ಆರೋಗ್ಯ-ಜೀವನಶೈಲಿ

ಆರೋಗ್ಯ ಕಚೇರಿ

ಎಸಿ ಕೋಣೆಗಳುಳ್ಳ ಆಫೀಸು. ಎದುರಿಗೆ ಇಡೀ ವಿಶ್ವದ ಕ್ಷಣ, ಕ್ಷಣದ ಮಾಹಿತಿ ಪಡೆಯಬಹುದಾದ ಕಂಪ್ಯೂಟರ್ ಪರದೆ. ಸ್ವಿಚ್ ಒತ್ತಿದರೆ ಬೇಕಾದ್ದನ್ನು ಮಾಡಲು ಕ್ಷಣಾರ್ಧದಲ್ಲಿ ಆಗಮಿಸುವ ಕೆಲಸಗಾರರು. ಒಮ್ಮೆ ಕುಳಿತರೆ ಎಲ್ಲವೂ ಕೈಕಾಲ ಬುಡವೇ ಬರುವುದರಿಂದ ಆಗಾಗ ಏಳುವ ಪ್ರಮೇಯವೇ ಇಲ್ಲ!
ಇದು ಯಾವುದೋ ಹಾಲಿವುಡ್, ಬಾಲಿವುಡ್ ಸಿನೆಮಾದ್ದೋ ಅಥವಾ ಯಾವುದೋ ಕಾದಂಬರಿಯದ್ದೋ ಕತೆಯ ಪೀಠಿಕೆಯಲ್ಲ. ಹಳ್ಳಿಹಳ್ಳಿಯ ಯುವ ಮಂದಿ ಪೇಟೆ ಪಟ್ಟಣಗಳಿಗೆ ಸೇರಿ ಕೈತುಂಬಾ ಹಣ ಮಾಡುವುದರೊಂದಿಗೆ ಅನುಭವಿಸುತ್ತಿರುವ ತಾತ್ಕಾಲಿಕ ಸುಖದ ಸುಪ್ಪತ್ತಿಗೆ. ಹೀಗೆ ಕೆಲಸದ ನೆಪದಲ್ಲಿ ದೇಹವನ್ನು ಅಲುಗಾಡಿಸದೇ ಒಂದೇ ಕಡೆ ಕುಳಿತಿದ್ದರೆ, ಗ್ಯಾಸ್ಟ್ರಿಕ್, ಬೊಜ್ಜು ಮುಂತಾದ ಹಳೆಯ ಕಾಯಿಲೆಗಳೊಂದಿಗೆ ಯಾವುದ್ಯಾವುದೋ ಹೊಸ ಹೊಸ ಕಾಯಿಲೆಗಳು ಅಟಕಾಯಿಸಿಕೊಳ್ಳುವುಂದತೂ ಸತ್ಯ.
ಇಂಥ ಸಮಸ್ಯೆಯಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಹೊರಬರಲು ನಿಮ್ಮ ಕಚೇರಿಯಲ್ಲೇ ಕೆಲವೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಬಹುದು. ಮುಂದೆ ಬರಬಹುದಾದ ಹಲವು ಅಪಾಯಗಳನ್ನು ಚಿಗುರಿನಲ್ಲೇ ಚಿವುಟಬಹುದು.
ಮುಂಗೈ ತಿರುಗಿಸುತ್ತಿರಿ...
ಬರೀ ಮೌಸ್ ಮೇಲೆ ಕೈ ಇಟ್ಟು ಕೆಲಸ ಮಾಡುವ ನೀವು ಪ್ರತಿ ಅರ್ಧ ಗಂಟೆಗೊಮ್ಮೆ ಮುಂಗೈಯನ್ನು ಮೌಸ್‌ನಿಂದ ಹಿಂಪಡೆದು ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಐದು ಬಾರಿ ಮಾಡಿ. ಇದರಿಂದ ಅಂಗೈ, ಬೆರಳಿನ ತುದಿಭಾಗಗಳಿಗೆ ರಕ್ತಸಂಚಾರವಾಗುವುದರೊಂದಿಗೆ ಬೆರಳು ನೋವು ಕಡಿಮೆಯಾಗುತ್ತದೆ.
ಕತ್ತು ತಿರುಗಿಸುತ್ತಿರಿ....
