ಇಂದು ಕೂತು ಮಾಡುವ ಕೆಲಸಗಳೇ ಹೆಚ್ಚು. ಅದರಲ್ಲೂ ನಗರವಾಸಿಗಳಾದರೆ ಆಸೀನರಾಗಿಯೇ ಹೆಚ್ಚು ಹೊತ್ತು ಕೆಲಸ ಮಾಡುತ್ತಿರುತ್ತಾರೆ. ವಿಶ್ರಾಂತಿ, ಟಿವಿ ವೀಕ್ಷಣೆ, ಉದ್ಯೋಗದ ಸಮಯ... ಒಟ್ಟಾರೆ ಎಲ್ಲ ಕೂಡಿದರೆ ಇತರೆ ಕೆಲಸಗಳಿಗಿಂತ ಕುಳಿತುಕೊಳ್ಳುವುದೇ ಹೆಚ್ಚು.
ಹೀಗೆ ಕೂತು ಕೂತು ನಾವು ಹಾಳಾಗುತ್ತೇವೆ ಎಂದರೆ ನೀವು ಹುಬ್ಬೇರಿಸಬಹುದು. ಆದರೆ, ಇದರಿಂದ ಕ್ಯಾನ್ಸರ್ ಸೇರಿದಂತೆ ಕೆಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಈ ವಿಷಯ ಇತ್ತೀಚಿನ ವೈದ್ಯಕೀಯ ಅಧ್ಯಯನದಲ್ಲಿ ಸಾಬೀತಾಗಿದೆ. ಸಂಶೋಧನೆಯ ಪ್ರಕಾರ, ವೃದ್ಧಾಪ್ಯದಲ್ಲಿ ಮಾತ್ರ ಕ್ಯಾನ್ಸರ್‌ಗೆ ತುತ್ತಾಗದೆ ಅತಿ ಸಣ್ಣ ವಯಸ್ಸಿನಲ್ಲೂ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳಿವೆ.
ಕ್ಯಾನ್ಸರ್ ಲೆಕ್ಕಾಚಾರ
ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಅತಿ ಮುಖ್ಯ. ನಗರ ವಾಸಿಗಳು ಹಳ್ಳಿಯವರಿಗಿಂತ ಸುಲಭ ಜೀವನ ನಡೆಸುತ್ತಿರುವುದರಿಂದ ಹೆಚ್ಚಿನ ಕಾಯಿಲೆಗಳಿಗೆ ತುತ್ತಾಗುವುದು ಸಾಮಾನ್ಯ. ಜರ್ಮನಿಯ ವಿಶ್ವವಿದ್ಯಾಲಯ ಎಪಿಡೆಮಿಯೊಲಜಿ ವಿಭಾಗದ ಡಾನ್ಯಿಲಾ ಸ್ಕ್ಮಡ್ ಮತ್ತು ಮೈಕೆಲ್ ಎಫ್ ಲಿಟ್ಸ್‌ಮನ್‌ರ ಸಂಶೋಧನೆ 'ಹೆಚ್ಚು ಕೂರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ' ಎಂದಿದೆ. ನಾವು ನಮ್ಮ ಕುಳಿತು ಕೊಳ್ಳುವ ಸಮಯವನ್ನು ಪ್ರತಿ ಎರಡು ಗಂಟೆ ಹೆಚ್ಚಿಸುವುದರಿಂದ ಶೇ.8 ಕೊಲನ್ ಕ್ಯಾನ್ಸರ್, ಶೇ.10 ಎನ್‌ಡೊಮೆಟ್ರಿಯಲ್ ಕ್ಯಾನ್ಸರ್ ಹಾಗೂ ಶೇ.6 ಶ್ವಾಸಕೋಶದ ಕ್ಯಾನ್ಸರ್ ಬರಬಹುದು ಎಂಬ ಲೆಕ್ಕಾಚಾರ ಅವರದು.
ವ್ಯಾಯಾಮ ಶ್ರೀರಕ್ಷೆ
ವ್ಯಾಯಾಮದಿಂದ ಮತ್ತು ದೈಹಿಕ ಕೆಲಸಗಳಿಂದ ಹಲವು ರೋಗಗಳನ್ನು ನಿಯಂತ್ರಿಸಬಹುದು. ದೇಹಕ್ಕೆ ಸರಿಯಾದ ಪ್ರಮಾಣದ ದಂಡನೆ ನೀಡದಿದ್ದರೆ ಮಧುಮೇಹ, ದೇಹದ ತೂಕ ಹೆಚ್ಚಳ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ತಜ್ಞರ ಪ್ರಕಾರ, ಟಿವಿ ವೀಕ್ಷಣೆಯೂ ಕ್ಯಾನ್ಸರ್‌ಗೆ ಕಾರಣವಾಗುತ್ತದಂತೆ. ಏಕೆಂದರೆ ಟಿವಿ ವೀಕ್ಷಣೆಯ ಜೊತೆಗೆ ನಾವು ಸಾಮಾನ್ಯವಾಗಿ ಪಾನೀಯ ಮತ್ತು ಕರಿದ ತಿಂಡಿಯನ್ನು ಸೇವಿಸುತ್ತೇವೆ. ಇದು ಕ್ಯಾನ್ಸರ್ ತರಬಲ್ಲುದು. ಈ ಸಂಶೋಧನೆಗೆ ಸ್ವಯಂಪ್ರೇರಿತ ಪ್ರಶ್ನೆಗಳು ಮತ್ತು ಸಂದರ್ಶನಗಳು ಸಾಥ್ ನೀಡಿವೆ.
ಪೌಷ್ಟಿಕ ಆಹಾರ ಸೇವನೆಯೂ ದೇಹಕ್ಕೆ ಅತಿ ಮುಖ್ಯ. ನಮ್ಮ ದೇಹಕ್ಕೆ 150 ನಿಮಿಷಗಳ ಮುಂಜಾನೆ ವಾಯು ವಿಹಾರ ಮತ್ತು 75 ನಿಮಿಷದ ವ್ಯಾಯಾಮ ಅಥವಾ ದೇಹ ದಂಡನೆ ಒಳ್ಳೆಯದು. ನಾವು ಆದಷ್ಟು ದೈಹಿಕವಾಗಿ ಚುರುಕಾಗಿರುವುದರಿಂದ ಅನೇಕ ರೋಗಗಳಿಗೆ ಕಡಿವಾಣ ಹಾಕಬಹುದು.
- ತೇಜಸ್ವಿನಿ ಆರ್.ಎಲ್.