ತಿನ್ಬೇಡ ಕಮ್ಮಿ!
ಐ ಯಾಮ್ LEAVING ಇಟ್!!! ಇರುವೆಗೆ, ಆನೇನ ನೂಕೋಕಾಗುತ್ತಾ?...
ಐ ಯಾಮ್ LEAVING ಇಟ್!!!
ಇರುವೆಗೆ, ಆನೇನ ನೂಕೋಕಾಗುತ್ತಾ? ಟಾರ್ಚು, ಸೂರ್ಯಂಗೇ ಕಾಂಪಿಟೀಶನ್ ಕೊಡೋಕಾಗುತ್ತಾ? ಗರಿಕೆ ಹುಲ್ಲು, ಆಲದ ಮರಾನ ಅಲ್ಲಾಡ್ಸೋಕಾಗುತ್ತಾ? ಬಸವನ ಹುಳು, ಓಡ್ತಾ ಇರೋ ಮೊಲಾನ ಓವರ್ಟೇಕ್ ಮಾಡೋಕಾಗುತ್ತಾ? ಓಡಿ ಹೋಗದಿರಿ, ಇಲ್ಲಿಗೆ ನಿಲ್ಲಿಸುತ್ತೇನೆ, ಇನ್ಯಾವುದೇ ಉದಾಹರಣೆ ಕೊಡುವುದಿಲ್ಲ. ನಾನಿಂದು ಹೇಳ ಹೊರಟಿರೋ ವ್ಯಕ್ತಿಯ ಗುಣಗಾನ ಮಾಡುವುದಕ್ಕೆ ಮುನ್ನುಡಿಯಾಗಿ ಇಷ್ಟು ಉದಾಹರಣೆ ಕೊಡಬೇಕಾಯಿತು ಅಷ್ಟೆ. ಈ, ಮೇಲೆ ಹೇಳಿದ ಬಸವನ ಹುಳು, ಗರಿಕೆ ಹುಲ್ಲು, ಟಾರ್ಚು, ಇರುವೆ ಎಲ್ಲವೂ 'ಮೋರ್ಗನ್ ಸ್ಪರ್ಲಾಕ್' ಎಂಬ ಒಬ್ಬ ಅಮೇರಿಕನ್ ಅದ್ವಿತೀಯ ಹುಚ್ಚನ ಕುರಿತಾದ್ದು. ಆತ ವಿಯೆಟ್ನಾಮ್ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ, 'ವಾಟರ್ ಗೇಟ್' ತೆರೆಯಲಿಲ್ಲ, ಅಫ್ಘಾನಿಸ್ಥಾನದಲ್ಲಿ ರಷ್ಯನ್ನರ ಜೊತೆ ಗುಡಾರ ಹೂಡಲಿಲ್ಲ, ವೈಟ್ ಹೌಸ್ ಇಂಟರ್ನ್ ಜೊತೆ ಅಕ್ರಮ ಸಂಬಂಧ ಇರಿಸಿಕೊಳ್ಳಲಿಲ್ಲ, ತೈಲಕ್ಕಾಗಿ ಇರಾಕ್ ಮೇಲೆ ಅಕ್ರಮಣ ಮಾಡಲಿಲ್ಲ, ಈ ತರಹದ ಇತರ ಯಾವುದೇ ಹುಚ್ಚುತನಗಳ ಕಾರ್ಯಗಳಿಗೆ ಕೈ ಹಾಕಲಿಲ್ಲ. ಇಷ್ಟಕ್ಕೂ ಇಲ್ಲಿ ಹೇಳ ಹೊರಟಿರುವ ಮೋರ್ಗನ್ ಸ್ಪರ್ಲಾಕ್ ಅಮೇರಿಕದವನಷ್ಟೆ, ಅಮೇರಿಕದ ಅಧ್ಯಕ್ಷನಲ್ಲ, ಅವೆಲ್ಲವನ್ನೂ ಮಾಡಲು! ಈತನ ಹುಚ್ಚುತನ ಬೇರೆಯದೇ ರೀತಿಯದ್ದು. ಅದೂ ಅಲ್ಲದೆ ಅಧ್ಯಕ್ಷರುಗಳದು ಹುಚ್ಚುತನದ ಪರಮಾವಧಿ, ಈತನದು ಅಲ್ಪಾವಧಿಯಷ್ಟೇ. ಈತನ ಹುಚ್ಚುತನದ ಅಲ್ಪಾವಧಿಯೇನೆಂದರೆ ಎಲ್ಲರಿಗೂ ಕಾಣುವಂತೆ ಆಹಾರ ಕ್ಷೇತ್ರದ ದೊಡ್ಡಣ್ಣ, ಜಗತ್ತಿನ ಅತಿ ದೊಡ್ಡ ಫಾಸ್ಟ್ಫುಡ್ ಮಾರಾಟ ಸಂಸ್ಥೆ ಮೆಕ್ಡೊನಾಲ್ಡ್ಸ್ ಮೀಸೆಗೆ ಮಣ್ಣು ಮೆತ್ತಿದ್ದು. ಮುಂದೆ ನೀವೇ ಓದುತ್ತೀರಲ್ಲ, ಎಲ್ಲವೂ ತಿಳಿಯುವುದು.
