ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಯುವತಿಯರಲ್ಲಿ ಗರ್ಭಪಾತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗರ್ಭಪಾತ ಪ್ರಕರಣಗಳು ಮತ್ತು ಮುಕ್ತ ಲೈಂಗಿಕತೆ ಕೇಳಿಬರುತ್ತಿವೆ. ಅದರಲ್ಲೂ ಅಬಾರ್ಷನ್ ಮಾಡಿಸಿಕೊಳ್ಳುವವರಲ್ಲಿ 20 ವರ್ಷಕ್ಕಿಂತ ಕೆಳ ಹರೆಯದ ಹುಡುಗಿಯರೇ ಅಧಿಕ ಎಂದು ಸರ್ಕಾರಿ ಸಮೀಕ್ಷೆಯಿಂದ ತಿಳಿದುಬಂದಿದೆ.
ನಗರ ಪ್ರದೇಶಗಳಲ್ಲಿ ಹದಿಹರೆಯದ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತಕ್ಕೆ ಗುರಿಯಾಗುತ್ತಿರುವುದರಿಂದ ಹದಿಹರೆಯದ ಹುಡುಗಿಯರಲ್ಲಿ ಸೆಕ್ಸ್ ದೃಷ್ಟಿಕೋನ ತುಂಬಾ ಲಘುವಾಗಿರುವುದು, ಸೆಕ್ಸ್ ಬಗ್ಗೆ ಬಿಂದಾಸ್ ಆಗಿರುವುದು ಸ್ಪಷ್ಟವಾಗಿದೆ ಮಾತ್ರವಲ್ಲ ಚಿಕ್ಕ ವಯಸ್ಸಿನಲ್ಲೇ ಅವರು ಸೆಕ್ಸ್ಗೆ ಮುಂದಾಗುವ ಹಂಬಲ ಹೊಂದಿರುವುದು ಗೊತ್ತಾಗಿದೆ. ಸರಕಾರದ ಸ್ವಾಸ್ಥ್ಯ ಸಮೀಕ್ಷೆಯಲ್ಲಿ ಈ ಆತಂಕಕಾರಿ ಅಂಶಗಳು ಹೊರಬಿದ್ದಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ವರದಿಯಾಗಿರುವ ಗರ್ಭಧಾರಣೆಯ ಪ್ರಕರಣಗಳ ಪೈಕಿ ಗ್ರಾಮಿಣ ಭಾಗದಲ್ಲಿ ಶೇ.77 ಮತ್ತು ನಗರ ಪ್ರದೇಶಗಳಲ್ಲಿ ಶೇ.74ರಷ್ಟು ಮಗುವಿನ ಜನನವಾಗುತ್ತದೆ. ಇನ್ನು ಗರ್ಭಪಾತ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಶೇ.2 ಮತ್ತು ನಗರ ಪ್ರದೇಶಗಳಲ್ಲಿ ಶೇ.3ರಷ್ಟು ವರದಿಯಾಗಿವೆ. ಗರ್ಭಪಾತಕ್ಕೆ ಒಳಪಟ್ಟವರಲ್ಲಿ 20ಕ್ಕಿಂತ ಕೆಳ ವಯಸ್ಸಿನ ಹೆಣ್ಣು ಮಕ್ಕಳು ಅಧಿಕವಾಗಿದ್ದಾರೆ.
ಬಿಂದಾಸ್ ಸೆಕ್ಸ್ ಬಗ್ಗೆಯೂ ನಗರ ಪ್ರದೇಶಗಳ ಯುವತಿಯರು ಹೆಚ್ಚು ಒಲವು ತೋರುತ್ತಾರೆ ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ.