ಎಲ್ಲ ಜೀವಿಗಳ ಸಂತಾನವೃದ್ಧಿಗೆ ಪ್ರಶಸ್ತವಾದ ಕಾಲವಿರುತ್ತದೆ. ಕಪ್ಪೆ, ಚೇಳು, ನಾಯಿ ಹೀಗೆ ಕೆಲ ಪ್ರಾಣಿಗಳು ನಿರ್ದಿಷ್ಟ ಕಾಲಮಾನದಲ್ಲೇ ಮೊಟ್ಟೆಯಿಡುತ್ತವೆ ಅಥವಾ ಮರಿ ಹಾಕುತ್ತವೆ. ಅದರಂತೆ ಮಾನವ ಸಂಕುಲಕ್ಕೆ ಹೆಮ್ಮಾರಿಯಾಗಿ ಕಾಡುತ್ತಿರುವ ಈಡಿಸ್ ಇಜಿಪ್ಟಿ ಎಂಬ ಜಾತಿಯ ಸೊಳ್ಳೆಗಳು ಮಳೆಗಾಲದಲ್ಲಿ ತನ್ನ ಸಂತತಿ ಬೆಳೆಸುತ್ತವೆ. ಸೆಪ್ಟೆಂಬರ್‌ನಲ್ಲಿ ಅಟ್ಟಹಾಸ ಮೆರೆಯುತ್ತವೆ. ಭಾರತವೂ ಸೇರಿದಂತೆ ವಿಶ್ವದ 50 ದೇಶಗಳಲ್ಲಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಡೆಂಘೀ ಜ್ವರ ಕುರಿತ ವರದಿಗಳು ಮುಖಪುಟಗಳಲ್ಲಿ ರಾರಾಜಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, 2.57 ಶತಕೋಟಿ ಜನರು ಡೆಂಘೀ ಜ್ವರಕ್ಕೆ ಸಿಲುಕುವ ಅಪಾಯದಲ್ಲಿರುತ್ತಾರೆ. ಕಳೆದ ವರ್ಷ ದೇಶದ ಶೇ.80ರಷ್ಟು ಜನರಿಗೆ ಇದರ ಬಿಸಿ ತಟ್ಟಿತ್ತು. ಕರ್ನಾಟಕದಲ್ಲೂ 4,782 ಜನರು ಡೆಂಘೀ ಬಾಧೆಗೊಳಗಾಗಿದ್ದರು. ಅದರಲ್ಲಿ 20ಕ್ಕೂ ಅಧಿಕ ಜೀವಹಾನಿಯಾದವು. ಹಾಗಾಗಿ, ಡೆಂಘೀ ಪೂರ್ವಾಪರ ಮಾಹಿತಿ ಇಲ್ಲಿದೆ.
ರೋಗದ ಲಕ್ಷಣಗಳು
104 ಡಿಗ್ರಿ ಸೆಲ್ಸಿಯಸ್‌ವರೆಗೆ ಜ್ವರ.
ತಲೆ, ಸ್ನಾಯು ಮತ್ತು ಮೊಣಕಾಲು ಮೊಣಕೈಗಳಲ್ಲಿ ನೋವು.
ಮೈಯೆಲ್ಲಾ ತುರಿಕೆ ಮತ್ತು ಚರ್ಮದಲ್ಲಿ ಕೆಂಪು ಗುಳ್ಳೆ ಕಾಣಿಸಿಕೊಳ್ಳುವಿಕೆ.
ಕಣ್ಣು ನೋವು. ವಾಂತಿ ಮತ್ತು ಭೇದಿ.
ಮೂತ್ರ ವಿಸರ್ಜನೆ ತೀರಾ ಕಡಿಮೆ.
ಹೊಟ್ಟೆ ನೋವು ಅದರಲ್ಲೂ ಬಲಭಾಗ ಲಿವರ್ ಬಳಿ.
ಬಾಯಿ, ಮೂಗು, ವಸಡಿನಲ್ಲಿ ರಕ್ತ ಬರುತ್ತದೆ.
ಅಂಗಾಂಗಳಲ್ಲಿ ಜಡತ್ವ.
ಗ್ಯಾಸ್ಟ್ರಿಕ್ ಉಲ್ಬಣವಾಗುತ್ತದೆ
ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುತ್ತೆ.
ಉರಿಯೂತ ಕಾಣಿಸಿಕೊಳ್ಳುತ್ತದೆ.
ನ್ಯೂಮೋನಿಯಾ ಅಧಿಕವಾಗುತ್ತದೆ.
ಮಕ್ಕಳು ಮತ್ತು ವೃದ್ಧರಿಗೆ ಬಹುಬೇಗನೆ ಬಾಧಿಸುತ್ತದೆ.
ಸ್ವಲ್ಪ ನಿರ್ಲಕ್ಷಿಸಿದರೂ ಜೀವಕ್ಕೆ ಅಪಾಯ ತರಬಲ್ಲದು.
ಹೇಗೆ ಹರಡುತ್ತದೆ?
ಈಡಿಸ್ ಜಾತಿಯ ಸೊಳ್ಳೆಯು ನಾವು ಕಾರುವ ಕಾರ್ಬನ್ ಡೈಆಕ್ಸೈಡ್ ಮತ್ತು ಲ್ಯಾಕ್ಟಿಕ್ ಆಸಿಡ್ ಅನ್ನು ಬೇಗನೆ ಗ್ರಹಿಸುತ್ತದೆ. ಇದು 100 ಅಡಿಯಷ್ಟು ದೂರದಲ್ಲಿದ್ದರೂ ಗ್ರಹಿಸಿ ವ್ಯಕ್ತಿ ಬಳಿ ಬರುತ್ತದೆ. ಅಲ್ಲದೆ ಹೆಚ್ಚು ಬೆವರುವವರಿಗೆ ಕಚ್ಚುತ್ತದೆ. ನಿಮ್ಮ ಸುತ್ತಮುತ್ತಲಿನ ಬಣ್ಣಕ್ಕಿಂತ ನೀವು ತೊಡುವ ಬಟ್ಟೆ ಆಕರ್ಷಕವಾಗಿದ್ದರೆ ಕಚ್ಚಲು ಹಿಂಬಾಲಿಸುತ್ತದೆ. ಕಚ್ಚಲು ಆರಂಭಿಸಿದರೆ ರಕ್ತ ಹೀರುವವರೆಗೆ ಬಿಡುವುದಿಲ್ಲ. ಅಧಿಕ ಉಷ್ಣಾಂಶವುಳ್ಳವರಿಗೆ ಹಾಗೂ 21ರಿಂದ 30 ವಯೋವಾನದವರಿಗೆ ಕಚ್ಚುವುದು ಅಧಿಕ.
ಔಷಧ ಹೇಗೆ?
ಈ ಜ್ವರಕ್ಕೆ ಸದ್ಯ ದೇಶದಲ್ಲಿ ಲಭ್ಯವಿರುವ ಔಷಧಗಳಲ್ಲಿ ಪ್ಯಾರಾಸೆಟಮೊಲ್ ಬಿಟ್ಟರೆ ಬೇರೆಲ್ಲ ನಿರುಪಯೋಗಿ. ಯಾವುದೇ ಕಾರಣಕ್ಕೂ ಆ್ಯಸ್ಪಿರಿನ್ ಅಥವಾ ಡಿಸ್ಪಿರಿನ್ ಔಷಧ ಸೇವಿಸಬೇಡಿ. ಇದರಿಂದ ಪ್ಲೆಟ್ಲೆಟ್ಸ್ ಕಡಿಮೆಯಾಗುತ್ತವೆ. ಇದು ಅಂಟುರೋಗವಾದ್ದರಿಂದ ಆ್ಯಂಟಿಬಯೋಟಿಕ್ ಅಥವಾ ಆ್ಯಂಟಿ ಮಲೇರಿಯಾ ಮಾತ್ರೆಗಳು ಕೆಲಸ ಮಾಡುವುದಿಲ್ಲ. ದಿನಕ್ಕೆ ಕನಿಷ್ಠ 4 ಲೀ. ನೀರು ಕುಡಿಯಿರಿ. ಹೆಚ್ಚು ಶಕ್ತಿ ಬರುವಂತ ಆಹಾರ, ಹಣ್ಣಿನ ರಸ ಸೇವಿಸಿ. ವಾಂತಿ- ಭೇದಿಯಾದರೆ ವೈದ್ಯರ ಸಲಹೆಯೊಂದಿಗೆ ಒಆರ್‌ಎಸ್ ಬಳಸಿ. ಈ ವೇಳೆ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳಿ.
