ತಣ್ಣನೆಯ ಆಹಾರ, ಐಸ್ ಕ್ರೀಂ, ಕೂಲ್ಡ್ ಡ್ರಿಂಕ್ಸ್ ಬೇಡ. ದೇಹದ ಶಕ್ತಿಯು ಕುಗ್ಗುವುದರಿಂದ ದೇಹಕ್ಕೆ ಪುಷ್ಟಿ ನೀಡುವ ಆಹಾರ ತೆಗೆದುಕೊಳ್ಳಬೇಕು. ಅಕ್ಕಿ, ಗೋದಿ, ಬಾರ್ಲಿ, ಜೇನುತುಪ್ಪ ಮುಂತಾದುವುಗಳ ಬಳಕೆ ಉತ್ತಮ. ಉಪ್ಪು, ಹುಳಿ, ಖಾರ, ಹೆಚ್ಚಾಗಿರುವಂಥ ಆಹಾರ ಕಡಿಮೆ ಇರಲಿ. ರಸ್ತೆ ಬದಿಯ ತಿಂಡಿ ಸೇವಿಸದಿದ್ದರೆ ಅರೋಗ್ಯಕರ.
ಕಾಳಜಿ ಮುಖ್ಯ
ಮೊದಲ ಮಳೆ ಆರಂಭವಾಗುತ್ತಲೇ ಶೀತ-ನೆಗಡಿ-ಕೆಮ್ಮು-ಜ್ವರ ಸಾಮಾನ್ಯ. ಇವುಗಳ ಬಗ್ಗೆ ಅಸಡ್ಡೆ ಬೇಡ. ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರಿನಿಂದ ರೋಗ ಹರಡುವ ಸಂಭವ ಹೆಚ್ಚು. ಆದುದರಿಂದ ಕುದಿಸಿ, ಆರಿಸಿದ ನೀರನ್ನೇ ಕುಡಿಯಿರಿ. ನಿಮ್ಮ ದೇಹವನ್ನು ಮಳೆಗಾಲದಲ್ಲಿ ಶೀತದಿಂದ ತಡೆಯಲು ಸ್ನಾನಕ್ಕಿಂತ ಮೊದಲು ಅರ್ಧ ಕಪ್ ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಮೈಗೆ ಮಸಾಜ್ ಮಾಡಿಕೊಳ್ಳಿ. ಅರ್ಧ ಗಂಟೆಯ ನಂತರ ಬಿಸಿ-ಬಿಸಿಯಾದ ನೀರಿನಿಂದ ಸ್ನಾನ ಮಾಡಿ. ಈ ರೀತಿ ವಾರಕ್ಕೊಮ್ಮೆಯಾದರೂ ಮಾಡಿದರೆ, ದೇಹದಲ್ಲಿ ಶಾಖ ಉತ್ಪತ್ತಿಯಾಗಿ, ಹೆಚ್ಚು ಥಂಡಿಯಾಗುವುದಿಲ್ಲ. ಮಳೆಗಾಲದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುವ ಶುಂಠಿ, ಮೆಣಸಿನ ಕಾಳಿನ ಕಷಾಯ ಉಪಯೋಗಿಸುವುದು ಉತ್ತಮ. ಬೆಳಗಿನ ಬಿಸಿಬಿಸಿ ಕಾಫಿ ದೇಹಕ್ಕೆ ಮುದ ನೀಡುತ್ತವೆ.
ಅಸ್ತಮಾ- ಡಯಾಬಿಟಿಸ್
ಒಂದೇ ಸಮನೆ ಮಳೆ ಬಿದ್ದು ತಣ್ಣನೆ ಗಾಳಿ ಬೀಸುವುದರಿಂದ ದೇಹವು ಶಿಥಿಲಗೊಳ್ಳುತ್ತದೆ. ಆಗ ಅಸ್ತಮಾದಂಥ ಕಾಯಿಲೆಯು ಉಲ್ಬಣಗೊಳ್ಳುವ ಸಂಭವ ಹೆಚ್ಚು. ಅಸ್ತಮಾ ರೋಗಿಗಳು ದೇಹವು ಆದಷ್ಟು ಉಷ್ಣತೆಯಿರುವಂತೆ ಕಾಪಾಡಿಕೊಳ್ಳಬೇಕು. ಇನ್ನು ಸಕ್ಕರೆ ರೋಗ ಇರುವವರಂತೂ ತಮ್ಮ ಕಾಲಿನ ಪಾದದ ಬಗ್ಗೆ ಹೆಚ್ಚು ನಿಗಾ ವಹಿಸುವುದು ಅಗತ್ಯ. ಮಳೆಗಾಲದಲ್ಲಿ ರೋಗಾಣುಗಳು ಬಹುಬೇಗ ದೇಹವನ್ನು ಪ್ರವೇಶಿಸುವ ಸಂಭವ ಹೆಚ್ಚು. ಸಂಧಿ, ಕೀಲು ನೋವು, ವಾತ-ಕಫಗಳು ಉಲ್ಬಣಗೊಳ್ಳದಂತೆ ಎಚ್ಚರ ವಹಿಸಿ. ಮನೆಯಿಂದ ಹೊರಹೋಗುವಾಗ ಚಪ್ಪಲಿ ಧರಿಸಿ. ಹೊರಗಡೆಯಿಂದ ಬಂದ ತಕ್ಷಣವೇ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಚರ್ಮಕ್ಕೆ ಅಲರ್ಜಿ
ಮಳೆಗಾಲದಲ್ಲಿ ಚರ್ಮರೋಗ, ಕಜ್ಜಿ- ತುರಿಕೆ ಮುಂತಾದುವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ರಸ್ತೆಯಲ್ಲಿ ಓಡಾಡುವಾಗ ಕೊಳಚೆ ನೀರನ್ನು ತುಳಿಯುವುದು, ನಿಂತ ನೀರಿನಲ್ಲಿ ಕೈ- ಕಾಲು ತೊಳೆಯುವುದರಿಂದಲೂ ತುರಿಕೆ, ಚರ್ಮರೋಗ ಬರಬಹುದು. ಬಹು ಮುಖ್ಯವಾಗಿ ಸೊಳ್ಳೆಗಳಿಂದ ರೋಗಗಳು ಹರಡದಂತೆ ಎಚ್ಚರಿಕೆ ಅಗತ್ಯ. ಚರ್ಮದಲ್ಲಿ ತುರಿಕೆ, ಕಜ್ಜಿಗಳು ಕಂಡರೆ ವೈದ್ಯರನ್ನು ಸಂಪರ್ಕಿಸಿ.
