ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ವಯಸ್ಸಿಗೆ ಮೀರಿದ ಸಂಬಂಧಗಳು ಬದುಕುತ್ತವೆಯಾ?

ಗಂಡು-ಹೆಣ್ಣಿನ ಸಂಬಂಧ ದೈಹಿಕ ಆಕರ್ಷಣೆ...

Lingaraj Badiger
Updated On : 26 Jun 2014, 12:34 pm

ವಯಸ್ಸಿಗೆ ಮೀರಿದ ಸಂಬಂಧಗಳು ಮುರಿದುಬೀಳುವ ಪ್ರಮಾಣ ಅನುರೂಪದ ವಯಸ್ಸಿನ ಸಂಬಂಧಗಳು ಮುರಿದುಬೀಳುವುದಕ್ಕಿಂತ ಬಹಳ ಹೆಚ್ಚೇನೂ ಇಲ್ಲ. ಇದರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ವಯಸ್ಸಿಗೆ ಮೀರಿದ ಮದುವೆಗಳ ಸಂಖ್ಯೆ ಬಹಳ ಕಡಿಮೆಯಿರುವುದರಿಂದ ಅವುಗಳಲ್ಲಿ ನಾಲ್ಕೈದು ಮದುವೆಗಳು ಮುರಿದುಬಿದ್ದರೂ ನಮಗೆ ಅದೇ ದೊಡ್ಡದಾಗಿ ಕಾಣಿಸುತ್ತದೆ.

ಸರಿಯಾದ ವಯಸ್ಸಿನಲ್ಲಿ ಮದುವೆಯಾದ ಗಂಡು-ಹೆಣ್ಣಿನ ಸಂಬಂಧ ದೈಹಿಕ ಆಕರ್ಷಣೆ ಮುಗಿದ ಮೇಲೂ ಬಹಳ ವರ್ಷಗಳ ಕಾಲ ಬದುಕುತ್ತಿದೆ ಎಂಬುದೇ ಒಂದು ಅದ್ಭುತ. ಏಕೆಂದರೆ, ಮೆನ್ ಆರ್ ಫ್ರಮ್ ಮಾರ್ಸ್, ವಿಮೆನ್ ಆರ್ ಫ್ರಮ್ ವೀನಸ್. ಇಬ್ಬರೂ ಬೇರೆ ಬೇರೆ ಗ್ರಹದಿಂದ ಬಂದಿಳಿದಂತೆ ಇದ್ದಾರೆ. ಇಬ್ಬರೂ ಯೋಚಿಸುವ ರೀತಿಯೇ ಬೇರೆ. ಇದೊಂದು ರೀತಿಯ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್! ದೇವರು ಇವೆರಡು ಜಾತಿಗಳನ್ನು ಸೃಷ್ಟಿಸಿದ್ದು ಸಂಪೂರ್ಣ ಬೇರೆಯದೇ ರೀತಿಯ ಎರಕದಿಂದ. ಇಬ್ಬರೂ ಮನುಷ್ಯರು ಎಂಬುದೊಂದನ್ನು ಬಿಟ್ಟರೆ ಗಂಡು ಹಾಗೂ ಹೆಣ್ಣಿನಲ್ಲಿ ಯಾವ ಸಾಮ್ಯತೆಯೂ ಇಲ್ಲ.

ಆದರೂ ಸಾವಿರಾರು ವರ್ಷಗಳಿಂದ ಇವರು ಗಂಡ-ಹೆಂಡತಿಯಾಗಿ ಬಾಳ್ವೆ ನಡೆಸುತ್ತಿದ್ದಾರೆ. ಹೇಗೋ ಸಂಸಾರದ ಚಕ್ರ ತಿರುಗುತ್ತ ಸಾಗಿದೆ. ಪ್ರತಿದಿನ ಜಗತ್ತಿನಲ್ಲಿ ಲಕ್ಷಾಂತರ ಡೈವೊರ್ಸ್ ಕೇಸುಗಳು ಫೈಲ್ ಆದರೂ ಕೋಟ್ಯಂತರ ಸಂಸಾರ ನೆಟ್ಟಗೇ ನಡೆಯುತ್ತಿದೆ. ಇದು ನಾಲ್ಕೈದು ವರ್ಷಗಳ ಅಂತರದಲ್ಲಿ ಮದುವೆಆದವರ ಕತೆಯಾಯಿತು.
ಇವರಲ್ಲೇ ಭಿನ್ನಾಭಿಪ್ರಾಯಗಳು ಸಾಕಷ್ಟು ಬರುವುದರಿಂದ, ಹದಿನೈದು-ಇಪ್ಪತ್ತು ವರ್ಷಗಳ ಅಂತರದಲ್ಲಿ ಮದುವೆಯಾದವರ ಕತೆಯೇನು? ಅವರು ಹೇಗೆ ಹೊಂದಿಕೊಂಡು ಬಾಳುತ್ತಾರೆ? ವಯಸ್ಸಿನ ಅಂತರ ಬಹಳ ಇರುವ ಮದುವೆಗಳು ಎಷ್ಟು ಕಾಲ ಬದುಕುತ್ತವೆ?

