ಒಂದು ಕಾಲದಲ್ಲಿ ಸ್ಥೂಲಕಾಯ ಎಂದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಎಂಬಂತಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಅತಿ ಹೆಚ್ಚು ಸ್ಥೂಲಕಾಯದ ಸಮಸ್ಯೆ ಹೊಂದಿರುವ ವಿಶ್ವದ 10 ದೇಶಗಳ ಪೈಕಿ ಭಾರತ ಮೂರನೆಯ ಸ್ಥಾನದಲ್ಲಿದೆ. ಇದು ಚಿಂತೆಗೀಡು ಮಾಡುವ ಗಂಭೀರ ಸಮಸ್ಯೆ. ಪ್ರತಿ ಐವರು ಭಾರತೀಯರ ಪೈಕಿ ಒಬ್ಬರು ಸ್ಥೂಲಕಾಯ ಅಥವಾ ಮಿತಿ ಮೀರಿದ ತೂಕವುಳ್ಳವರಾಗಿದ್ದಾರೆ. ಕೇವಲ ಅಮೆರಿಕ ಮತ್ತು ಚೀನಾ ಮಾತ್ರ ಈ ವಿಷಯದಲ್ಲಿ ಭಾರತಕ್ಕಿಂತ ಮುಂದಿವೆ. ಪ್ರತಿಷ್ಠಿತ ಲ್ಯಾನ್ಸೆಟ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲಿ ಈ ವಿಷಯ ಬಯಲಾಗಿದೆ.
ಭಾರತದಲ್ಲಿ ಶೇ.15ರಷ್ಟು ಬೊಜ್ಜಣ್ಣಗಳು
ಅಮೆರಿಕದಲ್ಲಿ ಶೇ.13ರಷ್ಟು ಸ್ಥೂಲಕಾಯರಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ ಮತ್ತು ಭಾರತ ಒಟ್ಟಾರೆ ಶೇ. 15ರಷ್ಟು ಸ್ಥೂಲಕಾಯಿಗಳನ್ನು ಹೊಂದಿದ್ದು, 4.6 ಕೋಟಿ ಮತ್ತು 3 ಕೋಟಿ ಸ್ಥೂಲಕಾಯರು ಇಲ್ಲಿದ್ದಾರೆ. 1980ರಲ್ಲಿ ಪ್ರಪಂಚದಲ್ಲಿ 85.7 ಕೋಟಿ ಇದ್ದ ಈ ಸಂಖ್ಯೆ 2013ರಲ್ಲಿ 211 ಕೋಟಿ ತಲುಪಿದೆ. ಇದು, ಜಗತ್ತಿನ ಒಟ್ಟಾರೆ ಸ್ಥೂಲಕಾಯರ ಮೂರನೆಯ ಒಂದು ಭಾಗದಷ್ಟು. 2010ರಲ್ಲಿ ಅತಿ ತೂಕ ಮತ್ತು ಸ್ಥೂಲಕಾಯದ ಕಾರಣ ವಿಶ್ವಾದ್ಯಂತ 3.40 ಕೋಟಿ ಮಂದಿ ಸಾವನ್ನಪ್ಪಿರುವ ಅಂದಾಜಿದೆ. ಶೇ.3.9ರಷ್ಟು ಜೀವನ ನಷ್ಟ, ಮತ್ತು ಶೇ. 8.9 ಮಂದಿ ಅಂಗವೈಕಲ್ಯತೆಗೆ ಹೊಂದಿಕೊಂಡಿರುವ ಅಂದಾಜಿದೆ. ಕಳೆದ 33 ವರ್ಷಗಳಲ್ಲಿ, ಈ ಪಿಡುಗಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ರಾಷ್ಟ್ರದಿಂದ ಯಶೋಗಾಥೆಗಳು ಹೊರಹೊಮ್ಮಿಲ್ಲ. ಇದು, ಮುಂಬರುವ ದಿನಗಳಲ್ಲಿ ಈ ಪಿಡುಗು ಮತ್ತಷ್ಟು ವ್ಯಾಪಕವಾಗುವ ಭೀತಿಯುಂಟು ಮಾಡಿದೆ.
1999ರಿಂದೀಚೆಗೆ ಭಾರತೀಯರಲ್ಲಿ ನಗರೀಕರಣದ ಕಾರಣ ಮೈತೂಕ ಹೆಚ್ಚಾಗುತ್ತಾ ಸಾಗಿದೆ. ನಮ್ಮ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತಾ ಸಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಇಂಟರ್‌ನೆಟ್ ಜನರನ್ನು ಸೋಮಾರಿ ಮತ್ತು ನಿಷ್ಕ್ರಿಯರನ್ನಾಗಿಸಿದೆ ಎಂದು ಮ್ಯಾಕ್ಸ್ ಹೆಲ್ತ್‌ಕೇರ್ ಸಂಸ್ಥೆಯ ಇನ್ಸ್‌ಟಿಟ್ಯೂಟ್ ಅಫ್ ಮಿನಿಮಲ್ ಅಕ್ಸೆಸ್ ಆ್ಯಂಡ್ ಬ್ಯಾರಿಯಾಟ್ರಿಕ್ ಸರ್ಜರಿಯ ನಿರ್ದೇಶಕ ಡಾ. ಪ್ರದೀಪ್ ಚೌಬೆ ಹೇಳುತ್ತಾರೆ.