ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಲಿಚಿ ರುಚಿ

ಲಿಚಿ ಒಂದು ರುಚಿಕರ ರಸಭರಿತ ಹಣ್ಣು. ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಹೊಂದಿರುವ ...

Rashmi Kasaragodu
Updated On : 14 Mar 2014, 4:03 am

ಲಿಚಿ ಒಂದು ರುಚಿಕರ ರಸಭರಿತ ಹಣ್ಣು. ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಹೊಂದಿರುವ ಈ ಹಣ್ಣು ಚರ್ಮದ ರಕ್ಷಣೆ, ಮಕ್ಕಳ ಬೆಳವಣಿಗೆಗೆ ಸಹಕಾರಿ.
'ಸಿ' ವಿಟಮಿನ್ ಹೇರಳವಾಗಿರುವ ಪ್ರತಿ 100 ಗ್ರಾಂ ಲಿಚಿಯಲ್ಲಿ 72 ಗ್ರಾಂ ವಿಟಮಿನ್ 'ಸಿ' ಇರುತ್ತದೆ. ಇದರಲ್ಲಿ ತಾಮ್ರ, ರಂಜಕದ ಅಂಶಗಳೂ ಹೆಚ್ಚಿದ್ದು, ಲವಣ ಕಡಿಮೆ ಪ್ರಮಾಣದಲ್ಲಿದೆ. 'ಬಿ' ಕಾಂಪ್ಲೆಕ್ಸ್‌ನೊಂದಿಗೆ ನಾರಿನಂಶವನ್ನೂ ಹೊಂದಿರುವುದು ಈ ಹಣ್ಣಿನ ವಿಶೇಷ.
ಲಿಚಿ ಹಣ್ಣಿನ ಹಲವು ಫಲ
    ಲಿಚಿಯ ತಿರುಳಿನಲ್ಲಿರುವ ಫ್ಲೆವನಾಯ್ಡ್, ಕ್ಯಾನ್ಸರ್‌ನಂಥ ಮಾರಕ ರೋಗಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಅದರಲ್ಲಿಯೂ ಸ್ತನ ಕ್ಯಾನ್ಸರ್ ನಿರೋಧಕ ಶಕ್ತಿ ಹೆಚ್ಚಿದೆ.
    ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಮೂಲಕ ಪಾರ್ಶ್ವವಾಯು ಹಾಗೂ ಹೃದ್ರೋಗವನ್ನು ತಡೆಯುತ್ತದೆ. ಪ್ರತಿ ನಿತ್ಯ ಒಂದು ಲೋಟ ಲಿಚಿ ಜ್ಯೂಸ್ ಸೇವನೆಯಿಂದ ಹೃದಯ ಬಡಿತವನ್ನು ಯಥಾಸ್ಥಿತಿಗೆ ತರಬಹುದು.
    ಕಣ್ಣಿನ ಪೊರೆಯ ಪ್ರಗತಿಯನ್ನು ನಿಧಾನಗೊಳಿಸುತ್ತದೆ.
    ಜೀರ್ಣ ಕ್ರಿಯೆಯನ್ನು ಪ್ರಬಲಗೊಳಿಸಿ, ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಹಸಿವನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿ ಹಾಗೂ ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ.
    ಈ ಹಣ್ಣು ಕರಗುವ ನಾರಿನಂಶವನ್ನು ಹೊಂದಿದ್ದು ಕರುಳಿನ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.



ಮೂಳೆ ಬಲಿಷ್ಠ
ರಂಜಕ ಮತ್ತು ಮ್ಯಾಗ್ನೇಶಿಯಂನ ಸಮೃದ್ಧ ಆಗರವಾದ ಲಿಚಿ ಬಲಿಷ್ಠ ಮೂಳೆಗಳಿಗೆ ಉಪಯುಕ್ತ. ಖನಿಜ ಅಂಶಗಳಾದ ತಾಮ್ರ ಮತ್ತು ಮ್ಯಾಗನೀಸ್‌ಗಳನ್ನು ಇವು ಹೊಂದಿದ್ದು, ಮೂಳೆಗಳನ್ನು ದೃಢವಾಗಿಸುತ್ತವೆ.
ಒತ್ತಡ ನಿರ್ವಹಣೆ
'ಬಿ' ಸಮೂಹದ ವಿಟಮಿನ್‌ಗಳು ಅಂದರೆ ಥೈಮಿನ್, ರಿಬೋಫ್ಲಾವಿನ್, ನಿಯಾಸಿನ್ ಮತ್ತು ಫೊಲೇಟ್ಸ್, 'ಇ' ವಿಟಮಿನ್‌ಗಳು, ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬನ್ನು ಕರಗಿಸುವ ಅಂಶಗಳು ಲಿಚಿಯಲ್ಲಿ ಹೆಚ್ಚಿವೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಟಾ ಕೆರೋಟಿನ್ ಅಂಶ ಹೊಂದಿರುವ ಲಿಚಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂತ್ರ ಪಿಂಡ ಹಾಗೂ ಇತರೆ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸುತ್ತದೆ.
ಕಡಿಮೆ ಕ್ಯಾಲೋರಿ, ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ ಹಾಗೂ ಕೊಲೆಸ್ಟರಾಲ್ ಹಾಗೂ ಹೆಚ್ಚಿನ ನಾರಿನಂಶ ಹೊಂದಿರುವ ಈ ಹಣ್ಣು ತೂಕ ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಚರ್ಮದ ಜಿಡ್ಡಿನಂಶವನ್ನು ಪೋಷಿಸಲು ಸಹಕರಿಸಿ, ಮೊಡವೆಗಳು ಹುಟ್ಟದಂತೆ ಮಾಡುತ್ತದೆ. ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಸಹಕರಿಸುವ ಅಗತ್ಯ ಪೋಷಕಾಂಶಗಳಿರುವ ಲಿಚಿಯಲ್ಲಿರುವ ಬಿ-6 ವಿಟಮಿನ್ ಒತ್ತಡ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

-ರಶ್ಮಿ ಕಾರ್ಗಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement