ಮದುವೆಯಾಗಿ ವರ್ಷಗಳೇ ಉರುಳಿವೆ. ಕಂಡಕಂಡ ದೇವರಿಗೆ ಹರಕೆಯ ಮೇಲೊಂದು ಹರಕೆ ಹೊತ್ತಾಯಿತು. ಸುತ್ತಲಿನವರ ಕೊಂಕು ಮಾತು ಬೇರೆ. ಅಸಹಾಯಕ ಸ್ಥಿತಿ. ವಿಧಿಯನ್ನು ಶಪಿಸುವುದು ಬಿಟ್ಟು ಬೇರೇ ದಾರಿ ಕಾಣುತ್ತಿಲ್ಲ. ಹಲವು ವೈದ್ಯರನ್ನು ಸಂಪರ್ಕಿಸಿದರೂ ಪರಿಹಾರ ಸಿಕ್ಕಿಲ್ಲ. ಗರ್ಭಧಾರಣೆ ಆಗದಿರುವುದಕ್ಕೆ ಕಾರಣವೇ ಸಿಗುತ್ತಿಲ್ಲ.
ಹೌದು, ಒಡಲು ತುಂಬಿಲ್ಲದವರ ಚಡಪಡಿಕೆ ಈ ಸಂದರ್ಭದಲ್ಲೇ ಮೇರೆ ಮೀರುವುದು. ಕುಗ್ಗಿ ಹೋಗುತ್ತಾರೆ. ಮತ್ತೆ ಮತ್ತೇ ದೇವರ ಮೊರೆ ಹೊಕ್ಕರೂ ದಾಂಪತ್ಯದ ಸಹಜ ಬಯಕೆ ಈಡೇರುವುದೇ ಇಲ್ಲ. ಹಲವು ದಂಪತಿಯನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾದದ್ದು ಸಂತಾನಹೀನತೆ. ಮಕ್ಕಳಾಗದಿರುವುದಕ್ಕೆ ಕಾರಣಗಳು ಹಲವು. ಸಂತಾನಹೀನತೆಗೆ ಸ್ತ್ರೀ ಶೇ.25ರಷ್ಟು ಕಾರಣಳಾಗಿದ್ದರೆ, ಪುರುಷ ಶೇ.33ರಷ್ಟು ಕಾರಣನಾಗಿರುತ್ತಾನೆ. ಆದರೆ ಬಹುತೇಕ ಸಂದರ್ಭದಲ್ಲಿ ದೂಷಣೆಗೊಳಗಾಗುವುದು ಮಹಿಳೆ ಮಾತ್ರ. ಹಾಗೆ ನೋಡಿದರೆ ಇಂದಿನ ದಿನಗಳಲ್ಲಿ ಸಂತಾನಹೀನತೆ ನಿವಾರಣೆ ಕಷ್ಟವೇ ಅಲ್ಲ. ಆದರೆ ಯಾವುದು ನಿಜವಾದ ಬಂಜೆತನ, ಯಾವಾಗ ತಜ್ಞರನ್ನು ಸಂಪರ್ಕಿಸಬೇಕು ಅನ್ನುವುದರ ಗೊಂದಲ ಹಾಗೆ ಉಳಿದು ಹೋಗಿದೆ.
ಏನು ಮಾಡಬೇಕು?
ಕೆಲವೊಮ್ಮೆ ದಂಪತಿ ನಡುವೆ ಸಮಸ್ಯೆ ಇಲ್ಲದಿದ್ದರೂ ಒತ್ತಡ, ಲೈಂಗಿಕ ನಿರಾಸಕ್ತಿ, ತಿಳಿವಳಿಕೆ ಕೊರತೆಯಿಂದ ಮಗುವನ್ನು ಹೊಂದುವ ಬಯಕೆ ಕೈಗೂಡುವುದೇ ಇಲ್ಲ. ಅದಕ್ಕೆ ಲೈಂಗಿಕ ಆಪ್ತ ಸಲಹೆ ಅಗತ್ಯ. ಕೆಲವೊಮ್ಮೆ ಔಷಧೋಪಚಾರದ ಅಗತ್ಯವೂ ಇರಬಹುದು. ಸತತ ಒಂದು ವರ್ಷದಿಂದ ಲೈಂಗಿಕವಾಗಿ ಸಕ್ರಿಯವಾಗಿದ್ದರೂ ಗರ್ಭ ಧರಿಸಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸುವ ಸಮಯ ಬಂತು ಅಂತಲೇ ಅರ್ಥ. ಗರ್ಭ ಧರಿಸಿದ್ದರೂ ಎರಡು ಮೂರು ಬಾರಿ ಗರ್ಭಪಾತವಾಗಿದ್ದರೆ ಅದು ನಿರ್ಲಕ್ಷಿಸುವ ಸಂಗತಿ ಅಲ್ಲ. ಸಂತಾನಹೀನತೆಗೆ ಕಾರಣ ಅಥವಾ ಲಕ್ಷಣ ಆಧರಿಸಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅನ್ನುವುದನ್ನು ನಿರ್ಧರಿಸಲಾಗುತ್ತದೆ. ಮೊದಲು ನಿಮ್ಮ ಅಂಡಾಣು ಉತ್ಪತ್ತಿ ಸಮಯ ತಿಳಿದುಕೊಳ್ಳಿ. ಹಲವು ಮಹಿಳೆಯರಲ್ಲಿ ಅಂಡಾಣು ಬೆಳವಣಿಗೆಯ ಸಮಯ ಬದಲಾಗುತ್ತದೆ. ಅದು ಅವರವರ ಋತುಚಕ್ರದ ಅವಧಿಯ ಮೇಲೆ ಅವಲಂಬಿತ. ಹಲವರಿಗೆ ಅಂಡಾಣು ಬೆಳವಣಿಗೆಯ ಹಂತ ತಿಳಿಯದೆ ಗರ್ಭಧಾರಣೆಗೆ ವಿಫಲವಾಗಬಹುದು. ಮುಟ್ಟು ಮುಗಿದ 12ರಿಂದ 16 ದಿನ ಅಂಡಾಣು ಬೆಳೆಯುವ ಸಮಯ. ಆ ಹೊತ್ತಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚು. ಅದೇ ರೀತಿ ಪುರುಷನ ವೀರ್ಯ ಸಂಖ್ಯೆಯನ್ನು ಸೆಮನ್ ಟೆಸ್ಟ್ ಮೂಲಕ ಪರಿಶೀಲಿಸಬೇಕು. ಇವು ಪ್ರಾಥಮಿಕವಾಗಿ ಗರ್ಭಧಾರಣೆಗೆ ಇರುವ ತೊಡಕುಗಳು. ಇದಕ್ಕೆ ಮಾತ್ರೆ ಕೊಡಬಹುದು. ವೈದ್ಯರ ಸಲಹೆಯಂತೆ ನಿಗದಿತ ಸಮಯದವರೆಗೆ ತೆಗೆದುಕೊಳ್ಳುವುದರಿಂದ ಪರಿಹಾರ ಸಾಧ್ಯತೆ ಇದೆ.
ಯಾವುದಕ್ಕೆ, ಯಾವಾಗ ಚಿಕಿತ್ಸೆ?
ಇದಲ್ಲದೇ ಗಂಭೀರ ಸಮಸ್ಯೆ ಇದ್ದಲ್ಲಿ, ಅದನ್ನು ಗುರುತಿಸಲು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಬೇಕಾಗಬಹುದು. ಇದರಿಂದ ಗಡ್ಡೆ ಅಥವಾ ಸಿಸ್ಟ್ ಇದ್ದರೆ ಕಂಡು ಹಿಡಿಯಬಹುದು. ಕೆಲವೊಮ್ಮೆ ಎಕ್ಸರೆ ಅಗತ್ಯ ಬೀಳಬಹುದು. ಗರ್ಭನಾಳ ಅಥವಾ ಮತ್ತಿತರ ಸಮಸ್ಯೆಯನ್ನು ಅದರಲ್ಲಿ ಗುರುತಿಸಿ ಚಿಕಿತ್ಸೆ ಆರಂಭಿಸಬಹುದು. ಸಮಸ್ಯೆ ಮತ್ತು ಬಂಜೆತನ ಎರಡಕ್ಕೂ ಒಟ್ಟಿಗೇ ಚಿಕಿತ್ಸೆ ಅಸಾಧ್ಯ. ಉದಾಹರಣೆಗೆ, ಗರ್ಭಕೋಶದಲ್ಲಿ ಗಡ್ಡೆ ಬೆಳೆದಿದ್ದರೆ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಅನಂತರವೇ ಬಂಜೆತನಕ್ಕೆ ಚಿಕಿತ್ಸೆ ಆರಂಭಿಸಲಾಗುತ್ತದೆ. ಚಿಕಿತ್ಸೆ ಆಯಾ ವಯಸ್ಸು, ಬಂಜೆತನದ ತೀವ್ರತೆ ಮೇಲೆ ಅವಲಂಬಿತ.