ಮೆಕ್ಡೊನಾಲ್ಡ್ಸ್ ಜಗ ಜಾ'ಹೀರು'
ಮೆಕ್ಡೊನಾಲ್ಡ್ಸ್ ಬಗ್ಗೆ ಕೇಳದವರೇ ವಿರಳ, ಮೆಕ್ಡೊನಾಲ್ಡ್ಸ್ಅನ್ನು ಮೆಕ್ಡಿ ಅಂತಲೂ ಕರೆಯುತ್ತಾರೆ. ಶಾಲೆ ಬಿಟ್ಟು ಬಸ್ಸು, ರೈಲು ನಿಲ್ದಾಣಗಳಲ್ಲಿ ಕೂಲಿ ಮಾಡುವ ಹುಡುಗನಿಗೂ ತಾನು ಕೂಡಿಟ್ಟ ಅಷ್ಟಿಷ್ಟು ಪುಡಿಗಾಸಿನಲ್ಲಿ ವಾರಕ್ಕೊಂದು ಬಾರಿಯಾದರೂ ಮೆಕ್ಡೊನಾಲ್ಡ್ಸ್ ಬರ್ಗರ್ ತಿನ್ನುವಾಸೆ. ಅಷ್ಟರ ಮಟ್ಟಿಗೆ ಮೆಕ್ಡೊನಾಲ್ಡ್ಸ್ ಜಾಹಿರಾತು ಸರಣಿಗಳು, ಅವರ ಕ್ಯಾಂಪೇನ್ಗಳು ಪ್ರಭಾವಶಾಲಿಯಾಗಿವೆ. ಜಾಹಿರಾತುಗಳಿಗಾಗಿ ಕಂಪನಿ ಖರ್ಚು ಮಾಡುವ ವಾರ್ಷಿಕ ಮೊತ್ತ ಹೆಚ್ಚುಕಮ್ಮಿ ಹನ್ನೆರಡು ಸಾವಿರ ಕೋಟಿ ರೂ.ಗಳು. ಅಷ್ಟಕ್ಕೆ ಹೌಹಾರಬೇಡಿ, ಇಂಗ್ಲೀಷಿನಲ್ಲಿ 'ಹೌ' ಎಂದು ಕೇಳಿ. ಕಂಪನಿಯ ವಾರ್ಷಿಕ ಆದಾಯ ಒಂದು ಲಕ್ಷದ ಅರುವತ್ತೆರಡು ಸಾವಿರ ಕೋಟಿ ರುಪಾಯಿಗಳು. ಈ ಮೊತ್ತದ ಮುಂದೆ ಆ ಜಾಹಿರಾತಿನ ಮೊತ್ತ ಏನೇನೂ ಅಲ್ಲ. ಸೊಮಾಲಿಯಾ ಮತ್ತಿತರ ಆಫ್ರಿಕಾದ ರಾಷ್ಟ್ರಗಳಲ್ಲಿ ಬಾಲ ಸೈನಿಕರಿಗೆ ಚಿಕ್ಕಂದಿನಿಂದಲೇ ಮಿಲಿಟರಿ ಟ್ರೈನಿಂಗ್ ನೀಡುವಂತೆ ಮೆಕ್ಡೊನಾಲ್ಡ್ಸ್, ಸಣ್ಣ ವಯಸ್ಸಿನವರನ್ನು ಬುಟ್ಟಿಗೆ ಹಾಕಿಕೊಳ್ಳಲು ಮನೋವೈಜ್ಞಾನಿಕವಾಗಿ ತಮ್ಮ ಜಾಹಿರಾತುಗಳನ್ನು ಮತ್ತು ಯೋಜನೆಗಳನ್ನು ರೂಪಿಸುತ್ತದೆ. ನಿಮಗೆ ಗೊತ್ತಿರಲಿ ಜಗತ್ತಿನ ಅತಿ ದೊಡ್ಡ ಅಟಿಕೆ ಕೊಡಮಾಡುವ ಸಂಸ್ಥೆ ಮೆಕ್ಡೊನಾಲ್ಡ್ಸ್. ವಿಶ್ವಾದ್ಯಂತ ತನ್ನ ರೆಸ್ಟೋರೆಂಟ್ಗೆ ಬರುವ ಗ್ರಾಹಕರಿಗೆ ತಿನಿಸುಗಳ ಜೊತೆಗೆ ಆಟಿಕೆಗಳನ್ನು ಕೊಟ್ಟು ಮಕ್ಕಳನ್ನು ಆಕರ್ಷಿಸುತ್ತದೆ. ಗಿಡವಾಗಿದ್ದಾಗಲೇ ಬಗ್ಗಿಸಿದರೆ ಮರವನ್ನು ಬಗ್ಗಿಸುವ ಕಷ್ಟ ತಪ್ಪುತ್ತದಲ್ಲ. ಹೀಗೆ ಎಲ್ಲಾ ವಯೋವಾನದವರನ್ನು ಸೆಳೆಯಲು ವಿವಿಧ ರೀತಿಯ ವಿವಿಧ ಅಳತೆಯ ಬಲೆಗಳು ಮೆಕ್ಡೊನಾಲ್ಡ್ಸ್ ಬಳಿ ಇವೆ. ಇನ್ನು ಭಾರತದಂತಹ ದೇಶಗಳಲ್ಲಿ ಮೆಕ್ಡೊನಾಲ್ಡ್ಸ್ನಲ್ಲಿ ತಿನ್ನುವುದು ಪ್ರತಿಷ್ಠೆಯ ವಿಷಯ. ಬರ್ತ್ಡೇ, ಮುಂತಾದ ಸಣ್ಣ ಸಣ್ಣ ಪಾರ್ಟಿಗಳಿಗೂ ಮೆಕ್ಡಿ ಬೇಕು. ಮಾಡರ್ನ್ ಫ್ಯಾಮಿಲಿಗಳು ಭಾನುವಾರ ಮನೆ ಅಡುಗೆ ಕ್ಯಾನ್ಸಲ್ ಮಾಡಿ ಏನೋ ತೀರ್ಥಯಾತ್ರೆಗೆ ಹೊರಟವರಂತೆ, ಕುಟುಂಬ ಸಮೇತರಾಗಿ ಮೆಕ್ಡೊನಾಲ್ಡ್ಸ್ಗೆ ಹೋಗಿ ತಿಂದು ಬರುತ್ತಾರೆ.
ಒಂದ್ ಐಡಿಯಾ ಮಾಡ್ದ!
ಮೆಕ್ಡಿ ಜನರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಮೆಕ್ಡಿ ಮಕ್ಕಳಿಗೆ ಕೇವಲ ಅಟಿಕೆಗಳನ್ನು ಮಾತ್ರವೇ ಕೊಡಮಾಡುತ್ತಿಲ್ಲ, ಸ್ಥೂಲಕಾಯ, ರಕ್ತದೊತ್ತಡ ಇನ್ನೂ ಮುಂತಾದ ಆನಾರೋಗ್ಯವನ್ನುಂಟು ಮಾಡುವ ಆಕರ್ಷಕ ಸಮಸ್ಯೆಗಳನ್ನೂ ದಯಪಾಲಿಸುತ್ತಿದೆ. ಇಂದು ಜಗತ್ತಿನಾದ್ಯಂತ ಮಕ್ಕಳಲ್ಲಿ ಕಂಡುಬರುವ ಅನೇಕ ಆಹಾರ ಸಂಬಂಧಿ ಖಾಯಿಲೆಗಳಿಗೆ ಮೆಕ್ಡೊನಾಲ್ಡ್ಸ್ ಅನ್ನು ದೂಷಿಸಲಾಗುತ್ತಿದೆ. ಮೆಕ್ಡೊನಾಲ್ಡ್ಸ್ ಈ ದೂರುಗಳನ್ನು ಅನಾದಿ ಕಾಲದಿಂದಲೂ ನಿರಾಕರಿಸಿಕೊಂಡು ಬರುತ್ತಿದೆ, ಅದು ಬೇರೆ ವಿಷಯ. ಒಮ್ಮೆ ಅಮೇರಿಕದಲ್ಲಿ ಇಬ್ಬರು ಸ್ಥೂಲಕಾಯ ಬಾಲಕಿಯರು ತಮ್ಮ ಸ್ಥೂಲಕಾಯಕ್ಕೆ ಮೆಕ್ಡೊನಾಲ್ಡ್ಸ್ ಸಂಸ್ಥೆಯೇ ಕಾರಣವೆಂದು ಕಂಪನಿ ಮೇಲೆ ಪರಿಹಾರಕ್ಕಾಗಿ ಕೇಸು ಹಾಕಿದರು. ಅದರೆ ಕೇಸು ಬಹಳ ದಿನ ನಡೆಯಲಿಲ್ಲ, ಅತ್ಯುನ್ನತ ಕಾನೂನು ಸಲಹಾಪಡೆ ಹೊಂದಿರುವ ಅಂತರಾಷ್ಟ್ರೀಯ ಕಂಪನಿ ಸೋಲುವುದುಂಟೇ, ಇಲ್ಲ. ಕೊನೆಗೆ ಎಲ್ಲರೂ ನಿರೀಕ್ಷಿಸಿದ್ದಂತೆ ಕೋರ್ಟು, ಕಂಪನಿಯ ಪರವಾಗಿ ತೀರ್ಪು ಕೊಟ್ಟಿತು. ಅದನ್ನು ಟಿವಿಯಲ್ಲಿ ಬೇರೆ ಯಾರಾದರೂ ವೀಕ್ಷಿಸಿದ್ದರೆ, ನೋಡಿ ಸುಮ್ಮನಾಗುತ್ತಿದ್ದರು, ಆದರೆ ನ್ಯೂಸ್ ಚಾನೆಲ್ನಲ್ಲಿ ಇದನ್ನು ನೋಡಿದ ಮೋರ್ಗನ್ ಸ್ಪರ್ಲಾಕ್ಗೆ ಹೊಳೆದದ್ದೇ ಬೇರೆ, ಅದು ಮೆಕ್ಡೊನಾಲ್ಡ್ಸ್
ಮೀಸೆಗೆ ಮಣ್ಣು ಮೆತ್ತುವ ಐಡಿಯಾ!
ಮೆಕ್ಡೊನಾಲ್ಡ್ಸ್ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮವನ್ನು ಸಾಬೀತುಪಡಿಸಲು ಮಾನವ ದೇಹದ ಮೇಲೆ ಪ್ರಯೋಗವೊಂದನ್ನು ಮಾಡಿ ಅದರ ಫಲಿತಾಂಶವನ್ನು ಕ್ಯಾಮೆರಾ ಮುಂದೆ ರೆಕಾರ್ಡ್ ಮಾಡಿ ಡಾಕ್ಯುಮೆಂಟರಿಯೊಂದನ್ನು ತಯಾರಿಸುವ ಐಡಿಯಾ ಮಾಡಿದ್ದ ಆತ. ಪ್ರಯೋಗದ ನಿಯಮಾವಳಿಗಳಿಷ್ಟೆ, ಮೂವತ್ತು ದಿನಗಳ ಕಾಲ ಸತತವಾಗಿ ದಿನದ ಮೂರೂ ಹೊತ್ತು ಮೆಕ್ಡೊನಾಲ್ಡ್ಸ್ನಲ್ಲಿ ಸಿಗುವುದನ್ನೇ ತಿನ್ನಬೇಕು, ಅಲ್ಲಿನ ಕೋಕ್ ಪೇಯವನ್ನೇ ಕುಡಿಯಬೇಕು, ಬೇರೆಲ್ಲೂ, ಬೇರೆ ಯಾವ ಆಹಾರವನ್ನೂ ಸೇವಿಸಕೂಡದು, ಆ ಮೂವತ್ತು ದಿನಗಳ ಕಾಲ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿಯಮಿತವಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ತಪಾಸಣೆಗೆ ಒಳಗಾಗುತ್ತಿರಬೇಕು, ಆ ಮೂಲಕ ಮೆಕ್ಡೊನಾಲ್ಡ್ಸ್ನಲ್ಲಿ ಸಿಗುವ ಆಹಾರದಿಂದ ಆಗಬಹುದಾದ ದೇಹದಲ್ಲಿನ ಬದಲಾವಣೆಯನ್ನು ಹಂತ ಹಂತವಾಗಿ ವಿವಿಧ ವೈದ್ಯಕೀಯ ಪರೀಕ್ಷೆಗಳ ಮೂಲಕ ವೀಕ್ಷಕರ ಮುಂದೆ ತೆರೆದಿಡುವ ಅಪಾಯಕಾರಿ ಐಡಿಯಾ ಮೋರ್ಗನ್ನದಾಗಿತ್ತು. ಅಚ್ಚರಿಯೆಂದರೆ ಈ ಪ್ರಯೋಗದ ಹರಕೆಯ ಕುರಿ ಆತನೇ ಆಗಿದ್ದ!
ಸ್ವಯಂಕೃತಾ ಪ್ರಯೋಗ
ಮೋರ್ಗನ್ ಸ್ಪರ್ಲಾಕ್ ಪ್ರಯೋಗ ಶುರುಮಾಡುವ ಮೊದಲು ಮೂವರು ತಜ್ಞರ ಬಳಿ ತೆರಳಿ ಆರೋಗ್ಯ ತಪಾಸಣೆಗೊಳಗಾಗುತ್ತಾನೆ, ಹೃದಯ ತಜ್ಞ, ಉದರ ತಜ್ಞ, ದೈಹಿಕ ತರಬೇತುದಾರ. ಎಲ್ಲವೂ ನಾರ್ಮಲ್ ಎಂದು ವೈದ್ಯರು ವರದಿ ನೀಡುತ್ತಾರೆ. ಮುಂದೆ ನಡೆಯಬಹುದಾಗಿದ್ದ ಅನಾಹುತಗಳೆಲ್ಲವುದಕ್ಕೂ ಮೋರ್ಗನ್ ತಯಾರಾಗಿದ್ದ. ಈ ಮೂವತ್ತು ದಿನಗಳ ಕಾಲದಲ್ಲಿ ಏನು ಬೇಕಾದರೂ ಆಗಬಹುದಿತ್ತು, ಗ್ರಹಚಾರ ಕೆಟ್ಟರೆ 'ಆಪರೇಷನ್ ಸಕ್ಸಸ್ ಪೇಷಂಟ್ ಡೆಡ್' ಸನ್ನಿವೇಶಗಳೂ ಎದುರಾಗುವ ಸಾಧ್ಯತೆಗಳು ಇಲ್ಲದಿರಲಿಲ್ಲ. ಮೋರ್ಗನ್ ಪ್ರಯೋಗದ ಅಪಾಯದ ಬಗ್ಗೆ ಆತನಿಗಿಂತ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದವಳು ಆತನ ಗರ್ಲ್ಫ್ರೆಂಡ್ ಅಲೆಕ್ಸಾಂಡ್ರಾ. ನೋಡುವುದಕ್ಕೆ ಸುಂದರಿಯಾಗಿದ್ದ ಅವಳ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಅಷ್ಟೆ. ಅವಳು ಮೋರ್ಗನ್ನ ಈ ಪ್ರಯೋಗವನ್ನು ಶತಾಯಗಥಾಯ ನಿಲ್ಲಿಸಲು ಮಾಡಿದ್ದ ಉಪಾಯಗಳೆಲ್ಲವೂ ಕೈಕೊಟ್ಟಿತ್ತು. ಒಬ್ಬಳು ಸುಂದರವಾದ ಗರ್ಲ್ಫ್ರೆಂಡ್ ಹೇಳಿದ್ದನ್ನೇ ಕೇಳಲಿಲ್ಲ ಅಂದ ಮೇಲೆ ಎಂತಹ ದೃಢ ಇಚ್ಛಾಶಕ್ತಿ ಮೋರ್ಗನ್ನದಾಗಿರಬೇಕು, ನೀವೇ ಯೋಚಿಸಿ! ಅದಕ್ಕೇ, ಆತನ ಮನೆಯವರೂ ಜಾಸ್ತಿ ಬುದ್ಧಿವಾದ ಹೇಳಿರಲಿಕ್ಕಿಲ್ಲ, ಯಾವ ಬಾಯಿಯಲ್ಲಿ ಹೇಳುತ್ತಾರೆ?! ಶಂಖದಿಂದ ಬಂದದ್ದನ್ನೇ ಸ್ವೀಕರಿಸಲಿಲ್ಲ ಅಂದ ಮೇಲೆ ಗೆರಟೆಯಲ್ಲಿ ಕೊಟ್ಟ ತೀರ್ಥವನ್ನು ಸ್ವೀಕರಿಸಿಯಾನೇ? ಅಂತೂ ಇಂತೂ ಡಾಕ್ಟರ್ರಿಂದ ದೇಹ ಸುಸ್ಥಿತಿಯಲ್ಲಿರುವುದಾಗಿ, ಯಾವ ರೀತಿಯಲ್ಲಿ ಬೇಕಾದರೂ ಆರೋಗ್ಯ ಹಾಳು ಮಾಡಿಕೊಳ್ಳಲು ದೇಹ ಸಿದ್ಧವಿರುವುದಾಗಿ ಗ್ರೀನ್ ಸಿಗ್ನಲ್ ಸಿಗುತ್ತದೆ.
ಹರಕೆಯ ಕುರಿಯ ಮೂವತ್ತು ದಿನಗಳು
ಹರಕೆ ಪ್ರಾರಂಭಗೊಂಡ ಮೊದಲ ದಿನದಿಂದಲೇ ಆತನ ಬದುಕು ಬದಲಾಗತೊಡಗುತ್ತದೆ. ಮೊದಲ ದಿನ ಮ್ಯಾನ್ಹಟನ್ನ ತನ್ನ ಮನೆಯ ಹತ್ತಿರದ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟಿಗೆ ತೆರಳಿ ಅವತ್ತಿನ ಬ್ರೇಕ್ಫಾಸ್ಟ್ ಮೂಲಕ ಮೆಕ್ಡೊನಾಲ್ಡ್ಸ್ ಮೀಸೆಗೆ ಮಣ್ಣು ಮೆತ್ತುವ ತನ್ನ ಮೂವತ್ತು ದಿನಗಳ ಅಭಿಯಾನಕ್ಕೆ ಚಾಲನೆ ನೀಡುತ್ತಾನೆ, ಮೋರ್ಗನ್. ಪ್ರತಿಯೊಬ್ಬ ಅಮೇರಿಕನ್ ದಿನವೊಂದಕ್ಕೆ ನಡೆಯುವ ಸರಾಸರಿ ದೂರ 2 ಮೈಲಿಗಳು. ಅದಕ್ಕೇ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೆಕ್ಡಿಯಲ್ಲಿ ತಿನ್ನುವುದು, ಮತ್ತು ಎರಡು ಮೈಲಿಗಳಷ್ಟು ನಡೆಯುವುದು ಆತನ ದಿನಚರಿಯಾಗುತ್ತದೆ. ಎರಡನೇ ದಿನ ಆತ ಬೆಳಗ್ಗೆ ಸೂಪರ್ಸೈಝ್ ಮೀಲ್ ಆರ್ಡರ್ ಮಾಡುತ್ತಾನೆ. ಡಬಲ್ ಚೀಸ್, 42 ಔನ್ಸ್ ಕೋಕ್, ಸೂಪರ್ಸೈಝ್ ಫ್ರೆಂಚ್ ಫ್ರೈಸ್ ಎಲ್ಲವನ್ನೂ ಮುಗಿಸಲು ಆರ್ಧ ಗಂಟೆಗಳಷ್ಟು ಸಮಯ ತೆಗೆದುಕೊಳ್ಳುವ ಆತನಿಗೆ ಪ್ರಯೋಗದ ಮೊದಲ ಸೈಡ್ ಎಫೆಕ್ಟ್ನ ಅನುಭವವಾಗುತ್ತದೆ. ಹೊಟ್ಟೆಯಲ್ಲಿ ತಳಮಳ ಶುರುವಾಗಿ, ಕಾರು ಪಾರ್ಕಿಂಗ್ ಜಾಗದಲ್ಲಿ ಮೋರ್ಗನ್ ವಾಂತಿ ಮಾಡಿಕೊಳ್ಳುತ್ತಾನೆ. ನಿಧಾನವಾಗಿ ಮಾನಸಿಕ ಖಿನ್ನತೆ, ತಲೆನೋವು ಆತನನ್ನು ಆವರಿಸುತ್ತದೆ. ಮೆಕ್ಡೊನಾಲ್ಡ್ಸ್ನಲ್ಲಿ ತಿಂದರೆ ಅವೆಲ್ಲ ದೂರವಾಗುವವು ಎಂಬ ಭಾವನೆ ಅವನಲ್ಲಿ ಮೂಡುತ್ತದೆ. ವೈದ್ಯರು ಮೋರ್ಗನ್ ಈಗ ಅದರ ಅಡಿಕ್ಷನ್ ವಲಯದಲ್ಲಿದ್ದಾನೆಂದು ಹೇಳುತ್ತಾರೆ, ಮೆಕ್ಡಿ ಮೀಲ್ಸ್ನಲ್ಲಿರುವ ಕೆಮಿಕಲ್ಗಳು ಮತ್ತದರ ರುಚಿ ಆ ರೀತಿಯ ಭ್ರಮೆಗಳನ್ನುಂಟು ಮಾಡುತ್ತಿದೆಯೆಂದು ವೈದ್ಯರು ವಿವರಿಸುತ್ತಾರೆ. ಸಿಗರೇಟು ಯಾವ ರೀತಿಯ ಭ್ರಮೆಯನ್ನು ಮೂಡಿಸುತ್ತದೋ ಅದೇ ರೀತಿಯದು. ಮುಂದಿನ ಐದು ದಿನಗಳಲ್ಲಿ ಆತನ ತೂಕ 4.5 ಕೆ.ಜಿಗಳಷ್ಟು ಹೆಚ್ಚುತ್ತದೆ. ಹೃದಯಬೇನೆ, ನರದೌರ್ಬಲ್ಯ, ಸುಸ್ತು ಆತನನ್ನು ಕಾಡತೊಡಗುತ್ತದೆ, ಮತ್ತೆ ತಪಾಸಣೆಗೊಳಗಾದಾಗ ವೈದ್ಯರು ಲಿವರ್ ಘಾಸಿಗೊಂಡಿದ್ದು, ಪ್ರಯೋಗವನ್ನು ನಿಲ್ಲಿಸಲು ಸಲಹೆ ನೀಡುತ್ತಾರೆ, ಆದರೆ ಮೋರ್ಗನ್ ಎಂತಹ ಮೊಂಡನೆಂದರೆ ಆತ ಪ್ರಯೋಗವನ್ನು ಮುಂದುವರೆಸಿದ್ದಷ್ಟೇ ಅಲ್ಲ, ವೈದ್ಯರು ನೀಡಿದ್ದ ಔಷಧಿಯನ್ನೂ ಮುಟ್ಟುವುದಿಲ್ಲ. ಇತ್ತ ಆತನ ಕೌಟುಂಬಿಕ ಜೀವನವೂ ಹದಗೆಡುತ್ತಾ ಬರುತ್ತದೆ. ಸಾಲದು ಅಂತ ಗೆಳತಿ ಅಲೆಕ್ಸಾಂಡ್ರಾ ಆತನ ಲೈಂಗಿಕ ಆಸಕ್ತಿ ಕುಗ್ಗುತ್ತಿದ್ದುದನ್ನು ಡಾಕ್ಯುಮೆಂಟರಿಯಲ್ಲಿ ಹೇಳಿಕೊಳ್ಳುತ್ತಾಳೆ. ನೀವು ಖುಷಿ ಪಡಲು ಕಾರಣವಿಲ್ಲ ಬಿಡಿ! ಆ ಮೂವತ್ತು ದಿನಗಳಲ್ಲಿ ಅನೇಕ ಸಾರಿ ಪ್ರಾಣಾಪಾಯ ತಂದುಕೊಂಡು ಆತ ವೈದ್ಯರುಗಳಿಂದ ಬೈಯಿಸಿಕೊಳ್ಳುತ್ತಾನೆ. 84 ಕೆ.ಜಿ ಇದ್ದ ಮೋರ್ಗನ್ನ ತೂಕ ಮೂವತ್ತು ದಿನಗಳು ಕಳೆಯುವಷ್ಟರಲ್ಲಿ 95ಕೆ.ಜಿಯಷ್ಟಾಗಿರುತ್ತದೆ, ಅಂದರೆ ಕೇವಲ ಮೂವತ್ತು ದಿನಗಳಲ್ಲಿ 11 ಕೆಜಿಯಷ್ಟು ವ್ಯತ್ಯಾಸ! ಕೊನೆಗೂ ಮೋರ್ಗನ್ ಜಗತ್ತಿನ ಮುಂದೆ ತನ್ನ ಕತೆ ಹೇಳಲು ಬದುಕುಳಿಯುತ್ತಾನೆ.
ಆರೋಗ್ಯ ಚೇತರಿಕೆಗಾಗಿ ಕಸರತ್ತು
ಆರೋಗ್ಯದ ರಿಕವರಿ ಸಾಲದ ರಿಕವರಿ ತರಹ ಅಲ್ಲ, ಮನೆ ಮುಂದೆ ರಿಕವರಿಗಾಗಿ ಯಾರೂ ಪೀಡಿಸುವುದಿಲ್ಲ. ಆರೋಗ್ಯ ರಿಕವರಿಯನ್ನು ನೀವಾಗಿಯೇ ಮಾಡಿಕೊಳ್ಳಬೇಕು. ಪರೀಕ್ಷೆಯೊಂದರಿಂದ ತಿಳಿದುಬಂದ ವರದಿಯ ಪ್ರಕಾರ ಪಶುಗಳಿಗೆ ನೀಡುವ ಪಶುಆಹಾರ, ಮೆಕ್ಡಿಯಲ್ಲಿ ನೀಡಲಾಗುವ ಖಾದ್ಯಗಳಿಗಿಂತ ಸುರಕ್ಷಿತವಂತೆ, ಹಾಗೆಂದು ನಾಯಿಯ ಪ್ಲೇಟಿಗೆ ಬಾಯಿ ಹಾಕಬೇಡಿ! ಮೂವತ್ತು ದಿನಗಳಲ್ಲಿ ಮೋರ್ಗನ್ ಸುಮಾರು ತೊಂಭತ್ತು ಮೆಕ್ಡೊನಾಲ್ಡ್ಸ್ ಮೀಲ್ಸ್ ಸೇವಿಸಿದ್ದ, ಅದು ಸಾಮಾನ್ಯನೊಬ್ಬ ಮೆಕ್ಡೊನಾಲ್ಡ್ಸ್ನಲ್ಲಿ 8 ವರ್ಷಗಳ ಅಂತರದಲ್ಲಿ ಸೇವಿಸಬಹುದಾದ ಆಹಾರದ ಪ್ರಮಾಣ. ಈ ಒಂದು ತಿಂಗಳ ಪ್ರಯೋಗ, ದೇಹಕ್ಕುಂಟು ಮಾಡಿದ್ದ ಹಾನಿಯಿಂದ ಚೇತರಿಸಿಕೊಳ್ಳಲು ಮೋರ್ಗನ್ಗೆ ಹನ್ನೆರಡು ತಿಂಗಳುಗಳೇ ಹಿಡಿದವು. ಅದಕ್ಕಾಗಿ ಆತ ಅನೇಕ ಕಸರತ್ತುಗಳನ್ನು ಮಾಡಬೇಕಾಯಿತು. ಘಾಸಿಗೊಂಡಿದ್ದ ಅಂಗಾಗಳನ್ನು ಮೊದಲಿನ ಸ್ಥಿತಿಗೆ ತರಲು ಔಷಧೋಪಚಾರದ ನೆರವು ಪಡೆಯಬೇಕಾಯಿತು. ಮೋರ್ಗನ್ ಹೆಚ್ಚಿಸಿಕೊಂಡಿದ್ದ 11 ಕೆ.ಜಿಯಲ್ಲಿ 9 ಅನ್ನು ಕರಗಿಸಲು 5 ತಿಂಗಳುಗಳು ಹಿಡಿದವು, ಇನ್ನುಳಿದ 3 ಕೆ.ಜಿ ಕಳೆದುಕೊಳ್ಳಲು 9 ತಿಂಗಳುಗಳೇ ಹಿಡಿದವು. ವಿವಿಧ ಬಗೆಯ ಡಯೆಟ್ಗಳನ್ನು ಆತ ಪಾಲಿಸಬೇಕಾಯಿತು. ಇದರಲ್ಲಿ ಗೆಳತಿ ಅಲೆಕ್ಸಾಂಡ್ರಾ ಆತನಿಗೆ ಬಹಳ ನೆರವು ನೀಡಿದಳು, ಇದೇ ಆಕೆಗೆ 'ದಿ ಗ್ರೇಟ್ ಅಮೇರಿಕನ್ ಡಿಟೋಕ್ಸ್ ಡಯೆಟ್' ಎಂಬ ಪುಸ್ತಕವೊಂದನ್ನು ಬರೆಯಲು ಪ್ರೇರಣೆಯಾಯಿತು. ಈ ಸಮಯದಲ್ಲಿ ಅವರಿಬ್ಬರೂ ಇನ್ನಷ್ಟು ಹತ್ತಿರವಾದರು. ಕರುಬುತ್ತಿದ್ದೀರಾ, ಹಾಗಾದರೆ ನಿಮ್ಮ ಬೆಂಕಿಗೆ ತುಪ್ಪ ಸುರಿಯುವ ವಿಚಾರ ಇಲ್ಲಿದೆ, ಮುಂದೆ ಮೋರ್ಗನ್ ಅಲೆಕ್ಸಾಂಡ್ರಾಳನ್ನು ಮದುವೆ ಕೂಡಾ ಆಗುತ್ತಾನೆ!
ಕೆಳಕ್ಕೆ ಬಿದ್ದರೂ ಮೀಸೆ...
ತಾನು ಅನುಭವಿಸಿದ ನರಕಯಾತನೆಯನ್ನೂ, ಪಟ್ಟ ಪಡಿಪಾಟಲುಗಳ ಪ್ರತಿಯೊಂದು ಹಂತಗಳನ್ನೂ ಆತ ಸ್ಪಷ್ಟವಾಗಿ ಸೆರೆಹಿಡಿದಿದ್ದ ಡಾಕ್ಯುಮೆಂಟರಿ, 'ಸೂಪರ್ ಸೈಝ್ ಮಿ' ಎಂಬ ಹೆಸರಿನಲ್ಲಿ 'ಸನ್ಡ್ಯಾನ್ಸ್' ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಾಣುವುದರ ಜೊತೆಗೆ 'ಗ್ರ್ಯಾಂಡ್ ಜ್ಯೂರಿ' ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತದೆ. ನಂತರ ಡಾಕ್ಯುಮೆಂಟರಿ, ಅಮೇರಿಕದ ಚಿತ್ರಮಂದಿರಗಳಲ್ಲಿ ತೆರೆಕಂಡು ಅಮೇರಿಕನ್ನರ ಮತ್ತು ಅನೇಕ ಚಿತ್ರವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ ಮೋರ್ಗನ್ ಸ್ಟಾರ್ ಆಗುತ್ತಾನೆ. ಆ ಸಾಲಿನ ಆಸ್ಕರ್ನ ಬೆಸ್ಟ್ ಡಾಕ್ಯುಮೆಂಟರಿ ವಿಭಾಗಕ್ಕೂ 'ಸೂಪರ್ ಸೈಝ್ ಮಿ' ನಾಮಾಂಕಿತಗೊಳ್ಳುತ್ತದೆ. ಇಷ್ಟೆಲ್ಲ ಹೆಸರು ಪಡೆದ ಡಾಕ್ಯುಮೆಂಟರಿಯಿಂದ ಮೆಕ್ಡೊನಾಲ್ಡ್ಸ್ ಮುಜುಗರ ಅನುಭವಿಸಿರಲೇಬೇಕಲ್ಲ! ಹೌದು, ಕಂಪನಿಯ ನಿರ್ದೇಶಕರು ಡಾಕ್ಯುಮೆಂಟರಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ವಿವಿಧ ಹೇಳಿಕೆಗಳನ್ನು ನೀಡಿ ನುಣುಚಿಕೊಳ್ಳಲೆತ್ನಿಸಿದರು, ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ. ಆದರೆ ಕಂಪನಿ, ಮೋರ್ಗನ್ ವಿರುದ್ಧ ದೂಷಿಸಿದ್ದು ಬಿಟ್ಟರೆ ಆತ ಡಾಕ್ಯುಮೆಂಟರಿಯಲ್ಲಿ ಎತ್ತಿದ್ದ ಮೆಕ್ಡಿಯ ಖಾದ್ಯಗಳಲ್ಲಿರುವ ರಾಸಾಯನಿಕ ವಸ್ತುಗಳು ಮುಂತಾದ ಗಂಭೀರ ಆರೋಪಗಳ ಕುರಿತು ಯಾವುದೇ ಸ್ಪಷ್ಟೀಕರಣ ನೀಡಲಿಲ್ಲ. ಇದು ಕಂಪನಿಯ ಅಸಲೀಯತ್ತನ್ನು ತೋರಿಸುತ್ತದೆ.
