ಆರೋಗ್ಯ-ಜೀವನಶೈಲಿ

ಲೈಂಗಿಕ ಆಸಕ್ತಿ ವೃದ್ಧಿಗೆ ಹೆಚ್ಚೆಚ್ಚು ಪ್ರವಾಸ ಮಾಡಿ

Sumana Upadhyaya

ಲಂಡನ್: ದೇಶ ಸುತ್ತಿ ನೋಡಿ, ಕೋಶ ಓದಿ ನೋಡು ಎಂಬ ಗಾದೆ ಮಾತು ಕೇಳಿರುತ್ತೇವೆ. ಪ್ರವಾಸ ಮಾಡುವುದರಿಂದ ಹೊಸ ಹೊಸ ವಿಷಯಗಳು ನಮಗೆ ಗೊತ್ತಾಗುತ್ತವೆ, ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂಬುವುದು ಬಲ್ಲವರ ಮಾತು. ಅದಕ್ಕಿಂತಲೂ ಹೆಚ್ಚಿನ ಲಾಭ ಪ್ರವಾಸದಲ್ಲಿದೆಯಂತೆ.

ಪ್ರವಾಸ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಹೆಚ್ಚಿನ ತೂಕವನ್ನು ಕರಗಿಸಬಹುದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು, ಇನ್ನಷ್ಟು ಉತ್ಸಾಹಿಗಳಾಗುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಲೈಂಗಿಕ ಆಸಕ್ತಿಯನ್ನು ವೃದ್ಧಿಸುತ್ತದೆಯಂತೆ.

ಹೀಗಂತ, ಲಂಡನ್ ನ ಆನ್ ಲೈನ್ ಟ್ರಾವೆಲ್ ಕಂಪೆನಿ ಎಕ್ಸ್ಪೆಡಿಯಾ ಹೇಳಿದೆ. ಅದು ನಡೆಸಿರುವ ಅಧ್ಯಯನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸದಿಂದ ತಮ್ಮ ಲೈಂಗಿಕ ಆಸಕ್ತಿ ಜಾಸ್ತಿಯಾಗುತ್ತದೆ ಎಂದು ಹೇಳಿದ್ದಾರಂತೆ. ದೈಹಿಕ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ, ಮನುಷ್ಯನ  ಮೂಡ್ ಕೂಡ ಸುಧಾರಣೆಯಾಗುತ್ತದೆಯಂತೆ.

ಮನುಷ್ಯನ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಹಾರ್ಮೋನ್ ನ ಮಟ್ಟವನ್ನು ಪ್ರವಾಸ ಕಡಿಮೆ ಮಾಡುತ್ತದೆ. ನಮ್ಮ ಮನಸ್ಸಿನ ಒತ್ತಡ ಮತ್ತು ಆತಂಕ ಕಡಿಮೆಯಾದಾಗ ಉತ್ಸಾಹ ಜಾಸ್ತಿಯಾಗುತ್ತದೆ. ನಮ್ಮಲ್ಲಿ ಉತ್ಸಾಹ ಹೆಚ್ಚಾದಂತೆ ಚಟುವಟಿಕೆ ಜಾಸ್ತಿಯಾಗುತ್ತದೆ, ಧನಾತ್ಮಕ ಅಂಶ ಮನಸ್ಸಿನಲ್ಲಿ ಮೂಡುತ್ತದೆ. ಒಟ್ಟಾರೆ ಜೀವನದ ಮಟ್ಟ ಸುಧಾರಣೆಯಾಗುತ್ತದೆ ಎಂದು ಎಕ್ಸ್ಪೆಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಲಿಂಡಾ ಪಪಡೋಪೌಲೊಸ್ ತಿಳಿಸಿದ್ದಾರೆ.

ಪ್ರವಾಸ ಮಾಡುವುದರಿಂದ ತಮ್ಮ ದೇಹದ ತೂಕವನ್ನು ಕೂಡ ಇಳಿಸಬಹುದು ಎಂದಿದ್ದಾರೆ ಅಧ್ಯಯನಕ್ಕೆ ಒಳಗಾದವರು. ನಮ್ಮಲ್ಲಿ ಆರೋಗ್ಯಕರ ನಡವಳಿಕೆ ಉಂಟಾಗಿ ಅನಾರೋಗ್ಯಕರ ಅಭ್ಯಾಸಗಳನ್ನು ದೂರ ಮಾಡುತ್ತದೆ.

ಇನ್ನು ಎರಡು ದಶಲಕ್ಷಕ್ಕೂ ಅಧಿಕ ಮಂದಿ ಪ್ರಯಾಣದಿಂದ ಕ್ರಿಯಾತ್ಮಕತೆ ಬೆಳೆಯುತ್ತದೆ ಎಂದರು. ಹೊಸ ಹೊಸ ಸ್ಥಳಗಳಿಗೆ ಹೋಗುವುದರಿಂದ ಹೊಸ ಹೊಸ ಅನುಭವಗಳಾಗುತ್ತವೆ. ನಮ್ಮ ದೇಹದಲ್ಲಿ ಸೆರೋಟಿನಿನ್ ಎಂಬ ಹಾರ್ಮೋನ್ ನ ಮಟ್ಟ ಹೆಚ್ಚಾಗುತ್ತದೆ. ಈ ಹಾರ್ಮೋನ್ ನಮ್ಮನ್ನು ಹೆಚ್ಚಿನ ಕ್ರಿಯಾತ್ಮಕ ಸವಾಲುಗಳನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳು ಪ್ರವಾಸ ಮಾಡುವುದರಿಂದ ನಮಗೆ ಸಿಗುತ್ತದೆ. ಹಾಗಾಗಿ ಯಾವತ್ತಾದರೂ ನೀವು ಖಿನ್ನತೆಗೆ, ಒತ್ತಡಕ್ಕೆ, ಆತಂಕಕ್ಕೆ ಒಳಗಾದರೆ, ತೂಕ ಜಾಸ್ತಿಯಾಗಿದೆ ಅನ್ನಿಸಿದರೆ ಸಂಗಾತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿಲ್ಲದಿದ್ದರೆ ಪ್ರವಾಸ ಮಾಡಿ ಬನ್ನಿ, ಜೀವನದಲ್ಲಿ ಚೀರ್ ಅಪ್ ಆಗಿ.

SCROLL FOR NEXT