ಐವಿಎಫ್ ಚಿಕಿತ್ಸೆ
ಪ್ರಾಥಮಿಕ ಹಂತದ ಪರೀಕ್ಷೆ ನಂತರವೂ ಫಲ ಸಿಗದಿದ್ದರೆ, ಅಸಾಧ್ಯ ಅನ್ನುವ ಸ್ಥಿತಿಯಲ್ಲಿ ಐವಿಎಫ್ ಚಿಕಿತ್ಸೆ ಕಡೆಗೆ ಗಮನಹರಿಸುವುದು ಒಳಿತು. ತಡ ಮದುವೆಯಾಗಿ ಸಹಜವಾಗಿ ಗರ್ಭಧರಿಸದೇ ಇದ್ದಾಗ, 3ರಿಂದ 5 ವರ್ಷಗಳಾದರೂ ಮಗುವಾಗದಿದ್ದರೆ ಐವಿಎಫ್ ವಿಧಾನ ಆರಿಸಿಕೊಳ್ಳಬಹುದು. ಇದಲ್ಲದೆ ಪುರುಷನಲ್ಲಿ ವೀರ್ಯ ಪ್ರಮಾಣ ತೀರಾ ಕಮ್ಮಿ ಇದ್ದಾಗ, ಮಹಿಳೆಯ ಗರ್ಭನಾಳ ಕೆಲಸ ನಿರ್ವಹಿಸಲು ವಿಫಲವಾದಾಗ ಐವಿಎಫ್‌ಗೆ ಹೋಗಬಹುದು. ಮುಖ್ಯವಾಗಿ ಮಕ್ಕಳಾಗಿಲ್ಲ ಎಂದರೆ ಸೂಕ್ತ ತಪಾಸಣೆ ಮಾಡಿಸಿಕೊಂಡು ಕಾರಣ ತಿಳಿಯುವುದು ಮುಖ್ಯ. ಐವಿಎಫ್ ಚಿಕಿತ್ಸೆ ಇಂದು ಅತ್ಯಂತ ವೇಗಗತಿಯಲ್ಲಿ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದು, ಶೇ.52ರಷ್ಟು ಯಶಸ್ಸು ಸಾಧಿಸಿದೆ ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ದೇವಿಕಾ ಗುಣಶೀಲ (ದೂ.080-41312600 ಅಥವಾ 26673585).
ಮಕ್ಕಳಾಗದಿರಲು ಕಾರಣಗಳು
ಮಹಿಳೆಯರಲ್ಲಿ
ಮುಟ್ಟಿನಲ್ಲಿ ಏರುಪೇರು
ತೀವ್ರ ರಕ್ತಸ್ರಾವ
ಥೈರಾಯ್ಡ್ ಸಮಸ್ಯೆ
ಕೆಲಸದ ಒತ್ತಡ
ಜೀವನ ಶೈಲಿ
ಪೂರ್ಣ ಬೆಳವಣಿಗೆ ಕಾಣದ ಗರ್ಭಕೋಶ
ಅಂಡಾಣು ಉತ್ಪತ್ತಿಯಾಗದಿರುವಿಕೆ
ಟ್ಯೂಬ್ ಬ್ಲಾಕ್
ಫೈಬ್ರಾಯಿಡ್
ಬೊಜ್ಜು ಅಥವಾ ಅತಿಯಾದ ತೂಕ
ಕಡಿಮೆ ತೂಕ
ಧೂಮಪಾನ ಹಾಗೂ ಮದ್ಯಪಾನ
ಲೈಂಗಿಕ ಸಮಸ್ಯೆ
ಹಾರ್ಮೋನ್ ವ್ಯತ್ಯಾಸ
ಪುರುಷರಲ್ಲಿ
ಕಡಿಮೆ ಅಥವಾ ವೀರ್ಯಾಣು ಇಲ್ಲದಿರುವಿಕೆ
ವೀರ್ಯಾಣುಗಳ ಕುಂಠಿತ ಚಲನ ಶಕ್ತಿ
ಸತ್ವ ಕಳೆದುಕೊಂಡ ವೀರ್ಯಾಣು
ಧೂಮಪಾನ ಹಾಗೂ ಮದ್ಯಪಾನ
ಟೆಸ್ಟಿಕ್ಯುಲರ್ ಇನ್ಫೆಕ್ಷನ್ ಹಾಗೂ ಕ್ಯಾನ್ಸರ್
ಉದ್ರೇಕಹೀನತೆ
ಶೀಘ್ರ ಸ್ಖಲನ
ಸಂತಾನ ಹೀನತೆಗೆ ಪುರಷ ಹಾಗೂ ಮಹಿಳೆಯರಿಬ್ಬರಲ್ಲೂ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಸಂತಾನ ಪ್ರಾಪ್ತಿಗಾಗಿ ಐವಿಎಫ್ ಯಾವಾಗ, ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯದೆ ಒದ್ದಾಡುವವರಿಗೆ ಸೂಕ್ತ ಸಲಹೆ ಅಗತ್ಯ.
- ಡಾ. ದೇವಿಕಾ ಗುಣಶೀಲ, ಸ್ತ್ರೀರೋಗ ತಜ್ಞೆ