ಈ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ನಮ್ಮ ನಿಮ್ಮ ಸುತ್ತಮುತ್ತ ಒಮ್ಮೆ ಕಣ್ಣರಳಿಸಿ ನೋಡಿದರೆ ಇಂತಹ ಹೆಚ್ಚಿನ ಸಂಬಂಧಗಳು ವಿರಸದಲ್ಲೇ ಅಂತ್ಯಗೊಳ್ಳುವುದು ಕಾಣುತ್ತದೆ. ಸಲ್ಮಾನ್ ರಶ್ದಿ ತನಗಿಂತ ಹತ್ತಿಪ್ಪತ್ತು ವರ್ಷ ಚಿಕ್ಕವರಾದ ನಾಲ್ವರನ್ನು ಮದುವೆಯಾಗಿ ಬಿಟ್ಟಿದ್ದಾರೆ. ಮಡೋನಾ ತನಗಿಂತ ಮೂವತ್ತು ವರ್ಷ ಚಿಕ್ಕವನನ್ನು ಪ್ರೀತಿಸಿ ಕೊನೆಗೆ ಕೈಕೊಟ್ಟಿದ್ದಾಳೆ. ಸೈಫ್ ಅಲಿ ಖಾನ್ ಹನ್ನೆರಡು ವರ್ಷ ಸಣ್ಣವಳನ್ನು ಮದುವೆಯಾಗಿ ಡೈವೊರ್ಸ್ ಕೊಟ್ಟು ಈಗ ಕರೀನಾ ಕಪೂರ್‌ಳನ್ನು ಮದುವೆಯಾಗಿದ್ದಾನೆ.

ವಯಸ್ಸಿಗೆ ಮೀರಿದ ಸಂಬಂಧಗಳು ಮದುವೆಯವರೆಗೂ ಬರುವುದೇ ಅಪರೂಪ. ಇವು ಸಾಮಾನ್ಯವಾಗಿ ಅಕ್ರಮ ಸಂಬಂಧದಿಂದ ಶುರುವಾಗಿ ಅಕ್ರಮ ಸಂಬಂಧದಲ್ಲಿಯೇ ಮುಗಿಯುತ್ತವೆ. ಯಾವುದೋ ಆಕರ್ಷಣೆಯಲ್ಲಿ ಚಿಕ್ಕ ಹುಡುಗ ಆಂಟಿಯೊಬ್ಬಳನ್ನು ಪ್ರೀತಿಸುತ್ತಾನೆ ಅಥವಾ ಅವಳೇ ಅವನನ್ನು ದೈಹಿಕ ವಾಂಛೆಗಾಗಿ ಬಳಸಿಕೊಳ್ಳುತ್ತಾಳೆ. ಮಧ್ಯವಯಸ್ಸಿನ ಗಂಡಸರಿಗೆ ಮಾರುಹೋಗುವ ದೊಡ್ಡ ಸಂಖ್ಯೆಯ ಹುಡುಗಿಯರು ಯಾವುದೋ ಒಂದು ಸಹಜ ಕ್ಷಣದಲ್ಲಿ ಅವರಲ್ಲಿ ಆಕರ್ಷಣೆ ಕಳೆದುಕೊಂಡು ದೂರವಾಗುತ್ತಾರೆ. ಬಹಳ ಕಡಿಮೆ ಸಂಬಂಧಗಳು ಮದುವೆಯ ರೂಪ ಪಡೆಯುತ್ತವೆ ಮತ್ತು ಕೊನೆಯವರೆಗೂ ಬಾಳುತ್ತವೆ.

ಒಂದು ಸಮೀಕ್ಷೆಯ ಪ್ರಕಾರ, ಹಿರಿಯ ವಯಸ್ಸಿನ ಗಂಡಸು ಹಾಗೂ ಚಿಕ್ಕ ವಯಸ್ಸಿನ ಹುಡುಗಿಯ ಸಂಬಂಧಕ್ಕಿಂತ ಹೆಚ್ಚಾಗಿ ಹಿರಿಯ ವಯಸ್ಸಿನ ಹೆಂಗಸು ಹಾಗೂ ಚಿಕ್ಕ ವಯಸ್ಸಿನ ಹುಡುಗನ ಸಂಬಂಧದಲ್ಲೇ ಸಕ್ಸಸ್ ರೇಟ್ ಜಾಸ್ತಿ. ಇದಕ್ಕೆ ಕಾರಣಗಳು ಹಲವಾರಿವೆ.

