ಸುಂದರ ಕೂದಲಿಗೆ ಸಸ್ಯಾಹಾರ ಸಾಕು!
ಸುಂದರವಾಗಿ ಕಾಣಲು ಹುಡುಗಿಯರು ಏನೆಲ್ಲಾ ಕಸರತ್ತು ನಡೆಸುತ್ತಾರೆ. ಮೆದುವಾದ, ಸದಾ 'ಹಾರಾಡುವ' ಕೂದಲಿಗೆ ಒಳ್ಳೆ ಉಪಾಯ ಏನು ಗೊತ್ತೆ? ಸಸ್ಯಾಹಾರ! ಇತ್ತೀಚೆಗೆ ಈ ಬಗ್ಗೆ ಬೆಂಗಳೂರಿನ ಹೇರ್‌ಲೈನ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್ ಸಂಶೋಧನೆ ನಡೆಸಿದೆ. ಅದರ ಪ್ರಕಾರ ಹೆಚ್ಚಾಗಿ ಮಾಂಸಾಹಾರ ಸೇವಿಸುವವರು ಕೂದಲುದುರುವಿಕೆಯಿಂದ ಬಳಲುತ್ತಾರೆ. ಸಂಶೋಧನೆ ಪ್ರಕಾರ ವಾರಕ್ಕೆ ಎರಡು ಬಾರಿ ಮಾಂಸಾಹಾರ ಸೇವನೆ ಮಾಡುವ ಶೇ.88ರಷ್ಟು ಜನರಲ್ಲಿ ಕೂದಲುದುರುವಿಕೆ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ. ಜತೆಗೆ ಶೇ.2ರಷ್ಟು ಸಸ್ಯಾಹಾರಿಗಳು ಮತ್ತು ಶೇ.10ರಷ್ಟು ಮೊಟ್ಟೆ ತಿನ್ನುವವರು ಕೂದಲುದುರುವಿಕೆಯ ತೊಂದರೆ ಅನುಭವಿಸುತ್ತಿದ್ದಾರೆ. ಒಟ್ಟಾರೆ ಮಾಂಸಾಹಾರಿಗಳಲ್ಲಿ ಉದುರುವಿಕೆ ಸಮಸ್ಯೆ ಹೆಚು.
ಕಾರಣ ಏನು?
ಮುಖ್ಯ ಕಾರಣ ಕೋಳಿ ಮತ್ತು ಇತರ ಪ್ರಾಣಿಗಳು ಪುಷ್ಟಿಯಾಗಲು ನೀಡುವ ಆಸ್ಟ್ರೋಜನ್ ಇಂಜೆಕ್ಷನ್. ಮನುಷ್ಯನ ದೇಹದಲ್ಲಿ ಈ ಆಸ್ಟ್ರೋಜನ್ ಅಂಶ ಹೆಚ್ಚಾದರೆ ಕೂದಲುದುರುತ್ತದೆ.
ತಡೆಗಟ್ಟುವುದು ಹೇಗೆ?
ಪರಿಹಾರವೆಂದರೆ ಮಾಂಸಾಹಾರ ಕಡಿಮೆ ಮಾಡಿ ಹೆಚ್ಚು ತರಕಾರಿ, ಸೊಪ್ಪು ತಿನ್ನುವುದು ರೂಢಿಸಿಕೊಳ್ಳಬೇಕು. ದಿನನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವಿಟಮಿನ್ ಸಿ ಹೆಚ್ಚಾಗಿರುವ ಆಹಾರ ಅಂದರೆ ಕಿತ್ತಳೆ ಹಣ್ಣು, ನಿಂಬೆಹುಳಿ, ಬೆರ್ರಿಗಳು, ಕಲ್ಲಂಗಡಿ ಹಣ್ಣು, ಸೊಪ್ಪುಗಳು, ಮೆಂತೆ, ಟೋಮ್ಯಾಟೋ, ಆಲೂಗಡ್ಡೆ ಜಾಸ್ತಿ ತಿನ್ನಬೇಕು. ಕಬ್ಬಿಣದಂಶ ಜಾಸ್ತಿ ಇರುವ ವಸ್ತುಗಳು ಅಂದರೆ ಪಾಲಕ್, ಬೇಳೆ, ಸೋಯಾಬೀನ್, ಗೋಡಂಬಿ ಮತ್ತು ಸಾಸಿವೆ ಮುಂತಾದವ ಹೆಚ್ಚಾಗಿ ಸೇವಿಸಬೇಕು.
ಕೂದಲುದುರುವಿಕೆ ಶುರುವಾದ ಕೂಡಲೇ ಮೊದಲಿಗೆ ಆಹಾರದಲ್ಲಿ ಬದಲಾವಣೆ ಮಾಡಬೇಕು. ಇದು ಕೂದಲುದುರುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರ ನಂತರ ಯಾವ ಕಾರಣಕ್ಕಾಗಿ ಕೂದಲು ಉದುರುತ್ತಿದೆ ಅಂತ ತಿಳಿದುಕೊಂಡು ಸೂಕ್ತ ಚಿಕಿತ್ಸೆ ಮಾಡಬೇಕು.
- ಬಾನಿ ಮಂಚಾಂಡ, ಹೇರ್‌ಲೈನ್‌ನ ಮುಖ್ಯಸ್ಥೆ