ವಸ್ತ್ರಗಳ ಬಗ್ಗೆ ಅರಿವಿರಲಿ
ಮಳೆಗಾಲದಲ್ಲಿ ಸ್ಲೀವ್ಲೆಸ್ ಡ್ರೆಸ್ಗಳನ್ನು ಧರಿಸುವುದು ಅಷ್ಟಾಗಿ ಒಳ್ಳೆಯದಲ್ಲಿ. ಹೆಚ್ಚಾಗಿ ಕಾಟನ್ ಡ್ರೆಸ್ಗಳು, ತುಂಬು ತೋಳಿನ ಶರ್ಟ್ಗಳು, ಉಣ್ಣೆಯ ಹಾಗೂ ವುಲನ್ ಸ್ವೇಟರ್ಗಳನ್ನು ಬಳಸುವುದು ಸೂಕ್ತ.
ಒದ್ದೆ ಬಟ್ಟೆ ಹಾಕ್ಬೇಡಿ...
ಮಳೆಗಾಲದಲ್ಲಿ ಬಟ್ಟೆಗಳನ್ನು ಚೆನ್ನಾಗಿ ಒಣಗಿಸಿ ಧರಿಸಬೇಕು. ಸೀರೆ ಧರಿಸುವಾಗ ಪಾದಕ್ಕಿಂತ ಹೆಚ್ಚು ಉದ್ದವಾಗಿ ಉಡಬಾರದು. ನಡೆಯುವಾಗ ಒದ್ದೆ ಸೀರೆ ಕಿರಿಕಿರಿ ತರಬಹುದ. ಏರ್ಕಂಡಿಷನರ್ ಇರುವ ಕೋಣೆಗೆ ಒದ್ದೆ ತಲೆಕೂದಲು ಅಥವಾ ಒದ್ದೆ ಬಟ್ಟೆಯನ್ನು ಧರಿಸಿ ಹೋಗದಿರುವುದು ಉತ್ತಮ.
ಸ್ವಚ್ಛ ವಾತಾವರಣ
ಮನೆಯ ಸುತ್ತಮುತ್ತ ಶುಚಿಯಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಪ್ಲಾಸ್ಟಿಕ್ ಬಾಟಲಿ, ಎಳ ನೀರಿನ ಖಾಲಿ ಚಿಪ್ಪುಗಳು, ತೆಂಗಿನ ಚಿಪ್ಪುಗಳು ಮುಂತಾದುವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸಿಮೆಂಟು ಅಥವಾ ಟೈಲ್ಸ್ ಹಾಕಿರುವ ನೆಲದಲ್ಲಿ ಪಾಚಿಗಟ್ಟದಂತೆ ನೋಡಿಕೊಳ್ಳಿ. ಇಲ್ಲವಾದರೆ ನಡೆದಾಡುವಾಗ ಜಾರಿ ಬೀಳುವ ಸಂಭವವಿರುತ್ತದೆ. ಮಕ್ಕಳು ಮಳೆಗಾಲದಲ್ಲಿ ನೀರಿನಲ್ಲಿ ಆಡುತ್ತಾರೆ. ಜೊತೆಗೆ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚು ಇಲ್ಲವಾದ್ದರಿಂದ, ರೋಗಾಣುಗಳು ಬೇಗ ದೇಹವನ್ನು ಆವರಿಸುತ್ತವೆ. ಆರೋಗ್ಯ ಕೂಡಲೇ ಕೈಕೊಡುತ್ತದೆ. ಅವರ ಬಗ್ಗೆ ಕಾಳಜಿ ಅಗತ್ಯ.
ಭಾಗ್ಯ ನಂಜುಂಡಸ್ವಾಮಿ