ಗಂಟೆಗಟ್ಟಲೆ ಎದುರಿನ ಕಂಪೂಟರ್ ಪರದೆಯನ್ನು ನೋಡುತ್ತಿದ್ದರೆ, ಕತ್ತು ನೋವು ಬರುವುದು ಸಹಜ. ಇದು ಬೆನ್ನುಮೂಳೆಯ ನೋವಿಗೆ ಪೀಠಿಕೆಯೂ ಹೌದು. ಆದ್ದರಿಂದ ಗಂಟೆಗೊಮ್ಮೆ ಕತ್ತನ್ನು ಎಡಕ್ಕೂ, ಬಲಕ್ಕೂ ಐದು ಬಾರಿ ಜೋರಾಗಿ ತಿರುಗಿಸುತ್ತಿರಿ.
ಕಾಲಿಗೊಂದು ವ್ಯಾಯಾಮ
ನೀವು ಕುಳಿತಲ್ಲೇ ಆಗಾಗ ಕಾಲುಗಳನ್ನು ತಿರುಗಿಸುತ್ತಿರಿ ಮತ್ತು ಎದ್ದು ನಿಲ್ಲುತ್ತಿರಿ. ದೇಹವನ್ನು ಹೀಗೆ ಲಂಬಗೊಳಿಸುತ್ತಿರುವುದರಿಂದ ಬೊಜ್ಜು ಒಂದೆಡೆ ಸೇರ್ಪಡೆಯಾಗದೇ ನಿಧಾನವಾಗಿ ಕರಗಿಹೋಗುತ್ತದೆ.
ಚಪ್ಪಲಿ ಬೀಡಿ...
ಸುಮಾರು ಎಂಟ್ಹತ್ತು ಗಂಟೆ ಕಚೇರಿಯಲ್ಲಿ ನಿರಂತರವಾಗಿ ಕೆಲಸಮಾಡುವ ನೀವು ಕುಳಿತುಕೊಂಡಿರುವ ಸಮಯದಲ್ಲಿ ಚಪ್ಪಲಿ ಅಥವಾ ಬೂಟನ್ನು ಹಾಕಿಕೊಂಡಿರುವ ಬದಲು ಕಾಲಬುಡದಲ್ಲೇ ಬಿಚ್ಚಿಡಬಹುದು. ಇದರಿಂದ ಪಾದದ ಒತ್ತಡ ಕಡಿಮೆಯಾಗಿ, ಪಾದದ ಹೊರಭಾಗಕ್ಕೆ ಗಾಳಿ ಸಂಚಾರವಾಗಿ ಪಾದ ಒಡೆಯುವುದನ್ನು ತಪ್ಪಿಸಲು ಸಹಕಾರಿ
ನೀರಿರುವ ಜಾಗಕ್ಕೇ ಹೋಗಿ...
ಕೆಲವರು ಒಮ್ಮೆ ಕುರ್ಚಿಯಲ್ಲಿ ಕುಳಿತರೆಂದರೆ ಫೆವಿಕಲ್ ಅಂಟಿಸಿಕೊಂಡವರಂತೆ ಕೂತಿರುತ್ತಾರೆ. ನೀರು ಕುಡಿಯಲು, ಶೌಚ ಮಾಡಲೂ ಹೋಗುವುದಿಲ್ಲ.ಹೀಗೆ ಮಾಡದೇ ಆಗಾಗ ಕಚೇರಿಯಲ್ಲಿ ನೀರಿನ ಕ್ಯಾನ್ ಇಟ್ಟಿರುವ ಜಾಗಕ್ಕೇ ನೀವೇ ಹೋಗಿ ನೀರು ತುಂಬಿಸಿಕೊಂಡು ಬನ್ನಿ. ಕನಿಷ್ಠ 2 ಗಂಟೆಗೊಮ್ಮೆಯಾದರೂ ಶೌಚಾಲಯ ಬಳಸಿ.
ಮೆಟ್ಟಿಲೇರಿ ಹೋಗಿ...
ಆಫೀಸು ಎಂದಮೇಲೆ, ಲಿಫ್ಟು ಇದ್ದೇ ಇರುತ್ತದೆ. ಮೂರು ನಾಲ್ಕು ಅಂತಸ್ತುಗಳ ಕಟ್ಟಡದಲ್ಲಿ ನೀವು ಕೆಲಸ ಮಾಡುವವರಾಗಿದ್ದರೆ, ಆಫೀಸಿಗೆ ಹೋಗುವಾಗ ಇದ್ಯಾವುದನ್ನೂ ಬಳಸದೇ ನಡೆದೇ ಹೋಗಿ. ಇದರಿಂದ ಉಸಿರಾಟವೂ ಸರಾಗವಾಗುವುದನ್ನು ಗಮನಿಸಿ.


-ಸುಧೀಂದ್ರ ಜಮ್ಮಟಿಗೆ
sudheeja@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