ಆತ್ಮಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಇಂದು ಬೆಲೆ ಹೆಚ್ಚು. ಹೆಂಗಳೆಯರಿಗಂತೂ ಇದು ಅತಿಮುಖ್ಯ. ಆದರೆ, ಸ್ಕಿನ್ ಟ್ಯಾಗ್ ಎಂಬ ಮಹಾಮಾರಿ ಅಂಟಿಕೊಂಡರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತರಹೇವಾರಿ ಕ್ರೀಂ, ಪೌಡರ್ ಮೆತ್ತಿಕೊಂಡು ಮದ್ದು ಕಂಡುಕೊಳ್ಳಲೆತ್ನಿಸುತ್ತಾರೆ. ವರ್ಷಗಟ್ಟಲೇ ಮುಖದ ಮೇಲೆ ಕಾಣಿಸಿಕೊಳ್ಳುವ ಸ್ಕಿನ್ ಟ್ಯಾಗ್‌ನಿಂದ ಹೊರ ಹೋಗಲು ಅವರಿಗೇನೋ ಹಿಂಜರಿಕೆ. ಆಸ್ಪತ್ರೆ ಅಲೆದು ಚಪ್ಪಲಿ ಸವೆಸುತ್ತಾರೆ. ಮನೆಯಲ್ಲೇ ಅವರಿಗೆ ಮದ್ದಿದೆ ಎಂದು ತಿಳಿಯುವುದು ಯಾವಾಗ?
ಏನಿದು ಸ್ಕಿನ್ ಟ್ಯಾಗ್?
ಚರ್ಮದ ಮೇಲೆ ಸಣ್ಣ ಸಣ್ಣ ಬೊಬ್ಬೆಗಳಂತೆ ಕಾಣುವ ದುಂಡಾಕಾರವಾಗಿ ವಿವಿಧ ಗಾತ್ರದಲ್ಲಿ ಬೆಳೆದು ಜೋತು ಬಿದ್ದಿರುವ ಭಾಗಕ್ಕೆ ಸ್ಕಿನ್ ಟ್ಯಾಗ್ ಅಂತಾರೆ. ಸಾಮಾನ್ಯವಾಗಿ ಇವುಗಳನ್ನು ಕೆಡು, ಹುಲ್ಲು ಉರಿ ಮತ್ತು ಕುಲುಪರೆ ಎಂದೂ ಕರೆಯಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಡು ಕಂದು ಬಣ್ಣದಲ್ಲಿರುತ್ತವೆ. ಈ ಸ್ಕಿನ್ ಟ್ಯಾಗ್‌ಗಳು ಕೊಲಜೆನ್ ಮತ್ತು ರಕ್ತನಾಳಗಳ ಗೊಂಚಲುಗಳು. ಕುತ್ತಿಗೆ, ಮೊಣಕೈ ಮತ್ತು ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಮಧ್ಯವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಇವುಗಳ ಸಂಖ್ಯೆ ಹೆಚ್ಚಾದಲ್ಲಿ ಚರ್ಮ ಅಸಹ್ಯ ರೀತಿಯಲ್ಲಿ ಕಾಣಿಸುತ್ತದೆ.
ಇದಕ್ಕಿದೆ ಮನೆಮದ್ದು!
- ಎರಡು ವಾರ ಕಾಲ ಪ್ರತಿದಿನ ಶುಂಠಿ ತುಂಡನ್ನು ಉಜ್ಜಿಕೊಳ್ಳಿ.
- ಫರಂಗಿ ಹಣ್ಣಿನ ರಸವನ್ನು ಹಚ್ಚಿಕೊಂಡು 20ರಿಂದ 25 ನಿಮಿಷಗಳವರೆಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
- ಈರುಳ್ಳಿ ರಸವನ್ನು ಉಪ್ಪಿನೊಂದಿಗೆ ಬೆರೆಸಿ ಹಚ್ಚಿ 20- 25 ನಿಮಿಷದ ವರೆಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
- ನಿಂಬೆಹಣ್ಣಿನ ರಸವನ್ನು ಹಚ್ಚಿ 20-25 ನಿಮಿಷ ಹಾಗೆಯೇ ಬಿಡಿ. ಸ್ವಲ್ಪ ಒಣಗಿದ ಮೇಲೆ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
- ಎಕ್ಕದ ಗಿಡದ ಹಾಲನ್ನು ಸ್ಕಿನ್ ಟ್ಯಾಗ್ ಮೇಲೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ.
- ಬೆಳ್ಳುಳ್ಳಿ ರಸವನ್ನು ಹಚ್ಚಿ 20-25 ನಿಮಿಷ ಹಾಗೆಯೇ ಬಿಡಿ. ಸ್ವಲ್ಪ ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
- ಲೋಳೆ ರಸವನ್ನು ಸ್ಕಿನ್ ಟ್ಯಾಗ್ ಮೇಲೆ ಉಜ್ಜಿ ಅರ್ಧ ತಾಸಿನ ನಂತರ ತಣ್ಣನೆ ನೀರಿನಲ್ಲಿ ತೊಳೆಯಿರಿ.
- ರಾತ್ರಿ ಮಲಗುವ ಮುನ್ನ ಸ್ಕಿನ್ ಟ್ಯಾಗ್ ಮೇಲೆ ಹರಳೆಣ್ಣೆ ಹಚ್ಚಿ ಬೆಳಗ್ಗೆದ್ದ ತಕ್ಷಣ ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿರಂತರ ಒಂದು ತಿಂಗಳು ಈ ಪ್ರಕ್ರಿಯೆ ಜಾರಿಯಲ್ಲಿರಲಿ.
- ಬಾಳೆ ಹಣ್ಣಿನ ಸಿಪ್ಪೆಯನ್ನು ಸ್ಕಿನ್ ಟ್ಯಾಗ್ ಮೇಲೆ ಉಜ್ಜಿ ಅರ್ಧ ಗಂಟೆ ನಂತರ ತಣ್ಣನೆ ನೀರಿನಲ್ಲಿ ತೊಳೆಯಿರಿ. ಸತತ 15 ದಿನ ಈ ರೀತಿ ಮಾಡಿದರೆ ಸ್ಕಿನ್ ಟ್ಯಾಗ್‌ನಿಂದ ಮುಕ್ತಿ ಸಿಗುತ್ತದೆ.
-ಕವಿತಾ ಜಿ.ಎನ್
kavitagn@gmail.com