ಆಫೀಸ್ನಲ್ಲಿ ಆಕಳಿಸುವುದೇ? ಎಷ್ಟಕ್ಕೂ ಮುಜುಗರವೆನಿಸುವಂಥದ್ದೇ. ಮನೆಯಲ್ಲಾದರೆ ಆರಾಮಾಗಿ ಬಾಯಿ ದೊಡ್ಡದು ಮಾಡಿ ಆಕಳಿಸುವುದರಲ್ಲೂ ಒಂದು ಸುಖವಿದೆ ಎನ್ನಬಹುದು. ಆದರೆ ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಕಳಿಸುವುದು ಅತ್ಯಂತ ಕಿರಿಕಿರಿಯ ವಿಚಾರವೇ. ಆದರೆ, ಖುಷಿ ಪಡುವ ವಿಚಾರವೆಂದರೆ ಆಕಳಿಸುವುದರಿಂದ ಮೆದುಳು ತಂಪಾಗುತ್ತದೆ!
ವಾತಾವರಣದ ಬದಲಾವಣೆಯಾದಂತೆ ಮನುಷ್ಯನಲ್ಲಿ ಆಕಳಿಕೆ ಕಾಣಿಸಿಕೊಳ್ಳುತ್ತದೆ. ಆಕಳಿಕೆ ಸಾಂಕ್ರಾಮಿಕ ರೋಗದಂತೆ. ತಾಪಮಾನದ ಏರಿಳಿತದಿಂದ ಘಟಿಸುತ್ತದೆ. ಒಬ್ಬರಿಂದ ಮತ್ತೊಬ್ಬರಿಗೂ ಬೇಗನೆ ಹರಡುತ್ತದೆ. ಆಕಳಿಸುವುದರಿಂದ ಮೆದುಳಿನ ತಾಪಮಾನ ಸಮತೋಲನ ಸಾಧ್ಯ. ಸೂಕ್ತ ಹೊಮಿಯೋಸ್ಟಾಸಿಸ್ ಅನ್ನು ಕಾಪಾಡುವಲ್ಲಿ ಸಹಕಾರಿ ಆಗುತ್ತದಂತೆ. ನ್ಯೂಯಾರ್ಕ್ನ ಒನೈಟಾದಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯ ಮನಶಾಸ್ತ್ರಜ್ಞ ಆ್ಯಂಡ್ರೂ ಗ್ಯಾಲಪ್ ಆಕಳಿಕೆಯಿಂದ ಮೆದುಳು ಕೂಲಾಗಿರುತ್ತದೆ ಎಂಬುದನ್ನು ಅಷ್ಟೇ ಕೂಲಾಗಿ ವಿವರಿಸಿದ್ದಾರೆ. ಒಂದು ನಿರ್ದಿಷ್ಟ ತಾಪಮಾನವಿದ್ದಾಗ ಆಕಳಿಕೆ ಸಾಮಾನ್ಯವಾಗಿ ವಕ್ಕರಿಸುತ್ತದೆ. ಥರ್ಮಲ್ ವಿಂಡೋ ಎಂದೂ ಹೇಳಬಹುದು.
ವಿಯೆನ್ನಾ ವಿವಿಯ ಜಾರ್ಜ್ ಮೆಸೆನ್ ಮತ್ತು ಕಿಮ್ ಡೂಸ್ಚ್ ಪ್ರಯೋಗಾತ್ಮಕವಾಗಿ ಆಕಳಿಕೆ ಬರುವ ಸಂದರ್ಭವನ್ನು ಕಂಡುಕೊಂಡಿದ್ದಾರೆ. ಹೊರವಲಯದಲ್ಲಿ ಆಕಳಿಕೆಯ ಪ್ರಮಾಣವೆಷ್ಟು ಎಂಬುದನ್ನು ತಿಳಿಯುವ ಪ್ರಯತ್ನ ನಡೆಸಿದ್ದರು. ವಿಯೆನ್ನಾ, ಆಸ್ಟ್ರೇಲಿಯಾದೆಲ್ಲೆಡೆ ಮಳೆಗಾಲ, ಬೇಸಿಗೆಯಲ್ಲಿ ಆಕಳಿಯ ಪ್ರಮಾಣ ಹೇಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಅಮೆರಿಕದ ಆರಿಜೋನಾದಲ್ಲಿ ಮೊದಲೊಮ್ಮೆ ಆಕಳಿಕೆಯ ಬಗೆಗೆ ಅಧ್ಯಯನ ನಡೆಸಲಾಗಿತ್ತು. ಒಂದಷ್ಟು ಮಂದಿಯನ್ನು ಪ್ರಯೋಗದಲ್ಲಿ ಭಾಗಿಯಾಗಿಸಿ ಅವರ ಆಕಳಿಯಲ್ಲಿನ ಆಳ ಅರಿವನ್ನು ತಿಳಿಯಲು ಯತ್ನಿಸಲಾಗಿತ್ತು. ಈ ಎಲ್ಲ ಪ್ರಯೋಗಗಳನ್ನು ಗಮನಿಸಿದಾಗ ತಾಪಮಾನದ ಏರಿಳಿತವೇ ಆಕಳಿಕೆಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ವಿಯೆನ್ನಾದ ಪ್ರಜೆಗಳು ವಿಂಟರ್ಗಿಂತಲೂ ಬೇಸಿಗೆಯಲ್ಲಿ ಹೆಚ್ಚು ಆಕಳಿಸಿದ್ದಾರೆ. ಆದರೆ ಆರಿಜೋನಾದಲ್ಲಿ ಬೇಸಿಗೆಗಿಂತ ವಿಂಟರ್ನಲ್ಲೇ ಹೆಚ್ಚು ಆಕಳಿಸಿದ್ದಾರೆ.
ಆಕಳಿಕೆ ಬರಲು ಯಾವುದೇ ಕಾಲ, ಸ್ಥಳ ಲೆಕ್ಕಕ್ಕೆ ಬರುವುದಿಲ್ಲ. ಸೂಕ್ತ ಉಷ್ಣ ವಲಯದಲ್ಲಿದ್ದರೆ ಆಕಳಿಕೆ ತನ್ನಿಂದ ತಾನೇ ವಕ್ಕರಿಸಿಬಿಡುತ್ತದೆ. ದೇಹದಲ್ಲಿ ಅಂಥ ಉಷ್ಣಾಂಶ ಉತ್ಪತ್ತಿಯಾದಾಗ ಆಕಳಿಗೆ ಸಹಜವಾಗಿ ಬರುತ್ತದೆ. ಆಕಳಿಕೆಯಿಂದ ಮೆದುಳು ತಂಪಾಗುತ್ತದಂತೆ. ತುಂಬಾ ಚಳಿಯಿದ್ದಾಗ ಆಕಳಿಸುವುದು ಅಷ್ಟು ಒಳಿತಲ್ಲ ಅಂತಾರೆ ತಜ್ಞರು.
-ಮಂಜು