ಹಲೋ ಡಾಕ್ಟರ್,
ನಮಗೆ ಬುದ್ಧಿ ಬೆಳೆಯುವ ಮುನ್ನವೇ ನೀವು ನಮ್ಮ ಭಾವಲೋಕಕ್ಕೆ ಪ್ರವೇಶಿಸಿದ್ರಿ. ಅಮ್ಮ ಚಿಕ್ಕಂದಿನಿಂದಲೇ ನಿಮ್ಮ ಬಗ್ಗೆ ಭಯ ಮಿಶ್ರಿತ ಆಪ್ತ ಭಾವನೆ ಮೂಡುವಂತೆ ಮಾಡಿಬಿಟ್ಟಳು. ನಾನು ತಂಟೆ ಮಾಡಿದಾಗಲೆಲ್ಲ ಅಮ್ಮನ ಬಾಯಿಯಿಂದ ಹೊರಬರುತ್ತಿದ್ದ ಮಾತು, 'ಡಾಕ್ಟ್ರ ಹತ್ರ ಕರ್ಕೊಂಡ್ ಹೋಗಿ ಸೂಜಿ ಚುಚ್ಚುಸ್ತೀನಿ'. ಆ ಮಾತು ಕೇಳಿ ಕಣ್ಣಂಚಿನಿಂದ ನೀರು ಸುರಿಯೋದು. ನನ್ನ ತಂಟೆ ಅಲ್ಲಿಗೆ ನಿಲ್ಲೋದು.
ಬೆಳೆಯುತ್ತ ಹೋದಂತೆ ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ನೀವು ಹೀರೊ ಆಗಿ ಬದಲಾಗಿ ಬಿಟ್ರಿ. ಡಾಕ್ಟರ್ ಅಂದಕೂಡಲೇ ಮನದ ಮೂಲೆಯಿಂದ ಗೌರವ ಹೊಮ್ಮುತ್ತಿತ್ತು. ಡಾಕ್ಟರ್ ಅಂದ್ರೆ ತುಂಬಾ ಒಳ್ಳೆಯವರು, ನಮ್ಗೆ ಏನೇ ಆದ್ರೂ ಔಷಧಿ ಕೊಟ್ಟು, ಸೂಜಿ ಚುಚ್ಚಿ ವಾಸಿ ಮಾಡ್ತಾರೆ ಅನ್ನೋ ನಂಬಿಕೆ ಬೆಳೆದುಬಿಟ್ಟಿತು. ಒಮ್ಮೊಮ್ಮೆ ನೀವು ಪ್ರಾಣ ಉಳಿಸುವವರು ಎಂದು ನೆನೆದಾಗ ದೇವರೇ ಡಾಕ್ಟರ್ ರೂಪದಲ್ಲಿ ಬರುತ್ತಾನೇನೋ ಎನಿಸುತ್ತಿತ್ತು.
ಆದ್ರೆ ಈಗೀಗ ಯಾಕೋ ಆ ನಂಬಿಕೆ ಹುಸಿಯಾಗತೊಡಗಿದೆ. ನೀವೂ ನಮಗೆ ಮೋಸ ಮಾಡ್ತೀರೇನೊ ಅನ್ನೋ ಆತಂಕ ಸುಳಿದಾಡುತ್ತಿದೆ. ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಿಕೊಂಡ ನೀವು ಅದನ್ನು ನಿಭಾಯಿಸಲು ಇಲ್ಲದಿರೋ ಕಾಯಿಲೆ ಸೃಷ್ಟಿಸಿ, ಅದೂ ಇದೂ ಟೆಸ್ಟು ಮಾಡಿಸುತ್ತೀರೆನ್ನುವ ಆರೋಪ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ. ಔಷಧಿ ಕಂಪನಿಗಳ ಪ್ರತಿನಿಧಿಗಳು ಒಡ್ಡುವ ಆಮಿಷಕ್ಕೆ ಬಲಿಯಾಗಿ ಅವರ ಮಾತ್ರೆ, ಸಿರಪ್ಪನ್ನು ಅಗತ್ಯಕ್ಕಿಂತಲೂ ಹೆಚ್ಚು ಕುಡಿಸುತ್ತೀರ ಅಂತನೂ ಎಲ್ಲ ಹೇಳಿ ಹೆದರಿಸ್ತಿದ್ದಾರೆ.
