ಫಳಫಳ ಹಲ್ಲು ಥಳಥಳ ದೇಹ
ದಿನಕ್ಕೆರಡು ಬಾರಿ ಹಲ್ಲುಜ್ಜಿ
ಬೆಳಗಿನ ಜಾವ ಹಾಗೂ ರಾತ್ರಿ ಊಟವಾದ ಬಳಿಕ ಹಲ್ಲು ಉಜ್ಜಬೇಕು. ನಿಮ್ಮ ಬ್ರಶ್ ಹಿಂಬದಿ ಹಲ್ಲುಗಳನ್ನು ತಲುಪುವ ಹಾಗಿರಲಿ. ಅಲ್ಲದೆ, ಬ್ರಶ್ ಎಳೆಗಳು ನಯವಾಗಿದ್ದರೆ ನಿಮ್ಮ ದವಡೆಗೆ ಪೆಟ್ಟಾಗುವುದಿಲ್ಲ. ನಿಯಮಿತವಾಗಿ ಹಲ್ಲು ತಿಕ್ಕಿ.
ಫ್ಲೂರೈಡ್ ಟೂತ್‌ಪೇಸ್ಟ್
ಫ್ಲೂರೈಡ್ ಅಂಶವಿರುವ ಟೂತ್‌ಪೇಸ್ಟ್ ಬಳಸುವುದರಿಂದ ನಿಮ್ಮ ಹಲ್ಲು ಕ್ಷಯವನ್ನು ತಡೆಯಬಹುದು. ಆದ್ದರಿಂದ ಟೂತ್‌ಪೇಸ್ಟ್ ಅನ್ನು ಎಚ್ಚರದಿಂದ ಆಯ್ದುಕೊಳ್ಳಿ.
ನವಿರಾಗಿ ಹಲ್ಲು ಉಜ್ಜಿ
ಹಲ್ಲು ಉಜ್ಜುವುದು ಎಂದಾಕ್ಷಣ ಎರ್ರಾಬಿರ್ರಿಯಾಗಿ ತಿಕ್ಕಬಾರದು. ತುಂಬಾ ನಿಧಾನವಾಗಿ ತಿಕ್ಕಬೇಕು. ಇದರಿಂದ ನಿಮ್ಮ ವಸಡುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕನಿಷ್ಠ 2ರಿಂದ 3 ನಿಮಿಷವರೆಗೂ ಹಲ್ಲುಜ್ಜಿ.
ಸಾಫ್ಟ್ ಡ್ರಿಂಕ್ ಬೇಡ
ಆಮ್ಲೀಯ ಅಂಶಗಳಿರುವ ಪೇಯಗಳನ್ನು ಸಾಧ್ಯವಾದಷ್ಟು ದೂರವಿಡಿ. ವಿಶೇಷವಾಗಿ ಸಾಫ್ಟ್ ಡ್ರಿಂಕ್ಸ್ ಮತ್ತು ಕೆಲವು ಹಣ್ಣಿನ ರಸಗಳು. ಇದೇ ವೇಳೆ, ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರವನ್ನು ಕೂಡ ಮಿತಿಯಲ್ಲಿ ಸೇವಿಸಬೇಕು. ಇದರಿಂದ ಹಲ್ಲುಗಳ ಆರೋಗ್ಯ ವೃದ್ಧಿಯಾಗುತ್ತದೆ.
ಗಾಯವಾಗದಂತೆ ನೋಡಿಕೊಳ್ಳಿ
ಆಟ ಅಥವಾ ಬೈಕ್ ಓಡಿಸುವಾಗ ಹೆಲ್ಮೆಟ್‌ಗಳನ್ನು ಅಥವಾ ಇನ್ನಾವುದೇ ರಕ್ಷಣಾ ಕವಚಗಳನ್ನು ಧರಿಸಿ. ಯಾಕೆಂದರೆ, ಸಾಧ್ಯವಾದಷ್ಟು ಹಲ್ಲುಗಳು ಗಾಯವಾಗದಂತೆ ನೋಡಿಕೊಳ್ಳಿ.
ತಿನ್ನೋದಕ್ಕೆ ಮಾತ್ರ ಬಳಸಿ
ಹಲ್ಲುಗಳಿರುವುದು ಆಹಾರ ಜಗಿಯುವುದಕ್ಕೆ. ಆದರೆ, ಕೆಲವರು ಹಲ್ಲುಗಳಿಂದ ಏನೇನೋ ಕೆಲಸ ಮಾಡುತ್ತಾರೆ. ಇದರಿಂದ ಹಲ್ಲುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ವೈದ್ಯರನ್ನು ಕಾಣಿ
ಸಾಮಾನ್ಯವಾಗಿ ಹಲ್ಲುಗಳ ತೊಂದರೆಗೆ ಸಂಬಂಧಿಸಿದಂತೆ ಬಹುತೇಕ ನಿರ್ಲಕ್ಷ್ಯ ವಹಿಸುತ್ತಾರೆ. ಹಾಗೇ ಮಾಡಬೇಡಿ. ಏನೂ ತೊಂದರೆ ಇಲ್ಲದಿದ್ದರೂ ನಿಯಮಿತವಾಗಿ ದಂತ ವೈದ್ಯರನ್ನು ಕಾಣುವುದನ್ನು ರೂಢಿಸಿಕೊಳ್ಳಿ.