ಅಪ್ಲಾಸ್ಟಿಕ್ ಅನೀಮಿಯಾ
ರಕ್ತದಲ್ಲಿರುವ ಕೆಂಪು, ಬಿಳಿರಕ್ತ ಕಣಗಳು ಹಾಗೂ ಪ್ಲೇಟ್ಲೆಟ್ಸ್ಗಳಿಗೆ ತಮ್ಮದೇ ಕಾರ್ಯರೂಪಗಳುಂಟು.
ರಕ್ತದಲ್ಲಿರುವ ಕೆಂಪು, ಬಿಳಿರಕ್ತ ಕಣಗಳು ಹಾಗೂ ಪ್ಲೇಟ್ಲೆಟ್ಸ್ಗಳಿಗೆ ತಮ್ಮದೇ ಕಾರ್ಯರೂಪಗಳುಂಟು. ಇವುಗಳಲ್ಲಿ ಒಂದಕ್ಕೆ ಕುಂದಾದರೂ ಅಸ್ವಸ್ಥತೆ ನಿಶ್ಚಿತ.
ದೇಹದಲ್ಲಿರೋ ಅಸ್ಥಿ ಮಜ್ಜೆ ಎಂಬ ಸ್ಪಂಜ್ ರೀತಿಯ ಅಂಗಾಂಶ ರಕ್ಷವನ್ನು ಉತ್ಪಾದಿಸುತ್ತದೆ. ಅಕಸ್ಮಾತ್ ಅಸ್ಥಿಮಜ್ಜೆ ಹೊಸ ರಕ್ತಕಣಗಳನ್ನೇ ಉತ್ಪಾದಿಸುವಲ್ಲಿ ವಿಫಲವಾದರೆ? ಹೃದ್ರೋಗ, ರಕ್ತಸ್ರಾವ ಸೇರಿದಂತೆ ಉಂಟಾಗುವ ಸಮಸ್ಯೆ ಒಂದೆರಡಲ್ಲ. ಅಗತ್ಯಕ್ಕಿಂತ ಕಡಿಮೆ ರಕ್ತ ಉತ್ಪಾದನೆಯಾದಲ್ಲಿ ಅಪ್ಲಾಸ್ಟಿಕ್ ಅನಿಮೀಯಾ ಕಾಡಬಹುದು. ಸೂಕ್ತ ಕಾಲದಲ್ಲಿ ಈ ಸಮಸ್ಯೆಯನ್ನು ಪತ್ತೆ ಹಚ್ಚದೇ, ಚಿಕಿತ್ಸೆ ನೀಡದಿದ್ದಲ್ಲಿ ರೋಗಿ ಮೃತಪಡೋದು ಗ್ಯಾರಂಟಿ.
ಅಕಸ್ಮಾತ್ ದೇಹಕ್ಕೆ ಆಮ್ಲಜನಕ ಪೂರೈಸುವ ಕಬ್ಬಿಣಾಂಶಯುಕ್ತ ಹಿಮೋಗ್ಲೋಬಿನ್ ಇರುವ ಕೆಂಪುರಕ್ತ ಕಣ ಕಡಿಮೆಯಾದರೂ ಅನೀಮಿಯಾ ಕಾಡುತ್ತೆ. ಕಡಿಮೆ ಜನರನ್ನು ಕಾಡುವ ಇದು ಸಡನ್ ಆಗಿ ಅಥವಾ ನಿಧಾನವಾಗಿಯೂ ಕಾಡಬಹುದು. ಎಲ್ಲ ವಯಸ್ಸಿನವರನ್ನೂ ಕಾಡುವ ಈ ಅಸ್ವಸ್ಥತೆ, ಹೆಚ್ಚಾಗಿ ಮಧ್ಯ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ವಂಶೀಯವಾಗಿಯೂ ಕಾಡಬಹುದು. ಯಾವುದೋ ವಿಷಯುಕ್ತ ಪದಾರ್ಥಗಳಿಗೆ ಬಹಿರಂಗಗೊಂಡರೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುವಾಗ ಕಿಮೋಥೆರಪಿ ಅಥವಾ ಇನ್ನಿತರೆ ರೇಡಿಯೋ ಥೆರಪಿಗೆ ಒಳಗಾದಲ್ಲಿ ಅಥವಾ ಕೆಲವೊಂದು ರೋಗಕ್ಕೆ ಒಳಗಾದಲ್ಲಿ ಈ ಸಮಸ್ಯೆ ಮನುಷ್ಯನನ್ನು ಕಾಡಬಹುದು. ಒಟ್ಟಿನಲ್ಲಿ ಇಂಥದ್ದೇ ಕಾರಣಗಳಿಂದ ಅಸ್ಥಿಮಜ್ಜೆ ರಕ್ತವನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ ಎಂದು ಹೇಳೋದು ಕಷ್ಟ. ರೋಗ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರು ರೋಗಿಯ ದೈಹಿಕ ಆರೋಗ್ಯ, ವೈದ್ಯಕೀಯ ಇತಿಹಾಸ ಹಾಗೂ ಕುಟುಂಬದ ಸದಸ್ಯರ ರೋಗ ಲಕ್ಷಣಗಳನ್ನು ಪರೀಕ್ಷಿಸಿ ಈ ಸಮಸ್ಯೆ ಇರಬಹುದೆಂದು ನಿರ್ಧರಿಸುತ್ತಾರೆ. ಪತ್ತೆ ಹಚ್ಚಲು ಅಸ್ಥಿ ಮಜ್ಜೆ ಪರೀಕ್ಷೆ ಸೇರಿದಂತೆ, ಸೂಕ್ತ ರಕ್ಷಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಲಕ್ಷಣಗಳು