ಕಳವಳಕಾರಿ ಸಂಗತಿ
ಆಫ್ರಿಕ, ಬ್ರೆಜಿಲ್, ಲಂಡನ್, ಅಮೆರಿಕ ಮತ್ತು ಕೆರೇಬಿಯನ್ ದ್ವೀಪಗಳಲ್ಲಿ ಈ ಸೊಳ್ಳೆ ಸಂತತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಭಾರತದಲ್ಲೇಕೆ ಇದು ಸಾಧ್ಯವಾಗುತ್ತಿಲ್ಲ? ಅಲ್ಲದೆ ಡೆಂಘೀ ಜ್ವರದ ಹತೋಟಿಗೆ ಪ್ಯಾರಿಸ್‌ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ 'ಸ್ಯಾನೋಫಿ' ಔಷಧ ಕಂಪಪನಿಯು ತಯಾರಿಸಿದ ಲಸಿಕೆ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನು ತರಿಸಿ ಬಳಸಿಕೊಳ್ಳಲು ಸಾಧ್ಯವಾಗದೇ ಇರುವುದು ನಮ್ಮ ದೌರ್ಭಾಗ್ಯವೇ ಸರಿ.
ಮುಂಜಾಗ್ರತೆಗಳೇನು?
ಈ ಸೊಳ್ಳೆ ಮೊಟ್ಟೆಯಿಟ್ಟು ಮರಿ ಮಾಡಲು ಅವಕಾಶ ಕೊಡದಿರುವುದು.
ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು.
ನೀರು ಸಂಗ್ರಹಿಸಿಡುವ ತೊಟ್ಟಿಗಳ ಸ್ವಚ್ಛತೆ.
ಕುದಿಸಿ ಆರಿಸಿದ ನೀರು ಸೇವನೆ.
ಮಲಗುವಾಗ ಸೊಳ್ಳೆ ಪರದೆ ಬಳಕೆ.
ಕೋಣೆ ಸಂಪೂರ್ಣ ಕತ್ತಲಾಗಿರುವಂತೆ ನೋಡಿಕೊಳ್ಳಿ.
ಈ ಸೊಳ್ಳೆ ಸಂಜೆ 5ರಿಂದ 9ರವರೆಗೆ ಮತ್ತು ಬೆಳಗ್ಗೆ 4ರಿಂದ 7ರ ವರೆಗೆ ಕ್ರಿಯಾಶೀಲವಾಗಿರುವ ಕಾರಣ ಈ ವೇಳೆ ಜಾಗ್ರತರಾಗಿರಿ.
ಜ್ವರ, ಮೈಕೈ ನೋವು ಬಂದರೆ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
ಏನಿದು ಡೆಂಘೀ?
