ಒಂದುವೇಳೆ ನಿಮಗೆ ಪದೇಪದೇ ಶೌಚಾಲಯಕ್ಕೆ ಹೋಗಿ ಒತ್ತಾಯ ಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಬೇಕಿನಿಸಿದರೆ, ರಾತ್ರಿಯ ವೇಳೆಯಲ್ಲಿ ಅಥವಾ ಹಗಲಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸಿ ಅದು ಸರಿಯಾದ ಸಮಯಕ್ಕೆ ಆಗುತ್ತಿಲ್ಲವಾದರೆ, ನಿಮಗೆ ಓವರ್‌ಆಕ್ಟಿವ್ ಬ್ಲ್ಯಾಡರ್ (Overactive Bladder) ನ ಸಮಸ್ಯೆ ಇರಬಹುದು. ಇದು ಏಷ್ಯಾಖಂಡದ ಶೇಕಡಾ ೫೩.೧% ನಷ್ಟು ಮಹಿಳಾ ಮತ್ತು ಪುರುಷ ಇಬ್ಬರಲ್ಲೂ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ.
ಬೆಂಗಳೂರಿನ ಮಣಿಪಾಲ ಉತ್ತರ ಭಾಗ ಆಸ್ಪತ್ರೆಯ ಹಿರಿಯ ಮೂತ್ರಶಾಸ್ತ್ರಜ್ಞರಾಗಿರುವ ಡಾ||ಆನಂದ್ ಎಮ್ ಇವರು, “ಓವರ್‌ಆಕ್ಟೀವ್ ಬ್ಲ್ಯಾಡರ್‌ನ ಕಾರಣದಿಂದಾಗಿ ಮೂತ್ರ ವಿಸರ್ಜನೆಯ ಸಮಸ್ಯೆಯಿಂದ ಪದೇಪದೇ ಬಳಲುವುದನ್ನು ನಿಭಾಯಿಸುವುದು ಕಷ್ಟ. ಈ ಸಮಸ್ಯೆಯು ಬಹಳಷ್ಟು ಜನರನ್ನು ಮುಜುಗರಕ್ಕೊಳಪಡಿಸಿದೆ" ಎಂದು ತಿಳಿಸುತ್ತಾರೆ. ಓವರ್‌ಆಕ್ಟೀವ್ ಬ್ಲ್ಯಾಡರ್ ರೋಗಿಯ ಜೀವನಕ್ಕೆ ಹಾನಿಯುಂಟು ಮಾಡಬಹುದು. ಕೆಲಸದಲ್ಲಿ ಏಕಾಗ್ರತೆ ಕಡಿಮೆಗೊಳಿಸುವುದು, ನಿದ್ದೆ, ಹೊರಗಡೆ ಸುತ್ತಾಡುವಂತಹ ಸಮಾಜಿಕ ಕಾರ್ಯಗಳಿಗೆ ಧಕ್ಕೆಯುಂಟು ಮಾಡಬಹುದು.
ಐದು ವರ್ಷಗಳ ಹಿಂದೆ ಶ್ರೀಮತಿ ಲಲಿತಾ, ೫೧ ಇವರು ತಮ್ಮಲ್ಲಿ ಓವರ್‌ಆಕ್ಟೀವ್ ಬ್ಲ್ಯಾಡರ್‌ನ ಲಕ್ಷಣಗಳನ್ನು ಗುರುತಿಸಿದರು. ಇದರಿಂದ ಚಿಂತಿತರಾದರು. ಅವರು ಹೇಳುವಂತೆ "ಆಗಾಗ್ಗೆ ಶೌಚಾಲಯಕ್ಕೆ ಹೋಗಬೇಕಾಗಿರುವುದರಿಂದ ಇದು ನಿಮ್ಮ ಜೀವನಕ್ಕೆ ತಡೆಯೊಡ್ಡುತ್ತದೆ.” ಇಂದು ಬಹಳಷ್ಟು ಮುಂದುವರಿದ ಮತ್ತು ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಜನರು ತಮಗಿರುವ ಅತಿ ಮೂತ್ರದ, ಪದೇಪದೇ ಶೌಚಾಲಯಕ್ಕೆ ಹೋಗಬೇಕಾಗಿರುವ, ಸೋರಿಕೆಯ ಸಮಸ್ಯೆಗಳ ಬಗ್ಗೆ ಮಾತಾನಾಡಲು ಹಿಂಜರಿಯುತ್ತಾರೆ.