ದುರ್ವರ್ತನೆ ತೋರುವ ಮೆಕ್ಡೊನಾಲ್ಡ್ಸ್ನಂತಹ ಕಂಪನಿಗಳ ಸರ್ವಾಧಿಕಾರ ಧೋರಣೆಯನ್ನು ಸಹಿಸುವುದು ಸಲ್ಲದು. ಹಣಬಲದಿಂದ ಕೊಬ್ಬಿ ಏನೇ ಅನಾಚಾರ ಮಾಡಿದರೂ ನಡೆಯುತ್ತದೆಯೆಂಬ ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ದಾರ್ಷ್ಟ್ಯದ ಗುಣ ಆಗಿಂದಾಗ್ಗೆ ಪರೀಕ್ಷೆಗೊಳಪಟ್ಟು ಕಾನೂನಿನಲ್ಲಿ ಶಿಕ್ಷೆಗೊಳಗಾಗಿರುವ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಮೈಕ್ರೋಸಾಫ್ಟ್ ಕಂಪನಿ ಕೂಡಾ ವ್ಯವಹಾರದಲ್ಲಿ ಅನಾಚಾರಗಳನ್ನು ಮಾಡಿ ಕೊನೆಗೆ ಅದಕ್ಕೆ ತಕ್ಕ ಶಾಸ್ತಿಯನ್ನು ಅನುಭವಿಸಿತ್ತು, ನ್ಯಾಯಾಲಯದ ತೀರ್ಪು ಇಡೀ ಕಂಪನಿಯನ್ನು ಎರಡು ಹೋಳಾಗಿಸಿತ್ತು, ಅದನ್ನು ನಿರೀಕ್ಷಿಸಿರದ ಬಿಲ್ ಗೇಟ್ಸ್ ಬಿಕ್ಕಿ ಬಿಕ್ಕಿ ಅತ್ತಿದ್ದ. ಎನ್ರಾನ್, ಕೆಮಾರ್ಟ್ ಅಷ್ಟೇ ಏಕೆ ಭಾರತದ ಸತ್ಯಂ ಕಂಪ್ಯೂಟರ್ಸ್ ಮುಂತಾದ ಅನೈತಿಕತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಕಂಪನಿಗಳು ಸಿಕ್ಕಿಬಿದ್ದು ದಿವಾಳಿಯೆದ್ದು ಹೋದವು. ಇನ್ನು ಸಿಕ್ಕಿ ಬೀಳದೆ ಜನರಿಗೆ ವಂಚಿಸುತ್ತಿರುವ ಕಂಪನಿಗಳು ಎಷ್ಟಿವೆಯೋ? ಇವೆಲ್ಲವುಗಳಿಂದ ಪಾಠ ಕಲಿಯುವುದಕ್ಕೆ ಬದಲಾಗಿ ಕಂಪನಿಗಳು ಮಾಡುತ್ತಿರುವುದೇನೆಂದರೆ, ರಂಗೋಲಿಯ ಕೆಳಗೆ ತೂರುವ ಕೆಲಸ, ಅನ್ಯಾಯವನ್ನು ನ್ಯಾಯಯುತವಾಗಿ ಮಾಡುವುದು ಹೇಗೆಂದು ಇವರಿಂದ ಕಲಿಯಬೇಕು. ಹಾಗೆ ನೋಡಿದರೆ ವಾರ್ಷಿಕ 27 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಮೆಕ್ಡೊನಾಲ್ಡ್ಸ್ನಂತಹ ಬಹುರಾಷ್ಟ್ರೀಯ ಕಂಪನಿಯೊಂದನ್ನು ಎದುರು ಹಾಕಿಕೊಂಡು ಅದಕ್ಕೆ ದೊಡ್ಡ ಪೆಟ್ಟನ್ನು ಕೊಡಲಾಗದಿದ್ದರೂ ಅದರ ಮೀಸೆಗೆ ಮಣ್ಣು ಮೆತ್ತುವ ಮಹತ್ಕಾರ್ಯದಲ್ಲಿ ಯಶಸ್ವಿಯಾಗಿದ್ದು ಮೋರ್ಗನ್ ಸಾಧನೆ. ಆ ಮೂಲಕ ಜಗತ್ತಿನಲ್ಲಿ ಯಾರೂ ದೊಡ್ಡವರಲ್ಲ ಎಂಬುದನ್ನಾತ ತೋರಿಸಿಕೊಟ್ಟಿದ್ದಾನೆ.
ಇಷ್ಟೆಲ್ಲಾ ಆದರೂ ಮೆಕ್ಡೊನಾಲ್ಡ್ಸ್ಗೆ ವ್ಯಾಪಾರದಲ್ಲಿ ಹೇಳಿಕೊಳ್ಳುವಂತಹ ನಷ್ಟವೇನೂ ಆಗಲಿಲ್ಲ. ಆದರೆ ಜನರಲ್ಲಿ ಜಾಗೃತಿಯಂತೂ ಮೂಡಿತ್ತು. ಅಲ್ಲದೆ ಮೆಕ್ಡೊನಾಲ್ಡ್ಸ್ಗೆ ಕೊಂಚ ನಡುಕವನ್ನೂ ಹುಟ್ಟಿಸುವುದರಲ್ಲಿ ಸಫಲವಾಗಿತ್ತು.
8 ಪಾಯಿಂಟುಗಳು
ಪ್ರತಿದಿನ ವಿಶ್ವದ ಒಂದು ಪರ್ಸೆಂಟ್ ಜನಸಂಖ್ಯೆ ಅಂದರೆ 68 ಮಿಲಿಯನ್ ಜನರ ಹೊಟ್ಟೆ ತುಂಬಿಸುತ್ತಿದೆ, ಮೆಕ್ಡಿ. ಪುಕ್ಕಟೆಯಾಗೇನೂ ಅಲ್ಲ. ಅದೇನು ಮಾವನ ಮನೆಯೇ, ಪುಕ್ಕಟೆಯಾಗಿ ತುಂಬಿಸೋಕೆ?