ಒಬ್ಬರಿಂದ ಒಬ್ಬರಿಗೆ ಹರಡುವ ಅಂಟು ಜ್ವರ. ಈಡಿಸ್ ಇಜಿಪ್ಟಿ ಎಂಬ ಸೊಳ್ಳೆಯಿಂದ ಬರುತ್ತದೆ. ದೇಶದಲ್ಲಿ ಮೊದಲು ಬಾರಿ ದೆಹಲಿ ಮತ್ತು ಲಖನೌದಲ್ಲಿ 1996ರಲ್ಲಿ ಕಾಣಿಸಿಕೊಂಡಿತು. ಅಲ್ಲಿಂದ ಪ್ರತಿ ವರ್ಷ ಹಲವು ರೂಪ ತಾಳುತ್ತ ತನ್ನ ಪ್ರತಾಪ ತೋರುತ್ತಿದೆ. ಕಳೆದ ವರ್ಷ ಈ ಜ್ವರ ಬಂತೆಂದರೆ ಸರಾಸರಿ ಕನಿಷ್ಠ 10ರಿಂದ 14 ದಿನಗಳವರೆಗೆ ಬಾಧಿಸುತ್ತಿತ್ತು. ಆದರೆ ಈ ವರ್ಷದ ಸಮಾಧಾನ ಸಂಗತಿ ಎಂದರೆ ಡೆಂಘೀ ಜ್ವರ ಬಂದರೆ 3ರಿಂದ 4 ದಿನಗಳವರೆಗೆ ಮಾತ್ರ ಇರುತ್ತದೆ! ಈ ಸೊಳ್ಳೆಯಲ್ಲೂ ಎರಡು ಪ್ರಕಾರಗಳಿವೆ- ಒಂದು ಈಡಿಸ್ ಇಜಿಪ್ಟಿ, ಮತ್ತೊಂದು ಈಡಿಸ್ ಆಲ್ಬೋಪಿಕ್ಟಸ್. ಮೊದಲನೆಯದು ತೀರಾ ಪ್ರಭಾವಕಾರಿ. ಇದರ ದೇಹದ ಮೇಲೆ ಸುರುಳಿಯಾಕಾರದ ಕಪ್ಪು ಮತ್ತು ಬಿಳಿ ಪಟ್ಟಿ, ಉದ್ದನೆಯ ಕಾಲುಗಳಿರುತ್ತವೆ. ನೆಲದ ಮೇಲೆ ತುಂಬಾ ಕ್ರಿಯಾಶೀಲವಾಗಿತ್ತದೆ. ಮುಸ್ಸಂಜೆ ವೇಳೆಯಲ್ಲಿ ಕಚ್ಚುವುದು ಅಧಿಕ. ಇದು ಬಹುಬೇಗನೆ ವಾಸನೆಯನ್ನು ಗ್ರಹಿಸಬಲ್ಲದು. ಮನುಷ್ಯರ ಬಳಿಗೆ ನೇರವಾಗಿ ಬರದೆ ಹಿಂದಿನಿಂದ ಅಥವಾ ಕಾಲಿನ ಭಾಗದಲ್ಲಿ ಬಂದು ಕಚ್ಚುತ್ತದೆ. ಕಚ್ಚಿದ ಸ್ಥಳದಲ್ಲಿ ಸ್ವಲ್ಪ ಉರಿ, ಬರೆ ಅಥವಾ ಬಾಸುಂಡೆ ಕಾಣಿಸಿಕೊಳ್ಳುತ್ತದೆ. ಇನ್ನು ಈಡಿಸ್ ಅಲ್ಬಾಪಿಕ್ಟಸ್ ಸೊಳ್ಳೆಯು ಕಪ್ಪು-ಬಿಳಿಯ ಪಟ್ಟಿಗಳುಳ್ಳ ಕಾಲುಗಳು, ಬಿಳಿ ಬಣ್ಣದ ದೇಹ. ಇದು ಕಚ್ಚುವಾಗ ತನ್ನ ಇರುವಿಕೆಯನ್ನು ತೋರಿಸಿಕೊಡುವುದಿಲ್ಲ. ಆದರೆ ಕಚ್ಚಿ ಎದ್ದು ಹೋದ ಮೇಲೆಯೇ ಇದರ ಪರಿಣಾಮ ತಿಳಿಯೋದು. ಆಗ ತೀವ್ರ ಉರಿತ ಬರುತ್ತದೆ.
= ವೀರೇಶ ಜಿ. ಮಠ
mathvg@gmail.com