ಎಲ್ಲ ಡಾಕ್ಟರ್‌ಗಳೂ ಮೋಸಗಾರರಲ್ಲ ಅಂತ ನೀವು ಸಮಜಾಯಿಷಿ ನೀಡಬಹುದು. ಆದ್ರೆ ನಿಮ್ಗೆ ನಾನು ಕೇಳುವ ಪ್ರಶ್ನೆ, ನಾವು ನಂಬಿರೋದು ಡಾಕ್ಟರ್‌ನ ತಾನೇ? ಯಾವ ಡಾಕ್ಟರ್ ಹೇಗೆಂದು ಪರೀಕ್ಷಿಸಲು ಎಲ್ಲರ ಬಳಿಯೂ ಹೋಗಲಾಗುತ್ತದೆಯೇ? ಡಾಕ್ಟರ್ ಅಂದ್ರೆನೇ ತಪ್ಪು ಮಾಡ್ದವ್ರು ಅನ್ನೋ ನಂಬಿಕೆ ನನ್ನಲ್ಲಿ ಬೇರೂರಿದೆ.
ನೀವು ಎಲ್ಲರಂತಲ್ಲ ಅನ್ನೋ ನಂಬಿಕೆಗೆ ಜೋತು ಬಿದ್ದು ತಾನೆ ನಾವು ನಿಮ್ಮೆದುರು ಬೆತ್ತಲಾಗುವುದು? ಬೇರೆ ಯಾರ ಬಳಿಯೂ ಹೇಳಿಕೊಳ್ಳಲಾಗದ ಗುಪ್ತ ಸಂಗತಿಗಳನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದು?
ಏನೇ ಆದ್ರೂ ಡಾಕ್ಟ್ರು ವಾಸಿ ಮಾಡ್ತಾರೆ ಅಂತ ನಂಬಿಕೊಂಡ ಅಮಾಯಕರು, ಅವರ ಹತ್ತಿರದವರು ಸಾವನ್ನಪ್ಪಿದರೆ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಡಾಕ್ಟ್ರು ನಮ್ ಕಡೆಯವನನ್ನ ಸಾಯ್ಸಿದ್ರು ಅಂತಾರೆ. ಮಾರನೇ ದಿನ ಪತ್ರಿಕೆಗಳಲ್ಲಿ 'ವೈದ್ಯನ ನಿರ್ಲಕ್ಷ್ಯ.... ಸಾವು' ಅನ್ನೋ ಸುದ್ದಿ ಅಚ್ಚಾಗುತ್ತದೆ. ಇದು ನಮ್ಮ ತಪ್ಪೆಂದು ಒಪ್ಪಿಕೊಳ್ಳುತ್ತೇನೆ. ಇಂಥವರ ವಿರುದ್ಧ ನಾನೂ ಕಿಡಿ ಕಾರುತ್ತೇನೆ. ಆದರೆ ವಿನಾ ಕಾರಣ ಹಣ ಸುಲಿಗೆ ಮಾಡಿ, ಮೊದಲೇ ಹೈರಾಣಾದ ರೋಗಿಗಳಿಗೆ ಮತ್ತಷ್ಟು ಅಲೆಸಿ ನಿಮ್ಮನ್ನು ಅಕಾರಣವಾಗಿ ಪ್ರೀತಿಸುವ ನನ್ನಂಥವರ ನಂಬಿಕೆ ಮಾತ್ರ ಘಾಸಿಗೊಳಿಸಬೇಡಿ.
ಇಂತಿ ನಿಮ್ಮ ಪ್ರೀತಿಯ,
- ರೋಗಿ
= ಎಚ್.ಕೆ.ಶರತ್, ಹಾಸನ
hksharu@gmail.com