“ಯಾವ ಮಹಿಳೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹಗಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೋ, ಅಥವಾ ಸೋರಿಕೆ ಇದ್ದು/ಇಲ್ಲದೇ ಎರಡು ಬಾರಿಗಿಂತ ಹೆಚ್ಚು ಸಲ ರಾತ್ರಿಯ ಹೊತ್ತು ಮೂತ್ರ ವಿಸರ್ಜನೆಯನ್ನು ಮಾಡುತ್ತಾರೋ ಅವರು ಈ ಗುಂಪಿನಲ್ಲಿ ಸೇರುತ್ತಾರೆ. ಬಹಳಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಅವರಿಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿಲ್ಲ. ಒಂದೋ ಅವರು ತಮ್ಮ ಸಮಸ್ಯೆಯನ್ನು ತಮ್ಮೊಳಗೇ ತಡೆಹಿಡಿದುಕೊಳ್ಳುತ್ತಾರೆ ಅಥವಾ ಅದು ವಯಸ್ಸಿನ ಸಹಜ ಭಾಗವೆಂದು ತಿಳಿದು,ತಾನಾಗೇ ಸಮಸ್ಯೆ ದೂರವಾಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ.” ಹೀಗೆಂದು ಬೆಂಗಳೂರಿನ ಎನ್‌ಯು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ನರಶಾಸ್ತ್ರಜ್ಞರಾದ ಡಾ|| ವೆಂಕಟೇಶ್ ಕೃಷ್ಣಮೂರ್ತಿಯವರು ಹೇಳುತ್ತಾರೆ. ಅಂತೇಯೇ ಕೆಲವು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದ್ದು, ಅದು ಜನರು ಯೋಚಿಸುವುದಕ್ಕಿಂತ ಸರಳವಾಗಿದೆ.
OAB ಯು ವಿವಿಧ ಕಾರಣಗಳಿಂದಾಗಿ ಉಂಟಾಗಬಹುದು. ನರಗಳ ದೌರ್ಬಲ್ಯ, ಕಿಡ್ನಿಯ ತೊಂದರೆ, ಹೆಚ್ಚಿನ ಪ್ರಮಾಣದ ದ್ರವ ಪದಾರ್ಥ ಸೇವನೆ, ಮೂತ್ರಕೋಶದ ಅಸಹಜತೆ ,ಮೂತ್ರಕೋಶದ ಕಲ್ಲುಗಳು, ಕೇಫೀನ್ ಮತ್ತು ಆಲ್ಕೋಹಾಲ್ ನ ಅತಿಯಾದ ಸೇವನೆ, ಗರ್ಭಿಣಿಯಾಗಿದ್ದಾಗ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನರಗಳಿಗೆ ಏಟಾಗಿರುವಿಕೆ ಮತ್ತು ಇತರೆ ಸಮಸ್ಯೆಗಳಾದ ಮಧುಮೇಹ, ಮೂತ್ರದಲ್ಲಿ ಸೋಂಕು ಪುರುಷರಲ್ಲಿ ಗ್ರಂಥಿಗಳ ಉರಿಯೂತ ಮುಂತಾದ ಕಾರಣಗಳಿಂದಾಗಿ OAB ಯು ಉಂಟಾಗಬಹುದು.
ಕೆಲವೊಂದು ಸುಲಭ ವಿಧಾನಗಳನ್ನು ಆರಂಭದಲ್ಲೇ ಅನುಸರಿಸುವುದರ ಮೂಲಕ ಮೂತ್ರವಿಸರ್ಜನೆಯನ ಸಮಸ್ಯೆಯನ್ನು ರೋಗಿಯೇ ನಿಯಂತ್ರಣಕ್ಕೆ ತರಬಹುದು. ಒಂದುವೇಳೆ ಆ ವಿಧಾನಗಳಿಂದ ಪ್ರಯೋಜನವಾಗದಿದ್ದಲ್ಲಿ, ಶಸ್ತ್ರಚಿಕಿತ್ಸೆಯಿಲ್ಲದೆ ಅಥವಾ ಅತಿಕಡಿಮೆ ನೋವುಂಟು ಮಾಡುವಂತಹ ಅನೇಕ ಪರಿಣಾಮಕಾರಿ ಸೌಲಭ್ಯಗಳು ಲಭ್ಯವಿದೆ. ಇವುಗಳಿಂದ ಅತೀ ಶೀಘ್ರವಾಗಿ ಗುಣಮುಖವಾಗಬಹುದಾಗಿದೆ.