ಮೊದಲನೆಯದಾಗಿ, ಗಂಡಸಿಗೆ ವಯಸ್ಸಾಗುತ್ತ ಹೋದಂತೆ ಲೈಂಗಿಕ ಶಕ್ತಿ ಕುಂದುತ್ತದೆ. ಅವರ ಹೆಂಡತಿ ಚಿಕ್ಕ ವಯಸ್ಸಿನವಳಾಗಿದ್ದರೆ ಆಕೆಯ ಅಸಮಾಧಾನ ಹೆಚ್ಚುತ್ತದೆ. ಆಗ ಅವಳಿಗೆ ಚಿಕ್ಕ ವಯಸ್ಸಿನ ಗಂಡಿನಲ್ಲಿ ಆಕರ್ಷಣೆ ಮೂಡಬಹುದು. ಆದರೆ, ಹೆಂಗಸರಿಗೆ ವಯಸ್ಸಾದರೂ ಲೈಂಗಿಕ ಶಕ್ತಿ ಮೊದಲಿನಷ್ಟೇ ಇರಬಹುದು ಅಥವಾ ಸ್ವಲ್ಪ ಮಾತ್ರ ಕಡಿಮೆಯಾಗಬಹುದು. ಮೇಲಾಗಿ, ಲೈಂಗಿಕ ಆಸಕ್ತಿ ಅಥವಾ ಶಕ್ತಿ ಕುಂದಿದರೂ ಸಂಗಾತಿಯನ್ನು ಆಕೆ ತೃಪ್ತಿಪಡಿಸಬಲ್ಲಳು. ಇದು ಹೆಣ್ಣಿಗಿರುವ ವಿಶೇಷ ಗುಣ.

ಎರಡನೆಯದಾಗಿ, ಹೆಣ್ಣಿಗೆ ಹೊಸ ಸಂಬಂಧಗಳು ಲಭಿಸಲು ಆಕೆಯ ರೂಪವಷ್ಟೇ ಸಾಕು. ಆದರೆ, ಗಂಡಿಗೆ ಒಂದು ಹೆಣ್ಣು ಒಲಿಯಲು ರೂಪದ ಜೊತೆಗೆ ಅವನ ಅಂತಸ್ತು ಹಾಗೂ ಹಣವೂ ಮುಖ್ಯವಾಗುತ್ತವೆ ಹಾಗಾಗಿ ಚಿಕ್ಕ ವಯಸ್ಸಿನ ಹುಡುಗನನ್ನು ಆಕೆ ಮದುವೆಯಾಗಿದ್ದು, ಅವನು ಅವಳ ಮೇಲೇ ಅವಲಂಬಿತನಾಗಿದ್ದರೆ, ಕೆಲ ವರ್ಷಗಳ ನಂತರ ಅವನಿಗೆ ಬೇಸರ ಬಂದರೂ, ಆಕೆಯನ್ನು ಬಿಟ್ಟರೆ ಬೇರೆಯವರು ಸಿಗುವುದು ಕಷ್ಟ ಎಂಬ ಕಾರಣಕ್ಕಾದರೂ ಅವನು ಹೊಂದಾಣಿಕೆ ಮಾಡಿಕೊಂಡು ಅವಳ ಜೊತೆಯೇ ಬಾಳಬಹುದು. ಆದರೆ, ಹಿರಿಯ ವಯಸ್ಸಿನ ಗಂಡಸನ್ನು ಮದುವೆಯಾದವಳಿಗೆ ಅವನು ಬೋರು ಹೊಡೆಸಿದರೆ ಇನ್ನೊಬ್ಬನನ್ನು ಸೆಳೆಯುವ ಶಕ್ತಿ ಹೇಗಿದ್ದರೂ ಇದ್ದೇ ಇರುತ್ತದೆ.

ವಯಸ್ಸಿಗೆ ಮೀರಿದ ಸಂಬಂಧಗಳಲ್ಲಿ ಬೌದ್ಧಿಕ ಮಟ್ಟದಲ್ಲಿ ಆಗದ ಹೊಂದಾಣಿಕೆ ಹೆಚ್ಚಿನ ಸಲ ಅದರ ಅಂತ್ಯಕ್ಕೆ ಕಾರಣವಾಗುತ್ತದೆ. ಚಿಕ್ಕ ವಯಸ್ಸಿನ ಸಂಗಾತಿ ಇನ್ನೂ ಚೆಲ್ಲುಚೆಲ್ಲಾಗಿ ಆಡುತ್ತಿದ್ದರೆ, ಆರಂಭದಲ್ಲಷ್ಟೇ ಅದು ಆಕರ್ಷಕವಾಗಿ ಕಾಣಿಸಬಹುದು. ಆದರೆ ದಿನ ಕಳೆದಂತೆ ಅದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಇಬ್ಬರು ಸಮಾನ ಮನಸ್ಕರು ಮಾತ್ರ ಬಹಳ ಕಾಲ ಸ್ನೇಹಿತರಾಗಿ ಅಥವಾ ಸಂಗಾತಿಯಾಗಿ ಬಾಳಲು ಸಾಧ್ಯ.