ಕೆಂಪು ರಕ್ತಕಣ ದೇಹದಲ್ಲಿ ಕಡಿಮೆಯಾದರೆ ಸುಸ್ತಾಗೋದು, ತಲೆ ಸುತ್ತೋದು, ಉಸಿರಾಟದ ತೊಂದರೆ, ತಲೆನೋವು, ಶೀತ, ಎದೆನೋವು, ಚರ್ಮದ ಬಣ್ಣ ಮಬ್ಬಾಗುತ್ತದೆ. ಇಡೀ ದೇಹಕ್ಕೆ ಅಗತ್ಯ ಆಮ್ಸಜನಕ ಪೂರೈಸುವ ಹಿಮೋಗ್ಲೋಬಿನ್ ಕಡಿಮೆಯಾದರೆ ಹೃದಯ ತನ್ನ ಕೆಲಸ ಮಾಡಲು ಹೆಚ್ಚು ಶ್ರಮ ಹಾಕಬೇಕಾಗುವುದರಿಂದ ಹೃದ್ರೋಗವೂ ಕಾಡಬಹುದು. ಆಗಾಗ ಜ್ವರ, ಸೋಂಕಿನಂಥ ಸಮಸ್ಯೆಗಳು ಬಿಳಿ ರಕ್ತ ಕಣಗಳ ಕೊರತೆಯಿಂದ ಹೆಚ್ಚುತ್ತದೆ. ರಕ್ತ ಹೆಪ್ಪುಗಟ್ಟಲು ಸಹಕರಿಸುವ ಪ್ಲೇಟ್ಲೆಟ್ಸ್ ಅಗತ್ಯದಷ್ಟು ಉತ್ಪಾದನೆಯಾಗದಿದ್ದಲ್ಲ ರಕ್ತಸ್ರಾವ ಕಾಡುತ್ತೆ. ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕಾಲು ಊದಿಕೊಳ್ಳಬಹುದು. ತಲೆನೋವು, ಮೂತ್ರದಲ್ಲಿ ರಕ್ತ ಹೋಗುವುದು, ಜಾಂಡೀಸ್ ಈ ಲಕ್ಷಣಗಳಲ್ಲಿ ಯಾವುದಾದರೊಂದು ಪದೇ ಪದೇ ಕಾಣಿಸಿಕೊಂಡಲ್ಲಿ ಅಪ್ಲಾಸ್ಟಿಕ್ ಅನೀಮಿಯಾ ಇರಬಹುದು.
ಚಿಕಿತ್ಸೆ ಏನು?
ಯಾವ ಹಂತದಲ್ಲಿ ರೋಗವಿದೆ ಎಂಬುದನ್ನು ಪತ್ತೆ ಹಚ್ಚಿದ ನಂತರ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಕೆಲವು ಸಲ ಔಷಧಿಗಳಿಂದಲೇ ರೋಗ ಗುಣವಾಗುತ್ತದೆ. ಇಲ್ಲದಿದ್ದರೆ ಅಗತ್ಯ ರಕ್ತ ನೀಡಿ, ರಕ್ತ ಅಥವಾ ಅಸ್ಥಿ ಮಜ್ಜೆ ಕಸಿಯಿಂದಲೂ ರೋಗಕ್ಕೆ ಚಿಕಿತ್ಸೆ ನೀಡಬಹುದು. ಇದರಿಂದ ಆರೋಗ್ಯ ಸುಧಾರಿಸಿ, ಆರೋಗ್ಯ ಮತ್ತಷ್ಟು ಹದಗೆಡುವುದನ್ನು ತಡೆಯಲಾಗುತ್ತದೆ.
ಸೋಂಕು, ಜ್ವರ, ಸುಸ್ತು...ಹೀಗೆ ಅಪ್ಲಾಸ್ಟಿಕ್ ಅನೀಮಿಯಾದ ಲಕ್ಷಣಗಳಲ್ಲಿ ಯಾವುದಾದರೊಂದು ಪದೇಪದೆ ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಅಕಸ್ಮಾತ್ ಈ ರೋಗ ಲಕ್ಷಣವೇ ಕಂಡುಬಂದಲ್ಲಿ ಅಗತ್ಯ ಪರೀಕ್ಷೆ ಮಾಡಿಸಲು ಸೂಚಿಸಿ, ಚಿಕಿತ್ಸೆ ನೀಡಲಾಗುತ್ತದೆ. ರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚಿದಲ್ಲಿ ರೋಗಿ ಬಹಳ ಬೇಗ ಗುಣವಾಗಬಹುದು.
-ಡಾ. ಆಶೀಶ್ ದೀಕ್ಷಿತ್, ಕನ್ಸಲ್ಟೆಂಟ್ ಇನ್ ಕ್ಲಿನಿಕಲ್ ಹೆಮೆಟೋಲಾಜಿ, ಮಣಿಪಾಲ್ ಹಾಸ್ಪಿಟಲ್ಸ್, ಬೆಂಗಳೂರು.
- ಕೆ.ಎಸ್. ನಿರುಪಮಾ