2005ರಲ್ಲಿ ಮೆಕ್ಡಿ ಪಾಪ್ ಹಾಡುಗಾರರಿಗೆ, ರ್ಯಾಪರ್ಗಳಿಗೆ ಹಣ ಸಂದಾಯ ಮಾಡಿತ್ತು. ಯಾಕೆ ಅಂತೀರಾ, ಅವರ ಹಾಡುಗಳಲ್ಲಿ ಮೆಕ್ಡಿ ಪದವನ್ನು ಬಳಸುವುದಕ್ಕೆ!
ಒಂದು ಅಂದಾಜಿನ ಪ್ರಕಾರ ಮೆಕ್ಡಿಯಲ್ಲಿ ವರ್ಷವೊಂದಕ್ಕೆ 2,36,52,00,000 ಬರ್ಗರ್ಗಳು ಬಿಕರಿಯಾಗುತ್ತವಂತೆ. ಅದು ಅಂದಾಜು ಸಂಖ್ಯೆಯಾದ್ದರಿಂದ 'ಅಂದಾಜೇ ಸಿಗುತ್ತಿಲ್ಲ ಓ ಅಂದಗಾತಿ' ಎಂದು ಹಾಡುವ ಹಾಗಿಲ್ಲ.
ಆಹಾರ ಪದಾರ್ಥವೊಂದನ್ನು ಕೆಡದಂತೆ ಎಷ್ಟು ಕಾಲ ತಾನೇ ಕಾಪಾಡಬಹುದು? ಫ್ರಿಡ್ಜ್ನಲ್ಲಿಡದೆ! ಒಬ್ಬಾತ ಮೆಕ್ಡಿ ಬರ್ಗರ್ಅನ್ನು 14 ವರ್ಷಗಳ ಕಾಲ ಡಬ್ಬಿಯಲ್ಲಿಟ್ಟರೂ ಕೆಟ್ಟಿರಲಿಲ್ಲವಂತೆ. ಇದು ಖುಷಿಪಡುವ ಸಂಗತಿಯಲ್ಲ, ಅದು ಅಷ್ಟು ಕಾಲ ಕೆಟ್ಟಿರಲಿಲ್ಲವೆಂದರೆ ಅಷ್ಟು ಕೆಮಿಕಲ್ಗಳು ಅದರಲ್ಲಿವೆ ಎಂದರ್ಥ. ಈಜಿಪ್ಟ್ ಮಮ್ಮಿಗಳನ್ನು ನೆನೆಸಿಕೊಳ್ಳಿ! ಅಮ್ಮಂದಿರನ್ನಲ್ಲ!
ಖ್ಯಾತ ಇಂಗ್ಲೀಷ್ ನುಡಿಕೋಶ 'ವೆಬ್ಸ್ಟರ್ ಮೆರ್ರಿಯಮ್', 'ಮೆಕ್ಜಾಬ್' ಎಂಬ ನೂತನ ಪದವನ್ನು ತನ್ನ ಸಂಗ್ರಹಕ್ಕೆ ಸೇರಿಸಿತ್ತು. ಅದರರ್ಥ 'ಕಡಿಮೆ ಸಂಬಳದ ಕೆಲಸ' ಎಂದು, ಅದು ಮೆಕ್ಡಿಯಲ್ಲಿ ಕೆಲಸ ಮಾಡುವವರ ಬವಣೆಯಿಂದ ಹುಟ್ಟಿದ್ದು. ನಂತರ ಮೆಕ್ಡಿ ಸಿಇಓ ಮಧ್ಯಸ್ಥಿಕೆಯಿಂದ ಆ ಪದವನ್ನು ತೆಗೆದು ಹಾಕಲಾಗಿತ್ತು. ಪದ ತೆಗೆದ ಮಾತ್ರಕ್ಕೆ ಬವಣೆ ನಿಂತೀತೇ?
ನಿಮಗೆ ಬ್ಲಡ್ ಪ್ರೆಷರ್ ಹೆಚ್ಚಿಸಬೇಕೆಂದಿದ್ದಲ್ಲಿ ಮೆಕ್ಡಿಯ ಚಿಕನ್ ಸ್ಯಾಂಡ್ವಿಚ್ ಟ್ರೈ ಮಾಡಬಹುದು, ನಿಮ್ಮ ಬೀಪೀ ಹೈ ಆಗುವುದು ಖಂಡಿತ. ನಾರ್ಮಲ್ ಬೀಪೀ ಇದ್ದವರಿಗೆ ಹೈ ಮಾಡುವುದರಿಂದ, ಲೋ ಬೀಪೀ ಇದ್ದವರಿಗೆ ಈ ಉ(ಅ)ಪಾಯ ಸಹಾಯಕಾರಿಯಾಗಬಹುದು ಎಂಬುದು ನಮ್ಮ ಕುತರ್ಕ.
ಮೆಕ್ಡಿ ಮೀಲ್ಸ್ ಸೇವಿಸಿದವರು ಅದರಿಂದ ಸಂಪಾದಿಸಿದ ಕ್ಯಾಲೊರಿಗಳನ್ನು ಕರಗಿಸಲು 7 ಗಂಟೆ ಸತತವಾಗಿ ನಡೆಯಬೇಕು. ಇನ್ನು ಅದಕ್ಕೂ ಹೆಚ್ಚು ಸೇವಿಸಿದರೆ ನಡೆಯುತ್ತಾ ನಡೆಯುತ್ತಾ ಪಕ್ಕದ ಊರನ್ನೇ ತಲುಪಿಬಿಡಬಹುದು!
ಜಗತ್ತೇ ಗೌರವದಿಂದ ಕಾಣುವ ಇಂಗ್ಲೆಂಡಿನ ರಾಣಿಗೆ ಸೇರಿದ ಮೆಕ್ಡಿ ರೆಸ್ಟೋರೆಂಟ್ ಒಂದು ಆಕೆಯ ವೈಭವೋಪೇತ ಬಕಿಂಗ್ಹ್ಯಾಮ್ ಪ್ಯಾಲೇಸ್ ಬಳಿಯಿದೆ. ದಾಡಿ ಬೆಳೆಯುವ ಹಾಗಿದ್ದರೆ 'ರಾಣಿಗೇನು ಬಂತು ದಾಡಿ' ಎನ್ನಬಹುದಿತ್ತು!
-ಹರ್ಷವರ್ಧನ್
harsh.9mile@gmail.com