ಇಷ್ಟಕ್ಕೂ, ದೀರ್ಘಕಾಲದ ದಾಂಪತ್ಯ ಎಂಬ ಚಿಂತನೆಯೇ ಈಗ ಅರ್ಥ ಕಳೆದುಕೊಳ್ಳುತ್ತಿದೆ. ಏಕೆ ಜೀವನಪೂರ್ತಿ ಒಬ್ಬ ಸಂಗಾತಿಯ ಜೊತೆಗೇ ಕಳೆಯಬೇಕು? ಹೊಸಬರನ್ನೇಕೆ ಟ್ರೈ ಮಾಡಬಾರದು ಎಂಬ ಮನಸ್ಥಿತಿ ಪಾಶ್ಚಾತ್ಯರಲ್ಲಿ ಬಂದು ಬಹಳ ಕಾಲವಾಯಿತು. ಗಂಡು ಹಾಗೂ ಹೆಣ್ಣು ಇಬ್ಬರಲ್ಲೂ ಅಲ್ಲಿ ಈ ಮನಸ್ಥಿತಿಯಿದೆ. ಭಾರತದಲ್ಲೂ ಎಲೈಟ್ ವರ್ಗದಲ್ಲಿ ಈಗಾಗಲೇ ಇದು ಪ್ರವೇಶ ಮಾಡಿದೆ. ಲಿವಿಂಗ್ ಇನ್ ರಿಲೇಶನ್‌ಶಿಪ್‌ಗಳು ಹೆಚ್ಚುತ್ತಿರುವುದು ಇದೇ ಕಾರಣಕ್ಕೆ. ಇಬ್ಬರಿಗೂ ಪರಸ್ಪರರ ಹಂಗು ಬೇಕಿಲ್ಲ. ಇಬ್ಬರಿಗೂ ಸ್ವತಂತ್ರವಾಗಿರುವುದೇ ಇಷ್ಟ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಒಟ್ಟಿಗಿರುವುದು. ಬೇಸರ ಬಂದಾಗ ಬೇರೆಯಾಗುವುದು. ಇದಕ್ಕೆ ವಯಸ್ಸಿನ ಅಂತರ ಯಾವ ವಿಧದಲ್ಲೂ ಸಂಬಂಧ ಪಡುವುದಿಲ್ಲ.

ಇಷ್ಟಾದರೂ, ವಯಸ್ಸಿಗೆ ಮೀರಿದ ಸಂಬಂಧಗಳು ಮುರಿದುಬೀಳುವ ಪ್ರಮಾಣ ಅನುರೂಪದ ವಯಸ್ಸಿನ ಸಂಬಂಧಗಳು ಮುರಿದುಬೀಳುವುದಕ್ಕಿಂತ ಬಹಳ ಹೆಚ್ಚೇನೂ ಇಲ್ಲ. ಇದರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ವಯಸ್ಸಿಗೆ ಮೀರಿದ ಮದುವೆಗಳ ಸಂಖ್ಯೆ ಬಹಳ ಕಡಿಮೆಯಿರುವುದರಿಂದ ಅವುಗಳಲ್ಲಿ ನಾಲ್ಕೈದು ಮದುವೆಗಳು ಮುರಿದುಬಿದ್ದರೂ ನಮಗೆ ಅದೇ ದೊಡ್ಡದಾಗಿ ಕಾಣಿಸುತ್ತದೆ. ಏಕೆಂದರೆ, ಅಂತಹ ಮದುವೆಗಳು ಅಸಹಜವಾಗಿರುವುದರಿಂದ ಮತ್ತು ಅವು ಹೆಚ್ಚಾಗಿ ಸೆಲೆಬ್ರಿಟಿಗಳ ಬದುಕಿನಲ್ಲೇ ನಡೆಯುವುದರಿಂದ ಅವು ನಮ್ಮ ಗಮನ ಸೆಳೆದಿರುತ್ತವೆ.

ಹಾಗಾಗಿ ನೀವೂ 'ಸಾಹಸ' ಪ್ರವೃತ್ತಿಯವರಾಗಿದ್ದರೆ ಮತ್ತು ದೊಡ್ಡ ವಯಸ್ಸಿನವರನ್ನು ಮದುವೆಯಾಗಬೇಕೆಂದು ಬಯಸಿದ್ದರೆ ಮುಂದಾಗುವುದಕ್ಕೆಲ್ಲ ನೀವೇ ಜವಾಬ್ದಾರರು!

-ಸುಪ್ರಭಾ
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//40308ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement