ಭ್ರೂಣಕ್ಕೆ ಹಾರ್ಟ್ ಸರ್ಜರಿ
ಹೃಯದ ಸಂಬಂಧಿ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವ ಭಾರತೀಯ ವೈದ್ಯರು ಇದೀಗ ಭ್ರೂಣಕ್ಕೆ...
ಹೈದರಾಬಾದ್: ಹೃಯದ ಸಂಬಂಧಿ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವ ಭಾರತೀಯ ವೈದ್ಯರು ಇದೀಗ ಭ್ರೂಣಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿರುವ ಅಪರೂಪದ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ.
ಹೈದರಾಬಾದ್‌ನ ವೈದ್ಯರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ 25 ವರ್ಷದ ಗರ್ಭಿಣಿ ಶಿರೀಷಾ ಎಂಬಾಕೆಯ ಹೊಟ್ಟೆಯಲ್ಲಿನ ಭ್ರೂಣಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ಹೈದರಾಬಾದ್‌ನ ಕೇರ್ ಆಸ್ಪತ್ರೆಗೆ ಸಾಮಾನ್ಯ ಚಿಕಿತ್ಸೆಗೆ ಬಂದಿದ್ದ ಶಿರೀಷಾರನ್ನು ಪರೀಕ್ಷಿಸಿದ ವೈದ್ಯರು ಭ್ರೂಣದ ಹೃದಯದಲ್ಲಿ ತೊಂದರೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದ ಬಗ್ಗೆ ಕೂಲಂಕುಷ ಅಧ್ಯಾಯನ ನಡೆಸಿದ ಮಕ್ಕಳ ತಜ್ಞ ಡಾ. ಕೋನೆಟಿ ನಾಗೇಶ್ವರ ರಾವ್ ಅವರು ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಆರೂವರೆ ತಿಂಗಳ ತುಂಬು ಗರ್ಭಿಣಿಯಾಗಿದ್ದ ಶಿರೀಷಾರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ಶಿರೀಷಾ ಅವರಿಗೆ 7 ತಿಂಗಳು ಸಮೀಪಿಸುತ್ತಿದ್ದು ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಡಾ. ನಾಗೇಶ್ವರ ರಾವ್ ಅವರ ನೇತೃತ್ವದಲ್ಲಿ ನಡೆದ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ 12 ಮಂದಿ ವೈದ್ಯರು ಭಾಗವಹಿಸಿದ್ದರು. ನಾಗೇಶ್ವರ ರಾವ್ ಅವರ ಪ್ರಕಾರ ಭ್ರೂಣದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಶೇ. 60ರಷ್ಟು ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಶೇ.40 ರಷ್ಟು ಶಸ್ತ್ರ ಚಿಕಿತ್ಸೆಯನ್ನು ಮಗುವಿನ ಜನನದ ನಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.